GBA| ಜಿಬಿಎಗೆ ತೆರಿಗೆ ಪಾವತಿಸದ ವಿಧಾನಸೌಧ, ಲೋಕಭವನ; ಸರ್ಕಾರಿ ಕಟ್ಟಡಗಳಿಂದಲೇ 472 ಕೋಟಿ ರೂ. ಸೇವಾ ತೆರಿಗೆ ಬಾಕಿ
x
ವಿಧಾನಸೌಧ ಹಾಗೂ ಲೋಕಭವನ

GBA| ಜಿಬಿಎಗೆ ತೆರಿಗೆ ಪಾವತಿಸದ ವಿಧಾನಸೌಧ, ಲೋಕಭವನ; ಸರ್ಕಾರಿ ಕಟ್ಟಡಗಳಿಂದಲೇ 472 ಕೋಟಿ ರೂ. ಸೇವಾ ತೆರಿಗೆ ಬಾಕಿ

ಟೆಕ್‌ಪಾರ್ಕ್‌ಗಳು, ಬಿಸಿನೆಸ್ ಪಾರ್ಕ್‌ಗಳು, ಐಟಿ-ಬಿಟಿ ಕಂಪೆನಿಗಳು, ಮಾಲ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳು, ಹೋಟೆಲ್‌ಗಳು ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಕೋಟ್ಯಾಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ.


ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಟ್ಟಡಗಳು 2025ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬರೋಬ್ಬರಿ 473 ಕೋಟಿ ರೂ. ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿವೆ.

ವಿಧಾನಸೌಧ, ವಿಕಾಸಸೌಧ, ಬಹು ಮಹಡಿಗಳ ಕಟ್ಟಡ, ಕುಮಾರ ಕೃಪ ಅತಿಥಿ ಗೃಹ, ಲೋಕಭವನ ಸೇರಿದಂತೆ ಬೆಂಗಳೂರು ಮಹಾನಗರದಲ್ಲಿರುವ ಸರ್ಕಾರಿ ಕಟ್ಟಡಗಳು 2008-09 ನೇ ಸಾಲಿನಿಂದಲೂ ಯಾವುದೇ ಸೇವಾ ತೆರಿಗೆ ಪಾವತಿಸಿಲ್ಲ.

ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಟು ವಲಯಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಟ್ಟಡಗಳು ಪ್ರತಿ ವರ್ಷ ಸೇವಾ ತೆರಿಗೆ ಪಾವತಿಸುತ್ತಿದ್ದವು. ಆದರೆ, ಕಳೆದ 18 ವರ್ಷಗಳಿಂದ ಸೇವಾ ತೆರಿಗೆ ಪಾವತಿಸಿಲ್ಲ. ಇದರಿಂದಾಗಿ ಜಿಬಿಎ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ.

ಯಾವ ವಲಯದಲ್ಲಿ ಬಾಕಿ ತೆರಿಗೆ ಎಷ್ಟಿದೆ?

ಪೂರ್ವ ವಲಯದಲ್ಲಿ 246,39,35,893 ರೂ., ಯಲಹಂಕ ವಲಯದಲ್ಲಿ 67,48,61,705 ರೂ., ರಾಜರಾಜೇಶ್ವರಿ ನಗರ ವಲಯದಲ್ಲಿ 57,52,26,762 ರೂ, ಮಹದೇವಪುರ ವಲಯದಲ್ಲಿ 39,13,28,272 ರೂ, ದಕ್ಷಿಣ ವಲಯದಲ್ಲಿ 33,70,92,101 ರೂ, ಬೊಮ್ಮನಹಳ್ಳಿ ವಲಯದಲ್ಲಿ 5,68,26,095 ರೂ, ದಾಸರಹಳ್ಳಿ ವಲಯದಲ್ಲಿ 4,17,70,123 ರೂ. ಹಾಗೂ ಪಶ್ಚಿಮ ವಲಯದಲ್ಲಿ 3,61,06,346 ರೂ.ಗಳಷ್ಟು ಸೇವಾ ತೆರಿಗೆಯನ್ನು ಸರ್ಕಾರಿ ಕಟ್ಟಡಗಳು ಬಾಕಿ ಉಳಿಸಿಕೊಂಡಿವೆ.

ಇವನ್ನು ಹೊರತುಪಡಿಸಿ ರಾಜ್ಯದ ಆಡಳಿತ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಲೋಕಭವನ, ಬಹು ಮಹಡಿಗಳ ಕಟ್ಟಡ ಮತ್ತು ಕುಮಾರ ಕೃಪ ಅತಿಥಿ ಗೃಹಗಳು 14,94,53,086 ರೂ.ಗಳಷ್ಟು ಸೇವಾ ತೆರಿಗೆ ಪಾವತಿಸಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ವಿಧಾನಸೌಧವು 2,15,28,345 ರೂ, ವಿಕಾಸಸೌಧವು 4,24,28,393 ರೂ, ಬಹುಮಹಡಿ ಕಟ್ಟಡವು 3,38,65,524 ರೂ, ಕುಮಾರ ಕೃಪ ಅತಿಥಿ ಗೃಹ 3,01,27,355 ರೂ., ಲೋಕಭವನವು 1,89,97,265 ರೂ., ವಿಧಾನಸೌಧದಲ್ಲಿರುವ ಕ್ಯಾಂಟೀನ್ 7,40,506 ರೂ. ಹಾಗೂ ವಿಕಾಸಸೌಧದ ಕ್ಯಾಂಟೀನ್ 17,65,698 ರೂ. ಗಳಷ್ಟು ತೆರಿಗೆ ಬಾಕಿ ಉಳಿಸಿಕೊಂಡಿವೆ.

ಈ ಹಿಂದಿನ ಬಿಬಿಎಂಪಿ ಪೂರ್ವ ವಲಯದ ಆಯುಕ್ತರಾಗಿದ್ದ ಸ್ನೇಹಲ್ ಅವರು 2025 ಮಾ.17 ರಂದು ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿ, ತಕ್ಷಣವೇ ವಿಧಾನಸೌಧ, ವಿಕಾಸಸೌಧ ಹಾಗೂ ಲೋಕಭವನಗಳಿಂದ ಪಾಲಿಕೆಗೆ ಬರಬೇಕಿದ್ದ 8,54,60,207 ರೂ.ಗಳಷ್ಟು ಸೇವಾ ತೆರಿಗೆ ಪಾವತಿಸಲು ಆಗ್ರಹಿಸಿದ್ದರು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಆಸ್ತಿಗಳ ಹರಾಜಿಗೆ ಮುಂದಾಗಿರುವ ಜಿಬಿಎ

ಬೆಂಗಳೂರಿನ ಬೃಹತ್ ಟೆಕ್‌ಪಾರ್ಕ್‌ಗಳು, ಬಿಸಿನೆಸ್ ಪಾರ್ಕ್‌ಗಳು, ಐಟಿ-ಬಿಟಿ ಕಂಪೆನಿಗಳು, ಮಾಲ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳು, ಕೈಗಾರಿಕಾ ಕಟ್ಟಡಗಳು, ತಾರಾ ಹೋಟೆಲ್‌ಗಳು ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೂ ಕೂಡ ಕೋಟ್ಯಾಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಹೀಗಿದ್ದರೂ ಅಧಿಕಾರಿಗಳು ಕಟ್ಟು ನಿಟ್ಟಾಗಿ ಆಸ್ತಿ ತೆರಿಗೆ ವಸೂಲಿ ಮಾಡದೇ ಕೇವಲ ಐವತ್ತು ಸಾವಿರದಿಂದ ಐದಾರು ಲಕ್ಷ ರೂ.ಗಿಂತ ಕಡಿಮೆ ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಧ್ಯಮ, ಕೆಳ ವರ್ಗದವರ ಆಸ್ತಿಗಳನ್ನು ಹರಾಜು ಹಾಕುವ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಜಿಬಿಎ ಅಧಿಕಾರಿಗಳು ಮಾನವೀಯತೆ ಮರೆತು ಬಡವರ ಸ್ಥಿರಾಸ್ತಿಗಳನ್ನು ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಟೀಕೆಗೂ ಗುರಿಯಾಗಿತ್ತು. ಪಾಲಿಕೆಗಳ ಆರ್ಥಿಕ ಸ್ಥಿತಿ ಸುಧಾರಿಸಬೇಕಾದರೆ ಬೃಹತ್ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆಯೂ ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಪ್ರತಿಪಕ್ಷಗಳು ಒತ್ತಾಯಿಸಿದ್ದವು.

“ಜನ ಸಾಮಾನ್ಯರ ಆಸ್ತಿ ಹರಾಜಿಗೆ ಮುಂದಾಗಿರುವ ಐದು ನಗರ ಪಾಲಿಕೆಗಳ ಆಯುಕ್ತರಿಗೆ ನಿಜವಾಗಿಯೂ ಎದೆಗಾರಿಕೆ ಇದ್ದರೆ 18 ವರ್ಷಗಳಿಂದ ಪಾಲಿಕೆಗೆ ಬಾಕಿ ಉಳಿಸಿಕೊಂಡಿರುವ ಸೇವಾ ತೆರಿಗೆಯನ್ನು ವಸೂಲಿ ಮಾಡಬೇಕು. ಸೇವಾ ತೆರಿಗೆ ಪಾವತಿಸದ ವಿಧಾನಸೌಧ, ವಿಕಾಸಸೌಧ, ಬಹು ಮಹಡಿಗಳ ಕಟ್ಟಡ, ಕುಮಾರ ಕೃಪ ಅತಿಥಿ ಗೃಹ ಮತ್ತು ಲೋಕಭವನಗಳಿಗೆ ಬೀಗ ಹಾಕಿ ಜಪ್ತಿ ಮಾಡಲಿ” ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

ಸರ್ಕಾರಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಡಿಮ್ಯಾಂಡ್ ನೋಟಿಸ್ ಹಾಗೂ ಲೀಗಲ್ ನೋಟಿಸ್ ಕಳುಹಿಸಿ ಒಂದು ದಿನದ ಮಟ್ಟಿಗಾದರೂ ಕಟ್ಟಡಗಳಿಗೆ ಬೀಗ ಹಾಕಬೇಕು. ಆ ಮೂಲಕ ರಾಜ್ಯಾಂಗ ಎಲ್ಲರಿಗೂ ಒಂದೇ ಎಂಬುದನ್ನು ಸಾರಿ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.

Read More
Next Story