
ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ
ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯ ದಿನಾಂಕವನ್ನು ಸಹ ಪರಿಷ್ಕರಿಸಲಾಗಿದ್ದು, ಏಪ್ರಿಲ್ 6ರ ಬದಲಾಗಿ ಏಪ್ರಿಲ್ 18ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ಪ್ರಾಧಿಕಾರ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಐದು ನಗರ ಪಾಲಿಕೆಗಳ 2026ನೇ ಸಾಲಿನ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರ್ಚ್ 9ರಂದು ವಾರ್ಡ್‌ವಾರು ಪರಿಷ್ಕೃತ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದೀಗ ಸಾರ್ವಜನಿಕರು ದೂರು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಮಾರ್ಚ್ 30ರವರೆಗೆ ವಿಸ್ತರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯ ದಿನಾಂಕವನ್ನು ಸಹ ಪರಿಷ್ಕರಿಸಲಾಗಿದ್ದು, ಏಪ್ರಿಲ್ 6ರ ಬದಲಾಗಿ ಏಪ್ರಿಲ್ 18ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ಪ್ರಾಧಿಕಾರ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ವೆಬ್‌ಸೈಟ್ ಹಾಗೂ ಕಚೇರಿಗಳಲ್ಲಿ ಪರಿಶೀಲನೆಗೆ ಅವಕಾಶ
ಬಿಡುಗಡೆಯಾಗಿರುವ ಕರಡು ಮತದಾರರ ಪಟ್ಟಿಯ ಪ್ರತಿಯು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ಇದರ ಜೊತೆಗೆ ಸ್ಥಳೀಯ ವಾರ್ಡ್ ಕಚೇರಿಗಳಲ್ಲೂ ಕರಡು ಪಟ್ಟಿಯನ್ನು ಪ್ರದರ್ಶಿಸಲಾಗಿದೆ. ಇದಲ್ಲದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿಯೂ (https://gba.karnataka.gov.in/electoral2026) ಮಾಹಿತಿಯನ್ನು ಒದಗಿಸಲಾಗಿದೆ. ಮತದಾರರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಆನ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು, ತಮ್ಮ ಹೆಸರಿನ ಆಧಾರದ ಮೇಲೆ ಅಥವಾ ಎಪಿಕ್ (EPIC) ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ ಹೆಸರು ಪಟ್ಟಿಯಲ್ಲಿ ಸರಿಯಾಗಿ ಸೇರ್ಪಡೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸುಲಭ ಅವಕಾಶ ಕಲ್ಪಿಸಲಾಗಿದೆ.
ಒಂದೇ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪ್ರತ್ಯೇಕ ವಾರ್ಡ್ ಆಗಿದ್ದರೆ ದೂರಿಗೆ ಸೂಚನೆ
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಒಂದೇ ಕಟ್ಟಡದ ನಿವಾಸಿಗಳು ಬೇರೆ ಬೇರೆ ವಾರ್ಡ್‌ಗಳಿಗೆ ಹಂಚಿಹೋಗಿರುವಂತಹ ಗೊಂದಲಗಳನ್ನು ನಿವಾರಿಸಲು ಪ್ರಾಧಿಕಾರ ವಿಶೇಷ ಗಮನ ಹರಿಸಿದೆ. ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರೂ ಸಹ ನಿವಾಸಿಗಳ ಹೆಸರುಗಳು ಪ್ರತ್ಯೇಕ ವಾರ್ಡ್‌ಗಳಲ್ಲಿ ನಮೂದಾಗಿರುವ ಪ್ರಕರಣಗಳು ಕಂಡುಬಂದರೆ, ಅಂತಹ ಮತದಾರರು ತಕ್ಷಣವೇ ದೂರು ಸಲ್ಲಿಸಬಹುದಾಗಿದೆ. ಈ ಗೊಂದಲವನ್ನು ಸರಿಪಡಿಸಿಕೊಳ್ಳಲು ಸಂಬಂಧಪಟ್ಟ ನಗರ ಪಾಲಿಕೆ, ಮತದಾರರ ನೋಂದಣಾಧಿಕಾರಿಗಳ ಕಚೇರಿ ಅಥವಾ ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ದೂರು ಸಲ್ಲಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

