ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸದೇ ಸಮವಸ್ತ್ರ ಕೊಟ್ಟ ಸರ್ಕಾರ!
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 15 ಸಾವಿರ ಹಾಗೂ ಸಹಾಯಕಿಯರ ಗೌರವಧನವನ್ನು 10 ಸಾವಿರಕ್ಕೆ ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿತ್ತು.
ರಾಜ್ಯದಲ್ಲಿರುವ 1,39,844 ಅಂಗಡಿವಾಡಿ ಕಾರ್ಯಕರ್ತೆಯರಿಗೆ ಒಂದು ಜೊತೆ ಹೆಚ್ವವಾರಿ ಸಮವಸ್ತ್ರ ವಿತರಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ಧಾರೆ.
ಕೇಂದ್ರ ಸರ್ಕಾರವು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಪ್ರತಿ ಸೀರೆಗೆ 500 ರೂ.ನಂತರ ವರ್ಷಕ್ಕೆ 2 ಸೀರೆಗಳನ್ನು ಖರೀದಿಸಲು ಹಣ ಜಮೆ ಮಾಡಲಾಗುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರ ಕೂಡ ಹೆಚ್ಚುವರಿಯಾಗಿ ಒಂದು ಜೊತೆ ಸಮವಸ್ತ್ರ ನೀಡಲು ಘೋಷಿಸಿದೆ. ಆದರೆ, ಸರ್ಕಾರದ ಈ ಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯವ್ಯಾಪಿ ಮುಷ್ಕರ ನಡೆಸಿದ್ದರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 15 ಸಾವಿರ ಹಾಗೂ ಸಹಾಯಕಿಯರ ಗೌರವಧನವನ್ನು 10 ಸಾವಿರಕ್ಕೆ ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ಸರ್ಕಾರ ಗೌರವ ಧನ ಹೆಚ್ಚಿಸುವ ಪ್ರಸ್ತಾಪ ಮಾಡದೇ ಹೆಚ್ಚುವರಿ ಸಮವಸ್ತ್ರ ನೀಡುವುದಾಗಿ ಘೋಷಿಸಿದೆ. ನಮಗೆ ಸಮವಸ್ತ್ರ ಬೇಕಿಲ್ಲ. ಗೌರವಧನ ಹೆಚ್ಚಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.
ಕಾಯಂ ನೌಕರರ ಸ್ಥಾನಮಾನ ನೀಡುವುದು, ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಚ್ಯುಟಿ ಪಾವತಿಸುವುದು ಮತ್ತು ನಿವೃತ್ತಿ ಸೌಲಭ್ಯಗಳನ್ನು ಒದಗಿಸಬೇಕು. ಪೌಷ್ಟಿಕ ಆಹಾರ ತಯಾರಿಕೆಗಾಗಿ ಹೆಚ್ಚುವರಿ ಅನುದಾನ ನೀಡಬೇಕು. ಡಿಎ (ಪ್ರಯಾಣ ಭತ್ಯೆ) ಹೆಚ್ಚಿಸಬೇಕು.ಕಟ್ಟಡ ನಿರ್ಮಾಣಕ್ಕೆ ಮುಂಗಡ ಹಣ ಬಿಡುಗಡೆ ಮಾಡಬೇಕು.ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು.ಮಾಸಿಕ ಭತ್ಯೆ ಹೆಚ್ಚಳ ಮಾಡಬೇಕು.ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆ ಹಣ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆ ಮುಂದಿಟ್ಟಿದ್ದರು.
ಅನುಕಂಪದ ನೇಮಕಾತಿಯಲ್ಲಿ ವಾಸ ಸ್ಥಳ ನಿಯಮ ಸಡಿಲಿಕೆ ಮಾಡಬೇಕು.ಬಿಪಿಎಲ್ ಕಾರ್ಡ್ ಮುಂದುವರಿಸಲು ಕ್ರಮ ಕೈಗೊಳ್ಳಬೇಕು.ನಿವೃತ್ತಿ ವಯಸ್ಸನ್ನು 65ವರ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದರು.

