Ground Report| ಆಟೊ ಗ್ಯಾಸ್‌ ಎಮೆರ್ಜೆನ್ಸಿ; ಬಂಕ್‌ಗಳ ಎದುರು ಸಾಲುಗಟ್ಟಿ ನಿಂತ ಚಾಲಕರು
x
ಬೆಂಗಳೂರಿನಲ್ಲಿ ಆಟೊ ಗ್ಯಾಸ್‌ ಟ್ರಬಲ್‌

Ground Report| ಆಟೊ ಗ್ಯಾಸ್‌ ಎಮೆರ್ಜೆನ್ಸಿ; ಬಂಕ್‌ಗಳ ಎದುರು ಸಾಲುಗಟ್ಟಿ ನಿಂತ ಚಾಲಕರು

ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ಆಟೊ ಚಾಲಕರು ಎಲ್‌ಪಿಜಿ ಗ್ಯಾಸ್‌ಗಾಗಿ ಪರದಾಡಿದರು. ಕೆಲವೆಡೆ ಬಂಕ್‌ಗಳು ಸ್ಥಗಿತಗೊಂಡಿದ್ದವು. ಗ್ಯಾಸ್‌ ಸಿಗದೇ ಕಂಗಾಲಾದ ಚಾಲಕರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಇಂಧನ ಬಿಕ್ಕಟ್ಟು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಗೃಹ ಬಳಕೆ ಮತ್ತು ಕಮರ್ಷಿಯಲ್ ಸಿಲಿಂಡರ್‌ಗಳ ಅಭಾವದ ಬೆನ್ನಲ್ಲೇ ಇದೀಗ ಆಟೋ ಗ್ಯಾಸ್ ಕೊರತೆ ತೀವ್ರವಾಗಿ ಕಾಡುತ್ತಿದೆ.

ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗ್ಯಾಸ್ ಸಿಗದೆ ಆಟೋ ಚಾಲಕರಿಗೆ ಬೀದಿಗೆ ಬೀಳುವ ಪರಿಸ್ಥಿತಿ ಬಂದೊದಗಿದೆ. ಹಗಲಿಡೀ ಎಲ್‌ಪಿಜಿ ಬಂಕ್‌ಗಳ ಎದುರು ಕೆ.ಜಿ. ಗ್ಯಾಸ್‌ಗಾಗಿ ಹತಾಶೆಯಿಂದ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಬೆಂಗಳೂರಿನ ಬಹುತೇಕ ಎಲ್‌ಪಿಜಿ ಬಂಕ್‌ಗಳು ಸ್ಥಗಿತವಾಗಿವೆ.

ಬೆಂಗಳೂರಿನಲ್ಲಿ ಆಟೋ ಗ್ಯಾಸ್‌ ಸಮಸ್ಯೆ ಕುರಿತು ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ.

ʼದ ಫೆಡರಲ್ ಕರ್ನಾಟಕʼ ಬೆಂಗಳೂರಿನ ಸಜ್ಜನ್‌ರಾವ್‌ ವೃತ್ತ, ಲಾಲ್‌ಬಾಗ್‌ ರಸ್ತೆ, ಬೌರಿಂಗ್ ಇನ್‌ಸ್ಟಿಟ್ಯೂಟ್ ಸೇರಿ ಹಲವೆಡೆ ಆಟೋ ಮೂಲಕವೇ ಸಂಚರಿಸಿ ಖುದ್ದು ವಸ್ತುಸ್ಥಿತಿ ಪರಿಶೀಲಿಸಿತು. ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದ ಆಟೋ ಚಾಲಕರು ಎಲ್‌ಪಿಜಿ ಗ್ಯಾಸ್‌ಗಾಗಿ ಪರದಾಡಿದರು. ಕೆಲವೆಡೆ ಬಂಕ್‌ಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಗ್ಯಾಸ್‌ ಸಿಗದೇ ಕಂಗಾಲಾಗಿದ್ದ ಚಾಲಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಬಸಪ್ಪ ವೃತ್ತದ ಬಂಕ್‌ ಬಳಿ ಆಟೊಗಳು ಸರದಿ ಸಾಲಿನಲ್ಲಿ ನಿಂತಿರುವುದು ಚಿತ್ರ: ಸಿ.ಎಸ್‌. ಕೀರ್ತಿಕ್‌

ಸಿಲಿಕಾನ್ ಸಿಟಿಯಲ್ಲಿ 2 ಕಿ.ಮೀ. ಉದ್ದದ ಸರದಿ

ಬೆಂಗಳೂರಿನ ಹೊಸಹಳ್ಳಿ, ಮೂಡಲಪಾಳ್ಯ, ಮತ್ತೀಕೆರೆ ಹಾಗೂ ರಾಜಾಜಿನಗರದ ರಸ್ತೆಗಳಲ್ಲಿ ಆಟೋಗಳು ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಬೆಳ್ಳಂಬೆಳಿಗ್ಗೆ ಬಂಕ್‌ಗಳ ಬಳಿ ಬಂದ ಕೆಲವರು ಗ್ಯಾಸ್ ಸಿಗದೇ ಖಾಲಿ ಕೈಯಲ್ಲಿ ಹಿಂತಿರುಗಿದರು.

"ನಾವು ಕೊರೊನಾ ಲಾಕ್‌ಡೌನ್‌ ಸಮಯದಲ್ಲೂ ಇಷ್ಟು ಪರದಾಡಿರಲಿಲ್ಲ. ನಾವು ಇಡೀ ದಿನ ಬಂಕ್ ಮುಂದೆ ಕಳೆದರೆ ಸಂಜೆ ಮನೆಗೆ ಹೋಗುವಾಗ ಏನು ಕೊಂಡೊಯ್ಯಬೇಕು, ದುಡಿಮೆ ಇಲ್ಲದಿದ್ದರೆ ಸಂಸಾರ ನಿಭಾಯಿಸುವುದು ಹೇಗೆ” ಎಂದು ಬಾಗಲಗುಂಟೆಯ ಆಟೋ ಚಾಲಕ ಶ್ರೀನಿವಾಸಮೂರ್ತಿ ʼದ ಫೆಡರಲ್ ಕರ್ನಾಟಕʼದ ಬಳಿ ಅಳಲು ತೋಡಿಕೊಂಡರು.

ಮತ್ತೊಬ್ಬ ಆಟೋ ಚಾಲಕ ಗಾಂಡಿಯನ್‌ ಮಾತನಾಡಿ, “ಕೊಂಡಜ್ಜಿ ಬಸಪ್ಪ ವೃತ್ತದಲ್ಲಿ 4 ಕೆ.ಜಿ. ಗ್ಯಾಸ್ ಕೊಡುತ್ತಿದ್ದರು. ಇಂದು ಬೆಳಿಗ್ಗೆ 6 ಗಂಟೆಗೆ ಬಂಕ್‌ ಬಳಿ ಹೋಗುವಷ್ಟರಲ್ಲೇ ಗ್ಯಾಸ್‌ ಖಾಲಿಯಾಗಿತ್ತು. ಹೀಗಾದರೆ, ನಾವು ಮಕ್ಕಳನ್ನು ಓದಿಸುವುದು ಹೇಗೆ, ಬಾಡಿಗೆ ಕಟ್ಟುವುದು ಹೇಗೆ ಎಂಬುದೇ ತಿಳಿಯದೇ ತಲೆ ಬಿಸಿಯಾಗಿದೆ. ಫೈನಾನ್ಸ್‌ ಕಟ್ಟಲೂ ಆಗುವುದಿಲ್ಲ, ಆತ್ಮಹತ್ಯೆ ಒಂದೇ ನಮಗಿರುವ ದಾರಿ” ಎಂದು ನೋವು ತೋಡಿಕೊಂಡರು.

ಬಸಪ್ಪ ವೃತ್ತದಲ್ಲಿ ಆಟೋ ಚಾಲಕ ಷರೀಫ್‌ ಮಾತನಾಡಿ, “ಗ್ಯಾಸ್‌ ಸಿಗದೇ ಆಟೊ ಓಡಿಸುವುದೇ ಕಷ್ಟವಾಗುತ್ತಿದೆ. ಯಾವ ಸಮಯದಲ್ಲಿ ಗ್ಯಾಸ್‌ ನೀಡಲಾಗುತ್ತಿದೆ ಎಂಬುದೇ ತಿಳಿಯದಾಗಿದೆ. ನಾವು ಸ್ವಲ್ಪ ದಿನ ಕಾದು ನೋಡುತ್ತೇವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆಟೋ ಚಾಲಕರು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಂಗಳೂರಿನ ಲಾಲ್‌ಬಾಗ್‌ ರಸ್ತೆಯ ಬಂಕ್‌ ಬಳಿ ಎಲ್‌ಪಿಜಿ ಆಟೊ ಗ್ಯಾಸ್‌ಗಾಗಿ ಚಾಲಕರ ಪರದಾಟ ಚಿತ್ರ: ಸಿ.ಎಸ್‌. ಕೀರ್ತಿಕ್‌

ಗ್ಯಾಸ್‌ ವಿತರಣೆಗೂ ಮಿತಿ ಹೇರಿಕೆ

ವಿಜಯನಗರ ಮತ್ತು ಚಾಮರಾಜಪೇಟೆಯ ಪೆಟ್ರೋಲ್ ಬಂಕ್‌ಗಳಲ್ಲಿ ಗ್ಯಾಸ್ ಪೂರೈಕೆಗೆ ಮಿತಿ ಹೇರಲಾಗಿದೆ. ಪ್ರತಿ ಆಟೋಗೆ 300, ಕಾರಿಗೆ 500 ರೂ.ಗಳಷ್ಟು ಗ್ಯಾಸ್‌ ವಿತರಿಸಲಾಗುತ್ತಿದೆ. ಇದರಿಂದ ಕೆರಳಿದ ಆಟೋ ಚಾಲಕರು ಬಂಕ್‌ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾಸ್ ಸಮಸ್ಯೆ ಕೇವಲ ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಉತ್ತರ ಕರ್ನಾಟಕದಿಂದ ಕರಾವಳಿಯವರೆಗೂ ಬಿಕ್ಕಟ್ಟು ವ್ಯಾಪಿಸಿದೆ. ಹುಬ್ಬಳ್ಳಿಯ ಬಂಕ್‌ಗಳಲ್ಲಿ ಭಾರೀ ಪ್ರಮಾಣದ ಅನಿಲ ಕೊರತೆ ಕಾಣಿಸಿಕೊಂಡಿದೆ. ಪ್ರತಿ ಆಟೋಗೆ ಕೇವಲ 2 ಕೆ.ಜಿ. ಗ್ಯಾಸ್ ಮಾತ್ರ ನೀಡಲಾಗುತ್ತಿದೆ.

ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಯಲ್ಲೂ ಪರಿಸ್ಥಿತಿ ಭೀಕರ

ಯಾದಗಿರಿ ಜಿಲ್ಲೆಯಲ್ಲಿರುವ ಏಕೈಕ ಎಲ್‌ಪಿಜಿ ಬಂಕ್ ನಲ್ಲಿ ಸ್ಟಾಕ್ ಇಲ್ಲದೇ ಆಟೋ ಚಾಲಕರು ಪರದಾಡಿದರು. ರಾಯಚೂರು ಜಿಲ್ಲೆಯಲ್ಲಿ ಚಾಲಕರ ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಡಳಿತವು ಆಹಾರ ಇಲಾಖೆ ಅಧಿಕಾರಿಗಳ ಮೂಲಕ ಬಂಕ್‌ಗಳಿಗೆ ಭೇಟಿ ನೀಡಿ ಪೂರೈಕೆಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿತು. ಮಂಗಳೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲೂ ಪರಿಸ್ಥಿತಿ ಗಂಭೀರವಾಗಿದ್ದು, ಆಟೋ ಸಂಚಾರ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರಿನ ಲಾಲ್‌ಬಾಗ್‌ ರಸ್ತೆಯಲ್ಲಿರುವ ಎಲ್‌ಪಿಜಿ ಗ್ಯಾಸ್‌ ಬಂಕ್‌ ಸ್ಥಗಿತ ಚಿತ್ರ: ಸಿ.ಎಸ್‌. ಕೀರ್ತಿಕ್‌

'ಮೋದಿ ಸಾಹೇಬರೇ ನಮ್ಮನ್ನು ಉಳಿಸಿ'

ದಿನದ ದುಡಿಮೆಯನ್ನೇ ನಂಬಿ ಬದುಕುವ ಆಟೋ ಚಾಲಕರ ಬದುಕು ಈಗ ಅಯೋಮಯವಾಗಿದೆ. ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ ಮತ್ತು ಜೀವನ ನಿರ್ವಹಣೆಗೆ ಆಟೋವೇ ಆಧಾರವಾಗಿದೆ. ಈಗ ಗ್ಯಾಸ್ ಇಲ್ಲದೇ ಆಟೊ ಓಡಿಸಲು ಸಾಧ್ಯವಾಗದೇ ಜೀವನ ದುಸ್ತರವಾಗಿದೆ " ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಇಂಧನ ಬಿಕ್ಕಟ್ಟು ಬಗೆಹರಿಸಬೇಕು ಎಂದು ರಾಜಾಜಿನಗರ ಭಾಗದ ಆಟೋ ಚಾಲಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊರೆ ಇಟ್ಟಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಕುಟುಂಬಗಳು ಗ್ಯಾಸ್ ಅಭಾವದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರಗಳು ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಚಾಲಕರ ಸಂಘಟನೆಗಳು ಎಚ್ಚರಿಕೆ ನೀಡಿವೆ.

Read More
Next Story