ಜಿಬಿಎ ಮತದಾರರ ಪಟ್ಟಿ ಲೋಪ ಸರಿಪಡಿಸಲು ಕ್ರಮ: ಏ.6ಕ್ಕೆ ಅಂತಿಮ ಪಟ್ಟಿ  ಪ್ರಕಟ
x

ಜಿಬಿಎ ಮತದಾರರ ಪಟ್ಟಿ ಲೋಪ ಸರಿಪಡಿಸಲು ಕ್ರಮ: ಏ.6ಕ್ಕೆ ಅಂತಿಮ ಪಟ್ಟಿ ಪ್ರಕಟ

ಮಾ.9 ರಂದು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ತಪ್ಪುಗಳಿದ್ದರೆ ಸಾರ್ವಜನಿಕರು ಮಾ.10 ರಿಂದ ಮಾ.16 ರವರೆಗೆ ದೂರು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಬಹುದು.


Click the Play button to hear this message in audio format

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ತಾಂತ್ರಿಕ ಲೋಪಗಳನ್ನು ಸರಿಪಡಿಸಲು ರಾಜ್ಯ ಚುನಾವಣಾ ಆಯೋಗವು ಮಹತ್ವದ ಕ್ರಮ ಕೈಗೊಂಡಿದೆ. ಆಯೋಗವು ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮ.9ರಂದು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

ಇತ್ತೀಚೆಗೆ ಪ್ರಕಟಿಸಿದ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಕೆಲವು ಗಂಭೀರ ತಪ್ಪುಗಳು ಪತ್ತೆಯಾಗಿವೆ. ಒಂದು ವಾರ್ಡಿನಲ್ಲಿ ವಾಸವಿರುವ ಮತದಾರರ ಹೆಸರುಗಳು ತಾಂತ್ರಿಕ ಕಾರಣಗಳಿಂದಾಗಿ ಮತ್ತೊಂದು ವಾರ್ಡಿನ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಅಲ್ಲದೆ, ಮತದಾರರ ವೈಯಕ್ತಿಕ ವಿವರಗಳು ಅದಲು-ಬದಲಾಗಿದ್ದು, ಮತಗಟ್ಟೆಗಳ ಕೊಠಡಿ ಸಂಖ್ಯೆಗಳನ್ನು ನಮೂದಿಸುವಲ್ಲಿಯೂ ತಪ್ಪುಗಳಾಗಿರುವುದು ಕಂಡುಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 5 ನಗರ ಪಾಲಿಕೆಗಳ ಮತದಾರರ ಪಟ್ಟಿಯನ್ನು ದೋಷಮುಕ್ತವಾಗಿ ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗವು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಕಂಡುಬಂದಿದ್ದ ತಾಂತ್ರಿಕ ಲೋಪಗಳನ್ನು ಸರಿಪಡಿಸಿ, ಪಾರದರ್ಶಕ ಚುನಾವಣೆ ನಡೆಸಲು ಆಯೋಗವು ಈ ಕ್ರಮ ಕೈಗೊಂಡಿದೆ.

ಈಗಾಗಲೇ ಸಿದ್ಧಪಡಿಸಲಾಗಿರುವ ಬದಲಾವಣೆಗಳೊಂದಿಗೆ ಮಾ.9 ರಂದು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಪ್ರಕಟಿತ ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ಇನ್ಯಾವುದೇ ತಪ್ಪುಗಳಿದ್ದರೆ ಸಾರ್ವಜನಿಕರು ಮಾ.10 ರಿಂದ ಮಾ.16 ರವರೆಗೆ ದೂರು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಬಹುದು.

ಸಾರ್ವಜನಿಕರು ನೀಡಿದ ದೂರುಗಳನ್ನು ಪರಿಶೀಲಿಸಿ, ಮತದಾರರ ವಿವರಗಳನ್ನು ಸರಿಯಾದ ವಾರ್ಡ್‌ಗಳಿಗೆ ಸೇರಿಸುವ ತಾಂತ್ರಿಕ ಪ್ರಕ್ರಿಯೆಯು ಮಾ.17 ರಿಂದ ಮಾ.22 ರವರೆಗೆ ನಡೆಯಲಿದೆ. ಎಲ್ಲಾ ಹಂತದ ಪರಿಶೀಲನೆ ಮತ್ತು ಮುದ್ರಣ ಕಾರ್ಯ ಮುಗಿದ ನಂತರ ಏ.6 ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗವು ಹೇಳಿದೆ.

ಈ ಹಿಂದೆ ಕರಡು ಪಟ್ಟಿಯಲ್ಲಿ ಮತದಾರರ ವಾರ್ಡ್‌ಗಳು ಮತ್ತು ಮತಗಟ್ಟೆ ವಿವರಗಳು ಅದಲು-ಬದಲಾಗಿದ್ದವು ಇಂತಹ ತಪ್ಪುಗಳನ್ನು ಸರಿಪಡಿಸಲು ಅಧಿಕಾರಿಗಳು ಒಂದು ತಿದ್ದುಪಡಿ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಹಂತದಲ್ಲಿ, ಮುದ್ರಕರು ಫ್ರಮ್‌ ಟು ಮ್ಯಾಟ್ರಿಕ್ಸ್‌ ತಂತ್ರಾಂಶದಲ್ಲಿ ತಿದ್ದುಪಡಿಗಳನ್ನು ಅಳವಡಿಸಿ ಹೊಸದಾಗಿ ಪರಿಷ್ಕರಿಸಿದ ಡಿಜಿಟಲ್ ಮತದಾರರ ಪಟ್ಟಿಯನ್ನು (ಇ-ರೋಲ್‌) ಸಿದ್ಧಪಡಿಸುತ್ತಾರೆ. ಹಳೆಯ ತಪ್ಪುಗಳನ್ನು ತೆಗೆದುಹಾಕಿ, ಸರಿಯಾದ ವಾರ್ಡ್‌ಗಳ ಆಧಾರದ ಮೇಲೆ ಕಂಪ್ಯೂಟರ್‌ನಲ್ಲಿ ಹೊಸ ಪಟ್ಟಿಯನ್ನು ಸೃಷ್ಟಿಸುವುದಾಗಿದೆ. ಶುಕ್ರವಾರದಿಂದ ಮಾ.1 ರವರೆಗೆ ನಡೆಯುತ್ತದೆ. ಈ ಡಿಜಿಟಲ್ ಪಟ್ಟಿ ಸಿದ್ಧವಾದ ನಂತರ ವಾರ್ಡುವಾರು ಪಟ್ಟಿಯ ಮುದ್ರಣ ಕಾರ್ಯ ಆರಂಭವಾಗುತ್ತದೆ ಎಂದು ತಿಳಿಸಿದೆ.

Read More
Next Story