Digital Census 2027: Self-Census begins from April 1; Portal ready to record your information yourself!
x

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ 

ಡಿಜಿಟಲ್ ಜನಗಣತಿ 2027: ಏ. 1 ರಿಂದ 'ಸ್ವಯಂ ಗಣತಿ' ಆರಂಭ; ನಿಮ್ಮ ಮಾಹಿತಿಯನ್ನು ನೀವೇ ದಾಖಲಿಸಲು ಪೋರ್ಟಲ್ ಸಿದ್ಧ!

ಗಣ್ಯ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯು ಈ ಡಿಜಿಟಲ್ ಅಭಿಯಾನಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ. ಇದು ಜನಗಣತಿ ಪ್ರಕ್ರಿಯೆಯ ಸುಲಭತೆ ಮತ್ತು ಭದ್ರತೆಯ ಬಗ್ಗೆ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ಮೂಡಿಸಲಿದೆ.


Click the Play button to hear this message in audio format

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಲಿರುವ ಸಂಪೂರ್ಣ ಡಿಜಿಟಲ್ ಜನಗಣತಿಯ ಮೊದಲ ಹಂತವಾದ ʼಮನೆಪಟ್ಟಿ ಮತ್ತು ವಸತಿ ಗಣತಿ 2027ʼ ಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ನಾಲ್ಕು ಪಾಲಿಕೆಗಳು ಸರ್ವ ಸನ್ನದ್ಧವಾಗಿದೆ. ಈ ಐತಿಹಾಸಿಕ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತಮ್ಮ ಮಾಹಿತಿಯನ್ನು ತಾವೇ ದಾಖಲಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾದ ವಿಶೇಷ ಸ್ವಯಂ-ಗಣತಿ (Self-Enumeration - SE) ಪೋರ್ಟಲ್ ಅನ್ನು ಪರಿಚಯಿಸಲಾಗಿದೆ.

ಗಣ್ಯರ ಗಣತಿಯೊಂದಿಗೆ ಚಾಲನೆ

ಸಂಪ್ರದಾಯದಂತೆ, ಈ ಬೃಹತ್ ಕಾರ್ಯಕ್ರಮಕ್ಕೆ ರಾಜ್ಯದ ಸಾಂವಿಧಾನಿಕ ಗಣ್ಯರು ಮತ್ತು ಪ್ರಮುಖ ವ್ಯಕ್ತಿಗಳ ಗಣತಿಯ ಮೂಲಕ ಚಾಲನೆ ನೀಡಲಾಗುತ್ತದೆ. ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ ಹಾಗೂ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಾಗಿರುವ ಗಣ್ಯ ವ್ಯಕ್ತಿಗಳು ಈ ವಿಶೇಷ ಪೋರ್ಟಲ್ ಬಳಸಿ ತಮ್ಮ ಮಾಹಿತಿ ದಾಖಲಿಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಲಿದ್ದಾರೆ. ಗಣ್ಯ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯು ಈ ಡಿಜಿಟಲ್ ಅಭಿಯಾನಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ. ಇದು ಜನಗಣತಿ ಪ್ರಕ್ರಿಯೆಯ ಸುಲಭತೆ ಮತ್ತು ಭದ್ರತೆಯ ಬಗ್ಗೆ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ಮೂಡಿಸಲಿದೆ ಎಂದು ಪ್ರಧಾನ ಜನಗಣತಿ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಹಂತದಲ್ಲಿ ಗಣತಿ

ಕೇಂದ್ರ ಗೃಹ ಮಂತ್ರಾಲಯವು 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿಯನ್ನು ಏ 1, ರಿಂದ ಏ. 15 ರವರೆಗೆ 15 ದಿನಗಳ ಕಾಲ ವೆಬ್ ಪೋರ್ಟಲ್ https://se.census.gov.in ಮೂಲಕ ಸ್ವಯಂ-ಗಣತಿಗೆ ಅವಕಾಶ ಕಲ್ಪಿಸಿರುತ್ತದೆ. ಅದರಂತೆ, ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15-20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್‌ ಅಥವಾ ಇಮೇಲ್‌ನಲ್ಲಿ ಸ್ವಯಂ-ಗಣತಿ ಐಡಿಯನ್ನು ಪಡೆಯಬಹುದಾಗಿರುತ್ತದೆ.

ಎರಡನೇ ಹಂತದಲ್ಲಿ ಏ. 16 ರಿಂದ ಮೇ. 15 ರವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮನೆಪಟ್ಟಿ ಮತ್ತು ಮನೆ ಗಣತಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಿಸಲು ಮತ್ತು ಸ್ವಯಂ ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗಾಗಿ ಸ್ವಯಂ ಗಣತಿ ಐಡಿಯನ್ನು ಗಣತಿದಾರರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ.

ಜಾಗೃತಿ ಮತ್ತು ಪ್ರಚಾರ

ದೂರದರ್ಶನ, ಆಕಾಶವಾಣಿ, ಪ್ರಾದೇಶಿಕ ಚಾನೆಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಗಣ್ಯರ ಗಣತಿ ಪ್ರಕ್ರಿಯೆಯನ್ನು ಪ್ರಸಾರ ಮಾಡಲಾಗುವುದು. ಇದು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಹಕಾರಿಯಾಗಲಿದೆ. ಎಲ್ಲಾ ಜನಗಣತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಗಣ್ಯ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು, ಸಮನ್ವಯದೊಂದಿಗೆ ಈ ಕಾರ್ಯವನ್ನು ಯಶಸ್ವಿಗೊಳಿಸಲು ಸೂಚಿಸಲಾಗಿದೆ.

ಸಾರ್ವಜನಿಕರಲ್ಲಿ ಮನವಿ

ನಗರದ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳ ರೂಪಿಸುವಲ್ಲಿ ಜನಗಣತಿಯು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಬೆಂಗಳೂರು ದಕ್ಷಿಣದ ಪ್ರತಿಯೊಬ್ಬ ನಾಗರಿಕರು ಈ ರಾಷ್ಟ್ರೀಯ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.

"ಡಿಜಿಟಲ್ ಜನಗಣತಿಯು ಕೇವಲ ಅಂಕಿ-ಅಂಶಗಳ ಸಂಗ್ರಹವಲ್ಲ, ಇದು ನಮ್ಮ ನಗರದ ಭವಿಷ್ಯದ ಅಭಿವೃದ್ಧಿಗೆ ಬರೆಯುವ ಮುನ್ನುಡಿ. ನಾಗರಿಕರು ಸ್ವಯಂ-ಗಣತಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಆಶಿಸುತ್ತೇವೆ." ನಾಲ್ಕು ಪಾಲಿಕೆಗಳ ಎಂದು ಪ್ರಧಾನ ಜನಗಣತಿ ಅಧಿಕಾರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story