ಹೈಕೋರ್ಟ್ ಅನುಮತಿ ಸಿಕ್ಕರೂ ಬೈಕ್‌ ಟ್ಯಾಕ್ಸಿ ಚಾಲಕರು, ಸವಾರರಿಗೆ ತಪ್ಪದ ಕಿರುಕುಳ
x

ಕೇವಲ ಚಾಲಕರಲ್ಲದೆ, ಬೈಕ್ ಟ್ಯಾಕ್ಸಿ ಬಳಸುವ ಪ್ರಯಾಣಿಕರನ್ನು ಸಹ ಅಡ್ಡಗಟ್ಟಿ, ರೈಡ್ ಕ್ಯಾನ್ಸಲ್ ಮಾಡುವಂತೆ ಒತ್ತಾಯಿಸಿ ದರ್ಪ ತೋರಲಾಗುತ್ತಿದೆ.

ಹೈಕೋರ್ಟ್ ಅನುಮತಿ ಸಿಕ್ಕರೂ ಬೈಕ್‌ ಟ್ಯಾಕ್ಸಿ ಚಾಲಕರು, ಸವಾರರಿಗೆ ತಪ್ಪದ ಕಿರುಕುಳ

ಹೈಕೋರ್ಟ್ ತೀರ್ಪಿನ ನಂತರ ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರಿಂದ ಬೈಕ್ ಟ್ಯಾಕ್ಸಿ ಸವಾರರ ಮೇಲೆ ದೈಹಿಕ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುವ ಪ್ರಕರಣಗಳು ಹೆಚ್ಚಾಗಿವೆ.


Click the Play button to hear this message in audio format

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿ ಜನವರಿ 23ರಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪು ಅಗ್ರಿಗೇಟರ್ ಕಂಪನಿಗಳು ಹಾಗೂ ಪ್ರಯಾಣಿಕರಿಗೆ ನೆಮ್ಮದಿ ತಂದಿದ್ದರೂ, ರಸ್ತೆಯಲ್ಲಿ ಮಾತ್ರ ಬೈಕ್ ಟ್ಯಾಕ್ಸಿ ಚಾಲಕರ ಪರಿಸ್ಥಿತಿ ಗಂಭೀರವಾಗಿದೆ. ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರಿಂದ ನಿರಂತರವಾಗಿ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳ ನಡೆಯುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ದಾಳಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಬೈಕ್ ಟ್ಯಾಕ್ಸಿ ಚಾಲಕ ಬಾಲಾಜಿ ವೆಂಕಟ್ (58) ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದು, "ಬೈಕ್ ಟ್ಯಾಕ್ಸಿ ನಿಷೇಧ ರದ್ದಾದ ಮೇಲೆ ಆಟೋ ಚಾಲಕರ ಪ್ರತಿರೋಧ ಮತ್ತಷ್ಟು ಹೆಚ್ಚಾಗಿದೆ. ಅವರು ಕೇವಲ ನಿಂದಿಸುವುದಷ್ಟೇ ಅಲ್ಲದೆ, ಕಾನೂನಿನ ಭಯವಿಲ್ಲದೆ ದೈಹಿಕವಾಗಿ ದಾಳಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಗುಂಪಾಗಿ ಬಂದ ಆಟೋ ಚಾಲಕರು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ 112ಗೆ ಕರೆ ಮಾಡಿ ಪೊಲೀಸರ ಸಹಾಯ ಪಡೆಯಬೇಕಾಯಿತು" ಎಂದು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಪ್ರಯಾಣಿಕರ ಮೇಲೂ ದರ್ಪ

ಮತ್ತೊಂದು ಘಟನೆಯಲ್ಲಿ ರೆಸಿಡೆನ್ಸಿ ರಸ್ತೆ ಬಳಿ ಬೈಕ್ ಟ್ಯಾಕ್ಸಿ ಹತ್ತಲು ಬಂದ ಪ್ರಯಾಣಿಕನನ್ನು ಕ್ಯಾಬ್ ಚಾಲಕನೊಬ್ಬ ಬೆದರಿಸಿ, ರೈಡ್ ಕ್ಯಾನ್ಸಲ್ ಮಾಡುವಂತೆ ಒತ್ತಾಯಿಸಿದ್ದಾನೆ. ಚಾಲಕ ಹಾಗೂ ಪ್ರಯಾಣಿಕ ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವ ಎಚ್ಚರಿಕೆ ನೀಡಿದ ಬಳಿಕವಷ್ಟೇ ಆತ ಅಲ್ಲಿಂದ ತೆರಳಿದ್ದಾನೆ ಎಂದು ಸಂತ್ರಸ್ತ ಸವಾರ ತಿಳಿಸಿದ್ದಾರೆ.

ಮಜೆಸ್ಟಿಕ್‌ನಲ್ಲಿ ವ್ಯವಸ್ಥಿತ ಕಿರುಕುಳ?

ವಿಶೇಷವಾಗಿ ಮೆಜೆಸ್ಟಿಕ್ ಪ್ರದೇಶದಲ್ಲಿ ಆಟೋ ಚಾಲಕರ ಗುಂಪೊಂದು ಬೈಕ್ ಟ್ಯಾಕ್ಸಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು 'ನಮ್ಮ ಬೈಕ್ ಟ್ಯಾಕ್ಸಿ ಅಸೋಸಿಯೇಷನ್' ಅಧ್ಯಕ್ಷ ಮೊಹಮ್ಮದ್ ಸಲೀಂ ಆರೋಪಿಸಿದ್ದಾರೆ. ಆಟೋ ಚಾಲಕರು ತಾವೇ ಬೈಕ್ ಟ್ಯಾಕ್ಸಿ ಬುಕ್ ಮಾಡಿ, ಸವಾರ ಸ್ಥಳಕ್ಕೆ ಬರುತ್ತಿದ್ದಂತೆ ಗುಂಪುಗೂಡಿ ಹಲ್ಲೆ ಮಾಡುತ್ತಿದ್ದಾರೆ. ಕಳೆದ ಒಂದು ವಾರದಲ್ಲೇ 30ಕ್ಕೂ ಹೆಚ್ಚು ದೂರುಗಳು ಬಂದಿವೆ. ಜೊತೆಗೆ ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಪ್ರಯಾಣಿಕರನ್ನು ಹೆದರಿಸುವ ಕೆಲಸವೂ ನಡೆಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಮತ್ತೊಂದೆಡೆ, ಆಟೋ ಮತ್ತು ಖಾಸಗಿ ಸಾರಿಗೆ ಒಕ್ಕೂಟಗಳು ಹೈಕೋರ್ಟ್ ತೀರ್ಪನ್ನು ವಿರೋಧಿಸುತ್ತಿವೆ. ಸರ್ಕಾರ ತಕ್ಷಣವೇ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸದಿದ್ದರೆ ಫೆಬ್ರವರಿ 23ರ ಬಳಿಕ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿವೆ.

ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡಿದ್ದ ಕೋರ್ಟ್

ಬೈಕ್ ಟ್ಯಾಕ್ಸಿಗೆ ಅನುಮತಿ ನಿರಾಕರಿಸಿದ್ದ ರಾಜ್ಯ ಸರ್ಕಾರ ಹಾಗೂ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿತ್ತು. ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ನ್ಯಾಯಾಲಯ ಈ ಆದೇಶ ನೀಡಿದೆ. ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಆಟೋ ಸಂಘಟನೆಗಳು ಪ್ರತ್ಯೇಕವಾಗಿ ಮನವಿ ಸಲ್ಲಿಸಲು ನಿರ್ಧರಿಸಿವೆ.

ರಾಜ್ಯ ಸರ್ಕಾರದ ಗಮನ ಸೆಳೆಯಲು ಆಟೊ ಚಾಲಕರು ಸಾರಿಗೆ ಇಲಾಖೆಯ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವುದಕ್ಕೂ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು 2025 ನ. 26ರಂದು ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಮತ್ತು ಕಾನೂನು ಬಾಹಿರ ಎಂದು ವರದಿ ನೀಡಿತ್ತು. ಇದರ ವಿರುದ್ಧ ಓಲಾ, ಉಬರ್ ಸೇರಿ ಹಲವು ಕಂಪನಿಗಳು ಕೋರ್ಟ್ ಮೊರೆ ಹೋಗಿದ್ದವು.

Read More
Next Story