ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಾಳೆ 8ನೇ ರೈಲು ಸಂಚಾರ : ಕಾಯುವಿಕೆ ಸಮಯ ಕಡಿತ
x

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಾಳೆ 8ನೇ ರೈಲು ಸಂಚಾರ : ಕಾಯುವಿಕೆ ಸಮಯ ಕಡಿತ

ಹೊಸ ರೈಲಿನ ಸೇರ್ಪಡೆಯೊಂದಿಗೆ ವಾರದ ದಿನಗಳಲ್ಲಿ ಪೀಕ್ ಅವರ್‌ ವೇಳೆ ಈ ಹಿಂದಿನ10 ನಿಮಿಷಗಳ ಬದಲಾಗಿ ಪ್ರತಿ 9 ನಿಮಿಷಕ್ಕೆ ಸಂಚರಿಸಲಿದೆ.


Click the Play button to hear this message in audio format

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಗರದ ದಕ್ಷಿಣ ಭಾಗದ ಪ್ರಯಾಣಿಕರಿಗೆ, ವಿಶೇಷವಾಗಿ ಐಟಿ-ಬಿಟಿ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದೆ. ಬಹುನಿರೀಕ್ಷಿತ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ (ಆರ್.ವಿ. ರಸ್ತೆ - ಬೊಮ್ಮಸಂದ್ರ) ಫೆಬ್ರವರಿ 27ರಿಂದ ಎಂಟನೇ ರೈಲು ತನ್ನ ಕಾರ್ಯಾಚರಣೆ ಆರಂಭಿಸಲಿದೆ. ಈ ಹೊಸ ಸೇರ್ಪಡೆಯಿಂದಾಗಿ ನಿಲ್ದಾಣಗಳಲ್ಲಿ ರೈಲಿಗಾಗಿ ಕಾಯುವ ಸಮಯ ಗಣನೀಯವಾಗಿ ತಗ್ಗಲಿದ್ದು, ನಿತ್ಯದ ಪ್ರಯಾಣಿಕರಿಗೆ ಟ್ರಾಫಿಕ್ ದಟ್ಟಣೆಯಿಂದ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.


ಹೊಸ ರೈಲಿನ ಸೇರ್ಪಡೆಯೊಂದಿಗೆ ವಾರದ ದಿನಗಳಲ್ಲಿ ರೈಲುಗಳ ಸಂಚಾರದ ಆವರ್ತನದಲ್ಲಿ (ಫ್ರೀಕ್ವೆನ್ಸಿ) ಬದಲಾವಣೆಯಾಗಲಿದೆ. ಜನದಟ್ಟಣೆಯಿರುವ ಪೀಕ್ ಅವರ್‌ಗಳಲ್ಲಿ (ದಟ್ಟಣೆ ಸಮಯ) ಈ ಹಿಂದೆ ನಿಲ್ದಾಣಗಳಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ರೈಲು ಸಂಚರಿಸುತ್ತಿತ್ತು. ಇದೀಗ ಈ ಕಾಯುವಿಕೆಯ ಸಮಯವನ್ನು 9 ನಿಮಿಷಗಳಿಗೆ ಇಳಿಕೆ ಮಾಡಲಾಗಿದೆ. ಅದೇ ರೀತಿ, ಜನದಟ್ಟಣೆ ಇಲ್ಲದ ನಾನ್-ಪೀಕ್ ಅವರ್‌ಗಳಲ್ಲಿ ರೈಲುಗಳ ನಡುವಿನ ಅಂತರವನ್ನು 18 ನಿಮಿಷಗಳಿಂದ 14 ನಿಮಿಷಗಳಿಗೆ ಕಡಿತಗೊಳಿಸಲಾಗಿದೆ. ಆದರೆ, ಭಾನುವಾರದ ರೈಲುಗಳ ಕಾರ್ಯಾಚರಣೆಯ ವೇಳಾಪಟ್ಟಿ ಹಾಗೂ ಕೊನೆಯ ನಿಲ್ದಾಣಗಳಿಂದ ಹೊರಡುವ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಅವು ಎಂದಿನಂತೆಯೇ ಮುಂದುವರಿಯಲಿವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಐಟಿ ಕಾರಿಡಾರ್‌ಗೆ ಜೀವನಾಡಿಯಾದ ಮಾರ್ಗ

ಒಟ್ಟು 19.15 ಕಿಲೋಮೀಟರ್ ಉದ್ದದ ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಈ ಕಾರಿಡಾರ್, ನಗರದ ದಕ್ಷಿಣ ಭಾಗದ ಉಪನಗರಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. 2017ರಲ್ಲಿ ಕಾರ್ಯಾಚರಣೆ ಆರಂಭಿಸಿ, 2023ರಲ್ಲಿ ವಿಸ್ತರಣೆಗೊಂಡ ಈ ಮಾರ್ಗವು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಪ್ರಮುಖ ಐಟಿ ಹಬ್‌ಗಳಿಗೆ ತೆರಳುವ ಟೆಕ್ ಉದ್ಯೋಗಿಗಳಿಗೆ ನೆರವಾಗುತ್ತಿದೆ. ಸದ್ಯ ನಮ್ಮ ಮೆಟ್ರೋದ ದೈನಂದಿನ ಒಟ್ಟು ಪ್ರಯಾಣಿಕರ ಸಂಖ್ಯೆ ಬರೋಬ್ಬರಿ ಏಳು ಲಕ್ಷದ ಗಡಿ ದಾಟಿದ್ದು, ಹಳದಿ ಮಾರ್ಗದಲ್ಲಿ ಹೊಸ ರೈಲಿನ ಅಳವಡಿಕೆಯಿಂದಾಗಿ ಈ ಭಾಗದ ರಸ್ತೆ ಸಂಚಾರ ದಟ್ಟಣೆ ಮತ್ತಷ್ಟು ಕಡಿಮೆಯಾಗುವ ವಿಶ್ವಾಸವನ್ನು ಮೆಟ್ರೋ ನಿಗಮ ವ್ಯಕ್ತಪಡಿಸಿದೆ.

ತಡರಾತ್ರಿ ಸಂಚಾರ ಹೆಚ್ಚಳಕ್ಕೆ ಆಗ್ರಹ

ಬಿಎಂಆರ್‌ಸಿಎಲ್‌ನ ಈ ಹೊಸ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದರೂ, ಕೆಲವು ಪ್ರಯಾಣಿಕರು ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದಾರೆ. ವಿಶೇಷವಾಗಿ ತಡರಾತ್ರಿ ಪ್ರಯಾಣಿಸುವವರು ಮೆಟ್ರೋ ಸೇವೆಗಳ ಆವರ್ತನವನ್ನು ಸುಧಾರಿಸುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ತಡರಾತ್ರಿಯ ವೇಳೆಯಲ್ಲಿ ರೈಲಿಗಾಗಿ ಕನಿಷ್ಠ 20 ನಿಮಿಷಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ನಿಗಮವು ಕೇವಲ ಪೀಕ್ ಅವರ್‌ಗಳ ಬಗ್ಗೆ ಮಾತ್ರ ಗಮನಹರಿಸಿದರೆ ಸಾಲದು, ಬದಲಾಗಿ ಜನದಟ್ಟಣೆ ಕಡಿಮೆ ಇರುವ ತಡರಾತ್ರಿ ಸಮಯದಲ್ಲೂ ರೈಲುಗಳ ಕಾಯುವಿಕೆಯ ಸಮಯವನ್ನು ಕಡಿಮೆ ಮಾಡಬೇಕು ಎಂಬುದು ಆಫ್-ಪೀಕ್ ಪ್ರಯಾಣಿಕರ ಪ್ರಮುಖ ಬೇಡಿಕೆಯಾಗಿದೆ.

Read More
Next Story