
ಕ್ವಾಂಟಮ್ ತಂತ್ರಜ್ಞಾನ| ರಾಜ್ಯದ 'ಕ್ಯೂ-ಮಿಂಟ್' ಯೋಜನೆಗೆ ಜಾಗತಿಕ ವಿಜ್ಞಾನಿಗಳ ಶ್ಲಾಘನೆ
ರಾಜ್ಯವು ನಾವೀನ್ಯತೆಗೆ ಹೆಸರುವಾಸಿಯಾಗಿದೆ. ವಿಶ್ವದ ಅಗ್ರಗಣ್ಯ ಕ್ವಾಂಟಮ್ ವಿಜ್ಞಾನಿಗಳಿಂದ ಇಂತಹ ಬೆಂಬಲ ದೊರೆಯುತ್ತಿರುವ ಉತ್ಸಾಹ ಹೆಚ್ಚಿಸಿದೆ ಎಂದು ಸಚಿವ ಎನ್.ಎಸ್. ಭೋಸರಾಜು ತಿಳಿಸಿದರು.
ಕರ್ನಾಟಕದ ತಂತ್ರಜ್ಞಾನ ದೂರದೃಷ್ಟಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ದೊರೆತಿದೆ. ವಿಶ್ವದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ 34 ಮಂದಿ ವಿಜ್ಞಾನಿಗಳು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಿಗೆ ಪತ್ರ ಬರೆದಿದ್ದು, ಕರ್ನಾಟಕದ 'ಕ್ವಾಂಟಮ್ ಮೆಟೀರಿಯಲ್ ಇನ್ನೋವೇಶನ್ ನೆಟ್‌ವರ್ಕ್' (Q-MINt) ಯೋಜನೆಗೆ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗೆ ಐಸಿಟಿಎಸ್-ಟಿಐಎಫ್ಆರ್ (ICTS-TIFR) ನಲ್ಲಿ ನಡೆದ 'ಫ್ರಾಂಟಿಯರ್ಸ್ ಇನ್ ಕ್ವಾಂಟಮ್ ಕಂಡೆನ್ಸ್ಡ್ ಮ್ಯಾಟರ್ ಫಿಸಿಕ್ಸ್' (FQCMP) ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಜಾಗತಿಕ ವಿಜ್ಞಾನಿಗಳ ಸಮುದಾಯವು 'ಕ್ವಾಂಟಮ್ ಸಿಟಿ' ಕಾರ್ಯಕ್ರಮದ ಭಾಗವಾದ ಕ್ಯೂ-ಮಿಂಟ್ (Q-MINt) ಸ್ಥಾಪನೆಯ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕಂಪ್ಯೂಟಿಂಗ್, ಸಂವಹನ ಮತ್ತು ಸೆನ್ಸಿಂಗ್ ಕ್ಷೇತ್ರಗಳಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ನವೀನ ಕ್ವಾಂಟಮ್ ವಸ್ತುಗಳು ಅತ್ಯಂತ ನಿರ್ಣಾಯಕ ಅಡಿಪಾಯವಾಗಿವೆ ಎಂದು ವಿಜ್ಞಾನಿಗಳು ತಮ್ಮ ಜಂಟಿ ಪತ್ರದಲ್ಲಿ ಹೇಳಿದ್ದಾರೆ.
ನಾವೀನ್ಯತೆಯಲ್ಲಿ ಅಗ್ರಸ್ಥಾನ
ವಿಶ್ವದ ಪ್ರಮುಖ ವಿಜ್ಞಾನಿಗಳ ಬೆಂಬಲವನ್ನು ಸಚಿವ ಎನ್.ಎಸ್. ಭೋಸರಾಜು ಸ್ವಾಗತಿಸಿದ್ದು, "ರಾಜ್ಯವು ಮೊದಲಿನಿಂದಲೂ ನಾವೀನ್ಯತೆಗೆ ಹೆಸರುವಾಸಿಯಾಗಿದೆ. ವಿಶ್ವದ ಅಗ್ರಗಣ್ಯ ಕ್ವಾಂಟಮ್ ವಿಜ್ಞಾನಿಗಳಿಂದ ಇಂತಹ ಬೆಂಬಲ ದೊರೆತಿರುವುದು ನಮ್ಮ ಗುರಿಯು ಉತ್ತಮ ದಾರಿಯಲ್ಲಿ ನಡೆಯುತ್ತಿರುವುದನ್ನು ತೋರಿಸುತ್ತದೆ" ಎಂದಿದ್ದಾರೆ.
ಉದ್ಯೋಗ ಸೃಷ್ಟಿ
'ಕ್ವಾಂಟಮ್ ಮೆಟೀರಿಯಲ್ ಇನ್ನೋವೇಶನ್ ನೆಟ್‌ವರ್ಕ್' ಅನ್ನು ಅನುಷ್ಠಾನಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಸುಧಾರಿತ ಸಂಶೋಧನೆ ಮತ್ತು ಉತ್ಪಾದನೆಗಾಗಿ ಉತ್ತಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ, 2035ರ ವೇಳೆಗೆ 20 ಬಿಲಿಯನ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯ ಗುರಿಯನ್ನು ತಲುಪಲು ನಾವು ಅಡಿಪಾಯ ಹಾಕುತ್ತಿದ್ದೇವೆ. ಜೊತೆಗೆ ಈ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಿ, ನಮ್ಮ ಯುವಜನತೆಗೆ ಉದ್ಯೋಗಗಳನ್ನು ಸೃಷ್ಟಿಸಲಿದ್ದೇವೆ" ಎಂದು ತಿಳಿಸಿದ್ದಾರೆ.
ಡೇಟಾ ಸೈನ್ಸ್ ಅಭಿವೃದ್ಧಿ
ಕ್ಯೂ-ಮಿಂಟ್‌ನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿಜ್ಞಾನಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಐಟಿಬಿಟಿ ಇಲಾಖೆಗೆ ವಿಶ್ವದರ್ಜೆಯ ತಜ್ಞರನ್ನು ಒಳಗೊಂಡ ಕೇಂದ್ರೀಕೃತ 'ಕ್ವಾಂಟಮ್ ಮೆಟೀರಿಯಲ್ಸ್ ಫೌಂಡ್ರಿ'ಯನ್ನು ಸ್ಥಾಪಿಸುವುದು. ಸಮಗ್ರ ಕಂಪ್ಯೂಟೇಶನಲ್ ಮತ್ತು ಡೇಟಾ ಸೈನ್ಸ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಬಹು-ಸಂಸ್ಥೆಗಳ ಸಹಯೋಗವನ್ನು ಉತ್ತೇಜಿಸುವಂತಹ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ, ವಿಶ್ವಾಸ-ವರ್ಧಿಸುವ ಯೋಜನೆಗಳ ಮೂಲಕ ಹಂತ ಹಂತದ ಅನುಷ್ಠಾನದ ಅಗತ್ಯವನ್ನು ಅವರು ಎತ್ತಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಪತ್ರಕ್ಕೆ ಸಹಿ ಹಾಕಿರುವ ವಿಜ್ಞಾನಿಗಳು ಐಐಎಸ್‌ಸಿ (IISc), ಟಿಐಎಫ್ಆರ್ (TIFR), ಎಂಐಟಿ (MIT), ಆಕ್ಸ್‌ಫರ್ಡ್ (Oxford), ಪ್ರಿನ್ಸ್‌ಟನ್ (Princeton) ಮತ್ತು ಕೊಲಂಬಿಯಾ (Columbia) ವಿಶ್ವವಿದ್ಯಾಲಯಗಳಂತಹ ಪ್ರಮುಖ ಜಾಗತಿಕ ಸಂಸ್ಥೆಗಳನ್ನು ಪ್ರತಿನಿಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

