
ಸ್ಯಾಂಕಿ ಕೆರೆ
GBA | ನಗರದ 10 ಕೆರೆಗಳಲ್ಲಿ ಬೋಟಿಂಗ್; ಜಿಬಿಎ ಜತೆಗೆ ಪ್ರವಾಸೋದ್ಯಮ ಇಲಾಖೆ ಸಾಥ್
ಪ್ರಾರಂಭಿಕ ಹಂತದಲ್ಲಿ ನಗರದ ಹತ್ತು ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಆರಂಭಗೊಳ್ಳಲಿದೆ. ಬಳಿಕ ನೂರು ಕೆರೆಗಳಿಗೆ ಯೋಜನೆ ವಿಸ್ತರಿಸುವ ಗುರಿಯನ್ನು ಜಿಬಿಎ ಹೊಂದಿದೆ.
ನಿರ್ವಹಣೆ ಇಲ್ಲದೇ ಸೊರಗಿರುವ ಬೆಂಗಳೂರಿನ ಹಲವಾರು ಕೆರೆಗಳಿಗೆ ಕಾಯಕಲ್ಪ ಕಲ್ಪಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ ಹೊಸ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಪ್ರವಾಸೋದ್ಯಮ ಇಲಾಖೆಯ ಜತೆ ಸಹಯೋಗದಲ್ಲಿ 'ಸಾರ್ವಜನಿಕರಿಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸುವ, ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜತೆಗೆ ಕೆರೆಯನ್ನು ಶುಚಿಯಾಗಿಡಲು ಉದ್ದೇಶಿಸಿದೆ.
ಮಹಾನಗರದಲ್ಲಿರುವ 183 ಕೆರೆಗಳ ಪೈಕಿ 10 ಕೆರೆಗಳಲ್ಲಿ ಪ್ರಾಯೋಗಿಕವಾಗಿ ಬೋಟಿಂಗ್ ವ್ಯವಸ್ಥೆ ಮಾಡಲು ಮುಂದಾಗಿದ್ದು, ಯೋಜನೆ ಯಶಸ್ವಿಯಾದರೆ ಬೆಂಗಳೂರು ನಗರದ ಮಿತಿಯೊಳಗೆ 100 ಕೆರೆಗಳಿಗೆ ವಿಸ್ತರಣೆ ಇದೇ ರೀತಿಯಲ್ಲಿ ಬೋಟಿಂಗ್ ಶುರುಮಾಡುವ ಉದ್ದೇಶವೂ ಪ್ರಾಧಿಕಾರದ ಮುಂದಿದೆ.
ಬೆಂಗಳೂರು ನಗರ ಹಿಂದೆ ಕೆರೆಗಳ ನಾಡಾಗಿತ್ತು. ಆದರೆ, ನಗರ ಬೆಳೆಯುತ್ತಿದ್ದಂತೆ ಕೆರೆಗಳು ಸೊರಗಿದವು. ಒತ್ತುವರಿಯಿಂದ ಕೆರೆಗಳೇ ಮಾಯವಾದವು. ನಂತರದಲ್ಲಿ ಅವುಗಳಿಗೆ ಕೊಳಚೆ ನೀರು ಸೇರಿ ಸಂಪೂರ್ಣವಾಗಿ ಮಲೀನಗೊಂಡಿವೆ. ಇದೀಗ ಕೆರೆಗಳನ್ನು ಉಳಿಸಲು ಪ್ರಯತ್ನ ನಡೆಸಲಾಗುತ್ತಿದ್ದರೂ ಯಶಸ್ಸಿನ ಪ್ರಮಾಣ ಕಡಿಮೆ. ಹೀಗಾಗಿ ಇದೀಗ ಉಳಿದಿರುವ ಕೆರೆಗಳನ್ನು ಉಳಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಜಿಬಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವ ಯಾವ ಕೆರೆಗಳು?
ಆರಂಭಿಕ ಹಂತದಲ್ಲಿ ಹಲಸೂರು ಕೆರೆ, ಕಗ್ಗದಾಸಪುರ ಕೆರೆ, ನಾಯಂಡಹಳ್ಳಿ, ಸ್ಯಾಂಕಿ, ಯಲಹಂಕ, ರಾಚೇನಹಳ್ಳಿ, ವೆಂಗಯ್ಯನಕೆರೆ, ಬೇಗೂರು, ರಾಮಪುರ ಮತ್ತು ಮಡಿವಾಳ ಕೆರೆಗಳಲ್ಲಿ ಬೋಟಿಂಗ್ ಆರಂಭಗೊಳ್ಳಲಿದೆ. ಇದಕ್ಕಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ ಜಿಬಿಎ ಸಹಭಾಗಿತ್ವ ಮಾಡಿಕೊಂಡಿದೆ. ವಾರಾಂತ್ಯದಲ್ಲಿ ಬೆಂಗಳೂರಿನ ಜನರಿಗೆ ಈ ಕೆರೆಗಳು ವಿನೋದ ಹಾಗೂ ಸಮಯ ಕಳೆಯುವ ತಾಣವಾಗಲಿದೆ ಎಂಬುದು ಜಿಬಿಎ ಅಧಿಕಾರಿಗಳ ದೂರದೃಷ್ಟಿ.
ಪ್ರವಾಸಿಗರನ್ನು ಆಕರ್ಷಿಸುವುದರೊಂದಿಗೆ ಕೆರೆಗಳ ನಿರ್ವಹಣೆಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಮಲ್ಲೇಶ್ವರದ ಐತಿಹಾಸಿಕ ಸ್ಯಾಂಕಿ ಕೆರೆಯಲ್ಲೂ ಬೋಟಿಂಗ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಕೆರೆಗಳ ಮಹತ್ವ ಸಾರುವ ಕೆಲಸ ನಡೆಯಲಿದೆ ಎನ್ನುತ್ತಾರೆ ಜಿಬಿಎ ಅಧಿಕಾರಿಗಳು.
ಪರಿಸರ ಸ್ನೇಹಿ ಬೋಟ್ಗಳನ್ನುಇಲ್ಲಿ ಬಳಸಲು ಮುಂದಾಗಿರುವ ಕಾರಣ ಇಂಧನ ಹಾಗೂ ಮಾಲಿನ್ಯ ರಹಿತ ಜಲ ವಿಹಾರಕ್ಕೆ ಜಿಬಿಎ ಆದ್ಯತೆ ನೀಡಿದೆ. ಇದರಿಂದಾಗಿ ಕೆರೆಗಳಲ್ಲಿನ ಜಲಚರಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಪ್ರತಿ ಕೆರೆಯಲ್ಲಿ ಕನಿಷ್ಠ ಐದು ಬೋಟ್‌ಗಳಾದರೂ ಇರಲಿವೆ. ಈಗಾಗಲೇ ಹಲಸೂರು ಹಾಗೂ ಯಲಹಂಕ ಕೆರೆಗಳಲ್ಲಿ ದೋಣಿ ವಿಹಾರ ಅಸ್ತಿತ್ವದಲ್ಲಿದ್ದರೂ, ಮತ್ತಷ್ಟು ರಚನಾತ್ಮಕವಾಗಿ ನಗರಾದ್ಯಂತ ಅನುಷ್ಠಾನ ಮಾಡುವ ಗುರಿ ಜಿಬಿಎ ಮುಂದಿದೆ.
ನುಮತಿಗೆ ಪತ್ರ
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (KLCDA / KTCDA) ಜಿಬಿಎ ಪತ್ರ ಬರೆದಿದೆ. ಈ ಬಗ್ಗೆ ಜಿಬಿಎ ಕೆರೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನಿತ್ಯಾ ಅವರು "ದ ಫೆಡರಲ್ ಕರ್ನಾಟಕ"ದ ಜತೆ ಮಾತನಾಡಿ, "ಪ್ರಾಧಿಕಾರದ ಅನುಮತಿ ಬಳಿಕ ಪ್ರವಾಸೋದ್ಯಮ ಇಲಾಖೆಯು ಬೋಟಿಂಗ್ ವ್ಯವಸ್ಥೆ ಶುರು ಮಾಡಲಿದೆ. ಈ ಯೋಜನೆಗೆ ಜಿಬಿಎ ಹಣಕಾಸಿನ ನೆರವು ನೀಡಲಿದೆ" ಎಂದು ಮಾಹಿತಿ ನೀಡಿದ್ದಾರೆ.
ಎಲ್ಲಿವೆ ಕೆರೆಗಳು?
ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಿರ್ಮಿಸಿದ ವೇಳೆ ನಗರವು ಕೆರೆಗಳಿಂದಲೇ ಆವೃತಗೊಂಡಿತ್ತು. ಆದರೆ, ಈಗ ಕೆರೆಗಳಿಗೆ ಕಲುಷಿತ ನೀರು ಮಿಶ್ರಣಗೊಂಡು ನಿರ್ವಹಣೆ ಇಲ್ಲದೆ ಸೊರಗಿವೆ. ಬಹುತೇಕ ಕೆರೆಗಳು ಒತ್ತುವರಿಯಾಗಿದ್ದು, ಕೆರೆ ಅಂಗಳದಲ್ಲಿ ಕಟ್ಟಡಗಳು ತಲೆ ಎತ್ತಿವೆ. ಇರುವ ಅಲ್ಪಸ್ವಲ್ಪ ಕೆರೆಗಳಿಗೆ ನೀರಿನ ಸಮಸ್ಯೆ ಕಾಡುತ್ತಿದೆ. ನೀರಿದ್ದರೂ, ಕಲುಷಿತಗೊಂಡು ಗಬ್ಬೆದ್ದು ನಾರುತ್ತಿದೆ. ಹೀಗಾಗಿ ಬೋಟಿಂಗ್ ವ್ಯವಸ್ಥೆಗೂ ಮೊದಲು, ಕೆರೆಗಳಿಗೆ ಶುದ್ಧ ನೀರು ತುಂಬಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

