
ಸರ್ಕಾರಿ ಆಸ್ಪತ್ರೆಯಲ್ಲಿ ಇನ್ಮುಂದೆ ಕಾರ್ಪೊರೇಟ್ ಚಿಕಿತ್ಸೆ ಲಭ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ರಾಜ್ಯದಲ್ಲಿರುವ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಂದಾಗಿ ದೇಶದ ವಿವಿಧೆಡೆಯಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಬಂದು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.
ರಾಜ್ಯದ ಬಡ ಮತ್ತು ಮಧ್ಯಮ ವರ್ಗದವರಿಗೆ ಅತ್ಯಾಧುನಿಕ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ 450 ಹಾಸಿಗೆಗಳ ಸಾಮರ್ಥ್ಯದ ಹೈ ಟೆಕ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಶನಿವಾರ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು. ಈ ನೂತನ ಸೌಲಭ್ಯದೊಂದಿಗೆ ಸಂಸ್ಥೆಯ ಒಟ್ಟು ಹಾಸಿಗೆಗಳ ಸಾಮರ್ಥ್ಯ ಈಗ 900ಕ್ಕೆ ಏರಿಕೆಯಾಗಿದ್ದು, ದಕ್ಷಿಣ ಭಾರತದ ಪ್ರಮುಖ ಮಕ್ಕಳ ಚಿಕಿತ್ಸಾ ಕೇಂದ್ರವಾಗಿ ಹೊರಹೊಮ್ಮಿದೆ.
ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನಸಾಮಾನ್ಯರ ದೃಷ್ಟಿಕೋನ ಬದಲಾಗಬೇಕು. ಹೆಚ್ಚು ಹಣ ಖರ್ಚು ಮಾಡುವುದರಿಂದ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಶೇ. 100 ರಷ್ಟು ಗುಣಮಟ್ಟದ ಮತ್ತು ಸುಸಜ್ಜಿತ ಚಿಕಿತ್ಸೆ ಲಭಿಸುತ್ತದೆ ಎಂಬುದು ಭ್ರಮೆ. ಆ ಕಲ್ಪನೆಯಿಂದ ಜನರು ಹೊರಬರಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನುರಿತ ತಜ್ಞ ವೈದ್ಯರ ಮೂಲಕ ಗುಣಮಟ್ಟದ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಡವರ ಮನೆ ಮಕ್ಕಳಿಗೆ ಚಿಕಿತ್ಸೆ ಕೇವಲ ಹಣದ ಕೊರತೆಯಿಂದ ನಿಲ್ಲಬಾರದು ಎಂಬ ಉದ್ದೇಶದಿಂದ ಸರ್ಕಾರವು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಮೂಲಸೌಕರ್ಯ ಮೇಲ್ದರ್ಜೆಗೇರಿಸಿದೆ. ಇಲ್ಲಿರುವ ಸೌಲಭ್ಯಗಳು ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕವು ಜಾಗತಿಕ ಮಟ್ಟದ 'ಹೆಲ್ತ್ ಹಬ್'
ರಾಜ್ಯದ ವೈದ್ಯಕೀಯ ಶಿಕ್ಷಣದ ಗುಣಮಟ್ಟದ ಕುರಿತು ಮಾತನಾಡಿದ ಸಚಿವರು, ಇಂದು ಕರ್ನಾಟಕವು ದೇಶದ 'ಹೆಲ್ತ್ ಹಬ್' ಆಗಿ ಗುರುತಿಸಿಕೊಂಡಿದೆ. ನಮ್ಮ ರಾಜ್ಯದಲ್ಲಿರುವ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಂದಾಗಿ ದೇಶದ ವಿವಿಧೆಡೆಯಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಬಂದು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಮಾನವ ಸಂಪನ್ಮೂಲ ಒದಗಿಸುವ ಪ್ರಮುಖ ಕೇಂದ್ರವಾಗಿ ಕರ್ನಾಟಕ ಬೆಳೆಯುತ್ತಿದೆ. ನಮ್ಮ ರಾಜ್ಯದ ವೈದ್ಯರು ವಿಶ್ವದ ಮೂಲೆ ಮೂಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಖ್ಯಾತಿಯು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಲ್ಲಿನ ಪರಿಣಿತ ಚಿಕಿತ್ಸಾ ಪದ್ಧತಿಯಿಂದಾಗಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ನೆರೆಯ ಹಲವು ರಾಜ್ಯಗಳಿಂದ ಪೋಷಕರು ತಮ್ಮ ಮಕ್ಕಳನ್ನು ಚಿಕಿತ್ಸೆಗಾಗಿ ಇಲ್ಲಿಗೆ ಕರೆತರುತ್ತಿದ್ದಾರೆ. ಇದು ಸಂಸ್ಥೆಯ ಮೇಲಿರುವ ವಿಶ್ವಾಸಕ್ಕೆ ಸಾಕ್ಷಿ ಎಂದು ಹೇಳಿದರು.
ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು
ಪ್ರಸ್ತುತ ಕರ್ನಾಟಕದಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜುಗಳು ಕಾರ್ಯಾಚರಿಸುತ್ತಿವೆ. ಸರ್ಕಾರದ ಮುಖ್ಯ ಗುರಿ ಎಂದರೆ ಪ್ರತಿ ಜಿಲ್ಲೆಯಲ್ಲೂ ಒಂದು ಸರ್ಕಾರಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸುವುದಾಗಿದೆ. ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾದರೆ, ಅಲ್ಲಿನ ಜನತೆಗೆ ಸ್ಥಳೀಯವಾಗಿಯೇ ತೃತೀಯ ಹಂತದ ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ. ಇದರೊಂದಿಗೆ ಸ್ಥಳೀಯ ಯುವಕರಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶಗಳು ಸಿಗುತ್ತವೆ. ಇದರಿಂದ ವೈದ್ಯರ ಕೊರತೆಯೂ ನೀಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾಧನೆ ಹಾದಿಯಲ್ಲಿ ಇಂದಿರಾ ಗಾಂಧಿ ಸಂಸ್ಥೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ನಿರ್ದೇಶಕ ಡಾ. ಸಂಜಯ್ ಕೆ.ಎಸ್. ಮಾತನಾಡಿ, ಸಂಸ್ಥೆಯ 35 ವರ್ಷಗಳ ಸುದೀರ್ಘ ಸೇವೆಯ ಹಾದಿಯನ್ನು ಮೆಲುಕು ಹಾಕಿದರು. ನಮ್ಮ ಸಂಸ್ಥೆಯು ಕಳೆದ ಮೂರೂವರೆ ದಶಕಗಳಿಂದ ನಿರಂತರವಾಗಿ ಮಕ್ಕಳ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇಂದು ಲೋಕಾರ್ಪಣೆಯಾದ 450 ಹಾಸಿಗೆಗಳ ನೂತನ ಆಸ್ಪತ್ರೆಯನ್ನೂ ಸೇರಿಸಿದರೆ, ಸಂಸ್ಥೆಯ ಒಟ್ಟು ಸಾಮರ್ಥ್ಯ 900 ಹಾಸಿಗೆಗಳಿಗೆ ಏರಿದೆ. ಇದು ನಮಗೆ ಹೆಚ್ಚಿನ ರೋಗಿಗಳಿಗೆ ಸೇವೆ ನೀಡಲು ಶಕ್ತಿ ತುಂಬಿದೆ. ವಾರ್ಷಿಕವಾಗಿ ಸರಾಸರಿ 2 ಲಕ್ಷ ಹೊರ ರೋಗಿಗಳು ಮತ್ತು 30 ಸಾವಿರ ಒಳ ರೋಗಿಗಳಿಗೆ ಇಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ವರ್ಷಗಳಲ್ಲಿ ಸುಮಾರು 15 ಸಾವಿರ ಮಕ್ಕಳಿಗೆ ಅತ್ಯಂತ ಕ್ಲಿಷ್ಟಕರವಾದ ಚಿಕಿತ್ಸೆ ನೀಡಲಾಗಿದ್ದು, ಶೇ. 97 ಕ್ಕಿಂತ ಹೆಚ್ಚು ಯಶಸ್ಸಿನ ದರವನ್ನು ಸಾಧಿಸಲಾಗಿದೆ. ಇದು ರಾಷ್ಟ್ರೀಯ ಮಟ್ಟದ ಸರಾಸರಿಗಿಂತಲೂ ಉತ್ತಮವಾಗಿದೆ. ವಕ್ರಪಾದ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 3,500 ಮಕ್ಕಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ, ಅವರು ಸಾಮಾನ್ಯರಂತೆ ನಡೆಯುವಂತೆ ಮಾಡಲಾಗಿದೆ ಎಂದು ತಿಳಿಸಿದರು.

