ಸುಮಂಗಲಿ ಸೇವಾಶ್ರಮದ ಡಾ. ಸುಶೀಲಮ್ಮ ಶ್ರಮಕ್ಕೆ ಸಚಿವ ಬೈರತಿ ಸುರೇಶ್ ಮೆಚ್ಚುಗೆ
x

ಸುಮಂಗಲಿ ಸೇವಾಶ್ರಮದ ಡಾ. ಸುಶೀಲಮ್ಮ ಶ್ರಮಕ್ಕೆ ಸಚಿವ ಬೈರತಿ ಸುರೇಶ್ ಮೆಚ್ಚುಗೆ

ಅನಾಥ, ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳ ಪಾಲಿಗೆ ಆಶಾಕಿರಣವಾಗಿರುವ ಸುಮಂಗಲಿ ಸೇವಾಶ್ರಮ, ಸಮಾಜಸೇವೆಯಲ್ಲಿ ಹೊಸ ಆಯಾಮ ಸೃಷ್ಟಿಸಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಶ್ಲಾಘಿಸಿದ್ದಾರೆ.


Click the Play button to hear this message in audio format

ಅನಾಥ ಮತ್ತು ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳ ಪಾಲಿಗೆ ಆಶಾಕಿರಣವಾಗಿರುವ ಹೆಬ್ಬಾಳದ ಸುಮಂಗಲಿ ಸೇವಾಶ್ರಮ, ಸಮಾಜಸೇವೆಯಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಶ್ಲಾಘಿಸಿದ್ದಾರೆ.

ಆಶ್ರಮದ ಆವರಣದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯ ಸೇವಾ ಕಾರ್ಯಗಳನ್ನು ಮುಕ್ತಕಂಠದಿಂದ ಕೊಂಡಾಡಿದರು. ಇದೇ ವೇಳೆ ಆಶ್ರಮದ ಸಲಹೆಗಾರರಾದ ಎನ್. ಶ್ರೀದೇವಿ ಅವರು ರಚಿಸಿರುವ ವಿಸ್ಪರ್ಸ್ ಆಫ್ ವಿಸ್ಡಮ್ ಮತ್ತು ಟಾಯ್ಸ್ & ಗೇಮ್ಸ್ ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸುತ್ತೂರು ಮಠದ ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಸಚಿವೆ ರಾಣಿ ಸತೀಶ್, ಡಾ. ಸಿ. ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಬಳಿಕ ಮಾತನಾಡಿ, ಪದ್ಮಶ್ರೀ ಡಾ. ಎಸ್.ಜಿ. ಸುಶೀಲಮ್ಮ ಅವರ ನೇತೃತ್ವದಲ್ಲಿ ಆಶ್ರಮವು ಮಾಡುತ್ತಿರುವ ಕೆಲಸ ಅದ್ಭುತ. ಕೇವಲ ಆಶ್ರಯ ನೀಡುವುದಲ್ಲದೆ, ಸಾವಿರಾರು ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಪರಿವರ್ತಿಸಿ, ಸಮಾಜದಲ್ಲಿ ತಲೆ ಎತ್ತಿ ಬದುಕುವಂತೆ ಮಾಡಿದೆ ಎಂದರು. ಸುಶೀಲಮ್ಮ ಅವರನ್ನು ಹೆಬ್ಬಾಳ ಕ್ಷೇತ್ರದ ಮಹಾತಾಯಿಯೆಂದು ಬಣ್ಣಿಸಿದ ಸಚಿವರು, ಆಶ್ರಮದ ಬೆಳವಣಿಗೆಗೆ ಅಗತ್ಯವಿರುವ ಸಂಪೂರ್ಣ ಸಹಕಾರವನ್ನು ಸರ್ಕಾರ ಮತ್ತು ವೈಯಕ್ತಿಕವಾಗಿ ಶಾಸಕನಾಗಿ ನೀಡುವುದಾಗಿ ಭರವಸೆ ನೀಡಿದರು. ದಿನದಿಂದ ದಿನಕ್ಕೆ ಆಶ್ರಮದಲ್ಲಿ ಆಶ್ರಯ ಪಡೆಯುವವರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ವಿಸ್ತರಿಸಲು ಬದ್ಧರಾಗಿರುವುದಾಗಿ ಪುನರುಚ್ಚರಿಸಿದರು. ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ-ನುಡಿ ಮತ್ತು ಸರಳತೆಯನ್ನು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ವಿಶೇಷವಾಗಿ ಕೊಂಡಾಡಿದರು. ರಾಜ್ಯಪಾಲರ ವ್ಯಕ್ತಿತ್ವದ ಬಗ್ಗೆ ಸಚಿವರು ವ್ಯಕ್ತಪಡಿಸಿದ ಮಾತುಗಳು ಅಲ್ಲಿನ ನೆರೆದಿದ್ದವರ ಗಮನ ಸೆಳೆದವು.

ಹಿರಿಯ ಮುತ್ಸದ್ಧಿ ಗೆಹ್ಲೋಟ್

ರಾಜ್ಯಪಾಲರ ಕುರಿತು ಮಾತನಾಡಿದ ಬೈರತಿ ಸುರೇಶ್, "ಗೆಹ್ಲೋಟ್ ಅವರು ಕೇವಲ ಸಾಂವಿಧಾನಿಕ ಮುಖ್ಯಸ್ಥರಲ್ಲ, ಅವರೊಬ್ಬ ಹಿರಿಯ ಮುತ್ಸದ್ಧಿ. ರಾಜಭವನಕ್ಕೆ ಹೋಗುವ ಯಾವುದೇ ಪಕ್ಷದ ಮುಖಂಡರಾಗಲಿ, ಅವರಲ್ಲಿ ಪಕ್ಷಭೇದ ಮರೆತು ಎಲ್ಲರನ್ನೂ ಒಂದೇ ದೃಷ್ಟಿಕೋನದಿಂದ ಕಾಣುವ ವಿಶಾಲ ಹೃದಯವಿದೆ. ಅವರ ಆತಿಥ್ಯ ಸ್ವೀಕರಿಸುವುದೇ ಒಂದು ರೀತಿಯ ಧನ್ಯತೆಯ ಭಾವ ನೀಡುತ್ತದೆ" ಎಂದು ಬಣ್ಣಿಸಿದರು. ರಾಜ್ಯಕ್ಕೆ ಆಗಮಿಸಿದ್ದ ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳ ಮುಂದೆ ತಮ್ಮನ್ನು ಪರಿಚಯಿಸಿದ ರೀತಿಗೆ ಸಚಿವರು ಭಾವುಕರಾದರು. "ನಮ್ಮನ್ನು ರಾಷ್ಟ್ರಮಟ್ಟದ ನಾಯಕರ ಮುಂದೆ 'ಇವರು ನಮ್ಮ ಹುಡುಗ, ಮಂತ್ರಿಯಾಗಿದ್ದಾರೆ' ಎಂದು ಪ್ರೀತಿಯಿಂದ ಪರಿಚಯಿಸುವ ಮೂಲಕ, ಅವರು ತಮ್ಮಲ್ಲಿರುವ ಹಿರಿಯತನ ಮತ್ತು ಮುತ್ಸದ್ಧಿತನವನ್ನು ಪ್ರದರ್ಶಿಸಿದ್ದಾರೆ. ಇದು ಅವರ ಸೌಜನ್ಯಕ್ಕೆ ಸಾಕ್ಷಿ" ಎಂದು ಸುರೇಶ್ ಹೇಳಿದರು.

ಅತ್ಯಂತ ಅಪರೂಪದ ವ್ಯಕ್ತಿತ್ವ

"ಗೆಹ್ಲೋಟ್ ಅವರು ನಮ್ಮ ರಾಜ್ಯಕ್ಕೆ ಬಂದು 5 ವರ್ಷಗಳು ಕಳೆದಿದ್ದು, ಅವರಂತಹ ಸ್ನೇಹಮಯಿ ರಾಜ್ಯಪಾಲರು ಅತ್ಯಂತ ವಿರಳ. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ, ಇಂತಹ ಮಹಾನ್ ಚೇತನ ಇನ್ನೂ 10 ವರ್ಷಗಳ ಕಾಲ ಕರ್ನಾಟಕದ ಸೇವೆಯನ್ನು ಮಾಡಬೇಕು. ರಾಜ್ಯದ ಬೆಳವಣಿಗೆಯಲ್ಲಿ ಅವರಂತಹ ಮಾರ್ಗದರ್ಶಕರ ಅವಶ್ಯಕತೆ ತುಂಬಾ ಇದೆ," ಎಂದು ಬೈರತಿ ಸುರೇಶ್ ಅವರು ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಸುಮಂಗಲಿ ಸೇವಾಶ್ರಮವು ನಿಸ್ವಾರ್ಥ ಸೇವೆಯ ಮೂಲಕ ನೈಜ ಬದಲಾವಣೆ ತರುತ್ತಿದ್ದರೆ, ಇತ್ತೀಚಿನ ರಾಜಕೀಯ ವಾತಾವರಣದಲ್ಲಿ ಪಕ್ಷಭೇದ ಮರೆತು ಹಿರಿಯರನ್ನು ಗೌರವಿಸುವ ಸಚಿವರ ಈ ವರ್ತನೆ, ರಾಜ್ಯದ ರಾಜಕೀಯ ಸಂಸ್ಕೃತಿಯಲ್ಲಿನ ಸೌಹಾರ್ದತೆಯನ್ನು ಎತ್ತಿ ಹಿಡಿಯಿತು.

Read More
Next Story