
ಕರ್ನಾಟಕದ ಶೇ. 67 ಗರ್ಭಿಣಿಯರಲ್ಲಿ ರಕ್ತಹೀನತೆ; ಹೆಚ್ಚಿದ ಕಳವಳ
ಜೈವಿಕವಾಗಿ ಪುರುಷರಿಗಿಂತ ಹೆಚ್ಚು ಶಕ್ತಿಶಾಲಿಗಳೆಂದು ಪರಿಗಣಿಸಲ್ಪಡುವ ಮಹಿಳೆಯರು, ಬೆಳೆಯುತ್ತಾ ರಕ್ತಹೀನತೆಯಂತಹ ಗಂಭೀರ ಸಮಸ್ಯೆಗೆ ಒಳಗಾಗುತ್ತಿರುವುದು ನಮ್ಮ ಸಮಾಜದ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.
ಮಹಿಳೆಯರ ಆರೋಗ್ಯದ ವಿಚಾರದಲ್ಲಿ ಇಂದು ಎದುರಿಸುತ್ತಿರುವ ಅತ್ಯಂತ ಗಂಭೀರ ಸವಾಲು ಎಂದರೆ ರಕ್ತಹೀನತೆ. ರಾಜ್ಯದಲ್ಲಿ ಶೇ. 67ಕ್ಕಿಂತ ಹೆಚ್ಚು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಜೈವಿಕವಾಗಿ ಪುರುಷರಿಗಿಂತ ಹೆಚ್ಚು ಶಕ್ತಿಶಾಲಿಗಳೆಂದು ಪರಿಗಣಿಸಲ್ಪಡುವ ಮಹಿಳೆಯರು, ಬೆಳೆಯುತ್ತಾ ರಕ್ತಹೀನತೆಯಂತಹ ಗಂಭೀರ ಸಮಸ್ಯೆಗೆ ಒಳಗಾಗುತ್ತಿರುವುದು ಸಮಾಜದ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ಇದರ ಹಿಂದೆ ಕೌಟುಂಬಿಕ ಹಾಗೂ ಸಾಮಾಜಿಕ ಕಾರಣಗಳು ಎದ್ದು ಕಾಣುತ್ತಿವೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಕ್ತಹೀನತೆ ಎಂದರೆ ಕೇವಲ ರಕ್ತದ ಕೊರತೆಯಲ್ಲ. ಅದು ದೇಹದ ಪ್ರತಿ ಜೀವಕೋಶಕ್ಕೆ ಆಮ್ಲಜನಕ ತಲುಪಿಸುವ ಸಾಮರ್ಥ್ಯದ ಕುಸಿತ. ಗರ್ಭಿಣಿಯರಲ್ಲಿ ಇದು ಕಂಡುಬಂದಾಗ ಅದರ ಪರಿಣಾಮ ಇಬ್ಬರ ಮೇಲೆ ಬೀರುತ್ತದೆ. ಅತಿಯಾದ ಸುಸ್ತು, ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದು ಮತ್ತು ಪ್ರಸವದ ಸಮಯದಲ್ಲಿ ಅತಿಯಾದ ರಕ್ತಸ್ರಾವದಿಂದ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರಲಿದೆ. ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತಗೊಳ್ಳುವುದು, ಅವಧಿಗೂ ಮುನ್ನ ಜನನ ಮತ್ತು ಜನನದ ಸಮಯದಲ್ಲಿ ಮಗುವಿನ ತೂಕ ಕಡಿಮೆ ಇರುವುದು ಮುಂದಿನ ಪೀಳಿಗೆಯನ್ನು ದೈಹಿಕವಾಗಿ ಮತ್ತು ಬೌದ್ಧಿಕವಾಗಿ ದುರ್ಬಲಗೊಳಿಸಲಿದೆ.
ರಕ್ತಹೀನತೆ ಕೇವಲ ವೈದ್ಯಕೀಯ ಸಮಸ್ಯೆಯಲ್ಲ, ಇದೊಂದು ಆಹಾರ ಪದ್ಧತಿಯ ಸಮಸ್ಯೆ ಎಂದು ಮನೆಮನೆಗೆ ತಲುಪಿಸಬೇಕು. ಗರ್ಭಿಣಿಯರಿಗೆ ನೀಡುವ ಪೌಷ್ಟಿಕ ಆಹಾರ ಪದಾರ್ಥಗಳಲ್ಲಿ ಸ್ಥಳೀಯ ಕಿರುಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಧುನಿಕ ವೈದ್ಯರ ಜೊತೆಗೆ ಆಯುರ್ವೇದ ಪದ್ಧತಿಯ ಸಲಹೆಗಳೂ ಸಿಗುವಂತಾಗಬೇಕು. ವೈದ್ಯಕೀಯ ಪಠ್ಯಕ್ರಮದಲ್ಲಿ ರೋಗ ತಡೆಗಟ್ಟುವಿಕೆ ಮತ್ತು ಸಂವಹನ ಕೌಶಲಗಳಿಗೆ ಹೆಚ್ಚಿನ ಒತ್ತು ನೀಡಬೇಕು.
ಜೈವಿಕವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಶಕ್ತಿಶಾಲಿಗಳು. ನಿಸರ್ಗವು ಮಹಿಳೆಗೆ ಜನ್ಮ ನೀಡುವ ಅದ್ಭುತ ಶಕ್ತಿಯನ್ನು ನೀಡಿದೆ. ಆದರೆ, ಇಂತಹ ಶಕ್ತಿಶಾಲಿ ಜೀವಿಗಳು ರಕ್ತಹೀನತೆಗೆ ತುತ್ತಾಗಲು ಪ್ರಮುಖ ಕಾರಣಗಳು ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿದೆ. ಭಾರತೀಯ ಕುಟುಂಬಗಳಲ್ಲಿ ಮಹಿಳೆಯರು ಎಲ್ಲರಿಗೂ ಉಣಬಡಿಸಿ ಕೊನೆಯಲ್ಲಿ ಉಳಿದದ್ದನ್ನು ತಿನ್ನುವ ಪದ್ಧತಿ ಇಂದಿಗೂ ಇದೆ. ಇದರಿಂದ ಅವರಿಗೆ ಸಿಗಬೇಕಾದ ಪೌಷ್ಟಿಕಾಂಶಗಳು ಸಿಗುತ್ತಿಲ್ಲ. ಮನೆಯವರ ಆರೋಗ್ಯದ ಬಗ್ಗೆ ಚಿಂತಿಸುವ ಮಹಿಳೆ, ತನ್ನ ಸ್ವಂತ ಆರೋಗ್ಯದ ಕಡೆಗೆ ಗಮನ ಹರಿಸುವುದು ಕಡಿಮೆ ಎಂದು ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಆಧುನಿಕ ವೈದ್ಯಕೀಯ ಪದ್ಧತಿ ರೋಗಕ್ಕೆ ಚಿಕಿತ್ಸೆ ನೀಡಬಲ್ಲದು, ಆದರೆ ರೋಗವನ್ನು ತಡೆಗಟ್ಟುವಲ್ಲಿ ನಮ್ಮ ಸಾಂಪ್ರದಾಯಿಕ ವೈದ್ಯಪದ್ಧತಿಗಳಾದ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಗಳು ಹೆಚ್ಚು ಪರಿಣಾಮಕಾರಿ. ಇಂದಿನ ವೈದ್ಯಕೀಯ ಶಿಕ್ಷಣವು ರೋಗ ಬಂದ ನಂತರ ಏನು ಮಾಡಬೇಕು ಎಂಬುದನ್ನು ಕಲಿಸುತ್ತದೆ. ಆದರೆ, ರೋಗ ಬರದಂತೆ ತಡೆಯುವ ಕೌಶಲ್ಯಗಳ ಕೊರತೆ ಇದೆ. ರಕ್ತಹೀನತೆಯನ್ನು ಹೋಗಲಾಡಿಸಲು ಕೇವಲ ಕಬ್ಬಿಣಾಂಶದ ಮಾತ್ರೆಗಳು ಸಾಲದು. ಅದರ ಜೊತೆಗೆ ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ರಾಗಿ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಯ ಬಗ್ಗೆ ಅರಿವು ಮೂಡಿಸಬೇಕು. ಇದನ್ನು 'ಇಂಟಿಗ್ರೇಟಿವ್ ಮೆಡಿಸಿನ್' ಮೂಲಕ ಸಾಧಿಸಬಹುದು ಎಂದು ಹೇಳಿದರು.
ವೈದ್ಯರಲ್ಲಿ ಹೆಣ್ಣಿನ ಮನಸ್ಸು ಇರಲಿ
ವೈದ್ಯಕೀಯ ವೃತ್ತಿ ಕೇವಲ ತಾಂತ್ರಿಕ ಕೌಶಲವಲ್ಲ, ಅದು ಮಾನವೀಯ ಸಂವೇದನೆ. ವೈದ್ಯರು ಅಳವಡಿಸಿಕೊಳ್ಳಬೇಕಾದ ಗುಣಗಳು. ರೋಗಿಯನ್ನು ಕೇವಲ ಒಂದು ಪ್ರಕರಣ ಎಂದು ನೋಡದೆ, ಅವರ ನೋವನ್ನು ತನ್ನದೇ ಎಂದು ಭಾವಿಸುವ ಮೋಕ್ಷ ಮನೋಭಾವ ವೈದ್ಯರಲ್ಲಿ ಇರಬೇಕು. ರೋಗಿಯ ಮನೆಯವರಿಗೆ ಇರುವ ಕಳವಳವನ್ನು ಅರ್ಥಮಾಡಿಕೊಂಡು ಸಮಾಧಾನಪಡಿಸುವ ಗುಣವನ್ನು ವೈದ್ಯರು ಬೆಳೆಸಿಕೊಳ್ಳಬೇಕು. ಇದು ಚಿಕಿತ್ಸೆಯ ಅರ್ಧದಷ್ಟು ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು.

