65 ಕೋಟಿ ರೂ.ಗೆ ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕು ಪಡೆದ ಇನ್‌ಮೊಬಿ
x

65 ಕೋಟಿ ರೂ.ಗೆ ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕು ಪಡೆದ ಇನ್‌ಮೊಬಿ

ದೇಶದ ಮೊದಲ ಯುನಿಕಾರ್ನ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಮೂಲದ ಇನ್‌ಮೊಬಿ, ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳನ್ನು ಅಧಿಕೃತವಾಗಿ ತನ್ನದಾಗಿಸಿಕೊಂಡಿದೆ.


Click the Play button to hear this message in audio format

ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ನಿರ್ಮಾಣವಾಗುತ್ತಿರುವ ಹೊರ ವರ್ತುಲ ರಸ್ತೆ ಮೆಟ್ರೋ ಕಾರಿಡಾರ್‌ನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮಹತ್ವದ ಹೆಜ್ಜೆಯೊಂದು ಇಡಲಾಗಿದೆ. ಭಾರತದ ಮೊದಲ ಯುನಿಕಾರ್ನ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಮೂಲದ ಪ್ರಮುಖ ಜಾಹೀರಾತು ಮತ್ತು ತಂತ್ರಜ್ಞಾನ ದೈತ್ಯ ಸಂಸ್ಥೆ ಇನ್‌ಮೊಬಿ, ನಿರ್ಮಾಣ ಹಂತದಲ್ಲಿರುವ ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳನ್ನು ಅಧಿಕೃತವಾಗಿ ತನ್ನದಾಗಿಸಿಕೊಂಡಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ಇನ್‌ಮೊಬಿ ಸಂಸ್ಥೆಯ ನಡುವೆ ಐತಿಹಾಸಿಕ ತಿಳಿವಳಿಕೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಅನ್ವಯ, ಈ ನಿಲ್ದಾಣವನ್ನು ಅಧಿಕೃತವಾಗಿ ಇನ್‌ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ ಎಂದು ಹೆಸರಿಸಲಾಗುತ್ತದೆ. ಈ ಸಹಯೋಗಕ್ಕಾಗಿ ಇನ್‌ಮೊಬಿ ಸಂಸ್ಥೆಯು ನಿಲ್ದಾಣದ ನಿರ್ಮಾಣ ವೆಚ್ಚ ಮತ್ತು ನಾಮಕರಣ ಹಕ್ಕುಗಳ ಶುಲ್ಕವಾಗಿ ಬಿಎಂಆರ್‌ಸಿಎಲ್‌ಗೆ ಬರೋಬ್ಬರಿ 65 ಕೋಟಿ ರೂಪಾಯಿಗಳನ್ನು ನೀಡಲಿದೆ.

ನಗರದ ಬಿಎಂಆರ್‌ಸಿಎಲ್ ಕಚೇರಿಯಲ್ಲಿ ನಡೆದ ಸರಳ ಹಾಗೂ ಅರ್ಥಪೂರ್ಣ ಸಮಾರಂಭದಲ್ಲಿ ಉಭಯ ಸಂಸ್ಥೆಗಳ ಉನ್ನತ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು. ಬಿಎಂಆರ್‌ಸಿಎಲ್ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಸಿ. ಜಾಫರ್ ಸಹಿ ಮಾಡಿದರು. ಇನ್‌ಮೊಬಿ ಪರವಾಗಿ ಜಾಗತಿಕ ಹಿರಿಯ ಉಪಾಧ್ಯಕ್ಷೆ ಹಾಗೂ ಮುಖ್ಯ ಕಾರ್ಪೊರೇಟ್ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ಅಧಿಕಾರಿ ಡಾ. ಸುಬಿ ಚತುರ್ವೇದಿ ಅವರು ಒಪ್ಪಂದಕ್ಕೆ ಅಂಕಿತ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಈ ಪಾಲುದಾರಿಕೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದರೊಂದಿಗೆ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಖಾಸಗಿ ವಲಯ ಹೇಗೆ ಕೈಜೋಡಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಬಣ್ಣಿಸಿದರು.

ಇಬ್ಬಲೂರು ನಿಲ್ದಾಣದ ಭೌಗೋಳಿಕ ಮತ್ತು ತಾಂತ್ರಿಕ ಪ್ರಾಮುಖ್ಯತೆ

ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಸ್ಥಾಪನೆಯಾಗುತ್ತಿರುವ ಇಬ್ಬಲೂರು ನಿಲ್ದಾಣವು ಸಾಮಾನ್ಯ ಮೆಟ್ರೋ ನಿಲ್ದಾಣವಲ್ಲ. ಇದು ನಗರದ ಅತ್ಯಂತ ಜನನಿಬಿಡ ಹಾಗೂ ಆಯಕಟ್ಟಿನ ಕೇಂದ್ರವಾಗಿದೆ. ಇದು ನಮ್ಮ ಮೆಟ್ರೋ ಹಂತ-2ಎ ಅಡಿಯಲ್ಲಿ ಬರುತ್ತಿರುವ ನೀಲಿ ಮಾರ್ಗ (ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮತ್ತು ಭವಿಷ್ಯದ ಕೆಂಪು ಮಾರ್ಗಗಳೆರಡನ್ನೂ ಸಂಧಿಸುವ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಬೆಳ್ಳಂದೂರು, ಸರ್ಜಾಪುರ ರಸ್ತೆ, ಎಚ್‌ಎಸ್‌ಆರ್ ಲೇಔಟ್ ಮತ್ತು ಮಾರತ್‌ಹಳ್ಳಿ ಸಂಪರ್ಕಿಸುವ ಜಂಕ್ಷನ್‌ನಲ್ಲಿರುವ ಈ ನಿಲ್ದಾಣವು ಸುತ್ತಮುತ್ತಲಿನ ನೂರಾರು ಐಟಿ, ಬಿಟಿ ಮತ್ತು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳ ಉದ್ಯೋಗಿಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಪ್ರತಿದಿನ ಲಕ್ಷಾಂತರ ವಾಹನಗಳು ಸಂಚರಿಸುವ ಮತ್ತು ನಿತ್ಯ ಟ್ರಾಫಿಕ್ ಜಾಮ್‌ನಿಂದ ನಲುಗುವ ಹೊರ ವರ್ತುಲ ರಸ್ತೆಯ ಪ್ರಯಾಣಿಕರಿಗೆ, ವಿಶೇಷವಾಗಿ ಟೆಕ್ಕಿಗಳಿಗೆ ಈ ನಿಲ್ದಾಣವು ಸುಗಮ ಮತ್ತು ವೇಗದ ಪ್ರಯಾಣದ ಬಾಗಿಲು ತೆರೆಯಲಿದೆ.

ಪ್ರಯಾಣಿಕೇತರ ಆದಾಯಕ್ಕೆ ಬಲ

ಒಪ್ಪಂದದ ಕುರಿತು ಹರ್ಷ ವ್ಯಕ್ತಪಡಿಸಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಸಿ. ಜಾಫರ್ ಅವರು, "ಭಾರತದ ಮೊದಲ ಡಬಲ್ ಯುನಿಕಾರ್ನ್ ಕಂಪನಿಯಾದ ಇನ್‌ಮೊಬಿಯನ್ನು ಬೆಂಗಳೂರಿನ ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಮ್ಮ ಪಾಲುದಾರರನ್ನಾಗಿ ಸ್ವಾಗತಿಸಲು ನಮಗೆ ಹೆಮ್ಮೆಯಾಗುತ್ತಿದೆ. ಸಾರ್ವಜನಿಕ ಸಾರಿಗೆಯ ನಿರಂತರ ಬೆಳವಣಿಗೆಗೆ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಅರ್ಥಪೂರ್ಣ ಕೊಡುಗೆ ನೀಡಬಲ್ಲವು ಎಂಬುದನ್ನು ಈ ಒಪ್ಪಂದ ಸಾಬೀತುಪಡಿಸಿದೆ" ಎಂದರು. "ಇನ್‌ಮೊಬಿ ನೀಡುತ್ತಿರುವ ೬೫ ಕೋಟಿ ರೂ. ಈ ಮೊತ್ತವು ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಬಲ ನೀಡುವುದರ ಜೊತೆಗೆ, ಬಿಎಂಆರ್‌ಸಿಎಲ್‌ನ ಪ್ರಯಾಣಿಕೇತರ ಆದಾಯ ಉಪಕ್ರಮಗಳಿಗೆ ಭದ್ರ ಬುನಾದಿ ಹಾಕಲಿದೆ. ಬೆಂಗಳೂರಿನ ಕಾರ್ಪೊರೇಟ್ ವಲಯದೊಂದಿಗೆ ಇಂತಹ ಇನ್ನಷ್ಟು ಪಾಲುದಾರಿಕೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ತಿಳಿಸಿದರು.

ಇನ್‌ಮೊಬಿ ಸಂಸ್ಥಾಪಕರ ಸಂದೇಶ

ಬೆಂಗಳೂರಿನಲ್ಲೇ ಹುಟ್ಟಿ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ಇನ್‌ಮೊಬಿ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ತಿವಾರಿ ಅವರು ಒಪ್ಪಂದದ ಕುರಿತು ಮಾತನಾಡಿದರು. "ಬೆಂಗಳೂರು ನಗರವು ಇನ್‌ಮೊಬಿಗೆ ಜಾಗತಿಕ ಭವಿಷ್ಯವನ್ನು ಕಲ್ಪಿಸಿಕೊಳ್ಳಲು ಮತ್ತು ಅದನ್ನು ನಿರ್ಮಿಸಲು ಅಚಲ ಆತ್ಮವಿಶ್ವಾಸವನ್ನು ನೀಡಿದೆ. ನಾವು ಜಾಗತಿಕ ಮಟ್ಟದಲ್ಲಿ ಬೆಳೆದಂತೆ, ನಮ್ಮ ಪಯಣಕ್ಕೆ ದಾರಿ ಮಾಡಿಕೊಟ್ಟ ಈ ನಗರದತ್ತ ನಮ್ಮ ಜವಾಬ್ದಾರಿಯ ಭಾವನೆಯೂ ಹೆಚ್ಚಾಗಿದೆ. ಬೆಂಗಳೂರು ನಮಗೆ ನೀಡಿದ ಕೊಡುಗೆಗೆ ಪ್ರತಿಯಾಗಿ, ನಾವು ನಗರಕ್ಕೆ ಮರಳಿ ಕೊಡುಗೆ ನೀಡುವುದು ನಮ್ಮ ಕರ್ತವ್ಯವಾಗಿದೆ. ತಾವು ಭಾಗವಾಗಿರುವ ಸಮುದಾಯಗಳ ಅಭಿವೃದ್ಧಿಯಲ್ಲಿ ಪ್ರತಿಯೊಂದು ವ್ಯವಹಾರ ಸಂಸ್ಥೆಗೂ ಮಹತ್ವದ ಪಾತ್ರವಿದೆ ಎಂಬ ನಮ್ಮ ನಂಬಿಕೆಯನ್ನು ಈ ಪಾಲುದಾರಿಕೆ ಪ್ರತಿಬಿಂಬಿಸುತ್ತದೆ. ಭಾರತದಿಂದ ಜಗತ್ತಿಗಾಗಿ ತಂತ್ರಜ್ಞಾನ ನಿರ್ಮಿಸುವ ನಮ್ಮ ಕಾಯಕವನ್ನು ಮುಂದುವರಿಸುವುದರ ಜೊತೆಗೆ, ನಮ್ಮ ಪ್ರಯಾಣ ಆರಂಭವಾದ ನಗರದ ಮೂಲಸೌಕರ್ಯ ಸುಧಾರಣೆಗೆ ನಾವು ಸದಾ ಬದ್ಧರಾಗಿದ್ದೇವೆ" ಎಂದು ಸ್ಪಷ್ಟಪಡಿಸಿದರು.

ಜನಸಾಮಾನ್ಯರ ಜೀವನ ಸುಗಮಗೊಳಿಸುವ ಹೆಜ್ಜೆ

ಇನ್‌ಮೊಬಿಯ ಜಾಗತಿಕ ಹಿರಿಯ ಉಪಾಧ್ಯಕ್ಷೆ ಡಾ. ಸುಬಿ ಚತುರ್ವೇದಿ ಮಾತನಾಡಿ, "ವಿದ್ಯಾರ್ಥಿ ಕಾಲೇಜಿಗೆ ತೆರಳಲು, ಉದ್ಯೋಗಿ ಕೆಲಸಕ್ಕೆ ಹೋಗಲು ಅಥವಾ ಒಂದು ಕುಟುಂಬವು ನಗರದಾದ್ಯಂತ ಸಂಚರಿಸಲು ಸಾರ್ವಜನಿಕ ಸಾರಿಗೆಯು ಅತಿಮುಖ್ಯ ಸೇತುವೆಯಾಗಿದೆ. ಬಿಎಂಆರ್‌ಸಿಎಲ್ ಜೊತೆಗಿನ ಈ ಪಾಲುದಾರಿಕೆಯ ಮೂಲಕ ನಗರ ನಿರ್ಮಾಣಕ್ಕೆ ಅಗತ್ಯವಾದ ದೀರ್ಘಕಾಲೀನ ಬದ್ಧತೆಯನ್ನು ನಾವು ಮೆರೆದಿದ್ದೇವೆ. ಹಲವು ತಲೆಮಾರುಗಳ ಜನರಿಗೆ ಸೇವೆ ಸಲ್ಲಿಸುವ ಇಂತಹ ಸಾರ್ವಜನಿಕ ಮೂಲಸೌಕರ್ಯ ಯೋಜನೆಯಲ್ಲಿ ಭಾಗಿಯಾಗಿರುವುದು ಇನ್‌ಮೊಬಿಯ ಪ್ರತಿಯೊಬ್ಬ ಸದಸ್ಯನಿಗೂ ಹೆಮ್ಮೆಯ ಕ್ಷಣ" ಎಂದು ತಿಳಿಸಿದರು.

ಹೊರ ವರ್ತುಲ ರಸ್ತೆಯಲ್ಲಿ ಕಾರ್ಪೊರೇಟ್ ಮೆಟ್ರೋ ಕ್ರಾಂತಿ

ಹೊರ ವರ್ತುಲ ರಸ್ತೆಯ ಮೆಟ್ರೋ ಮಾರ್ಗ ನಿರ್ಮಾಣದಲ್ಲಿ ಖಾಸಗಿ ರಿಯಲ್ ಎಸ್ಟೇಟ್ ಮತ್ತು ತಂತ್ರಜ್ಞಾನ ದಿಗ್ಗಜರು ಬಿಎಂಆರ್‌ಸಿಎಲ್ ಜೊತೆ ಕೈಜೋಡಿಸುತ್ತಿರುವುದು ಇದೇ ಮೊದಲೇನಲ್ಲ. ಇನ್‌ಮೊಬಿಗಿಂತ ಮುಂಚಿತವಾಗಿಯೇ ಹಲವು ಪ್ರಮುಖ ಸಂಸ್ಥೆಗಳು ಇದೇ ಕಾರಿಡಾರ್‌ನಲ್ಲಿ ನಿಲ್ದಾಣಗಳ ನಾಮಕರಣ ಹಕ್ಕು ಪಡೆದುಕೊಂಡಿವೆ. ಬೆಳ್ಳಂದೂರು ಮೆಟ್ರೋ ನಿಲ್ದಾಣ ಪ್ರೆಸ್ಟೀಜ್ ಗ್ರೂಪ್, ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ಎಂಬಸಿ ಗ್ರೂಪ್, ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿಲ್ದಾಣ ಬಾಗ್ಮನೆ ಗ್ರೂಪ್. ಈಗ ಇವುಗಳ ಸಾಲಿಗೆ ಇಬ್ಬಲೂರು ನಿಲ್ದಾಣ (ಇನ್‌ಮೊಬಿ) ಸೇರ್ಪಡೆಯಾಗಿದೆ. ಹೊರ ವರ್ತುಲ ರಸ್ತೆಯ ಮೆಟ್ರೋ ಮಾರ್ಗವು ಐಟಿ ಕಂಪನಿಗಳ ಕೇಂದ್ರವಾಗಿರುವುದರಿಂದ, ಕಾರ್ಪೊರೇಟ್ ಕಂಪನಿಗಳು ತಮ್ಮ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ಉದ್ಯೋಗಿಗಳಿಗೆ ಸುಲಭ ಸಾರಿಗೆ ಕಲ್ಪಿಸಲು ಈ ರೀತಿಯ ಕೋ-ಬ್ರಾಂಡಿಂಗ್ ಮತ್ತು ನಿಲ್ದಾಣ ಅಭಿವೃದ್ಧಿಗೆ ಮುಗಿಬಿದ್ದು ಮುಂದೆ ಬರುತ್ತಿವೆ.

ಮೆಟ್ರೋ ಸಂಸ್ಥೆಗಳಿಗೆ ‘ಪ್ರಯಾಣಿಕೇತರ ಆದಾಯ’ ಏಕೆ ಮುಖ್ಯ?

ವಿಶ್ವಾದ್ಯಂತ ಮೆಟ್ರೋ ರೈಲು ಯೋಜನೆಗಳು ಕೇವಲ ಟಿಕೆಟ್ ದರಗಳಿಂದ ಮಾತ್ರ ಲಾಭದಾಯಕವಾಗಿ ನಡೆಯಲು ಸಾಧ್ಯವಿಲ್ಲ. ಟಿಕೆಟ್ ದರಗಳನ್ನು ಜನಸಾಮಾನ್ಯರಿಗೆ ಹೊರೆಯಾಗದಂತೆ ಕಡಿಮೆ ಇಡಬೇಕಾದ ಸಾಮಾಜಿಕ ಹೊಣೆಗಾರಿಕೆ ಸರ್ಕಾರಗಳ ಮೇಲಿರುತ್ತದೆ. ಇಂತಹ ಸಂದರ್ಭದಲ್ಲಿ ಮೆಟ್ರೋ ನಿಗಮಗಳು ಆರ್ಥಿಕ ಸ್ವಾವಲಂಬನೆ ಸಾಧಿಸಲು ಪ್ರಯಾಣಿಕೇತರ ಆದಾಯ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ನಿಲ್ದಾಣದ ಹೆಸರಿನ ಮುಂದೆ ಅಥವಾ ಹಿಂದೆ ಕಾರ್ಪೊರೇಟ್ ಕಂಪನಿಯ ಹೆಸರನ್ನು ಸೇರಿಸುವುದು. ನಿಲ್ದಾಣದ ಆವರಣ ಮತ್ತು ರೈಲುಗಳ ಒಳ-ಹೊರಗೆ ಡಿಜಿಟಲ್ ಪರದೆಗಳು ಮತ್ತು ಕಿಯೋಸ್ಕ್‌ಗಳ ಅಳವಡಿಕೆ. ನಿಲ್ದಾಣಗಳಲ್ಲಿ ಚಿಲ್ಲರೆ ವ್ಯಾಪಾರ ಮಳಿಗೆಗಳು, ಕಾಫಿ ಶಾಪ್‌ಗಳು ಮತ್ತು ಕಚೇರಿ ಸ್ಥಳಗಳ ಬಾಡಿಗೆ ಲಭ್ಯವಾಗಲಿದೆ. ಇನ್‌ಮೊಬಿಯಿಂದ ಬಂದಿರುವ ೬೫ ಕೋಟಿ ರೂ. ಮೊತ್ತವು ಬಿಎಂಆರ್‌ಸಿಎಲ್‌ಗೆ ಸಾಲ ಮರುಪಾವತಿ, ದೈನಂದಿನ ನಿರ್ವಹಣೆ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ನೇರವಾಗಿ ನೆರವಾಗಲಿದೆ.

Read More
Next Story