Transgender Bill| ಲಿಂಗತ್ವ ಅಲ್ಪಸಂಖ್ಯಾತರ ತಿದ್ದುಪಡಿ ಕಾಯ್ದೆ ಕೈಬಿಡಲು ಆಗ್ರಹ
x
ಲಿಂಗತ್ವ ಅಲ್ಪಸಂಖ್ಯಾತರು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು

Transgender Bill| ಲಿಂಗತ್ವ ಅಲ್ಪಸಂಖ್ಯಾತರ ತಿದ್ದುಪಡಿ ಕಾಯ್ದೆ ಕೈಬಿಡಲು ಆಗ್ರಹ

2014ರ ಸುಪ್ರೀಂಕೋರ್ಟ್‌ ಐತಿಹಾಸಿಕ NALSA ( ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ) ತೀರ್ಪಿನ ಪ್ರಕಾರ ಲಿಂಗತ್ವ ಗುರುತನ್ನು ಸ್ವಯಂ ನಿರ್ಧರಿಸುವುದು ಮೂಲಭೂತ ಹಕ್ಕಾಗಿದೆ.


ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್‌ಜೆಂಡರ್‌) ಹಕ್ಕುಗಳ ರಕ್ಷಣೆ ತಿದ್ದುಪಡಿ ಕಾಯ್ದೆಯು ಸಂವಿಧಾನ ಬಾಹಿರವಾಗಿದೆ. ಕರ್ನಾಟಕದಲ್ಲಿ ಕಾನೂನು ಜಾರಿಗೊಳಿಸಬಾರದು ಎಂದು ರಾಷ್ಟ್ರೀಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ ಆಗ್ರಹಿಸಿದೆ.

2014ರ ಸುಪ್ರೀಂಕೋರ್ಟ್‌ ಐತಿಹಾಸಿಕ NALSA ( ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ) ತೀರ್ಪಿನ ಪ್ರಕಾರ ಲಿಂಗತ್ವ ಗುರುತನ್ನು ಸ್ವಯಂ ನಿರ್ಧರಿಸುವುದು ಮೂಲಭೂತ ಹಕ್ಕಾಗಿದೆ. ಆದರೆ, ಹೊಸ ಕಾಯ್ದೆಯು ಈ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಒಕ್ಕೂಟವು ಆತಂಕ ವ್ಯಕ್ತಪಡಿಸಿದೆ.

ಈ ಕಾಯ್ದೆಯು ಸಂವಿಧಾನದ ವಿಧಿ 14, 15 (ಸಮಾನತೆ), 19 (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 21ರ (ಘನತೆ ಮತ್ತು ಖಾಸಗಿತನ) ಅಡಿ ನೀಡಿರುವ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ಈಗಾಗಲೇ ಕಾಯ್ದೆಗೆ ಎಐಸಿಸಿ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸಾರ್ವಜನಿಕವಾಗಿ ವಿರೋಧಿಸಿ ವ್ಯಕ್ತಪಡಿಸಿ ಸಮುದಾಯದ ಪರ ನಿಂತಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಘಟಕವೂ ಈ ಕಾಯ್ದೆಯ ವಿರುದ್ಧ ಸ್ಪಷ್ಟ ನಿಲುವು ತಳೆಯಬೇಕು ಎಂದು ಒತ್ತಾಯಿಸಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಒಕ್ಕೂಟ ಮನವಿ ಸಲ್ಲಿಸಿದೆ.

ಸಮುದಾಯದ ಬೇಡಿಕೆಗಳೇನು?

ತಾರತಮ್ಯದಿಂದ ಕೂಡಿದ 2026ರ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ರದ್ದುಪಡಿಸಬೇಕು. ಹೊಸ ಕಾನೂನು ರೂಪಿಸುವ ಮುನ್ನ ಟ್ರಾನ್ಸ್‌ಜೆಂಡರ್‌ ಸಮುದಾಯದ ಪ್ರತಿನಿಧಿಗಳೊಂದಿಗೆ ನೇರ ಚರ್ಚೆ ನಡೆಸಬೇಕು. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ, ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಹೊಸ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.

"ಈ ಕಾಯ್ದೆಯು ನಮ್ಮ ಘನತೆ, ಆಯ್ಕೆ ಮತ್ತು ಖಾಸಗಿತನದ ಹಕ್ಕನ್ನು ಹರಣ ಮಾಡುತ್ತದೆ. ಸರ್ಕಾರವು ಸಮುದಾಯದ ಧ್ವನಿಯನ್ನು ಆಲಿಸಿ ನ್ಯಾಯ ಒದಗಿಸುತ್ತದೆ ಎಂಬ ನಂಬಿಕೆ ನಮ್ಮದಾಗಿದೆ," ಎಂದು ಒಕ್ಕೂಟದ ಮುಖಂಡರಾದ ಚಂದ್ರಶೇಖರ್, ಪರಿಮಳಾ, ಆಯೇಷಾ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಾದವೇನು?

2019 ಕಾಯ್ದೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ವ್ಯಾಖ್ಯಾನ ಅಸ್ಪಷ್ಟವಾಗಿದ್ದು, ನಿಜವಾದ ಸಂತ್ರಸ್ತರನ್ನು ಗುರುತಿಸಿ ಅವರಿಗೆ ಪ್ರಯೋಜನಗಳನ್ನು ನೀಡುವುದು ಕಷ್ಟವಾಗುತ್ತಿತ್ತು. ಹುಟ್ಟಿನಿಂದ ಅನೇಕ ಕಾರಣಗಳಿಂದ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರ ಹಕ್ಕುಗಳನ್ನು ರಕ್ಷಿಸುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು.

ಲೆಸ್ಬಿಯನ್ನರು ಮತ್ತು ಸಲಿಂಗಿಗಳನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಸರಿಯಲ್ಲ ಎಂದು ಆರೋಪಿಸಿ ಲಿಂಗತ್ವ ಅಲ್ಪಸಂಖ್ಯಾತರ ತಿದ್ದುಪಡಿ ಮಸೂದೆಯನ್ನು ವಿರೋಧ ಪಕ್ಷಗಳ ಸಂಸದರು ಟೀಕಿಸಿದ್ದರು. ಮಾ.24 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಸೂದೆಗೆ ಅಂಕಿತ ಹಾಕಿದ್ದರು.

Read More
Next Story