
ಟ್ರಾಫಿಕ್ ಫೈನ್ ಕಟ್ಟಲು ಸುಸಮಯ: ನಾಳೆಯಿಂದ ರಿಂದ ಶೇ. 50 ರಿಯಾಯಿತಿ
ಕಳೆದ ಎರಡು ವರ್ಷಗಳಲ್ಲಿ ಸರ್ಕಾರವು 5 ಬಾರಿ ರಿಯಾಯಿತಿ ಅವಕಾಶಗಳನ್ನು ನೀಡಿದೆ. ಇದು 6ನೇ ಬಾರಿಯ ಅವಕಾಶವಾಗಿದ್ದು, ಬಾಕಿ ಇರುವ ದಂಡದ ಮೊತ್ತವನ್ನು ವಸೂಲಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಸದ ವಾಹನ ಸವಾರರಿಗೆ ರಾಜ್ಯ ಸರ್ಕಾರವು ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ. ಬಾಕಿ ಉಳಿದಿರುವ ಸಂಚಾರ ದಂಡಗಳನ್ನು (ಇ-ಚಲನ್) ಪಾವತಿಸಲು ಶೇ. 50 ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದ್ದು, ಈ ಸೌಲಭ್ಯವು ಭಾನುವಾರದಿಂದ (ಜೂನ್ 21) ಜುಲೈ 10 ರವರೆಗೆ ಚಾಲ್ತಿಯಲ್ಲಿರಲಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಮೇಲಿರುವ ದಂಡದ ಹೊರೆಯನ್ನು ಅರ್ಧದಷ್ಟು ಕಡಿಮೆ ಮಾಡಿಕೊಳ್ಳಬಹುದು.
ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಈ ರಿಯಾಯಿತಿಯು ನಿರ್ದಿಷ್ಟ ಅವಧಿಯ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಮೇ 2026 ಕ್ಕಿಂತ ಮುಂಚಿತವಾಗಿ ದಾಖಲಾದ ಬಾಕಿ ಇ-ಚಲನ್ ಪ್ರಕರಣಗಳು. ಸಾರಿಗೆ ಇಲಾಖೆ ಸಂಬಂಧ 1991 ರಿಂದ 2022 ರ ಅವಧಿಯಲ್ಲಿ ದಾಖಲಾದ ಪ್ರಕರಣಗಳು. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರವು ಒಟ್ಟು 5 ಬಾರಿ ಇಂತಹ ರಿಯಾಯಿತಿ ಅವಕಾಶಗಳನ್ನು ನೀಡಿತ್ತು. ಇದು 6ನೇ ಬಾರಿಯ ಅವಕಾಶವಾಗಿದ್ದು, ಬಾಕಿ ಇರುವ ಬೃಹತ್ ದಂಡದ ಮೊತ್ತವನ್ನು ವಸೂಲಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ಅಂಕಿ-ಅಂಶಗಳ ಒಂದು ನೋಟ
ರಾಜ್ಯದಲ್ಲಿ ದಂಡ ಪಾವತಿಯ ಸುಸ್ಥಿತಿಯಲ್ಲಿರುವ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿದೆ. ಸದ್ಯ ರಾಜ್ಯದಲ್ಲಿ ಒಟ್ಟು 5.05 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಉಳಿದಿದ್ದು, ಒಟ್ಟಾರೆ 2,727 ಕೋಟಿ ದಂಡ ವಸೂಲಿಯಾಗಬೇಕಿದೆ. ಇದರಲ್ಲಿ ಬೆಂಗಳೂರು ನಗರದ ಪಾಲು ಅತ್ಯಂತ ದೊಡ್ಡದಾಗಿದೆ. ಬೆಂಗಳೂರು ಬಾಕಿ ಪ್ರಕರಣಗಳು 3.37 ಕೋಟಿ ಪ್ರಕರಣಗಳಿದ್ದು, ಬೆಂಗಳೂರು ಬಾಕಿ ದಂಡದ ಮೊತ್ತ 1,843 ಕೋಟಿ ರೂ. ಇದೆ. ಬೆಂಗಳೂರು ನಗರದಲ್ಲಿ 2026ರ ಮೇ ಅಂತ್ಯದವರೆಗೆ ಸುಮಾರು 48.48 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ಈ ಅಂಕಿ-ಅಂಶಗಳೇ ವಾಹನ ಸವಾರರು ಎಷ್ಟರ ಮಟ್ಟಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.
ಅತಿ ಹೆಚ್ಚು ದಾಖಲಾದ ಅಪರಾಧಗಳು
ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ವರದಿಯ ಪ್ರಕಾರ, ಪ್ರಸ್ತುತ ವರ್ಷದ ಮೇ ಅಂತ್ಯದವರೆಗೆ ದಾಖಲಾದ 48,48,831 ಪ್ರಕರಣಗಳಲ್ಲಿ ಉಲ್ಲಂಘನೆಗಳು ಅಗ್ರಸ್ಥಾನದಲ್ಲಿವೆ. ಹೆಲ್ಮೆಟ್ ರಹಿತ ಚಾಲನೆ 13,60,893 ಪ್ರಕರಣಗಳು, ಹಿಂಬದಿ ಸವಾರ ಹೆಲ್ಮೆಟ್ ರಹಿತ ಪ್ರಯಾಣ 6,54,035 ಪ್ರಕರಣಗಳು, ಸಿಗ್ನಲ್ ಜಂಪ್ 6,66,562 ಪ್ರಕರಣಗಳು, ಸೀಟ್ ಬೆಲ್ಟ್ ಧರಿಸದಿರುವುದು 5,11,517 ಪ್ರಕರಣಗಳು ದಾಖಲಾಗಿವೆ. ಹೆಲ್ಮೆಟ್ ಮತ್ತು ಸಿಗ್ನಲ್ ಉಲ್ಲಂಘನೆಯಂತಹ ಪ್ರಕರಣಗಳು ಸವಾರರ ಜೀವಕ್ಕೆ ಕುತ್ತು ತರುವುದಲ್ಲದೆ, ದಂಡದ ಹೊರೆಯನ್ನೂ ಹೆಚ್ಚಿಸುತ್ತಿವೆ. ದಂಡ ಪಾವತಿಯ ಪ್ರಕ್ರಿಯೆಯನ್ನು ಸರಳಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕ್ರಮ ಕೈಗೊಂಡಿದ್ದಾರೆ. ನಗರದಾದ್ಯಂತ 12 ಪ್ರಮುಖ ಸ್ಥಳಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ಸವಾರರು ಅಲ್ಲಿಗೆ ತೆರಳಿ ತಮ್ಮ ವಾಹನದ ನಂಬರ್ ನೀಡಿ, ರಿಯಾಯಿತಿ ದರದೊಂದಿಗೆ ದಂಡವನ್ನು ಪಾವತಿಸಬಹುದು. ಆನ್‌ಲೈನ್ ಮೂಲಕವೂ ಪಾವತಿಸಲು ಅವಕಾಶವಿದ್ದರೂ, ತಾಂತ್ರಿಕ ತೊಂದರೆ ಇರುವವರು ಅಥವಾ ನೇರ ಪಾವತಿಗೆ ಬಯಸುವವರಿಗೆ ಈ ಕೌಂಟರ್‌ಗಳು ವರದಾನವಾಗಲಿವೆ.
ಸರ್ಕಾರ ಏಕೆ ಈ ಅವಕಾಶ ನೀಡುತ್ತಿದೆ?
ವರ್ಷಗಟ್ಟಲೆ ಬಾಕಿ ಉಳಿದಿರುವ ಸಾವಿರಾರು ಕೋಟಿ ರೂಪಾಯಿಗಳ ದಂಡವನ್ನು ಸಂಗ್ರಹಿಸುವುದು ಸರ್ಕಾರದ ಉದ್ದೇಶ. ಅನೇಕ ಬಾರಿ ಸವಾರರು ದಂಡದ ಮೊತ್ತ ಹೆಚ್ಚಾದ ಕಾರಣ ಪಾವತಿಸಲು ಹಿಂದೇಟು ಹಾಕುತ್ತಾರೆ. ಅರ್ಧದಷ್ಟು ರಿಯಾಯಿತಿ ನೀಡುವುದರಿಂದ ಹೆಚ್ಚಿನ ಜನರು ಸ್ವಯಂಪ್ರೇರಿತರಾಗಿ ದಂಡ ಪಾವತಿಸುತ್ತಾರೆ. ಅತಿಯಾದ ಬಾಕಿ ಪ್ರಕರಣಗಳಿಂದ ಇಲಾಖೆಯ ಡೇಟಾಬೇಸ್‌ನಲ್ಲಿ ಒತ್ತಡ ಹೆಚ್ಚಾಗುತ್ತದೆ. ಈ ರೀತಿಯ ಅಭಿಯಾನಗಳಿಂದ ಆನ್‌ಲೈನ್ ದಾಖಲೆಗಳು ಕ್ಲಿಯರ್ ಆಗುತ್ತವೆ. ರಿಯಾಯಿತಿ ಸಿಗುತ್ತದೆ ಎಂಬ ಕಾರಣಕ್ಕಾಗಿ ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಸರಿಯಲ್ಲ. ಸವಾರರು ಗಮನಿಸಬೇಕಾದ ಅಂಶಗಳೆಂದರೆ, ಈ ಅವಕಾಶ ಜುಲೈ 10 ಕ್ಕೆ ಕೊನೆಗೊಳ್ಳಲಿದೆ, ನಂತರ ಯಾವುದೇ ರಿಯಾಯಿತಿ ಇರುವುದಿಲ್ಲ. ಟ್ರಾಫಿಕ್ ದಂಡ ಪಾವತಿಸದಿದ್ದರೆ ಭವಿಷ್ಯದಲ್ಲಿ ವಾಹನ ಮಾರಾಟ ಅಥವಾ ವಿಮೆ ನವೀಕರಣದ ಸಮಯದಲ್ಲಿ ಸಮಸ್ಯೆ ಉಂಟಾಗಬಹುದು. ಟ್ರಾಫಿಕ್ ದಂಡಗಳನ್ನು ಪಾವತಿಸುವುದು ಕೇವಲ ಕಾನೂನಿನ ದೃಷ್ಟಿಯಿಂದಷ್ಟೇ ಅಲ್ಲ, ರಸ್ತೆ ಸುರಕ್ಷತೆಯ ದೃಷ್ಟಿಯಿಂದಲೂ ಅನಿವಾರ್ಯ.
ದಾಖಲಾದ ಪ್ರಕರಣಗಳ ವಿವರ
ಬೇಜವಾಬ್ದಾರಿ ಚಾಲನೆ - 3901
ಅತಿ ವೇಗದ ಚಾಲನೆ - 35,976
ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನ ಕರೆದೊಯ್ಯುವುದು - 12,691
ಮದ್ಯಪಾನ ಮಾಡಿ ವಾಹನ ಚಾಲನೆ - 15,760
ಬಾಡಿಗೆಗೆ ಬರಲು ನಿರಾಕರಿಸುವುದು - 2,145
ಹೆಚ್ಚಿನ ಬಾಡಿಗೆಗೆ ಬೇಡಿಕೆ - 1,841
ದೋಷಪೂರಿತ ಸೈಲೆನ್ಸರ್ - 1,210
ಚಾಲನಾ ಪರವಾನಗಿ ಇಲ್ಲದಿರುವುದು - 10,330
ಟ್ರಾಫಿಕ್ ಸಿಗ್ನಲ್ ಜಂಪ್ - 6,66,562
ಅನಧಿಕೃತ ಸ್ಥಳದಲ್ಲಿ ವಾಹನ ನಿಲುಗಡೆ - 7,62,165
ದೋಷಪೂರಿತ ನಂಬರ್ ಪ್ಲೇಟ್ - 83,820
ನೋ ಎಂಟ್ರಿ (ಪ್ರವೇಶ ನಿಷೇಧಿತ) ರಸ್ತೆಯಲ್ಲಿ ಚಾಲನೆ - 2,59,470
ಭಾರಿ ಸಾರಿಗೆ ವಾಹನಗಳ ಪ್ರವೇಶ ನಿಷೇಧ ಇರುವಲ್ಲಿ ಚಾಲನೆ - 15,064
ಸಮವಸ್ತ್ರ ಧರಿಸದಿರುವುದು - 3,416
ಫುಟ್‌ಪಾತ್ ಮೇಲೆ ಪಾರ್ಕಿಂಗ್ - 74,483
ತ್ರಿಬಲ್ ರೈಡಿಂಗ್ - 79,548
ಚಾಲನೆ ಮಾಡುವಾಗ ಮೊಬೈಲ್ ಬಳಕೆ - 40,140
ಸೀಟ್ ಬೆಲ್ಟ್ ಧರಿಸದಿರುವುದು - 5,11,517
ಅತಿ ಉದ್ದದ ವಸ್ತುಗಳನ್ನು/ಸಾಮಗ್ರಿಗಳನ್ನು ಸಾಗಿಸುವುದು - 5,627
ಸವಾರನು ಹೆಲ್ಮೆಟ್ ಧರಿಸದಿರುವುದು - 13,60,893
ಹಿಂಬದಿ ಸವಾರನು ಹೆಲ್ಮೆಟ್ ಧರಿಸದಿರುವುದು - 65,40,35
ಅಂಕುಡೊಂಕು ಚಾಲನೆ (ಜಿಗ್ ಜಾಗ್ ಡ್ರೈವಿಂಗ್) - 606
ವೃತ್ತಗಳಲ್ಲಿ ವಾಹನ ನಿಲ್ಲಿಸುವುದು - 43,251
ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ವಾಹನ ನಿಲ್ಲಿಸುವುದು - 9,933
ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವುದು - 10,345
ಸರಕು ಸಾಗಣೆ ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವುದು - 6,070
ಇತರ ಅಪರಾಧಗಳು- 1,77026
ಒಟ್ಟು - 48,48,831

