
ಅಜೀಂ ಪ್ರೇಮ್ ಜಿ ವಿವಿ ಮೇಲೆ ದಾಳಿ ನಡೆಸಿದವರ ವಿರುದ್ಧ ಸೂಕ್ತ ಕ್ರಮ- ಸಿಎಂ
ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರು ವಿವಿ ಆವರಣಕ್ಕೆ ನುಗ್ಗಿ ಆಸ್ತಿಪಾಸ್ತಿ ಹಾನಿ ಮಾಡಿದ್ದರು.
ಆನೇಕಲ್ ಸಮೀಪದ ಸರ್ಜಾಪುರ ರಸ್ತೆಯಲ್ಲಿರುವ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಸಂಘಟನೆಗಳು ಕಾನೂನು ವಿರುದ್ಧವಾಗಿ ನಡೆದುಕೊಂಡಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸರ್ಜಾಪುರ ರಸ್ತೆಯಲ್ಲಿರುವ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಮೇಲೆ ಸೋಮವಾರ ಎಬಿವಿಪಿ ಕಾರ್ಯಕರ್ತರು ದಾಳಿ ನಡೆಸಿದ್ದರು. ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರು ವಿವಿ ಆವರಣಕ್ಕೆ ನುಗ್ಗಿ ಆಸ್ತಿಪಾಸ್ತಿ ಹಾನಿ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ 21 ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ವಿವಾದದ ಹಿನ್ನೆಲೆ ಏನು?
ವಿಶ್ವವಿದ್ಯಾಲಯದಲ್ಲಿ 'ಸ್ಪಾರ್ಕ್' ಎಂಬ ಸಂಘಟನೆಯು 1991ರ ಕಾಶ್ಮೀರದ 'ಕುನಾನ್ ಪೋಷ್ಪೋರಾ' ಘಟನೆಯ ಕುರಿತು ಚರ್ಚಾ ಕಾರ್ಯಕ್ರಮ ಆಯೋಜಿಸಿತ್ತು ಎಂಬುದು ಎಬಿವಿಪಿ ಆರೋಪ. ಈ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಲಾಗುತ್ತಿದೆ. ದೇಶವಿರೋಧಿ ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಪ್ರತಿಭಟನೆಯ ವೇಳೆ ಎಬಿವಿಪಿ ಕಾರ್ಯಕರ್ತರು ವಿಶ್ವವಿದ್ಯಾಲಯದ ನಾಮಫಲಕಕ್ಕೆ ಕಪ್ಪು ಶಾಯಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಿ ಆವರಣದೊಳಗೆ ನುಗ್ಗಲು ಮುಂದಾದಾಗ ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಿವಿ ಆಡಳಿತ ಮಂಡಳಿ ದೂರಿದೆ. ಘಟನೆಯ ಮಾಹಿತಿ ಪಡೆದ ಸರ್ಜಾಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಹಲವರನ್ನು ವಶಕ್ಕೆ ಪಡೆದಿದ್ದರು.
"ಯಾವುದೇ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡರೆ ಅಥವಾ ಶಾಂತಿ ಭಂಗ ತಂದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಎಚ್ಚರಿಕೆ ನೀಡಿದ್ದಾರೆ.
ವಿಶ್ವವಿದ್ಯಾಲಯದ ಸ್ಪಷ್ಟನೆ
ಎಬಿವಿಪಿ ಮಾಡಿರುವ ಎಲ್ಲಾ ಆರೋಪಗಳನ್ನು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ನಿರಾಕರಿಸಿದೆ. ನಮ್ಮ ಕ್ಯಾಂಪಸ್ ನಲ್ಲಿ ಅಂತಹ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ, ದೇಶ ವಿರೋಧಿ ಚಟುವಟಿಕೆಯ ಕಾರ್ಯಕ್ರಮವೂ ನಡೆದಿರಲಿಲ್ಲ. ಹೊರಗಿನಿಂದ ಬಂದ 20ಕ್ಕೂ ಹೆಚ್ಚು ಜನರ ಗುಂಪು ಅನಧಿಕೃತವಾಗಿ ಕ್ಯಾಂಪಸ್ ಪ್ರವೇಶಿಸಿ, ವಿದ್ಯಾರ್ಥಿಗಳಲ್ಲಿ ಆತಂಕ . ನಮ್ಮ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ," ಎಂದು ಆರೋಪಿಸಿದೆ.
ಈ ಮಧ್ಯೆ, ಸ್ಪಾರ್ಕ್ ಸಂಘಟನೆಯನ್ನು ನಿಷೇಧಿಸಬೇಕು. ವಿವಿಯ ಮಾನ್ಯತೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ.

