
ಮೀನು, ಕೋಳಿ, ಮಾಂಸ ಮಾರಾಟಗಾರರಿಗೆ ಜಿಬಿಎ ಎಚ್ಚರಿಕೆ: ಸ್ವಚ್ಛತೆ ಇಲ್ಲದಿದ್ದರೆ ದಂಡ
ಚಿಕನ್, ಮಟನ್ ಮತ್ತು ಮೀನು ಮಾರಾಟ ಮಳಿಗೆಗಳ ಮೇಲೆ ನಿರಂತರ ತಪಾಸಣೆ ನಡೆಸಲಿದ್ದು, ಆರೋಗ್ಯ ಮತ್ತು ಸ್ವಚ್ಛತೆಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಮಾರಾಟವಾಗುವ ಮೀನು, ಕೋಳಿ, ಮಾಂಸ ಆಹಾರಗಳು ಸ್ವಚ್ಛವಾಗಿಲ್ಲವೇ? ನಗರಪಾಲಿಕೆ ಅಧಿಕಾರಿಗಳಿಂದ ಬೀಳಲಿದೆ ದಂಡ! ಅಂತಹ ಕಡೆ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡದಿದ್ದರೆ ಕಠಿಣ ಕ್ರಮಕೈಗೊಳ್ಳಲು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ನಿರ್ಧರಿಸಿದೆ.
ಮುಂದಿನ ದಿನಗಳಲ್ಲಿ ನಗರದಲ್ಲಿ ಕೋಳಿ ಮಾಂಸ(ಚಿಕನ್), ಕುರಿ-ಮೇಕೆ ಮಾಂಸ (ಮಟನ್) ಮತ್ತು ಮೀನು ಮಾರಾಟ ಮಳಿಗೆಗಳ ಮೇಲೆ ನಿರಂತರ ತಪಾಸಣೆ ನಡೆಸಲು ಜಿಬಿಎ ವ್ಯಾಪ್ತಿಯ ನಗರಪಾಲಿಕೆಗಳು ನಿರ್ದರಿಸಿವೆ. ಆರೋಗ್ಯ ಮತ್ತು ಸ್ವಚ್ಛತೆಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರು ಕೂಡ ಸ್ವಚ್ಛತೆಯಿಂದ ಕೂಡಿದ ಮಳಿಗೆಗಳಿಂದಲೇ ಆಹಾರ ಪದಾರ್ಥಗಳನ್ನು ಖರೀದಿಸಿ, ಆರೋಗ್ಯ ಕಾಪಾಡುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ತಂಡ ಇತ್ತೀಚೆಗೆ ಸಾರ್ವಜನಿಕರ ದೂರಿನ ಮೇರೆಗೆ ಎಚ್‌ಬಿಆರ್ ಲೇಔಟ್ ಪ್ರದೇಶದಲ್ಲಿ ಮಾಂಸ ಮಾರಾಟ ಮಳಿಗೆಗಳಿಗೆ ತೆರಳಿ ವಿಶೇಷ ತಪಾಸಣೆ ನಡೆಸಿದ್ದಾರೆ.
ಶುಕ್ರವಾರ (ಮಾ.13) ನಡೆಸಿದ ತಪಾಸಣೆಯ ವೇಳೆ ಕೆಲವು ಮಾಂಸ ಮಾರಾಟ ಮಳಿಗೆಗಳಲ್ಲಿ ಸ್ವಚ್ಛತೆಯ ಕೊರತೆ, ಅನೈರ್ಮಲ್ಯ, ಮಾಂಸವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದೇ ಇರುವುದು ಹಾಗೂ ಆರೋಗ್ಯ ನಿಯಮಗಳನ್ನು ಪಾಲಿಸದೇ ಇರುವಂತಹ ಉಲ್ಲಂಘನೆಗಳು ಕಂಡುಬಂದಿದ್ದು, ಅಧಿಕಾರಿಗಳು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ನಿಯಮ ಉಲ್ಲಂಘನೆ, ದಂಡ
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ನಿಯಮ ಉಲ್ಲಂಘನೆ ಮಾಡಿದ ಮಳಿಗೆಗಳ ವಿರುದ್ಧ 5 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. ಜತೆಗೆ ಸಂಬಂಧಪಟ್ಟ ವ್ಯಾಪಾರಿಗಳಿಗೆ, ಮಾಂಸ ಮಾರಾಟ ಮಳಿಗೆಗಳನ್ನು ಸ್ವಚ್ಛವಾಗಿ ನಿರ್ವಹಿಸುವುದು, ಆರೋಗ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಟ್ರೇಡ್ ಲೈಸೆನ್ಸ್ ಹೊಂದಿರಬೇಕು ಎಂದು ಸೂಚಿಸಲಾಗಿದೆ.

