
ವಶಪಡಿಸಿಕೊಂಡ ಜಾಗದಲ್ಲಿ ಪಾಲಿಕೆ ಸ್ವತ್ತು ಎಂದು ಅಧಿಕಾರಿಗಳು ಸೂಚನಾ ಫಲಕ ಹಾಕಿದರು.
ಐಟಿಪಿಎಲ್ ರಸ್ತೆ ವಿಸ್ತರಣೆ; ಹೂಡಿ ವೃತ್ತದಲ್ಲಿ 3,282 ಚದರ ಮೀಟರ್ ಜಿಬಿಎ ಸ್ವತ್ತು ವಶಕ್ಕೆ
ವೈಟ್‌ಫೀಲ್ಡ್ ಭಾಗದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಮತ್ತು ಸುಗಮ ಸಂಚಾರ ಕಲ್ಪಿಸಲು ಐಟಿಪಿಎಲ್ ಬಳಿ ರಸ್ತೆ ವಿಸ್ತರಣೆಗೆ ಸಿದ್ಧತೆ ಆರಂಭಿಸಲಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆಯ ಕೇಂದ್ರಬಿಂದುವಾಗಿರುವ ಐಟಿಪಿಎಲ್ ಮುಖ್ಯರಸ್ತೆ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಪರಿಷ್ಕೃತ ಮಹಾಯೋಜನೆ –2015ರ ಅನ್ವಯ ಹೂಡಿ ವೃತ್ತದಿಂದ ಪ್ರೆಸ್ಟೀಜ್ ಶಾಂತಿನಿಕೇತನವರೆಗಿನ 150 ಅಡಿ ರಸ್ತೆ ವಿಸ್ತರಣೆಗೆ ಮೀಸಲಿರಿಸಿದ್ದ ಸುಮಾರು 3,282 ಚದರ ಮೀಟರ್ ವಿಸ್ತೀರ್ಣದಲ್ಲಿದ್ದ ಸ್ವತ್ತುಗಳನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ಬುಧವಾರ (ಮಾ.4) ವಶಕ್ಕೆ ಪಡೆದುಕೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್, "ರಸ್ತೆ ವಿಸ್ತರಣೆಗಾಗಿ ಮೀಸಲಾದ (RD) ಸ್ವತ್ತುಗಳನ್ನು ನಿಯಮಾನುಸಾರ ವಶಕ್ಕೆ ಪಡೆಯಲಾಗಿದೆ. ಐಟಿಪಿಎಲ್ - ವೈಟ್‌ಫೀಲ್ಡ್ ಭಾಗದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಮತ್ತು ಸುಗಮ ಸಂಚಾರ ಕಲ್ಪಿಸಲು ಈ ಕ್ರಮ ಅನಿವಾರ್ಯವಾಗಿದೆ" ಎಂದು ತಿಳಿಸಿದ್ದಾರೆ.
ವಶಕ್ಕೆ ಪಡೆದ ಪ್ರಮುಖ ಸ್ವತ್ತುಗಳು
ಪಾಲಿಕೆಯು ಪ್ರಮುಖ ಸರ್ವೆ ಸಂಖ್ಯೆಗಳಲ್ಲಿನ ಜಾಗವನ್ನು ವಶಕ್ಕೆ ಪಡೆದು, ಪಾಲಿಕೆಗೆ ಸೇರಿದ ಸ್ವತ್ತು ಎಂಬ ಸೂಚನಾ ಫಲಕ ಅಳವಡಿಸಿದೆ. ಸರ್ವೆ ಸಂಖ್ಯೆ 192 (ಭೀಮಾ ಜುವೆಲ್ಲರ್ಸ್) 1,046.90 ಚದರ ಮೀಟರ್, ಸರ್ವೆ ಸಂಖ್ಯೆ 116 (ಡಿಎಸ್ಆರ್ ವೈಟ್ ಲೋಟಸ್) 1,420.82 ಚದರ ಮೀಟರ್. ಸರ್ವೆ ಸಂಖ್ಯೆ 193 (ಬ್ರೆನ್ ನಾಟಿಲಸ್) 505.11 ಚದರ ಮೀಟರ್, ಸರ್ವೆ ಸಂಖ್ಯೆ 194 (ಖಾಸಗಿ ಸ್ವತ್ತು) 309.52 ಚದರ ಮೀಟರ್ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ.
ಜಂಟಿ ಕಾರ್ಯಾಚರಣೆ
ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರು, ಟಿಡಿಆರ್ ವಿಭಾಗದ ಅಧಿಕಾರಿಗಳು, ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್‌ಗಳನ್ನು ಒಳಗೊಂಡ ವಿಶೇಷ ತಂಡವು ಈ ಕಾರ್ಯಾಚರಣೆ ನಡೆಸಿತು. ವಶಕ್ಕೆ ಪಡೆದ ಈ ಜಾಗಗಳನ್ನು ಕೇವಲ ಸಾರ್ವಜನಿಕ ರಸ್ತೆ ಅಭಿವೃದ್ಧಿ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಟ್ರಾಫಿಕ್ ಸಮಸ್ಯೆಗೆ ಶೀಘ್ರ ಮುಕ್ತಿ
ಈ ರಸ್ತೆ ಅಗಲೀಕರಣದಿಂದಾಗಿ ವೈಟ್‌ಫೀಲ್ಡ್ ಸುತ್ತಮುತ್ತಲಿನ ಸಾವಿರಾರು ಐಟಿ ಉದ್ಯೋಗಿಗಳಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ದಶಕಗಳಿಂದ ಕಾಡುತ್ತಿದ್ದ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

