
ಮೆಟ್ರೋ ನಿಲ್ದಾಣಗಳ ಬಳಿ ಪಾರ್ಕಿಂಗ್ ಸಮಸ್ಯೆ ನಿವಾರಿಸುವ ಮೂಲಕ ಹೆಚ್ಚಿನ ಜನರನ್ನು ಮೆಟ್ರೋ ಸೇವೆಯತ್ತ ಸೆಳೆಯುವುದು ಬಿಎಂಆರ್‌ಸಿಎಲ್‌ನ ಪ್ರಮುಖ ಉದ್ದೇಶವಾಗಿದೆ.
ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: 12 ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ
ನಲ್ಲೂರುಹಳ್ಳಿ ನಿಲ್ದಾಣದಲ್ಲಿ 82 ಬೈಕ್‌ಗಳು, ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಲ್ಲಿ 186 ಬೈಕ್‌ಗಳು, ಹೊಸಹಳ್ಳಿ ನಿಲ್ದಾಣದಲ್ಲಿ 156 ಬೈಕ್‌ಗಳು ಮತ್ತು ಪಟ್ಟಣಗೆರೆ ನಿಲ್ದಾಣದಲ್ಲಿ 328 ಬೈಕ್‌ಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಹೊಸ ಕ್ರಮಕ್ಕೆ ಮುಂದಾಗಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಪಾರ್ಕಿಂಗ್ ಸೌಲಭ್ಯ ಕೊರತೆಯಿಂದಾಗಿ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ಮೆಟ್ರೋ ಬಳಕೆಗೆ ಸೆಳೆಯಲು 12 ನಿಲ್ದಾಣಗಳಲ್ಲಿ ಹೊಸದಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ನಿಲ್ದಾಣಗಳ ಜತೆಗೆ ಮುಂಬರುವ ಗುಲಾಬಿ ಮಾರ್ಗಕ್ಕೆ ಸೇರಿದ ನಿಲ್ದಾಣಗಳಲ್ಲೂ ಪಾರ್ಕಿಂಗ್ ಸೌಲಭ್ಯ ಒದಗಿಸಲು ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಿದೆ. ಬೈಕ್, ಕಾರು ಹಾಗೂ ಜೀಪ್‌ಗಳಿಗೆ ಶುಲ್ಕ ವಿಧಿಸಲಾಗುತ್ತಿದ್ದು, ಸೈಕಲ್‌ಗಳಿಗೆ ಉಚಿತವಾಗಿ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ.
ಈ 12 ಮೆಟ್ರೋ ನಿಲ್ದಾಣಗಳಲ್ಲಿ ಸೌಲಭ್ಯ
ನಲ್ಲೂರುಹಳ್ಳಿ ನಿಲ್ದಾಣದಲ್ಲಿ 82 ಬೈಕ್‌ಗಳು, ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಲ್ಲಿ 186 ಬೈಕ್‌ಗಳು, ಹೊಸಹಳ್ಳಿ ನಿಲ್ದಾಣದಲ್ಲಿ 156 ಬೈಕ್‌ಗಳು ಮತ್ತು ಪಟ್ಟಣಗೆರೆ ನಿಲ್ದಾಣದಲ್ಲಿ 328 ಬೈಕ್‌ಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಮಾದಾವರದಲ್ಲಿ 328 ಬೈಕ್‌ಗಳು, ಚಿಕ್ಕಬಿದರಕಲ್ಲಿನಲ್ಲಿ 355 ಬೈಕ್‌ಗಳು, ಮಂತ್ರಿ ಸ್ಕ್ವೇರ್‌ನಲ್ಲಿ 450 ಬೈಕ್ ಹಾಗೂ 87 ಕಾರುಗಳು, ರಾಗಿಗುಡ್ಡದಲ್ಲಿ 230 ಬೈಕ್‌ಗಳು, ಬಿಟಿಎಂ ಲೇಔಟ್‌ನಲ್ಲಿ 216 ಬೈಕ್‌ಗಳು ಮತ್ತು ತಾವರೆಕೆರೆಯಲ್ಲಿ 155 ಬೈಕ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
ಐಐಎಂ-ಬಿ ಮೆಟ್ರೋ ನಿಲ್ದಾಣದಲ್ಲಿ 55 ಬೈಕ್‌ಗಳು, ಹುಳಿಮಾವು ನಿಲ್ದಾಣದಲ್ಲಿ 155 ಬೈಕ್‌ಗಳು ಹಾಗೂ ಕಾಳೇನ ಅಗ್ರಹಾರ ನಿಲ್ದಾಣದಲ್ಲಿ 110 ಬೈಕ್‌ಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟಾರೆ ಈ 12 ನಿಲ್ದಾಣಗಳಲ್ಲಿ ಕನಿಷ್ಠ 2,424 ದ್ವಿಚಕ್ರ ವಾಹನಗಳು ಹಾಗೂ 87 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ.
ಬೈಕ್, ಕಾರು ಪಾರ್ಕಿಂಗ್‌ಗೆ ನಿಗದಿತ ಶುಲ್ಕ
ಹೊಸ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬೈಕ್‌ಗಳಿಗೆ ಮೊದಲ ನಾಲ್ಕು ಗಂಟೆಗಳವರೆಗೆ 15 ರೂ. ಶುಲ್ಕ ವಿಧಿಸಲಾಗುತ್ತದೆ. ನಾಲ್ಕು ಗಂಟೆಗಳ ನಂತರ ಪ್ರತಿ ಹೆಚ್ಚುವರಿ ಗಂಟೆಗೆ 5 ರೂ. ಪಾವತಿಸಬೇಕು. ಒಂದು ದಿನದ ಗರಿಷ್ಠ ಪಾರ್ಕಿಂಗ್ ಶುಲ್ಕ 30 ರೂ. ಇರಲಿದೆ. ಕಾರು ಮತ್ತು ಜೀಪ್‌ಗಳಿಗೆ ಮೊದಲ ನಾಲ್ಕು ಗಂಟೆಗಳಿಗೆ 30 ರೂ. ಶುಲ್ಕ ನಿಗದಿಪಡಿಸಲಾಗಿದೆ. ನಂತರ ಪ್ರತಿ ಗಂಟೆಗೆ 10 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ದಿನವಿಡೀ ವಾಹನ ನಿಲ್ಲಿಸುವವರಿಗೆ 60 ರೂ. ಶುಲ್ಕ ಇರಲಿದೆ.
ಮೆಟ್ರೋ ಬಳಕೆ ಹೆಚ್ಚಿಸುವ ಉದ್ದೇಶ
ಮೆಟ್ರೋ ನಿಲ್ದಾಣಗಳಿಗೆ ಸ್ವಂತ ವಾಹನಗಳಲ್ಲಿ ಬರುವ ಪ್ರಯಾಣಿಕರಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವ ಮೂಲಕ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವುದು ಬಿಎಂಆರ್‌ಸಿಎಲ್‌ನ ಉದ್ದೇಶವಾಗಿದೆ. ನಿಲ್ದಾಣದ ಬಳಿ ವಾಹನ ನಿಲ್ಲಿಸಲು ಸ್ಥಳವಿಲ್ಲದ ಕಾರಣ ಮೆಟ್ರೋ ಬದಲಿಗೆ ಖಾಸಗಿ ವಾಹನ ಬಳಸುತ್ತಿದ್ದವರಿಗೆ ಈ ವ್ಯವಸ್ಥೆಯಿಂದ ಅನುಕೂಲವಾಗುವ ನಿರೀಕ್ಷೆಯಿದೆ.
