
ಸಾಂದರ್ಭಿಕ ಚಿತ್ರ
LPG Shortage| ಬೆಂಗಳೂರಿನ ಹೋಟೆಲ್‌ಗಳ ಮೆನು ಬದಲಾವಣೆ, ಆಟೋ ಚಾಲಕರಿಗೂ ಸಂಕಷ್ಟ!
ಬೆಳಗ್ಗಿನ ತಿಂಡಿಗಳನ್ನು ಸೀಮಿತವಾಗಿ ಮಾಡಲಾಗುತ್ತಿದೆ. ಮಧ್ಯಾಹ್ನ ಕೇವಲ ಅನ್ನ, ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಸಿಲಿಂಡರ್ ಖಾಲಿಯಾದ ತಕ್ಷಣ ಹೊಟೇಲ್ ಬಂದ್ ಮಾಡುತ್ತೇವೆ ಎಂದು ಹೊಟೇಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಅಭಾವ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಹೊಟೇಲ್‌ಗಳ ಮೆನು ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಸೂಚನಾ ಫಲಕಗಳನ್ನು ಹಾಕಿದ್ದು, ಗ್ರಾಹಕರು ಸಹಕರಿಸುವಂತೆ ಮಾಲೀಕರು ಮನವಿ ಮಾಡಿದ್ದಾರೆ.
ಈ ರೀತಿಯ ಸೂಚನಾ ಫಲಕಗಳು ಬುಧವಾರ(ಮಾ.11) ಸಾಮಾನ್ಯವಾಗಿ ಕೆಂಪೇಗೌಡ ರಸ್ತೆಯಲ್ಲಿರುವ ಅನೇಕ ಹೊಟೇಲ್‌ಗಳ ಮುಂಭಾಗದಲ್ಲಿ ಹಾಕಲಾಗಿದೆ. ಪ್ರತಿದಿನ ನೂರಾರು ಗ್ರಾಹಕರು ಹೊಟೇಲ್‌ಗೆ ಬರುತ್ತಾರೆ. ಆದರೆ ಅವರಿಗೆ ಪ್ರತಿ ದಿನದಂತೆ ಆಹಾರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ಹೊಟೇಲ್ ಮಾಲೀಕರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಕಾಳಸಂತೆಯಲ್ಲಿ ಹೆಚ್ಚಿನ ದರ
ಹೆಸರೇಳಲಿಚ್ಚಿಸದ ಹೊಟೇಲ್ ಮಾಲೀಕರೊಬ್ಬರು ಮಾತನಾಡಿ,"ಬೆಳಗಿನ ತಿಂಡಿಗಳನ್ನು ಸೀಮಿತವಾಗಿ ಮಾಡಲಾಗುತ್ತಿದೆ. ಮಧ್ಯಾಹ್ನ ಕೇವಲ ಅನ್ನ, ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಸಿಲಿಂಡರ್ ಖಾಲಿಯಾದ ತಕ್ಷಣ ಹೊಟೇಲ್ ಬಂದ್ ಮಾಡುತ್ತೇವೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಕಾಳಸಂತೆಯಲ್ಲಿ ಸಿಲಿಂಡರ್ ಸಿಗುತ್ತದೆ. ಆದರೆ ಅವರು ಹೆಚ್ಚಿನ ಹಣ ಕೇಳುತ್ತಾರೆ" ಎಂದು ಅಳಲು ತೋಡಿಕೊಂಡರು.
ಗ್ಯಾಸ್ ದರ ಏರಿಕೆಯಿಂದ ಆಟೋ ಚಾಲಕರು ಸಹ ತೊಂದರೆ ಅನುಭವಿಸುವಂತಾಗಿದೆ. ಕೆಲವು ಬಂಕ್‌ಗಳಲ್ಲಿ ಗ್ಯಾಸ್ ಸಿಗುತ್ತಿಲ್ಲ. ದರ ಏರಿಕೆಯಿಂದ ವಾಹನ ಚಲಾಯಿಸುವುದು ಕೂಡ ಕಷ್ಟವಾಗಿದೆ. ಹೀಗೆ ಮುಂದುವರಿದರೆ ಜೀವನ ನಡೆಸುವುದು ಕಷ್ಟವಾಗಲಿದೆ ಎಂದು ಆಟೋ ಚಾಲಕರು ತಿಳಿಸಿದ್ದಾರೆ.
ಪಿಜಿಗಳಿಗೂ ತಟ್ಟಿದ ಬಿಸಿ
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆಯ ಬಿಸಿಯು ಈಗ ಪೇಯಿಂಗ್ ಗೆಸ್ಟ್ (ಪಿಜಿ) ಅಡುಗೆ ಮನೆಗಳಿಗೂ ತಟ್ಟಿದ್ದು, ಈ ಕುರಿತು ಮಾತನಾಡಿದ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಡಿಟಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವ ಗಂಭೀರತೆಯನ್ನು ಅರಿತು, ಪಿಜಿ ಅಸೋಸಿಯೇಷನ್‌ನಿಂದ ಈಗಾಗಲೇ ವರ್ಚುವಲ್ ಆಗಿ ಕೋರ್ ಕಮಿಟಿ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼ ಪ್ರಕಟಿಸಿರುವ ವಿಶೇಷ ವರದಿ ಇಲ್ಲಿದೆ.

