GBA | Sewerage and road work has been sped up by the East Municipal Corporation before the rainy season
x
ಸಾಂದರ್ಭಿಕ ಚಿತ್ರ

ಮಳೆಗಾಲಕ್ಕೂ ಮುನ್ನವೇ ಒಳಚರಂಡಿ ಕಾಮಗಾರಿ ಚುರುಕು: ಪೂರ್ವ ನಗರ ಪಾಲಿಕೆ ಅಪರ ಆಯುಕ್ತರ ಪರಿಶೀಲನೆ

ಹೊರ ವರ್ತುಲ ರಸ್ತೆಯ ಮಾರತಹಳ್ಳಿ ಸೇತುವೆಯಿಂದ ಇಬ್ಭಲೂರು ಜಂಕ್ಷನ್‌ವರೆಗೆ ಸುಮಾರು 6.5 ಕಿ.ಮೀಟರ್ ಉದ್ದದ ಪಾದಚಾರಿ ಮಾರ್ಗ ಸರಿಪಡಿಸಿ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದರು.


Click the Play button to hear this message in audio format

ಮಳೆಗಾಲ ಆರಂಭಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪೂರ್ವ ನಗರ ಪಾಲಿಕೆಯು ಒಳಚರಂಡಿ ಕಾಮಗಾರಿಗಳನ್ನು ಆರಂಭಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಡೆಯಲು ಮತ್ತು ರಸ್ತೆ ಮೂಲಸೌಕರ್ಯ ಸುಧಾರಿಸಲು ಪಾಲಿಕೆ ಮುಂದಾಗಿದೆ.

ಗುರುವಾರ (ಮಾ. 5) ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದ (CMIDP) ಅಡಿಯಲ್ಲಿ ನಡೆಯುತ್ತಿರುವ ಕೆಲಸಗಳಿಗೆ ಪ್ರಥಮ ಆದ್ಯತೆ ನೀಡಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾಮಗಾರಿಗಳ ಸ್ಥಳ ಪರಿಶೀಲನೆ

ಹೊರ ವರ್ತುಲ ರಸ್ತೆ (ORR)ಯಿಂದ ಪಣತ್ತೂರು ರೈಲ್ವೆ ಹಳಿಯವರೆಗೆ ನಡೆಯುತ್ತಿರುವ ಸಮಗ್ರ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಹೂಳೆತ್ತುವ (Desilting) ಕಾಮಗಾರಿಯನ್ನು ಅಪರ ಆಯುಕ್ತರು ವೀಕ್ಷಿಸಿದರು. "ಮಳೆ ನೀರು ಸರಾಗವಾಗಿ ಹರಿಯುವಂತೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಡಾಂಬರೀಕರಣ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಿ ಮೂರು ತಿಂಗಳೊಳಗೆ ಮುಕ್ತಾಯಗೊಳಿಸಬೇಕು" ಎಂದು ಅವರು ತಿಳಿಸಿದರು.

ಪಾದಚಾರಿ ಮಾರ್ಗ ಮತ್ತು ರಸ್ತೆ ನಿರ್ವಹಣೆ

ಹೊರ ವರ್ತುಲ ರಸ್ತೆಯ ಮಾರತಹಳ್ಳಿ ಸೇತುವೆಯಿಂದ ಇಬ್ಲೂರು ಜಂಕ್ಷನ್‌ವರೆಗಿನ ಸುಮಾರು 6.5 ಕಿ.ಮೀ ಉದ್ದದ ಪಾದಚಾರಿ ಮಾರ್ಗವನ್ನು ಸರಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಸರ್ಜಾಪುರ ಭಾಗದಲ್ಲಿ ಪೂರ್ಣಗೊಂಡಿರುವ ರಸ್ತೆಗಳು 'ದೋಷ ಹೊಣೆಗಾರಿಕೆ ಅವಧಿ'ಯಲ್ಲಿ (DLP) ಹಾಳಾದರೆ, ಸಂಬಂಧಪಟ್ಟ ಗುತ್ತಿಗೆದಾರರಿಂದಲೇ ಕೂಡಲೇ ದುರಸ್ತಿ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ದೊಡ್ಡನೆಕ್ಕುಂದಿಯ ಜೀವಿಕಾ ಆಸ್ಪತ್ರೆ ಸಮೀಪದ ಕಿರಿದಾದ ರಸ್ತೆಯಲ್ಲಿ ಚರಂಡಿ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು, ರಸ್ತೆಯ ಅಗಲೀಕರಣ ಮತ್ತು ಚರಂಡಿ ನಿರ್ಮಾಣದ ಸಾಧ್ಯತೆಗಳ ಬಗ್ಗೆ ತಾಂತ್ರಿಕ ವರದಿ ಸಲ್ಲಿಸಲು ಆದೇಶಿಸಿದರು.

ಈ ಪರಿಶೀಲನಾ ಸಂದರ್ಭದಲ್ಲಿ ಕಾರ್ಯಪಾಲಕ ಎಂಜಿನಿಯರ್‌ಗಳು ಹಾಗೂ ಸಹಾಯಕ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

Read More
Next Story