Rain hits book lovers favorite Bookworm; thousands of books worth 14 lakhs submerged in water!
x

ಬುಕ್‌ವರ್ಮ್ ಪುಸ್ತಕ ಮಳಿಗೆಗೆ ನುಗ್ಗಿರುವ ನೀರು

ಪುಸ್ತಕ ಪ್ರೇಮಿಗಳ 'ಬುಕ್‌ವರ್ಮ್'ಗೆ ಮಳೆ ಏಟು; 14 ಲಕ್ಷ ಮೌಲ್ಯದ ಸಾವಿರಾರು ಪುಸ್ತಕಗಳು ನೀರುಪಾಲು !

"ಬೇಸಿಗೆ ರಜೆಯ ಸಂದರ್ಭದಲ್ಲಿ ಪುಸ್ತಕ ಪ್ರೇಮಿಗಳ ಮತ್ತು ಮಕ್ಕಳ ಭೇಟಿ ಹೆಚ್ಚಿರುತ್ತದೆ. ಹೀಗಾಗಿ ನಾವು ಹೆಚ್ಚಿನ ದಾಸ್ತಾನು ತರಿಸಿಕೊಂಡಿದ್ದೆವು. ಆದರೆ ಎಲ್ಲವೂ ನೀರುಪಾಲಾಗಿದೆ" ಎಂದು ಮಾಲೀಕ ಕೃಷ್ಣಗೌಡ ಬೇಸರ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಅಬ್ಬರಿಸಿದ ಆಲಿಕಲ್ಲು ಮಳೆಗೆ ಚರ್ಚ್‌ಸ್ಟ್ರೀಟ್‌ನ ಜನಪ್ರಿಯ ಪುಸ್ತಕ ಮಳಿಗೆ 'ಬುಕ್‌ವರ್ಮ್' (Bookworm) ಮೇಲೆ ಗಂಭೀರ ಪರಿಣಾಮ ಬೀರಿದೆ. ಮಳೆ ನೀರು ಮಳಿಗೆಗೆ ನುಗ್ಗಿದ ಪರಿಣಾಮ ಸುಮಾರು 5,000ಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳು ನೀರಿನಲ್ಲಿ ನೆನೆದು ನಾಶವಾಗಿದ್ದು, ಅಂದಾಜು 14 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.

ಕೃಷ್ಣಗೌಡ ಮಾಲೀಕತ್ವದ ಈ ಮಳಿಗೆಯು ರಸ್ತೆಗಿಂತ ಸ್ವಲ್ಪ ತಗ್ಗು ಪ್ರದೇಶದಲ್ಲಿದೆ. ಸಾಮಾನ್ಯವಾಗಿ ಮಳೆ ಬಂದಾಗ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ, ಗುರುವಾರ (ಏ.30) ಸುರಿದ ಭಾರೀ ಆಲಿಕಲ್ಲು ಮಳೆಯಿಂದಾಗಿ ಚರಂಡಿಗಳು ಬ್ಲಾಕ್ ಆಗಿದ್ದು, ರಸ್ತೆಯ ನೀರೆಲ್ಲಾ ನೇರವಾಗಿ ಮಳಿಗೆಯ ಒಳಕ್ಕೆ ನುಗ್ಗಿದೆ. ಮಳಿಗೆಯ ಸಿಬ್ಬಂದಿ ನೀರನ್ನು ತಡೆಯಲು ಮತ್ತು ಪುಸ್ತಕಗಳನ್ನು ಎತ್ತಿಡಲು ಹರಸಾಹಸ ಪಟ್ಟರಾದರೂ, ನೀರಿನ ರಭಸಕ್ಕೆ ಸಾವಿರಾರು ಪುಸ್ತಕಗಳು ನೀರುಪಾಲಾಗಿವೆ.

ನಾಶವಾದ ಪ್ರಮುಖ ಕೃತಿಗಳು

ಹಾನಿಗೊಳಗಾದ ಪುಸ್ತಕಗಳಲ್ಲಿ ವಿಶ್ವಪ್ರಸಿದ್ಧ ಕೃತಿಗಳೂ ಸೇರಿವೆ. ಮುಖ್ಯವಾಗಿ, ವಾಲ್ಟರ್ ಐಸಾಕ್ಸನ್‌ ಬರೆದ ‘ಇಲಾನ್ ಮಸ್ಕ್’ ಜೀವನಚರಿತ್ರೆ, ‘ಆಸ್ಟೆರಿಕ್ಸ್ ಅಂಡ್ ಒಬೆಲಿಕ್ಸ್’ ಕಾಮಿಕ್ಸ್ ಸರಣಿ, ಜೀತ್ ಥಾಯಿಲ್ ಸಂಕಲನದ ‘ಪೆಂಗ್ವಿನ್ ಬುಕ್ ಆಫ್ ಇಂಡಿಯನ್ ಪೊಯೆಟ್ಸ್’, ರೂಪಾ ಪೈ ಅವರ ‘ಕಬ್ಬನ್ ಪಾರ್ಕ್: ದ ಗ್ರೀನ್ ಹಾರ್ಟ್ ಆಫ್ ಬೆಂಗಳೂರು’, ರಿಕ್ ರಿಯೋರ್ಡನ್ ಅವರ ‘ಪರ್ಸಿ ಜಾಕ್ಸನ್ ಅಂಡ್ ಒಲಿಂಪಿಯನ್ಸ್’. ಸೇರಿದಂತೆ ಹಲವು ಪುಸ್ತಕಗಳು ಸೇರಿವೆ.

ಬೇಸಿಗೆ ರಜೆಯ ಸಿದ್ಧತೆಗೆ ಬಿದ್ದ ದೊಡ್ಡ ಏಟು

"ಬೇಸಿಗೆ ರಜೆಯ ಸಂದರ್ಭದಲ್ಲಿ ಪುಸ್ತಕ ಪ್ರೇಮಿಗಳ ಮತ್ತು ಮಕ್ಕಳ ಭೇಟಿ ಹೆಚ್ಚಿರುತ್ತದೆ. ಹೀಗಾಗಿ ನಾವು ಹೆಚ್ಚಿನ ದಾಸ್ತಾನು ತರಿಸಿಕೊಂಡಿದ್ದೆವು. ಆದರೆ ಈಗ ಎಲ್ಲವೂ ನೀರುಪಾಲಾಗಿದೆ" ಎಂದು ಮಾಲೀಕ ಕೃಷ್ಣಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಗುಣಮಟ್ಟದ ಕಾಗದದ ಕೊರತೆ ಮತ್ತು ಆಯಿಲ್ ಪೇಪರ್ ಬಳಕೆಯಿಂದಾಗಿ ನೀರಿನಲ್ಲಿ ನೆನೆದ ಕಾಮಿಕ್ಸ್ ಪುಸ್ತಕಗಳನ್ನು ಮರಳಿ ಪಡೆಯುವುದು ಅಸಾಧ್ಯ ಎಂದು ಮೂಲಗಳು ತಿಳಿಸಿವೆ.

ಪುಸ್ತಕ ಪ್ರೇಮಿಗಳಿಗೆ ರಿಯಾಯಿತಿ ಮಾರಾಟದ ಆಶಯ

ಸದ್ಯ ಶೇ. 30 ರಷ್ಟು ಪುಸ್ತಕಗಳನ್ನು ಬಿಸಿಲಿನಲ್ಲಿ ಒಣಗಿಸಿ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ನೀರಿನಿಂದ ಸ್ವಲ್ಪ ಮಟ್ಟಿಗೆ ಹಾನಿಗೊಳಗಾದ ಈ ಪುಸ್ತಕಗಳನ್ನು ಮುಂದಿನ ದಿನಗಳಲ್ಲಿ ಪುಸ್ತಕ ಪ್ರೇಮಿಗಳಿಗೆ ಕಡಿಮೆ ಬೆಲೆಗೆ (Discounted Price) ಮಾರಾಟ ಮಾಡುವ ಸಾಧ್ಯತೆಯಿದೆ. ನಗರದ ಸಾಂಸ್ಕೃತಿಕ ಹೆಗ್ಗುರುತಿನಂತಿದ್ದ ಪುಸ್ತಕ ಮಳಿಗೆಗೆ ಸಂಭವಿಸಿದ ಈ ನಷ್ಟಕ್ಕೆ ಬೆಂಗಳೂರಿನ ಪುಸ್ತಕ ಓದುಗರು ಸಾಮಾಜಿಕ ಜಾಲತಾಣಗಳಲ್ಲಿ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

Read More
Next Story