
Ground Report| ಬೆಂಗಳೂರಿನಲ್ಲಿ ‘ಫಾಕ್ಸ್ ಕಾನ್’ ಕಾರುಬಾರು! ತೆರಿಗೆಯೂ ಇಲ್ಲ, ಭೂಮಿ ಕೊಟ್ಟವರಿಗೆ ಕೆಲಸವೂ ಇಲ್ಲ!
ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಎಕರೆ ವಿಶಾಲ ಪ್ರದೇಶದಲ್ಲಿ ಫಾಕ್ಸ್ ಕಾನ್ ಕಂಪನಿ ಕಾರ್ಯನಿರ್ವಹಿಸುತ್ತಿದೆ.
ಜಾಗತಿಕ ಕಂಪನಿಗಳು ಉದ್ಯಮ ಸ್ಥಾಪಿಸಿದರೆ ವಿಫುಲ ಉದ್ಯೋಗಗಳು ದೊರೆತು ಅಭಿವೃದ್ಧಿ ಸಾಧ್ಯವಾಗಲಿದೆ. ಸಹಜವಾಗಿ ಹಳ್ಳಿಗಳ ಚಿತ್ರಣ ಬದಲಾಗಲಿದೆ ಎಂಬ ನಿರೀಕ್ಷೆ ಕಂಪೆನಿಗಳಿಗೆ ಭೂಮಿ ಕೊಟ್ಟ ರೈತರಲ್ಲಿ ಇರಲಿದೆ. ಆದರೆ, ಬೆಂಗಳೂರಿನ ಹೊರವಲಯದ ದೇವನಹಳ್ಳಿ ತಾಲೂಕಿನಲ್ಲಿ ತಲೆ ಎತ್ತಿರುವ ಪ್ರತಿಷ್ಠಿತ 'ಫಾಕ್ಸ್ ಕಾನ್' (Foxconn) ಕಂಪನಿಯು ಆ ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡಿದೆ.
ಆ್ಯಪಲ್ ಕಂಪನಿಯ ಐಫೋನ್ ತಯಾರಿಸುವ ಈ ಬೃಹತ್ ಕಾರ್ಖಾನೆಯ ಸಾಧನೆ ಹಿಂದೆ, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಭೂಮಿ ನೀಡಿದ ರೈತರ ಕಣ್ಣೀರಿನ ಕಥೆಯಿದೆ. ಭೂಮಿ ಪಡೆದ ಕಂಪನಿ ತಮ್ಮ ಮಕ್ಕಳಿಗೆ ಉದ್ಯೋಗ ನೀಡಲಿದೆ, ಬದುಕು ಸುಧಾರಿಸಲಿದೆ ಎಂಬ ರೈತರ ಕನಸಿಗೆ ಫಾಕ್ಸ್‌ಕಾನ್ ನಿರಾಸೆ ತಂದಿದೆ. ಸ್ಥಳೀಯರಿಗೆ ಉದ್ಯೋಗವೂ ಕೊಡದೇ, ಪಂಚಾಯ್ತಿಗೆ ತೆರಿಗೆಯನ್ನೂ ಪಾವತಿಸದೇ ನಿರ್ಲಕ್ಷ್ಯ ವಹಿಸಿದೆ, ಸ್ಮಶಾನದ ಜಾಗವನ್ನೂ ನುಂಗಿ ಹಾಕಿದೆ ಎಂದು ಆರೋಪಿಸಿರುವ ಮೂಲಕ ಗ್ರಾಮಸ್ಥರು ಇದೀಗ ಕಂಪನಿಯೊಂದಿಗೆ ನೇರ ಸಂಘರ್ಷಕ್ಕೆ ಇಳಿದಿದ್ದಾರೆ.
ಈ ಕುರಿತು ‘ದ ಫೆಡರಲ್ ಕರ್ನಾಟಕ’ ನಡೆಸಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
ಪಂಚಾಯಿತಿ vs ಕಾರ್ಪೊರೇಟ್ ಸಮರ
ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಎಕರೆ ವಿಶಾಲ ಪ್ರದೇಶದಲ್ಲಿ ಫಾಕ್ಸ್ ಕಾನ್ ಕಂಪನಿ ಹರಡಿಕೊಂಡಿದೆ. ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಈ ಕಾರ್ಖಾನೆಯು, ರಾಜ್ಯದ ಕೈಗಾರಿಕಾ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಆದರೆ, ವಿಪರ್ಯಾಸವೆಂದರೆ, ಕೋಟ್ಯಂತರ ರೂ.ವಹಿವಾಟು ನಡೆಸುವ ಈ ಕಂಪನಿ, ತಾನು ನೆಲೆ ನಿಂತಿರುವ ಪ್ರದೇಶದಲ್ಲಿರುವ ಗ್ರಾಮ ಪಂಚಾಯಿತಿಗೆ ನಯಾಪೈಸೆ ತೆರಿಗೆ ಕಟ್ಟಿಲ್ಲ.
ಕಾನೂನಿನ ಪ್ರಕಾರ, ಯಾವುದೇ ಬೃಹತ್ ಕಟ್ಟಡ ನಿರ್ಮಾಣವಾಗಬೇಕಾದರೆ ಅಥವಾ ಉದ್ಯಮ ಆರಂಭವಾಗಬೇಕಾದರೆ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಫಾಕ್ಸ್ ಕಾನ್ ಕಂಪನಿಯು ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ, ಕೊಯಿರಾ ಗ್ರಾಮ ಪಂಚಾಯಿತಿಯಿಂದ ಕಟ್ಟಡ ನಿರ್ಮಾಣ ಪರವಾನಗಿ ಆಗಲಿ, ಪ್ಲ್ಯಾನ್ ಅನುಮೋದನೆಯಾಗಲಿ ಅಥವಾ ನಿರಾಕ್ಷೇಪಣಾ ಪತ್ರವನ್ನಾಗಲಿ ಪಡೆದಿಲ್ಲ.
"ನಾವು ಕಂಪನಿಯ ಬಾಗಿಲಿಗೆ ಹೋಗಿ ಕೇಳಿದರೂ ನಮ್ಮನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಅವರಿಗೆ ರಸ್ತೆ, ನೀರು, ಚರಂಡಿ ವ್ಯವಸ್ಥೆಯನ್ನು ನಾವೇ ಮಾಡಿಕೊಡಬೇಕು. ಆದರೆ ಅವರು ನಮಗೆ ಚಿಕ್ಕಾಸು ತೆರಿಗೆ ಕಟ್ಟುತ್ತಿಲ್ಲ. ಹೀಗಾದರೆ ಪಂಚಾಯಿತಿ ನಡೆಯುವುದು ಹೇಗೆ?" ಎಂದು ಕೊಯಿರಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಿಂದು ಕೆ.ಎಸ್. ಮತ್ತು ಸದಸ್ಯರಾದ ಮಮತಾ ಶಿವಾಜಿ ಗೌಡ ಪ್ರಶ್ನಿಸುತ್ತಾರೆ. ಈ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತಿರುವ ಪಂಚಾಯಿತಿ ಆಡಳಿತ ಮಂಡಳಿ, ಇದೀಗ ಕಂಪನಿಗೆ ಖಡಕ್ ನೋಟಿಸ್ ನೀಡಿದ್ದು, ಫೆಬ್ರವರಿ 7ರೊಳಗೆ ತೆರಿಗೆ ಪಾವತಿಸದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಸ್ಥಳೀಯರಿಗೆ ‘ಗುತ್ತಿಗೆ’; ಹೊರಗಿನವರಿಗೆ ಕಾಯಂ ಕೆಲಸ!
ಫಾಕ್ಸ್ ಕಾನ್ ಬರುವಾಗ ಈ ಭಾಗದ ಯುವಕರಿಗೆ ಉದ್ಯೋಗದ ಮಹಾಪುರವೇ ಹರಿದು ಬರುತ್ತದೆ ಎಂದು ಬಿಂಬಿಸಲಾಗಿತ್ತು. ಆದರೆ ವಾಸ್ತವ ತೀರಾ ಭಿನ್ನವಾಗಿದೆ. ನಮ್ಮ ಪ್ರತಿನಿಧಿಗಳು ಕಂಪನಿಯ ಬಳಿ ತೆರಳಿ ಪರಿಶೀಲಿಸಿದಾಗ, ಅಲ್ಲಿನ ಉದ್ಯೋಗಿಗಳು ಕ್ಯಾಮೆರಾ ಮುಂದೆ ಮಾತನಾಡಲು ಹಿಂದೇಟು ಹಾಕಿದರು. ಭಯದ ವಾತಾವರಣದ ನಡುವೆಯೂ ಕೆಲವರು ‘ಆಫ್ ದಿ ರೆಕಾರ್ಡ್’ (Off the record) ನೀಡಿರುವ ಮಾಹಿತಿ ಆಘಾತಕಾರಿಯಾಗಿದೆ.
ಕಂಪನಿಯಲ್ಲಿನ ಉನ್ನತ ಹುದ್ದೆಗಳು, ತಾಂತ್ರಿಕ ವಿಭಾಗದ ಕೆಲಸಗಳು ಮತ್ತು ಕಚೇರಿ ನಿರ್ವಹಣೆಯಂತಹ ಪ್ರಮುಖ ಜವಾಬ್ದಾರಿಗಳನ್ನು ಸ್ಥಳೀಯರಿಗೆ ನೀಡುತ್ತಿಲ್ಲ. ಬದಲಿಗೆ ಹೊರ ರಾಜ್ಯದವರಿಗೆ ಅಥವಾ ಹೊರಗಿನವರಿಗೆ ಮಣೆ ಹಾಕಲಾಗುತ್ತಿದೆ. ಭೂಮಿ ಕಳೆದುಕೊಂಡ ಮತ್ತು ಸ್ಥಳೀಯ ರೈತ ಕುಟುಂಬದ ಯುವಕರಿಗೆ ಸಿಗುತ್ತಿರುವುದು ಕಸ ಗುಡಿಸುವುದು (ಹೌಸ್ ಕೀಪಿಂಗ್), ಸೆಕ್ಯೂರಿಟಿ ಕೆಲಸ ಮತ್ತು ಕ್ಲೀನಿಂಗ್ ಕೆಲಸಗಳು ಮಾತ್ರ. ಅದೂ ಕೂಡ ನೇರ ನೇಮಕಾತಿಯಲ್ಲ, ಬದಲಿಗೆ ಗುತ್ತಿಗೆದಾರರ ಮೂಲಕ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. "ನಮ್ಮ ಭೂಮಿಯಲ್ಲಿ ಅವರ ಸಾಮ್ರಾಜ್ಯ ಕಟ್ಟಿದ್ದಾರೆ, ಆದರೆ ನಮಗೆ ಅಲ್ಲಿ ಗುಲಾಮರ ಕೆಲಸ ಕೊಡುತ್ತಿದ್ದಾರೆ" ಎಂದು ಹೆಸರು ಹೇಳಲು ಇಚ್ಛಿಸದ ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡರು.
ಸಾವಿನ ನಂತರವೂ ತಪ್ಪದ ಸಂಕಷ್ಟ
ಈ ಸಂಘರ್ಷದಲ್ಲಿ ಅತ್ಯಂತ ನೋವಿನ ಸಂಗತಿಯೆಂದರೆ 'ಸ್ಮಶಾನ ಭೂಮಿ'ಯ ವಿವಾದ. ಫಾಕ್ಸ್ ಕಾನ್ ಯೋಜನೆಗಾಗಿ ಸರ್ಕಾರ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ, ಚಿಕ್ಕಗೊಲ್ಲಹಳ್ಳಿ ಗ್ರಾಮಕ್ಕೆ ಬದಲಿಯಾಗಿ ಎರಡು ಎಕರೆ ಜಾಗವನ್ನು ಸ್ಮಶಾನಕ್ಕೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಗ್ರಾಮಸ್ಥರು ಇದನ್ನು ನಂಬಿ ತಮ್ಮ ಜಮೀನು ಬಿಟ್ಟುಕೊಟ್ಟಿದ್ದರು.
ಕಂಪನಿ ತಲೆ ಎತ್ತಿ ನಿಂತು ವರ್ಷಗಳೇ ಕಳೆದರೂ, ಭರವಸೆ ನೀಡಿದ ಸ್ಮಶಾನ ಜಾಗ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಪ್ರಸ್ತುತ ಗ್ರಾಮದಲ್ಲಿರುವುದು ಕೇವಲ 20 ಗುಂಟೆ ಸ್ಮಶಾನ ಜಾಗ ಮಾತ್ರ. ಅಲ್ಲಿ ಈಗಾಗಲೇ ಸಮಾಧಿಗಳು ತುಂಬಿ ತುಳುಕುತ್ತಿವೆ. "ಊರಿನಲ್ಲಿ ಯಾರಾದರೂ ಸತ್ತರೆ ಹೂಳಲು ಜಾಗವಿಲ್ಲದ ಪರಿಸ್ಥಿತಿ ಬಂದಿದೆ. ಬದುಕಿದ್ದಾಗಲೂ ನಮಗೆ ನೆಮ್ಮದಿ ಇಲ್ಲ, ಸತ್ತ ಮೇಲೂ ಮಣ್ಣಾಗಲು ಜಾಗವಿಲ್ಲ. ಎರಡು ಎಕರೆ ಕೊಡುತ್ತೇವೆ ಎಂದು ಹೇಳಿ ನಮ್ಮನ್ನು ವಂಚಿಸಿದ್ದಾರೆ" ಎಂದು ದೊಡ್ಡಗೊಲ್ಲಹಳ್ಳಿ ನಿವಾಸಿಗಳಾದ ಮಂಜುಳ ಮತ್ತು ಮುನೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಿಳ್ಳಪ್ಪ ಅವರ ಪ್ರಕಾರ, "ಸ್ಮಶಾನದ ಜಾಗ ಪೂರ್ಣ ಭರ್ತಿಯಾಗಿದೆ, ತುರ್ತಾಗಿ ಜಾಗ ನೀಡದಿದ್ದರೆ ಶವಗಳನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಧೂಳು, ಶಬ್ದ, ಹದಗೆಟ್ಟ ರಸ್ತೆಗಳು
ಫಾಕ್ಸ್ ಕಾನ್ ಕಂಪನಿಯ ಬೃಹತ್ ಕಾರ್ಯಾಚರಣೆಯಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ನೆಮ್ಮದಿ ಹಾಳಾಗಿದೆ. ಕಂಪನಿಗೆ ನಿತ್ಯವೂ ನೂರಾರು ಬಸ್‌ಗಳು, ಸರಕು ಸಾಗಣೆ ಲಾರಿಗಳು ಮತ್ತು ಇತರೆ ವಾಹನಗಳು ಸಂಚರಿಸುತ್ತವೆ. ಪರಿಣಾಮವಾಗಿ ಹಳ್ಳಿಯ ರಸ್ತೆಗಳು ಸಂಪೂರ್ಣವಾಗಿ ಕಿತ್ತುಹೋಗಿವೆ.
"ದಿನವಿಡೀ ದೂಳು ಕುಡಿಯುವಂತಾಗಿದೆ. ರಸ್ತೆಗಳು ಹಳ್ಳ ಬಿದ್ದಿರುವುದರಿಂದ ಓಡಾಡಲು ಭಯವಾಗುತ್ತದೆ. ಕಂಪನಿಯಿಂದ ಊರಿಗೆ ಅನುಕೂಲವಾಗುವ ಬದಲು ತೊಂದರೆಯೇ ಹೆಚ್ಚಾಗಿದೆ. ನಮಗೆ ಆದಾಯವೂ ಇಲ್ಲ, ಆರೋಗ್ಯವೂ ಇಲ್ಲದಂತಾಗಿದೆ," ಎಂದು ಸ್ಥಳೀಯ ಮಹಿಳೆಯರು ದೂರಿದ್ದಾರೆ. ದೊಡ್ಡಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಅವರು ಹೇಳುವಂತೆ, "ಅಭಿವೃದ್ಧಿ ಅಂದರೆ ಕೇವಲ ಬಿಲ್ಡಿಂಗ್ ಕಟ್ಟುವುದಲ್ಲ, ಅಕ್ಕಪಕ್ಕದ ಜನರ ಬದುಕನ್ನೂ ಸುಧಾರಿಸಬೇಕು. ಆದರೆ ಇಲ್ಲಿ ಆಗಿರುವುದು ತದ್ವಿರುದ್ಧ."
ಕಾನೂನು ಹೋರಾಟ ನಿಶ್ಚಿತ ಎಂದ ಪಂಚಾಯತ್
ಫೆಬ್ರವರಿ 7ರ ಗಡುವು ಸಮೀಪಿಸುತ್ತಿದೆ. ಕೊಯಿರಾ ಗ್ರಾಮ ಪಂಚಾಯಿತಿ ಈ ಬಾರಿ ಸುಮ್ಮನೆ ಕೂರುವ ಲಕ್ಷಣ ಕಾಣುತ್ತಿಲ್ಲ. ತೆರಿಗೆ ಪಾವತಿಸದಿದ್ದರೆ ಮತ್ತು ಎನ್‌ಓಸಿ ಪಡೆಯದಿದ್ದರೆ ಕಾನೂನಾತ್ಮಕ ಹೋರಾಟದ ಜೊತೆಗೆ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ. ಇತ್ತ ಫಾಕ್ಸ್ ಕಾನ್ ಆಡಳಿತ ಮಂಡಳಿಯನ್ನು ಸಂಪರ್ಕಿಸಲು ‘ದ ಫೆಡರಲ್ ಕರ್ನಾಟಕ’ ನಡೆಸಿದ ಪ್ರಯತ್ನಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಜಾಗತಿಕ ಮಟ್ಟದ ಕಂಪನಿಯೊಂದು ಸ್ಥಳೀಯ ಕಾನೂನುಗಳನ್ನು ಗಾಳಿಗೆ ತೂರಿ, ಗ್ರಾಮ ಪಂಚಾಯಿತಿಯನ್ನೇ ಕಡೆಗಣಿಸಿರುವುದು ಎಷ್ಟರಮಟ್ಟಿಗೆ ಸರಿ? ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಕಂಪನಿಯ ಕಿವಿ ಹಿಂಡಿ ಸ್ಥಳೀಯರಿಗೆ ನ್ಯಾಯ ಒದಗಿಸಿಕೊಡುತ್ತದೆಯೇ ಅಥವಾ ಬಂಡವಾಳಶಾಹಿಗಳ ಪರ ನಿಲ್ಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕಂತೂ ದೇವನಹಳ್ಳಿಯ ಈ ಹಳ್ಳಿಗಳಲ್ಲಿ ಆಪಲ್ ಕಂಪನಿಯ ವಿರುದ್ಧದ ಅಸಮಾಧಾನದ ಹೊಗೆ ದಟ್ಟವಾಗುತ್ತಿದ್ದು, ಅದು ಜ್ವಾಲಾಮುಖಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ಗ್ರೌಂಡ್ ರಿಪೋರ್ಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ...

