
ಬೆಂಗಳೂರು ಪಶ್ಚಿಮ ಪಾಲಿಕೆ ಬಜೆಟ್|ಗೊರಗುಂಟೆಪಾಳ್ಯ ರಸ್ತೆ ವಿಸ್ತರಣೆಗೆ ಪ್ಲಾನ್
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 'ಪೇ ಅಂಡ್ ಪಾರ್ಕ್' ಮತ್ತು ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ ಜಾರಿಯಾಗಲಿದೆ. ಟೋಯಿಂಗ್‌ಗಾಗಿ 10 ಹೊಸ ಯಂತ್ರಗಳ ಖರೀದಿಗೂ ಅನುಮೋದನೆ ನೀಡಲಾಗಿದೆ.
ಬೆಂಗಳೂರಿನಿಂದ 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ವಾಹನ ದಟ್ಟಣೆಯಿಂದ ಹೆಣಗುತ್ತಿರುವ ಗೊರಗುಂಟೆಪಾಳ್ಯದ ರಸ್ತೆಗೆ ಕಾಯಕಲ್ಪ ಒದಗಿಸಲು ತೀರ್ಮಾನಿಸಲಾಗಿದೆ. ಟ್ರಾನ್ಸಿಟ್ ಓರಿಯೆಂಟೆಡ್ ಡೆವಲಪ್‌ಮೆಂಟ್ ಆಧಾರಿತವಾಗಿ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್ ಅಭಿವೃದ್ಧಿಪಡಿಸಲು 2 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಶನಿವಾರ ಮಂಡನೆ ಮಾಡಲಾದ ಒಟ್ಟು 4732.72 ಕೋಟಿ ರೂ. ಗಾತ್ರದ ಬೆಂಗಳೂರು ಪಶ್ಚಿಮ ಪಾಲಿಕೆಯ ಬಜೆಟ್‌ನಲ್ಲಿ ಈ ಅನುದಾನ ತೆಗೆದಿರಿಸಲಾಗಿದೆ. ಬೆಂಗಳೂರಿನಿಂದ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜಿಲ್ಲೆಗಳಿಗೆ ತೆರಳಲು ಗೊರಗುಂಟೆಪಾಳ್ಯ ಜಂಕ್ಷನ್ ಮೂಲಕವೇ ಸಾಗಬೇಕು. ಈ ಜಂಕ್ಷನ್‌ನಲ್ಲಿ ಪ್ರತಿನಿತ್ಯ ವಾಹನ ಸಂಚಾರ ದಟ್ಟಣೆ ದೊಡ್ಡ ತಲೆನೋವಾಗಿತ್ತು.
ವಾರಾಂತ್ಯದಲ್ಲಂತೂ ಗಂಟೆಗಟ್ಟಲೆ ದಟ್ಟಣೆಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದನ್ನು ಮನಗಂಡ ಪಶ್ಚಿಮ ಪಾಲಿಕೆ ಇದೀಗ ಅಲ್ಪಾವಧಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಸಂಚಾರ ದಟ್ಟಣೆ ಸುಧಾರಣೆಗೆ ಮುಂದಾಗಿದೆ.
ಬಜೆಟ್‌ನಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ವಿಶೇಷವಾಗಿ ಮುನ್ಸಿಪಲ್ ಬಾಂಡ್‌ಗಳ ಮೂಲಕ ಸಂಪನ್ಮೂಲ ಕ್ರೋಢೀಕರಿಸುವ ಹಾಗೂ ಆಸ್ತಿ ತೆರಿಗೆ ಜಾಲ ವಿಸ್ತರಿಸುವ ಮೂಲಕ ಸ್ವಂತ ಆದಾಯ ಹೆಚ್ಚಿಸಿಕೊಳ್ಳಲು ಪಾಲಿಕೆ ಮುಂದಾಗಿದೆ.
ಆದಾಯ ಹೆಚ್ಚಳಕ್ಕೆ ಮಾಸ್ಟರ್ ಪ್ಲಾನ್
ಪಾಲಿಕೆಯ ಆದಾಯ ಮೂಲಗಳನ್ನು ಬಲಪಡಿಸಲು ಕಂದಾಯ ವಿಭಾಗದಿಂದ 1964.60 ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ. ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತಿಸುವ ಪ್ರಕ್ರಿಯೆಯಿಂದ 563 ಕೋಟಿ ರೂ., ಹೊಸ ಜಾಹೀರಾತು ನೀತಿ ಮತ್ತು 50 ಸ್ಕೈವಾಕ್‌ಗಳ ಮೇಲೆ ಜಾಹೀರಾತು ಅಳವಡಿಕೆಯಿಂದ 116 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಹೊಸ ಆಸ್ತಿ ನೋಂದಣಿ ಮತ್ತು ಇ-ದಾಖಲೆಗಳ ವ್ಯವಸ್ಥೆ ಜಾರಿಗೊಳಿಸಲೂ ನಿರ್ಧರಿಸಲಾಗಿದೆ. ಇಟ್ಟುಮಡು, ಕುರುಬರಹಳ್ಳಿ, ಮಹಾಲಕ್ಷ್ಮೀಪುರಂ, ಹನುಮಂತನಗರ ಮತ್ತು ತ್ಯಾಗರಾಜನಗರದಲ್ಲಿ ರಸ್ತೆ ವಿಸ್ತರಣೆಗೆ ಕ್ರಮ ವಹಿಸಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 'ಪೇ ಅಂಡ್ ಪಾರ್ಕ್' ಮತ್ತು ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ ಜಾರಿಯಾಗಲಿದೆ. ಟೋಯಿಂಗ್‌ಗಾಗಿ 10 ಹೊಸ ಯಂತ್ರಗಳ ಖರೀದಿಗೂ ಅನುಮೋದನೆ ನೀಡಲಾಗಿದೆ.
ಪರಿಸರ ಮತ್ತು ಕೆರೆಗಳ ಪುನಶ್ಚೇತನ
ಹಸಿರು ಬೆಂಗಳೂರು ಯೋಜನೆಯಡಿ ಹಸಿರೀಕರಣಕ್ಕೆ 47.45 ಕೋಟಿ ರೂ. ಮೀಸಲಿಡಲಾಗಿದ್ದು, ನಗರದಾದ್ಯಂತ 100 ಮಿಯಾವಾಕಿ ಅರಣ್ಯ ನಿರ್ಮಿಸಲು ಉದ್ದೇಶಿಸಲಾಗಿದೆ. 49 ಕೆರೆಗಳ ನಿರ್ವಹಣೆಗೆ 13.75 ಕೋಟಿ ರೂ. ನೀಡಲಾಗಿದೆ. ಯಡಿಯೂರು ಮತ್ತು ಚಿಕ್ಕಲಸಂದ್ರ ಕೆರೆಗಳ ಪುನರುಜ್ಜೀವನಕ್ಕೆ ವಿಶೇಷ ಯೋಜನೆ ರೂಪಿಸಲಾಗಿದೆ. ಕುಂಬಳಗೂಡು ಚಿತಾಗಾರ ಮತ್ತು ಪಾಲಿಕೆ ಕಟ್ಟಡಗಳ ಮೇಲೆ ಸೋಲಾರ್ ಅಳವಡಿಕೆಗೆ ಒಟ್ಟು 12 ಕೋಟಿ ರೂ. ಮೀಸಲಿಡಲಾಗಿದೆ.
ಆಸ್ಪತ್ರೆಗಳ ಅಭಿವೃದ್ಧಿಗೆ ಅನುದಾನ
ಶ್ರೀರಾಮಪುರ, ಆಜಾದ್‌ನಗರ ಆಸ್ಪತ್ರೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 95 ಕೋಟಿ ರೂ. ನೀಡಲಾಗಿದ್ದು, ವರ್ಚುವಲ್ ಕ್ಲಿನಿಕ್ ಸೇವೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಎಸ್‌ಸಿ ಹಾಗೂ ಎಸ್‌ಟಿ, ಪೌರಕಾರ್ಮಿಕರು ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 334.99 ಕೋಟಿ ರೂ. ಮೀಸಲಿಡಲಾಗಿದೆ. ಅರ್ಹರಿಗೆ ಉಚಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ತೀರ್ಮಾನಿಸಲಾಗಿದೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ 300 ಕೋಟಿ ರೂ. ಹಾಗೂ 10 ಹೊಸ ಟ್ರಾನ್ಸ್‌ಫರ್ ಸ್ಟೇಷನ್‌ಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ.
ಶಿಕ್ಷಣಕ್ಕೂ ಬಜೆಟ್‌ನಲ್ಲಿ ಒತ್ತು
ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 5 ಶಾಲೆಗಳನ್ನು ಅತ್ಯಾಧುನಿಕ ಸ್ಮಾರ್ಟ್ ಶಾಲೆಗಳಾಗಿ ಪರಿವರ್ತಿಸಲಾಗುವುದು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕಾಗಿ (ಕರ್ನಾಟಕ ದರ್ಶನ) 2 ಕೋಟಿ ರೂ. ನೀಡಲಾಗಿದೆ.
ಹಂಪಿನಗರದಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ 25 ಕೋಟಿ ರೂ. ಮೀಸಲಿಡಲಾಗಿದೆ. "ಸಮತೋಲಿತ ಅಭಿವೃದ್ಧಿಯೇ ನಮ್ಮ ಗುರಿ. ಮುನ್ಸಿಪಲ್ ಬಾಂಡ್‌ಗಳ ಮೂಲಕ 200 ಕೋಟಿ ರೂ. ಸಂಗ್ರಹಿಸಿ, ಮೂಲಸೌಕರ್ಯ ಕಾಮಗಾರಿಗಳಿಗೆ ಬಳಸಲಾಗುವುದು. ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೂ ವಿಶೇಷ ಒತ್ತು ನೀಡಲಾಗಿದೆ" ಎಂದು ಆಯುಕ್ತರು ತಿಳಿಸಿದ್ದಾರೆ.

