
ರಾಯ್ ಸಿ.ಜೆ ಹಾಗೂ ಮೋಹನ್ ದಾಸ್ ಪೈ
ರಾಯ್ ಸಿ.ಜೆ. ಆತ್ಮಹತ್ಯೆ| ʼತೆರಿಗೆ ಭಯೋತ್ಪಾದನೆʼ ಎಂದು ಟೀಕಿಸಿದ ಮೋಹನ್ ದಾಸ್ ಪೈ
ತೆರಿಗೆ ಇಲಾಖೆ ಅಧಿಕಾರಿಗಳ ತೆರಿಗೆ ಭಯೋತ್ಪಾದನೆಗೆ ಕಡಿವಾಣ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಗ್ರಹಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಯ್ ಸಿ.ಜೆ. ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ರಾಜಕೀಯ ಮತ್ತು ಉದ್ಯಮ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರಕರಣ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿರುವ ಬೆನ್ನಲ್ಲೇ ಉದ್ಯಮಿ ಮೋಹನ್ ದಾಸ್ ಪೈ ಅವರು ಐಟಿ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರಿಗೆ ಇಲಾಖೆ ಅಧಿಕಾರಿಗಳ ತೆರಿಗೆ ಭಯೋತ್ಪಾದನೆಗೆ ಕಡಿವಾಣ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತೆರಿಗೆ ಭಯೋತ್ಪಾದನೆಯಿಂದ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಅವರನ್ನು ಕಳೆದುಕೊಂಡಿದ್ದೇವೆ. ತೆರಿಗೆ ಅಧಿಕಾರಿಗಳಿಂದ ಹಲವರು ಭಯಭೀತರಾಗಿದ್ದಾರೆ. ಅಧಿಕಾರಿಗಳ ಈ ದಾಳಿಯು ನಾಗರಿಕ ಹಕ್ಕುಗಳ ಮೇಲಿನ ದಾಳಿಯಂತಿದೆ. ತೆರಿಗೆ ಪಾವತಿದಾರರನ್ನು ಈ ರೀತಿ ಬೆದರಿಸುವುದು ನಾಗರಿಕ ಹಕ್ಕುಗಳ ಉಲ್ಲಂಘಟನೆಯಾಗಿದೆ ಎಂದು ಆರೋಪಿಸಿದ್ದಾರೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ರಾಯ್ ಸಿ.ಜೆ. ಅವರು ಶನಿವಾರ (ಜ.31) ತಮ್ಮ ಕಚೇರಿಯಲ್ಲಿ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದರು. ಕಳೆದ ಕೆಲವು ತಿಂಗಳಿಂದ ಐಟಿ ಅಧಿಕಾರಿಗಳು ರಾಯ್ ಅವರ ಕಂಪೆನಿ ಹಾಗೂ ನಿವಾಸಗಳ ಮೇಲೆ ನಿರಂತರ ದಾಳಿ ನಡೆಸಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದರು. ಹಾಗಾಗಿಯೇ, ರಾಯ್ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಆಪ್ತ ಮೂಲಗಳು ದೂರಿದ್ದವು.
ಮೋಹನ್ ದಾಸ್ ಪೈ “ಟ್ವೀಟ್”
ರಾಯ್ ಸಿ.ಕೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿರುವ ಇನ್ಫೋಸಿಸ್ ಮಾಜಿ ಸಿಎಫ್ಒ ಹಾಗೂ ಐಟಿ ಉದ್ಯಮಿ ಮೋಹನ್ ದಾಸ್ ಪೈ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟ್ವೀಟ್ ಮಾಡಿ ತೆರಿಗೆ ಭಯೋತ್ಪಾದನೆ ಕುರಿತು ಪ್ರಶ್ನಿಸಿದ್ದಾರೆ.
ತೆರಿಗೆ ಭಯೋತ್ಪಾದನೆಯಿಂದ ಈಗಾಗಲೇ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರನ್ನು ಕಳೆದುಕೊಂಡಿದ್ದೇವೆ. ಈಗ ರಾಯ್ ಸರದಿ. ತೆರಿಗೆ ಅಧಿಕಾರಿಗಳ ವರ್ತನೆಯಿಂದ ಉದ್ಯಮಿಗಳು ಭಯಭೀತರಾಗಿದ್ದಾರೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರಕ್ರಿಯೆಗಳು ಕ್ರೂರವಾಗಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕಾರಿಗಳಿಗೆ ಮಿತಿಮೀರಿದ ಅಧಿಕಾರ ನೀಡಿದ್ದಾರೆ. ಇದರಿಂದ ನಾಗರಿಕರು ಮತ್ತು ತೆರಿಗೆದಾರರ ಹಕ್ಕುಗಳ ರಕ್ಷಣೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳು ನಡೆಸುವ ತಪ್ಪು ದಾಳಿಗಳಿಂದ ಉದ್ಯಮಿಗಳ ಬದುಕು ನಾಶವಾದರೆ, ಅಂತಹ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಿದೆಯೇ?, ಕಳೆದ 3 ವರ್ಷಗಳಲ್ಲಿ ಸಂಗ್ರಹವಾದ 72 ಲಕ್ಷ ಕೋಟಿ ರೂ. ನೇರ ತೆರಿಗೆಯಲ್ಲಿ ಇಂತಹ ದಾಳಿಗಳ ಪಾಲು ಎಷ್ಟಿದೆ ಎಂದು ಅಂಕಿ-ಅಂಶಗಳ ಸಮೇತ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

