Transparency in Ganga Kalyan: Portal available to check electricity connection status
x

ಇಂಧನ ಸಚಿವ ಕೆ.ಜೆ. ಜಾರ್ಜ್‌

ಗಂಗಾ ಕಲ್ಯಾಣ ಯೋಜನೆ; ವಿದ್ಯುತ್ ಸಂಪರ್ಕದ ಸ್ಥಿತಿಗತಿ ತಿಳಿಯಲು ಪೋರ್ಟಲ್‌

ರೈತರು ಗಂಗಾ ಕಲ್ಯಾಣ ಯೋಜನೆಯಡಿ ಸಲ್ಲಿಸಿರುವ ಅರ್ಜಿ ಸ್ಥಿತಿಯನ್ನು ಆನ್‌ಲೈನ್‌ ಮೂಲಕವೇ ತಿಳಿದುಕೊಳ್ಳಲು ಬೆಸ್ಕಾಂ ವತಿಯಿಂದ ಹೊಸ ಪೋರ್ಟಲ್‌ ಆರಂಭಿಸಲಾಗಿದೆ.


Click the Play button to hear this message in audio format

ಗಂಗಾ ಕಲ್ಯಾಣ ಯೋಜನೆಯಲ್ಲಿ ಕೇಳಿ ಬರುತ್ತಿರುವ ಸಾಲು ಸಾಲು ಅಕ್ರಮ ಆರೋಪಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬೆಸ್ಕಾಂ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ರೈತರ ಆರೋಪಗಳ ಹಿನ್ನೆಲೆಯಲ್ಲಿ ಪಾರದರ್ಶಕತೆ ಪ್ರಕ್ರಿಯೆಗೆ ಒತ್ತು ನೀಡಲಾಗಿದೆ.

ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ನೀಡುವ ವಿದ್ಯುತ್‌ ಸಂಪರ್ಕದ ಸ್ಥಿತಿಗತಿ ತಿಳಿದುಕೊಳ್ಳಲು ಬೆಸ್ಕಾಂ ಹೊಸದಾಗಿ ಪೋರ್ಟಲ್‌ ಆರಂಭಿಸಿದೆ. ಇದರಿಂದಾಗಿ ರೈತರು ಇನ್ನು ಮುಂದೆ ತಮ್ಮ ವಿದ್ಯುತ್‌ ಸಂಪರ್ಕದ ಸ್ಥಿತಿಗತಿಯನ್ನು ಆನ್‌ಲೈನ್‌ ಮೂಲಕವೇ ತಿಳಿದುಕೊಳ್ಳಬಹುದಾಗಿದೆ.

ಬುಧವಾರ (ಮಾ.4) ಇಂಧನ ಇಲಾಖೆಯ ನೂತನ ಪೋರ್ಟ್‌ಲ್‌ ಬಿಡುಗಡೆ ಮಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, "ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಹೊಸ ಆಯ್ಕೆ ಕಲ್ಪಿಸಲಾಗಿದೆ." ಎಂದರು.

ಸಮಗ್ರ ಮಾಹಿತಿ ಲಭ್ಯ

"ಸರ್ಕಾರದ ಪ್ರಮುಖ ನೀರಾವರಿ ಯೋಜನೆಯಾದ 'ಗಂಗಾ ಕಲ್ಯಾಣ'ದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಸಣ್ಣ ಹಾಗೂ ಅತಿ ಸಣ್ಣ ರೈತರ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ, ಪಂಪ್‌ಸೆಟ್ ಅಳವಡಿಸಿ, ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಕೊಳವೆ ಬಾವಿ ಕೊರೆದ ನಂತರ ವಿದ್ಯುತ್‌ ಮೂಲಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ರೈತರು ನಿತ್ಯ ಕಚೇರಿಗೆ ಅಲೆದಾಡಬೇಕಾಗಿತ್ತು. ಇದನ್ನು ಮನಗಂಡು ರಾಜ್ಯ ಸರ್ಕಾರ ಹೊಸ ಪೋರ್ಟಲ್‌ ಆರಂಭಿಸಿದೆ. ರೈತರು ಈ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

'ಟ್ರ್ಯಾಕ್ ಅಪ್ಲಿಕೇಶನ್' ಆಯ್ಕೆ ಕ್ಲಿಕ್ ಮಾಡಿ ಪೂರಕ ವಿವರ ದಾಖಲಿಸಿದರೆ, ಫಲಾನುಭವಿಗಳು ತಮ್ಮ ಅರ್ಜಿಯ ಮಾಹಿತಿ ಪಡೆಯಬಹುದಾಗಿದೆ" ಎಂದು ಮಾಹಿತಿ ನೀಡಿದರು.

ಪೋರ್ಟ್‌ಲ್‌ ವೈಶಿಷ್ಟ್ಯಗಳೇನು ?

ಅರ್ಜಿದಾರರು ಅಥವಾ ರೈತರು ಕಚೇರಿಗಳಿಗೆ ಭೇಟಿ ನೀಡದೆಯೇ ವಿದ್ಯುತ್‌ ಮೂಲ ಸೌಕರ್ಯ ಕಲ್ಪಿಸುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಫಲಾನುಭವಿಗಳು ಗಂಗಾ ಕಲ್ಯಾಣ ಅರ್ಜಿ ಐಡಿ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಪೈಕಿ ಯಾವುದಾದರೂ ಒಂದು ನಮೂದಿಸಿದರೆ ಸಾಕು. ಅರ್ಜಿದಾರರ ವಿವರಗಳು, ಅರ್ಜಿಯ ಹಂತವಾರು ಪ್ರಗತಿ, ಸ್ಥಿತಿ, ಪ್ರಕ್ರಿಯೆಯ ದಿನಾಂಕ ಹಾಗೂ ಆದೇಶ ಸಂಖ್ಯೆಯ ವಿವರಗಳು ಸೇರಿದಂತೆ ಸಮಗ್ರ ಮಾಹಿತಿ ಲಭ್ಯವಾಗುತ್ತದೆ.

ತಪ್ಪಲಿದೆ ಅನಗತ್ಯ ಅಲೆದಾಟ

"ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ಪೋರ್ಟಲ್‌ನಲ್ಲಿ ಹೊಸ ಆಯ್ಕೆ ಒದಗಿಸಲಾಗಿದೆ. ಇದರಿಂದ ಕಚೇರಿಗೆ ಅಲೆದಾಡುವುದು ತಪ್ಪುವುದರ ಜತೆಗೆ ಕಾಲಕಾಲಕ್ಕೆ ತಮ್ಮ ಅರ್ಜಿಯ ಮಾಹಿತಿ ಲಭ್ಯವಾಗುತ್ತದೆ" ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್‌ ತಿಳಿಸಿದರು.

Read More
Next Story