KSRTC Protest| ಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ಪಕ್ಕಾ- ವಿಜಯ ಭಾಸ್ಕರ್‌ ಎಚ್ಚರಿಕೆ
x
KSRTC ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡ ವಿಜಯ ಭಾಸ್ಕರ್‌

KSRTC Protest| ಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ಪಕ್ಕಾ- ವಿಜಯ ಭಾಸ್ಕರ್‌ ಎಚ್ಚರಿಕೆ

ತಮ್ಮ ಬೇಡಿಕೆಗಳ ಕುರಿತು ಇಂದು ಸಂಜೆಯೊಳಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ ನಾಳೆಯಿಂದ ರಾಜ್ಯದ್ಯಾಂತ ಬಸ್ ಮುಷ್ಕರ ನಡೆಸಲು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮುಂದಾಗಿದೆ.


Click the Play button to hear this message in audio format

ರಾಜ್ಯ ಸರಕಾರ ನಮ್ಮ ಮೇಲೆ ಎಸ್ಮಾ (ESMA) ಜಾರಿಗೊಳಿಸುವ ಬೆದರಿಕೆ ಹಾಕುತ್ತಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರತಿಭಟನಾನಿರತರನ್ನು ಬಂಧಿಸುವ ಯೋಜನೆ ರೂಪಿಸುತ್ತಿದೆ. ಏನೇ ಆದರೂ ಸರಿ, ಇಂದು ಸಂಜೆ 4 ಗಂಟೆಯೊಳಗೆ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ನಾಳೆಯಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ (ಕೆಎಸ್‌ಆರ್‌ಟಿಸಿ) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ನಗರದ ಫ್ರಿಡಂ ಪಾರ್ಕ್‌ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ "ಬೆಂಗಳೂರು ಚಲೋ" ಧರಣಿಯಲ್ಲಿ ಭಾಗವಹಿಸಿದ ಸಮಿತಿ ಮುಖಂಡ ವಿಜಯ ಭಾಸ್ಕರ್‌ ʻದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿ, "ಸರ್ಕಾರ ನಮಗೆ ಎಸ್ಮಾ ಅಥವಾ ಜೈಲಿನ ಭಯ ತೋರಿಸಬಾರದು. ನಾವು ಯಾವುದೇ ಬೆದರಿಕೆಗಳಿಗೆ ಜಗ್ಗುವುದಿಲ್ಲ. ನಮ್ಮ ಹಕ್ಕುಗಳಿಗಾಗಿ ಹೋರಾಡಲು ನಾವು ಸನ್ನದ್ದರಾಗಿದ್ದೇವೆ. ನಮ್ಮ ಬಂಧನವಾದರೂ ಹೋರಾಟ ನಿಲ್ಲದು. ನಮ್ಮ ಶ್ರಮದ ಫಲವನ್ನು ಕೇಳಲು ನಾವು ಬೀದಿಗೀಳಿಯುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ" ಎಂದರು.

ಸಾರಿಗೆ ನಿಗಮದ ನೌಕರರಿಗೆ ಕಳೆದ 38 ತಿಂಗಳಿಂದ ಬರಬೇಕಾದ ವೇತನದ ಹಿಂಬಾಕಿಯನ್ನು (Arrears) ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಬಾಕಿ ಇರುವ ವೇತನ ಪರಿಷ್ಕರಣೆಯನ್ನು ತಕ್ಷಣವೇ ಜಾರಿಗೆ ತರಬೇಕು. ಈ ಬಗ್ಗೆ ಇಂದು ಸಂಜೆಯೊಳಗೆ ಸರಕಾರ ಒಂದು ನಿರ್ಧಾರಕ್ಕೆ ಬರಬೇಕಿದೆ. ಇಲ್ಲವಾದಲ್ಲಿ ನಾಳೆಯಿಂದ ಇಡೀ ಸಾರಿಗೆ ಸಂಸ್ಥೆ ನೌಕರರು ಬಸ್‌ ಏರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಒಂದು ವೇಳೆ ಮುಷ್ಕರ ಆರಂಭವಾದರೆ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಏನಿದು ಪ್ರತಿಭಟನೆ ?

ದೀರ್ಘಕಾಲದ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕಳೆದ ಬಾರಿ ನಡೆಸಬೇಕಿದ್ದ ಬೆಂಗಳೂರು ಚಲೋ ಕಾರ್ಯಕ್ರಮವು, ನೌಕರರ ಮುಖಂಡ ಅನಂತ್ ಸುಬ್ಬರಾವ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಹೀಗಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ನೌಕರರು ಜಮಾಯಿಸಿ ಬೃಹತ್ ಮೆರವಣಿಗೆ ನಡೆಸಿದರು.

ಬೇಡಿಕೆಗಳೇನು?

ವೇತನ ಬಾಕಿ ಪಾವತಿ: ಕಳೆದ 38 ತಿಂಗಳ ವೇತನದ ಹಿಂಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು.

ವೇತನ ಪರಿಷ್ಕರಣೆ: 1-1-2024ಕ್ಕೆ ಅನ್ವಯವಾಗುವಂತೆ ನೂತನ ವೇತನ ಶ್ರೇಣಿ ಜಾರಿಗೊಳಿಸಬೇಕು.

ಸಮಾನ ವೇತನ: ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ನೀಡಬೇಕು.

ಕಿರುಕುಳ ಮುಕ್ತಿ: ಕೆಲಸದ ಅವಧಿಯಲ್ಲಿ ಅಧಿಕಾರಿಗಳಿಂದ ಕಾರ್ಮಿಕರಿಗೆ ನೀಡಲಾಗುವ ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕು.

Read More
Next Story