ರೇವ್ ಪಾರ್ಟಿ ಶೈಲಿಯ ಪೂಲ್ ಪಾರ್ಟಿ ಮೇಲೆ ಸಿಸಿಬಿ ದಾಳಿ; ಹುಕ್ಕಾ ಜಪ್ತಿ, ಮೂವರ ಬಂಧನ
x

ರೇವ್ ಪಾರ್ಟಿ ಶೈಲಿಯ ಪೂಲ್ ಪಾರ್ಟಿ ಮೇಲೆ ಸಿಸಿಬಿ ದಾಳಿ; ಹುಕ್ಕಾ ಜಪ್ತಿ, ಮೂವರ ಬಂಧನ

ಮದ್ಯ, ಹುಕ್ಕಾ ಹಾಗೂ ಮಾರಕ ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಬಳಕೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು, 50ಕ್ಕೂ ಹೆಚ್ಚು ಯುವಕ-ಯುವತಿಯರ ರಕ್ತದ ಮಾದರಿ ಸಂಗ್ರಹಿಸಲಾಗಿದೆ.


Click the Play button to hear this message in audio format

ಸಿಲಿಕಾನ್ ಸಿಟಿಯ ಐಷಾರಾಮಿ ವಿಲ್ಲಾವೊಂದರಲ್ಲಿ ದೀಪಾವಳಿ ಹಬ್ಬದ ಸೋಗಿನಲ್ಲಿ ಅಕ್ರಮವಾಗಿ ಆಯೋಜಿಸಲಾಗಿದ್ದ ಹೈ-ಪ್ರೊಫೈಲ್ ಪೂಲ್ ಪಾರ್ಟಿ ಮೇಲೆ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ದಾಳಿ ನಡೆಸಿದ್ದಾರೆ. ಪಾರ್ಟಿಯಲ್ಲಿ ಎಗ್ಗಿಲ್ಲದೆ ಮದ್ಯ, ಹುಕ್ಕಾ ಹಾಗೂ ಮಾರಕ ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಬಳಕೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು, ಪಾರ್ಟಿಯ ಮೂವರು ಪ್ರಮುಖ ಆಯೋಜಕರನ್ನು ಬಂಧಿಸಿದ್ದಾರೆ. ಅಲ್ಲದೆ, ಪಾರ್ಟಿಯಲ್ಲಿ ಭಾಗಿಯಾಗಿದ್ದ 50ಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆದು ರಕ್ತದ ಮಾದರಿ ಸಂಗ್ರಹಿಸಲಾಗಿದೆ.

ಬಂಧಿತರನ್ನು ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆ ಹಾಗೂ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಮಾರತ್‌ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಯಮಲೂರು-ಕರಿಯಮ್ಮನ ಅಗ್ರಹಾರ ಮುಖ್ಯರಸ್ತೆಯಲ್ಲಿರುವ ಖಾಸಗಿ ವಿಲ್ಲಾವೊಂದರಲ್ಲಿ ದೀಪಾವಳಿ ಪ್ರಯುಕ್ತ ಭರ್ಜರಿ ಪೂಲ್ ಪಾರ್ಟಿ ಆಯೋಜಿಸಲಾಗಿತ್ತು. ಯಾವುದೇ ಅಧಿಕೃತ ಅನುಮತಿ ಇಲ್ಲದೆ, ಜನವಸತಿ ಪ್ರದೇಶದ ವಿಲ್ಲಾದಲ್ಲಿ ನಿಯಮಬಾಹಿರವಾಗಿ ಪಾರ್ಟಿ ನಡೆಯುತ್ತಿರುವ ಬಗ್ಗೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಖಚಿತ ಮಾಹಿತಿ ಲಭಿಸಿತ್ತು.

ಮಾಹಿತಿ ಬೆನ್ನತ್ತಿದ ಸಿಸಿಬಿ ವಿಶೇಷ ತಂಡವು ಮಧ್ಯರಾತ್ರಿ ವಿಲ್ಲಾ ಮೇಲೆ ಏಕಾಏಕಿ ದಾಳಿ ನಡೆಸಿತು. ಆ ವೇಳೆ ವಿಲ್ಲಾದ ಆವರಣ ಹಾಗೂ ಸ್ವಿಮ್ಮಿಂಗ್ ಪೂಲ್ ಬಳಿ ಡಿಜೆ ಸಂಗೀತದ ಅಬ್ಬರದಲ್ಲಿ ಯುವಕ-ಯುವತಿಯರು ಮೋಜು-ಮಸ್ತಿಯಲ್ಲಿ ಮುಳುಗಿದ್ದರು. ಪೊಲೀಸರು ಸ್ಥಳವನ್ನು ಸುತ್ತುವರಿದು ಪರಿಶೀಲನೆ ನಡೆಸಿದಾಗ, ಭಾರಿ ಪ್ರಮಾಣದ ಮದ್ಯದ ಬಾಟಲಿಗಳು, ವಿದೇಶಿ ಬ್ರ್ಯಾಂಡ್‌ನ ಹುಕ್ಕಾ ಪಾಟ್‌ಗಳು ಹಾಗೂ ಪಾರ್ಟಿ ಡ್ರಗ್ ಎಂದೇ ಕುಖ್ಯಾತಿ ಪಡೆದಿರುವ ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ. ಇವೆಲ್ಲವನ್ನೂ ಪೊಲೀಸರು ಸ್ಥಳದಲ್ಲೇ ಜಪ್ತಿ ಮಾಡಿದ್ದಾರೆ.

ಆ್ಯಪ್ ಮೂಲಕ ಯುವಜನರಿಗೆ ಗಾಳ; ಮಾದಕ ವಿಡಿಯೋಗಳ ಅಸ್ತ್ರ..!

ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿದಾಗ, ಈ ಅಕ್ರಮ ಪಾರ್ಟಿ ಆಯೋಜನೆಯ ಹಿಂದಿನ ಆಘಾತಕಾರಿ ತಂತ್ರಗಳು ಬಯಲಿಗೆ ಬಂದಿವೆ. ಆಯೋಜಕರು ಸಾರ್ವಜನಿಕವಾಗಿ ಯಾವುದೇ ಬ್ಯಾನರ್ ಹಾಕದೆ, ಪ್ರತ್ಯೇಕ ಪಾರ್ಟಿ ಆ್ಯಪ್‌ಗಳು ಹಾಗೂ ಸೋಶಿಯಲ್ ಮೀಡಿಯಾ ಕ್ಲೋಸ್ಡ್ ಗ್ರೂಪ್‌ಗಳ ಮೂಲಕವೇ ಗ್ರಾಹಕರನ್ನು ಸೆಳೆಯುತ್ತಿದ್ದರು. ಪಾರ್ಟಿಗೆ ಹೆಚ್ಚು ಹೆಚ್ಚು ಯುವಕರನ್ನು ಆಕರ್ಷಿಸಲು ಯುವತಿಯರ ಅರೆಬೆತ್ತಲೆ, ಮಾದಕ ಫೋಟೋ ಮತ್ತು ಪ್ರಚೋದನಕಾರಿ ಪ್ರಚಾರದ ವಿಡಿಯೋಗಳನ್ನು ಆ್ಯಪ್‌ಗಳಲ್ಲಿ ಪೋಸ್ಟ್ ಮಾಡಿ ಗಾಳ ಹಾಕುತ್ತಿದ್ದರು. ಪ್ರವೇಶ ಶುಲ್ಕವನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿತ್ತು. ಒಬ್ಬ ಪುರುಷನಿಗೆ 1,710 ರೂ., ಒಬ್ಬ ಯುವತಿಗೆ 1,080 ರೂ., ಜೋಡಿಗಳಿಗೆ 2,400 ರೂ., ಈ ಪ್ರವೇಶ ಶುಲ್ಕವು ಕೇವಲ ವಿಲ್ಲಾ ಪ್ರವೇಶಕ್ಕೆ ಮಾತ್ರ ಸೀಮಿತವಾಗಿತ್ತು. ವಿಲ್ಲಾದ ಒಳಗೆ ಪೂರೈಕೆಯಾಗುತ್ತಿದ್ದ ವಿದೇಶಿ ಮದ್ಯ, ಹುಕ್ಕಾ ಫ್ಲೇವರ್‌ಗಳು ಹಾಗೂ ಮಾದಕ ವಸ್ತುಗಳಿಗೆ ಪ್ರತ್ಯೇಕವಾಗಿ ದುಬಾರಿ ಮೊತ್ತವನ್ನು ವಸೂಲಿ ಮಾಡಲಾಗುತ್ತಿತ್ತು. ಪಾರ್ಟಿಯು ರಾತ್ರಿ ಆರಂಭವಾಗಿ ಬೆಳಗಿನ ಜಾವದವರೆಗೆ ಎಗ್ಗಿಲ್ಲದೆ ನಡೆಯುವಂತೆ ಯೋಜನೆ ರೂಪಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

50 ಮಂದಿಯ ರಕ್ತ ಪರೀಕ್ಷೆ; ದೃಢಪಟ್ಟರೆ ಕಠಿಣ ಕ್ರಮ

ದಾಳಿಯ ವೇಳೆ ಪಾರ್ಟಿಯಲ್ಲಿದ್ದ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ 50ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲೇ ಎಲ್ಲರ ಪ್ರಾಥಮಿಕ ವಿವರಗಳನ್ನು ದಾಖಲಿಸಿಕೊಂಡ ಪೊಲೀಸರು, ಅವರೆಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. "ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಪಾರ್ಟಿಯಲ್ಲಿದ್ದ ಯಾರಾದರೂ ಎಂಡಿಎಂಎ ಅಥವಾ ಇತರ ಯಾವುದೇ ಮಾದಕ ವಸ್ತುಗಳನ್ನು ಸೇವಿಸಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಸಾಬೀತಾದರೆ, ಅಂತಹವರ ವಿರುದ್ಧವೂ ಎನ್‌ಡಿಪಿಎಸ್ ಕಾಯ್ದೆಯಡಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಇಲಾಖೆಯ ತೀವ್ರ ನಿಗಾ

ಹಬ್ಬ-ಹರಿದಿನಗಳು ಹಾಗೂ ವಾರಾಂತ್ಯದ ದಿನಗಳಲ್ಲಿ ನಗರದ ಹೊರವಲಯದ ರೆಸಾರ್ಟ್‌ಗಳು, ಫಾರ್ಮ್‌ಹೌಸ್‌ಗಳು ಮತ್ತು ಖಾಸಗಿ ವಿಲ್ಲಾಗಳನ್ನು ಬಾಡಿಗೆಗೆ ಪಡೆದು ಇಂತಹ ರಹಸ್ಯ ರೇವ್ ಪಾರ್ಟಿಗಳನ್ನು ಆಯೋಜಿಸುವ ಜಾಲಗಳು ಸಕ್ರಿಯವಾಗಿವೆ. ಬೆಂಗಳೂರು ನಗರದಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಯಾವುದೇ ಆಸ್ಪದವಿಲ್ಲ. ವಿಲ್ಲಾ ಅಥವಾ ಮನೆ ಮಾಲೀಕರು ತಮ್ಮ ಆಸ್ತಿಯನ್ನು ಬಾಡಿಗೆಗೆ ನೀಡುವ ಮುನ್ನ ಎಚ್ಚರ ವಹಿಸಬೇಕು. ಅಕ್ರಮ ಚಟುವಟಿಕೆಗಳಿಗೆ ಜಾಗ ನೀಡಿದರೆ ಮಾಲೀಕರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಎಚ್ಚರಿಕೆ ನೀಡಿದೆ. ಪ್ರಸ್ತುತ ಬಂಧಿತ ಮೂವರು ಆರೋಪಿಗಳಿಗೆ ಡ್ರಗ್ಸ್ ಸರಬರಾಜು ಮಾಡಿದ ಕಿಂಗ್‌ಪಿನ್‌ಗಳ ಪತ್ತೆಗಾಗಿ ತನಿಖೆ ತೀವ್ರಗೊಂಡಿದೆ.

Read More
Next Story