ಜನಗಣತಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಸಿದ್ಧ; 4,678 ಗಣತಿದಾರ ನೇಮಕ
x

ಸಾಂದರ್ಭಿಕ ಚಿತ್ರ

ಜನಗಣತಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಸಿದ್ಧ; 4,678 ಗಣತಿದಾರ ನೇಮಕ

ಜನಗಣತಿಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಸರಳ. ಮನೆಯ ಒಬ್ಬ ಸದಸ್ಯ ಅಥವಾ ಮುಖ್ಯಸ್ಥರು ಇಡೀ ಕುಟುಂಬದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬಹುದು. ಪ್ರತಿ ಕುಟುಂಬದ ಮಾಹಿತಿ ದಾಖಲಿಸಲು ಸುಮಾರು 15 ರಿಂದ 20 ನಿಮಿಷ ಅಗತ್ಯವಾಗಬಹುದು.


Click the Play button to hear this message in audio format

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂಬರುವ 'ರಾಷ್ಟ್ರೀಯ ಜನಗಣತಿ-2027'ರ ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯಕ್ಕಾಗಿ ಬಿರುಸಿನ ಸಿದ್ಧತೆ ನಡೆಯುತ್ತಿದೆ. ಈ ಬೃಹತ್ ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡುವ ಪ್ರಕ್ರಿಯೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಸೋಮವಾರ (ಏ.6) ಬೆಂಗಳೂರಿನ ಗಾರ್ವೆಬಾವಿ ಪಾಳ್ಯದಲ್ಲಿರುವ ಆಕ್ಸ್‌ಫರ್ಡ್ ಎಂಜಿನಿಯರಿಂಗ್‌ ಕೇಂದ್ರದಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರಕ್ಕೆ ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಏ. 6 ರಿಂದ 8 ರವರೆಗೆ ಒಟ್ಟು 16 ಕೇಂದ್ರಗಳಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಜನಗಣತಿ ಕಾರ್ಯವು ಏ.16 ರಿಂದ ಮೇ 15 ರವರೆಗೆ ನಡೆಯಲಿದೆ. ಈ ಸಮೀಕ್ಷೆಗಾಗಿ ಒಟ್ಟು 4,678 ಗಣತಿದಾರರು ಹಾಗೂ 798 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ, ಮನೆ ಪಟ್ಟಿ ಸಿದ್ಧತೆಗಾಗಿ 9 ಸಾವಿರ ರೂ. ಮತ್ತು ಜನಗಣತಿ ಕಾರ್ಯಕ್ಕಾಗಿ 16 ಸಾವಿರ ರೂ. ಸೇರಿ ಒಟ್ಟು 25 ಸಾವಿರ ರೂ. ಗೌರವಧನ ನೀಡಲಾಗುತ್ತದೆ. ತರಬೇತಿಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಪ್ರತೀ ದಿನಕ್ಕೆ 400 ರೂ. ಭತ್ಯೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸ್ವಯಂ ಗಣತಿಗೆ ಆಕ್ಸ್‌ಫರ್ಡ್ ಕಾಲೇಜು ಸಾಥ್

ಜನಗಣತಿ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಹೆಚ್ಚಿಸಲು ವಿಶೇಷ ಒತ್ತು ನೀಡಿದ್ದು, ಆಕ್ಸ್‌ಫರ್ಡ್ ಎಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥರನ್ನು ಭೇಟಿ ಮಾಡಿ, ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಏ. 15ರ ಒಳಗಾಗಿ 'ಸ್ವಯಂ ಗಣತಿ' (Self-Enumeration) ಕಾರ್ಯದಲ್ಲಿ ಭಾಗವಹಿಸುವಂತೆ ಕೋರಿದರು. ಇದಕ್ಕೆ ಕಾಲೇಜು ಆಡಳಿತ ಮಂಡಳಿಯಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು, ಎಲ್ಲರೂ ಈ ರಾಷ್ಟ್ರೀಯ ಕಾರ್ಯದಲ್ಲಿ ಕೈಜೋಡಿಸಲಾಗುವುದು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

ಸ್ವಯಂ ಗಣತಿ ಮಾಡುವುದು ಹೇಗೆ?

ಜನಗಣತಿಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಸರಳ. ಮನೆಯ ಒಬ್ಬ ಸದಸ್ಯ ಅಥವಾ ಮುಖ್ಯಸ್ಥರು ಇಡೀ ಕುಟುಂಬದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬಹುದು. ಪ್ರತಿ ಕುಟುಂಬದ ಮಾಹಿತಿ ದಾಖಲಿಸಲು ಸುಮಾರು 15 ರಿಂದ 20 ನಿಮಿಷ ಅಗತ್ಯವಾಗಬಹುದು. ಮಾಹಿತಿ ಸಲ್ಲಿಸಿದ ಬಳಿಕ ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ವಿಶಿಷ್ಟ ಸ್ವಯಂ ಗಣತಿಯ ಐಡಿ (ID) ಬರಲಿದೆ.

ಎರಡನೇ ಹಂತದಲ್ಲಿ ಮನೆ ಮನೆಗೆ ಬರುವ ಗಣತಿದಾರರು ಕುಟುಂಬದ ಸದಸ್ಯರಿಗೆ ನೀಡಿರುವ ಐಡಿ ಪರಿಶೀಲಿಸಿದ ನಂತರ ಮಾಹಿತಿ ದೃಢೀಕರಿಸಲಿದ್ದಾರೆ. ಸ್ವಯಂ ಗಣತಿ ಮಾಡುವುದರಿಂದ ಗಣತಿದಾರರು ಮನೆಗೆ ಬಂದಾಗ ದೀರ್ಘಕಾಲ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇರುವುದಿಲ್ಲ. ಇದರಿಂದ ತ್ವರಿತವಾಗಿ ಗಣತಿ ಮುಗಿಸಬಹುದು ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ. ಡಿಜಿಟಲ್ ಕ್ರಾಂತಿಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾದ ನಿಖರ ಅಂಕಿಅಂಶ ನೀಡಲು ಸಹಕರಿಸಬೇಕು ಎಂದು ರಾಜ್ಯ ಸರ್ಕಾರವೂ ಮನವಿ ಮಾಡಿದೆ.

33 ಪ್ರಶ್ನೆಗಳ ಪಟ್ಟಿ ಬಿಡುಗಡೆ

ಜನಗಣತಿ ಪ್ರಕ್ರಿಯೆಯ ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವು ಗಣತಿದಾರರಿಗೆ ಮನೆಪಟ್ಟಿ ಮತ್ತು ವಸತಿಯ ವಿವರ ನೀಡಲಿದೆ. ಅದಕ್ಕೂ ಮುನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ದಾಖಲಿಸಲು 33 ಪ್ರಮುಖ ಪ್ರಶ್ನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರಶ್ನೆಗಳು ಕಟ್ಟಡ ಸಂಖ್ಯೆ, ಮನೆ ಸಂಖ್ಯೆ, ಮನೆಯ ನೆಲ ಮತ್ತು ಛಾವಣಿಗೆ ಬಳಸಿದ ವಸ್ತುಗಳ ವಿವರ, ಕುಡಿಯುವ ನೀರಿನ ಮೂಲ, ಲಭ್ಯತೆ, ವಿದ್ಯುತ್ ಮೂಲ ಹಾಗೂ ಶೌಚಾಲಯದ ಸೌಲಭ್ಯದ ಕುರಿತು ಇರಲಿವೆ. ಇದಲ್ಲದೇ ಕುಟುಂಬದ ಸದಸ್ಯರ ಸಂಖ್ಯೆ, ಯಜಮಾನನ ಹೆಸರು, ಲಿಂಗ ಮತ್ತು ಎಸ್‌ಸಿ/ಎಸ್‌ಟಿ ಅಥವಾ ಇತರ ವರ್ಗಕ್ಕೆ ಸೇರಿದ ಮಾಹಿತಿ, ಮನೆ ಮಾಲೀಕತ್ವ, ಲಭ್ಯವಿರುವ ಕೊಠಡಿಗಳು, ದ್ವಿಚಕ್ರ ವಾಹನ, ಕಾರು, ಜೀಪ್, ವ್ಯಾನ್ ಇದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳೂ ಇರಲಿವೆ.

ಇಂಟರ್ನೆಟ್ ಸೌಲಭ್ಯ, ಲ್ಯಾಪ್‌ಟಾಪ್‌, ಕಂಪ್ಯೂಟರ್, ಟೆಲಿಫೋನ್, ಸ್ಮಾರ್ಟ್‌ಫೋನ್‌ ವಿವರಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಇರಲಿವೆ. ಜತೆಗೆ ಅಡುಗೆ ಅನಿಲ ಸಂಪರ್ಕ, ಬಳಸುವ ಮುಖ್ಯ ಧಾನ್ಯ ಮತ್ತು ಜನಗಣತಿ ಸಂಬಂಧಿತ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ಒದಗಿಸಬೇಕಿದೆ.

ಸ್ಮಾರ್ಟ್‌ಫೋನ್‌ ಬಳಕೆಗಾರರಿಗೆ ಸುಲಭ

ಜನಗಣತಿಯಲ್ಲಿ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಟುಂಬಗಳು ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ ಬಳಸುತ್ತಿವೆಯೇ ಎಂಬ ಬಗ್ಗೆ ವಿಶೇಷವಾಗಿ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ಇದು ಸರ್ಕಾರದ ಡಿಜಿಟಲ್ ಸೇವೆಗಳನ್ನು ಜನರಿಗೆ ತಲುಪಿಸಲು ಸಹಕಾರಿಯಾಗಲಿದೆ.

Read More
Next Story