LPG effect: Many hotels closed, Indira Canteen, temple hit by heatwave
x

ಸಾಂದರ್ಭಿಕ ಚಿತ್ರ

ಎಲ್‌ಪಿಜಿ ಎಫೆಕ್ಟ್: ಹಲವು ಹೊಟೇಲ್‌ಗಳು ಬಂದ್, ಇಂದಿರಾ ಕ್ಯಾಂಟಿನ್‌, ದೇವಾಲಯಕ್ಕೂ ತಟ್ಟಿದ ಬಿಸಿ

ಎಲ್‌ಪಿಜಿ ಸಿಲಿಂಡರ್‌ ಅಭಾವದಿಂದಾಗಿ ಬಹುತೇಕ ಹೊಟೇಲ್‌ಗಳ ಮೆನುವಿನ ವಿಭಿನ್ನ ಆಹಾರಗಳನ್ನು ಕಡಿತ ಮಾಡಿ, ಕಡಿಮೆ ಎಲ್‌ಪಿಜಿ ಗ್ಯಾಸ್‌ನಲ್ಲಿ ತಯಾರಿಸುವ ಆಹಾರಕ್ಕೆ ಮೊರೆ ಹೋಗಲಾಗಿದೆ


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್‌- ಇಸ್ರೇಲ್‌ ಸಂಘರ್ಷದ ಪರಿಣಾಮ ಬೆಂಗಳೂರಿಗೆ ನೇರವಾಗಿ ಆಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ನಗರದಾತ್ಯಂತ ಹೊಟೇಲ್‌ಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ.

ಇದೀಗ ದಕ್ಷಿಣ ಭಾರತದ ಜನಪ್ರಿಯ ಸಸ್ಯಾಹಾರಿ ಹೊಟೇಲ್‌ ಐಡಿಸಿ (IDC) ಕಿಚನ್‌ ಹೊಟೇಲ್‌ಗೆ ತೀವ್ರ ಸಮಸ್ಯೆ ಎದುರಾಗಿದ್ದು, ಬೆಂಗಳೂರಿನಾದ್ಯಂತ ಇರುವ 12 ಕ್ಕೂ ಹೆಚ್ಚು ಹೊಟೇಲ್‌ಗಳನ್ನು ಮುಚ್ಚಿವೆ.

ನಗರದಲ್ಲಿ ತ್ವರಿತ ಸೇವೆ, ನೈರ್ಮಲ್ಯ ಹಾಗೂ ಕೆಲವು ಶಾಖೆಗಳಲ್ಲಿ 24 ಗಂಟೆಗಳ ಸೇವೆಗೆ ಹೆಸರುವಾಸಿಯಾಗಿದ್ದ ಐಡಿಸಿ ಶುಕ್ರವಾರ(ಮಾ.13) ಮಧ್ಯಾಹ್ನ ಮುಚ್ಚಿದ್ದು, ಸಿಲಿಂಡರ್‌ ದೊರೆಯುವವರೆಗೂ ಹೊಟೇಲ್‌ ತೆರೆಯುವುದು ಅನುಮಾನವಾಗಿದೆ. ನಗರದ ರೆಸಿಡೆನ್ಸಿ ರಸ್ತೆ, ಕೋರಮಂಗಲ 5 ನೇ ಬ್ಲಾಕ್, ಯಲಹಂಕ, ರಾಜರಾಜೇಶ್ವರಿ ನಗರ, ದೇವಸಂದ್ರ, ಎಚ್‌ಆರ್‌ಬಿಆರ್‌ ಲೇಔಟ್, ಗಾಂಧಿ ನಗರ, ಸಂಪಂಗಿರಾಮನಗರ, ಲಕ್ಕಸಂದ್ರ, ದೊಮ್ಮಲೂರು, ಬನ್ನೇರುಘಟ್ಟ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಮ್ಮನಹಳ್ಳಿಯಲ್ಲಿ ಐಡಿಸಿ ಹೊಟೇಲ್‌ಗಳು ಇವೆ.

ಮಂಡಿಗಳಲ್ಲಿ ಸೌದೆ ಮಾರಾಟ ಹೆಚ್ಚಳ

ರಾಜ್ಯಾದ್ಯಂತ ಎಲ್‌ಪಿಜಿ ಸಿಲಿಂಡರ್‌ ಕೊರತೆಯಾಗಬಹುದು ಎಂಬ ಉದ್ದೇಶದಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಮಂಡಿಗಳಲ್ಲಿ ಸೌದೆಯನ್ನು ಕೊಂಡುಕೊಳ್ಳಲು ಮುಗಿ ಬಿಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಹೊಟೇಲ್‌ ಮಾಲೀಕರೂ ಸಿಲಿಂಡರ್‌ ಇಲ್ಲದೆ ಸೌದೆ ಒಲೆಯಲ್ಲಿಯೇ ಅಡುಗೆ ಮಾಡಿ ಗ್ರಾಹಕರಿಗೆ ನೀಡುತ್ತಿದ್ದಾರೆ.

ಇಂದಿರಾ ಕ್ಯಾಂಟಿನ್‌ಗೂ ತಟ್ಟಿದ ಬಿಸಿ

ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಇಂದಿರಾ ಕ್ಯಾಂಟಿನ್‌ಗೂ ಸಿಲಿಂಡರ್‌ ಕೊರತೆ ಬಿಸಿ ತಟ್ಟಿದ್ದು, ಕಲಬುರಗಿಯಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಆಹಾರ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಸಂತನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಅಡುಗೆ ಕೋಣೆಗೆ ಭೇಟಿ ನೀಡಿದ ಆಯುಕ್ತ ರಾಜೇಂದ್ರ ಚೋಳನ್, ಬಳಿಕ ಎಲ್‌ಪಿಜಿ ಸಮಸ್ಯೆ ಉಂಟಾಗದಂತೆ ಗಮನಹರಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ವಸಂತನಗರ ಇಂದಿರಾ ಅಡುಗೆ ಕೋಣೆಯಿಂದ 14 ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಈ ಸಂಬಂಧ ಯಾವುದೇ ಕಾರಣಕ್ಕೂ ಆಹಾರ ಪೂರೈಕೆ ನಿಲ್ಲಿಸುವಂತಿಲ್ಲ. ಎಲ್‌ಪಿಜಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಕೊಂಡು ಯಾವುದೇ ಸಮಸ್ಯೆ ಉಂಟಾಗದಂತೆ ಆಹಾರ ಪೂರೈಕೆಗೆ ಕ್ರಮ ವಹಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ದೇವಾಲಯಗಳ ಅನ್ನಪ್ರಸಾದ ಬೇಯಿಸಲೂ ಎಲ್‌ಪಿಜಿ ಕೊರತೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ರಾಜ್ಯದ ಹಲವು ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ನೀಡಲಾಗುವ ಅನ್ನದಾಸೋಹ ಮತ್ತು ಪ್ರಸಾದ ವಿನಿಯೋಗಕ್ಕೆ ಅಡಚಣೆಯಾಗಿದೆ. ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಸಿಲಿಂಡರ್ ಕೊರತೆಯಿಂದಾಗಿ ಮಾ. 11 ರಿಂದ ಉಚಿತ ಅನ್ನದಾಸೋಹ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಸಾವಿರಾರು ಭಕ್ತರಿಗೆ ಅನ್ನದಾನ ಮಾಡುವ ಈ ದೇಗುಲಕ್ಕೆ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಪ್ರಸಾದ ವಿತರಣೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಕೆಲವೊಮ್ಮೆ ಭಕ್ತರೇ ಮನೆಯಿಂದ ಸಿಲಿಂಡರ್ ತಂದು ಅಡುಗೆ ಮಾಡಲು ನೆರವಾಗುತ್ತಿದ್ದಾರೆ. ಇದೇ ರೀತಿಯಾಗಿ ಮುಜರಾಯಿ ಇಲಾಖೆಯ ಹಲವು ದೇವಾಲಯಗಳಿಗೆ ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆ ಎದುರಾಗಿದೆ.

ಹೊಟೇಲ್‌ಗಳ ಮೆನು ಕಡಿತ

ಎಲ್‌ಪಿಜಿ ಸಿಲಿಂಡರ್‌ ಅಭಾವದಿಂದಾಗಿ ನಗರದ ಬಹುತೇಕ ಹೊಟೇಲ್‌ಗಳ ಮೆನುವಿನಲ್ಲಿನ ಹಲವು ಬಗೆಯ ವಿಭಿನ್ನ ಆಹಾರಗಳನ್ನು ಕಡಿತ ಮಾಡಿ ಕಡಿಮೆ ಎಲ್‌ಪಿಜಿ ಗ್ಯಾಸ್‌ನಲ್ಲಿ ತಯಾರಿಸುವ ಆಹಾರಕ್ಕೆ ಹೊಟೇಲ್‌ ಮಾಲೀಕರು ಮೊರೆ ಹೋಗಿದ್ದಾರೆ. ಕೆ.ಜಿ. ರಸ್ತೆಯ ವಿವಿಧ ಹೊಟೇಲ್‌ಗಳ ಮುಂಭಾಗ " ಗ್ಯಾಸ್ ಸರಬರಾಜಿನಲ್ಲಿ ತೊಂದರೆಯಾಗಿದ್ದು, ಸೀಮಿತ ತಿಂಡಿಗಳನ್ನು ಮಾಡಲಾಗುತ್ತಿದೆ. ದಯವಿಟ್ಟು ಗ್ರಾಹಕರು ಸಹಕಾರ ನೀಡಬೇಕು ಎಂದು ಬೋರ್ಡ್‌ನಲ್ಲಿ ಹಾಕಲಾಗಿದೆ".

ಕಾಳ ಸಂತೆಯಲ್ಲಿ ಎಲ್‌ಪಿಜಿ ದುಬಾರಿ

ಕೆಂಪೇಗೌಡ ರಸ್ತೆಯಲ್ಲಿರುವ ವಿಷ್ಣು ಗ್ರಾಂಡ್‌ ಹೊಟೇಲ್‌ ಮ್ಯಾನೇಜರ್‌ ʼದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿ, "ಹೊಟೇಲ್‌ಗೆ ಪ್ರತಿದಿನ ನೂರಾರು ಗ್ರಾಹಕರು ಬರುತ್ತಾರೆ. ಬೆಳಗಿನ ತಿಂಡಿಗಳಲ್ಲಿ ಸೀಮಿತ ಮಾಡಲಾಗಿದ್ದು, ಕೇವಲ ಅನ್ನ ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಸಿಲಿಂಡರ್ ಖಾಲಿಯಾದ ತಕ್ಷಣ ಬಂದ್ ಮಾಡುತ್ತೇವೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಕಾಳಸಂತೆಯಲ್ಲಿ ಸಿಲಿಂಡರ್ ಸಿಗುತ್ತದೆ. ಆದರೆ, ಅಲ್ಲಿ ಹೆಚ್ಚು ಹಣ ನೀಡಿ ತರಬೇಕು," ಎಂದು ಅಳಲು ತೋಡಿಕೊಂಡರು..

Read More
Next Story