
ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಸಭಾ ಸಂಸದ ಅಶೋಕ್ ಚವಾಣ್, ಇದೊಂದು "ನಿರಾಸೆ ತರುವ ಬೆಳವಣಿಗೆ" ಎಂದಿದ್ದಾರೆ.
ಕೆಎಸ್ಆರ್ ನಿಲ್ದಾಣದಲ್ಲಿ 50 ದಿನ ‘ರೈಲು’ ಸೇವೆ ವ್ಯತ್ಯಯ; ಜೂ.16 ರಿಂದ ನವೀಕರಣ ಕಾರ್ಯ
50 ದಿನಗಳ ಅವಧಿಯಲ್ಲಿ ಮೈಸೂರು-ಬೆಂಗಳೂರು ನಡುವಿನ ದೈನಂದಿನ ಪ್ರಯಾಣಿಕರು ಕೆಂಗೇರಿ ಅಥವಾ ಯಶವಂತಪುರ ನಿಲ್ದಾಣಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ.
ರಾಜಧಾನಿಯ ಅತ್ಯಂತ ಜನದಟ್ಟಣೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನೈರುತ್ಯ ರೈಲ್ವೆಯು ಹೈಟೆಕ್ ಯಾರ್ಡ್ ನವೀಕರಣ ಮತ್ತು ಆಧುನೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಜೂನ್ 16 ರಿಂದ ಆಗಸ್ಟ್ ಮೊದಲ ವಾರದವರೆಗೆ ಸುಮಾರು 50 ದಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳು ಸಂಪೂರ್ಣ ರದ್ದಾದರೆ, ಇನ್ನು ಕೆಲವು ರೈಲುಗಳನ್ನು ಯಶವಂತಪುರ, ಕೆಂಗೇರಿ ಅಥವಾ ಎಸ್ಎಂವಿಟಿ (ಬೈಯಪ್ಪನಹಳ್ಳಿ) ನಿಲ್ದಾಣಗಳಲ್ಲೇ ಮೊಟಕುಗೊಳಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಉದ್ಯೋಗ ಹಾಗೂ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದು ಹೋಗುವ ಮೈಸೂರು, ಮಂಡ್ಯ, ತುಮಕೂರು ಭಾಗದ ಪ್ರಯಾಣಿಕರಿಗೆ ಭಾರಿ ತೊಂದರೆಯಾಗುವ ಸಾಧ್ಯತೆ ಇದೆ.
ರೈಲು ನಿಲ್ದಾಣ ನವೀಕರಣ ಏಕೆ?
ಭವಿಷ್ಯದಲ್ಲಿ ಸುಗಮ ಹಾಗೂ ಸುರಕ್ಷಿತ ರೈಲು ಸಂಚಾರಕ್ಕಾಗಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ 'ಯಾರ್ಡ್ ರಿಮೋಡೆಲಿಂಗ್' ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ನವೀಕರಣ ಕಾರ್ಯದಲ್ಲಿ ಪ್ಲಾಟ್‌ಫಾರಂ 7ರ ವಿಸ್ತರಣೆಯೂ ಸೇರಿದೆ. ಪ್ರಸ್ತುತ 460 ಮೀಟರ್ ಇರುವ ಪ್ಲಾಟ್‌ಫಾರಂ ಅನ್ನು 600 ಮೀಟರ್‌ಗೆ ವಿಸ್ತರಿಸಲಾಗುತ್ತಿದೆ. ಇದರ ಫಲವಾಗಿ ವಂದೇ ಭಾರತ್ ಸೇರಿ 24 ಬೋಗಿಗಳ ಉದ್ದದ ಎಕ್ಸ್‌ಪ್ರೆಸ್ ರೈಲುಗಳು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಬಂದು ನಿಲ್ಲಬಹುದು.
ಇನ್ನು ಮಾರ್ಗದ ಒಂದರಲ್ಲಿ ರೈಲು ಒಳ ಪ್ರವೇಶಿಸುತ್ತಿರುವಾಗಲೇ ಮಾರ್ಗ ಎರಡರಲ್ಲಿ ಮತ್ತೊಂದು ರೈಲು ಹೊರಹೋಗಲು ಹೊಸ ಲೇಔಟ್ ಅವಕಾಶ ಮಾಡಿಕೊಡಲಿದೆ. ಇದರಿಂದ ಔಟರ್‌ನಲ್ಲಿ ರೈಲುಗಳು ಗಂಟೆಗಟ್ಟಲೆ ಕಾಯುವುದು ತಪ್ಪಲಿದೆ. ಗೂಡ್ಸ್ ರೈಲುಗಳ ಓಡಾಟಕ್ಕೆ ಪ್ರತ್ಯೇಕ ಮಾರ್ಗ ಸಿಗಲಿದ್ದು, ಪ್ರಯಾಣಿಕರ ಪ್ಲಾಟ್‌ಫಾರಂಗಳ ಮೇಲಿನ ಒತ್ತಡ ಗಣನೀಯವಾಗಿ ಇಳಿಕೆಯಾಗಲಿದೆ. ಹಳೇ ಇಂಟರ್‌ಲಾಕಿಂಗ್ ವ್ಯವಸ್ಥೆ ಬದಲಿಸಿ, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಹಾಗೂ ಹೈಟೆಕ್ ಸಿಗ್ನಲಿಂಗ್ ಅಳವಡಿಸಲಾಗುತ್ತಿದೆ. ಇದರಿಂದ ರೈಲು ಅಪಘಾತಗಳ ಸಾಧ್ಯತೆ ಶೂನ್ಯಕ್ಕಿಳಿಯಲಿದೆ.
ಸಂಪೂರ್ಣ ರದ್ದಾದ ರೈಲುಗಳು
ಜೂನ್ 16 ರಿಂದ ಆಗಸ್ಟ್ ಮೊದಲ ವಾರದವರೆಗಿನ ವಿವಿಧ ದಿನಾಂಕಗಳಲ್ಲಿ ಹಲವು ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಸಂಪೂರ್ಣ ಬಂದ್ ಆಗಲಿದೆ.
ಮೈಸೂರು - ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ (06269/206270), ಅರಸೀಕೆರೆ - ಮೈಸೂರು ಪ್ಯಾಸೆಂಜರ್ (56265/56266), ಕೆಎಸ್ಆರ್ ಬೆಂಗಳೂರು - ಚನ್ನಪಟ್ಟಣ ಮೆಮು (66535/66536), ಅಶೋಕಪುರಂ - ಕೆಎಸ್ಆರ್ ಬೆಂಗಳೂರು ಮೆಮು ಮತ್ತು ಎಕ್ಸ್‌ಪ್ರೆಸ್ ರೈಲುಗಳು, ತುಮಕೂರು, ವೈಟ್‌ಫೀಲ್ಡ್, ಬಂಗಾರಪೇಟೆ ಹಾಗೂ ಕೋಲಾರ ಕಡೆಗೆ ಸಂಚರಿಸುವ ಹಲವು ದೈನಂದಿನ ಮೆಮು ರೈಲುಗಳು ಸಂಪೂರ್ಣ ರದ್ದಾಗಿವೆ. ಕಾಕಿನಾಡ, ಚೆನ್ನೈ ಸೆಂಟ್ರಲ್, ಬೀದರ್, ವಿಜಯಪುರ, ಮಂಗಳೂರು ಮತ್ತು ಶಿವಮೊಗ್ಗ ಕಡೆಗೆ ಚಲಿಸುವ ಕೆಲವು ದೂರದೂರಿನ ಎಕ್ಸ್‌ಪ್ರೆಸ್ ರೈಲುಗಳು ಸಹ ನಿರ್ದಿಷ್ಟ ದಿನಗಳಂದು ರದ್ದಾಗಲಿವೆ ಅಥವಾ ಮಾರ್ಗ ಬದಲಾವಣೆ ಮಾಡಿಕೊಳ್ಳಲಿವೆ.
ಕೇರಳ ಮತ್ತು ತಮಿಳುನಾಡು ಭಾಗದಿಂದ ಬರುವ ಕೆಲವು ಎಕ್ಸ್‌ಪ್ರೆಸ್ ರೈಲುಗಳನ್ನು ಎಸ್ಎಂವಿಟಿ ಬೆಂಗಳೂರು ಅಥವಾ ಯಶವಂತಪುರಕ್ಕೆ ಶಿಫ್ಟ್ ಮಾಡಲಾಗಿದೆ. 50 ದಿನಗಳ ಅವಧಿಯಲ್ಲಿ ಮೈಸೂರು-ಬೆಂಗಳೂರು ನಡುವಿನ ದೈನಂದಿನ ಪ್ರಯಾಣಿಕರು ಕೆಂಗೇರಿ ಅಥವಾ ಯಶವಂತಪುರ ನಿಲ್ದಾಣಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ. ಕಚೇರಿ ಹಾಗೂ ಕಾಲೇಜುಗಳಿಗೆ ಹೋಗುವ ನೌಕರರು ಮತ್ತು ವಿದ್ಯಾರ್ಥಿಗಳು ರೈಲಿನ ಬದಲಿಗೆ ಕೆಎಸ್ಆರ್‌ಟಿಸಿ ಬಸ್ ಅಥವಾ ಮೆಟ್ರೋ ಲಿಂಕ್ ಬಳಸಲು ರೈಲ್ವೆ ಇಲಾಖೆ ಸಲಹೆ ನೀಡಿದೆ.

