ಹಿಂದಿಗೆ ಗ್ರೇಡಿಂಗ್: ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
x

ಹಿಂದಿಗೆ ಗ್ರೇಡಿಂಗ್: ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಇದೊಂದು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು, ಆರಂಭದಲ್ಲಿ 50 ಸಾವಿರ ರೂ. ದಂಡ ವಿಧಿಸಿತ್ತು. ಮತ್ತೆ ಮತ್ತೆ ಅರ್ಜಿದಾರರು ಆತಂಕ ವ್ಯಕ್ತಪಡಿಸಿದಾಗ ದಂಡದ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಏರಿಸಿತು.


ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಯನ್ನು ಕೈಬಿಡಲಾಗುತ್ತಿದೆ ಎಂಬ ಸುಳ್ಳು ಮಾಹಿತಿ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿ, ಅರ್ಜಿ ವಜಾಗೊಳಿಸಿದೆ. ಇದು ಕೇವಲ ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ ಎಂದು ನ್ಯಾಯಾಲಯ ಕಿಡಿಕಾರಿದೆ.

ರಾಜ್ಯ ಸರ್ಕಾರ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಅಂಕಗಳ ಬದಲಿಗೆ 'ಗ್ರೇಡ್' ನೀಡುವ ಪ್ರಸ್ತಾವನೆ ಮುಂದಿಟ್ಟಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರಿನ ಎಚ್.ಎನ್.ಚಂದನಾ ಮತ್ತು ಎಸ್. ವೆಂಕಟೇಶ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸಚಿವರ ಹೇಳಿಕೆಯು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ನೇತೃತ್ವದ ವಿಭಾಗೀಯ ಪೀಠವು ಪತ್ರಿಕಾ ವರದಿಯಲ್ಲಿ ಎಲ್ಲೂ 'ಹಿಂದಿ ಕೈಬಿಡಲಾಗುತ್ತದೆ' ಎಂಬ ಉಲ್ಲೇಖವಿಲ್ಲ. ಕೇವಲ ಮೂರು ಪದಗಳ ಪತ್ರಿಕಾ ಹೇಳಿಕೆ ಇಟ್ಟುಕೊಂಡು ಅರ್ಜಿ ಸಲ್ಲಿಸಿರುವುದು ಸರಿಯಲ್ಲ ಎಂದು ಕೋರ್ಟ್‌ ಛೀಮಾರಿ ಹಾಕಿದೆ.

ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ

ಇದೊಂದು ಜನಹಿತ ಅರ್ಜಿಯಲ್ಲ, ಬದಲಿಗೆ ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು, ಆರಂಭದಲ್ಲಿ 50 ಸಾವಿರ ರೂ. ದಂಡ ವಿಧಿಸಿತ್ತು. ಅರ್ಜಿದಾರರ ಪರ ವಕೀಲರು ಮತ್ತೆ ಮತ್ತೆ ಹಿಂದಿ ಕೈಬಿಡುವ ಆತಂಕ ವ್ಯಕ್ತಪಡಿಸಿದಾಗ, ವರದಿಯಲ್ಲೇ ಇಲ್ಲದ ಅಂಶಕ್ಕೆ ವಾದ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿ ದಂಡದ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಏರಿಸಿತು.

ಅಂಕಗಳ ಬದಲಿಗೆ ಗ್ರೇಡ್: ಸ್ಪಷ್ಟನೆ

ತೃತೀಯ ಭಾಷೆಯ ಪರೀಕ್ಷೆಯು ಎಂದಿನಂತೆ 100 ಅಂಕಗಳಿಗೆ ನಡೆಯುತ್ತದೆ. ಆದರೆ, ಅಂಕಪಟ್ಟಿಯಲ್ಲಿ ಅಂಕಗಳ ಬದಲಿಗೆ A, B, C, D ಗ್ರೇಡ್‌ಗಳನ್ನು ನೀಡಲಾಗುತ್ತದೆ. ಒಟ್ಟು ಶೇಕಡಾವಾರು ಲೆಕ್ಕಾಚಾರಕ್ಕೆ ಉಳಿದ 525 ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟನೆ ನೀಡಿದ್ದರು.

ನ್ಯಾಯಾಲಯ ವಿಧಿಸಿದ್ದ ದಂಡದ ಮೊತ್ತವನ್ನು ಎರಡು ವಾರಗಳಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ತಪ್ಪಿದಲ್ಲಿ ಭೂಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲಿ ಮಾಡಲು ಜಿಲ್ಲಾಧಿಕಾರಿಗಳಿಗೆ ಪೀಠವು ನಿರ್ದೇಶನ ನೀಡಿತು. ಇದೇ ವೇಳೆ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ದಂಡದ ಮೊತ್ತವನ್ನು ವಕೀಲರ ಗುಮಾಸ್ತರ ನಿಧಿಗೆ ನೀಡುವಂತೆ ಕೋರಿದರು.

Read More
Next Story