
ಬೆಂಗಳೂರಿನ 5 ಫ್ಲೈಓವರ್‌ಗಳಲ್ಲಿ ಇಂದಿನಿಂದ ಹೊಸ ಸಂಚಾರ ನಿಯಮ; ಬೈಕ್, ಆಟೋಗೆ ನಿರ್ಬಂಧ
ನಗರದ ಪ್ರಮುಖ ಫ್ಲೈಓವರ್‌ಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಎಲ್ಲ ಫ್ಲೈಓವರ್‌ಗಳಲ್ಲೂ ಒಂದೇ ರೀತಿಯ ನಿಯಮ ಇರುವುದಿಲ್ಲ. ವಾಹನದ ಪ್ರಕಾರ ಮತ್ತು ಸಮಯಕ್ಕೆ ಅನುಗುಣವಾಗಿ ನಿರ್ಬಂಧಗಳು ಬದಲಾಗಲಿವೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಮೇಲ್ಸೇತುವೆಗಳಲ್ಲಿ ಇಂದಿನಿಂದ ಸಂಚಾರ ನಿಯಮಗಳಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ. ಹೆಚ್ಚುತ್ತಿರುವ ಅಪಘಾತಗಳು, ವಾಹನಗಳು ಕೆಟ್ಟು ನಿಂತು ಉಂಟಾಗುವ ಸಂಚಾರ ದಟ್ಟಣೆ ಹಾಗೂ ಫ್ಲೈಓವರ್‌ಗಳ ವಿನ್ಯಾಸವನ್ನು ಪರಿಗಣಿಸಿ ಬೆಂಗಳೂರು ಸಂಚಾರ ಪೊಲೀಸರು ಹೊಸ ನಿರ್ಬಂಧಗಳನ್ನು ಜಾರಿಗೊಳಿಸಿದ್ದಾರೆ.
ಸೆಪ್ಟೆಂಬರ್ 4ರಿಂದ ನಗರದ ಪ್ರಮುಖ ಫ್ಲೈಓವರ್‌ಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಎಲ್ಲ ಫ್ಲೈಓವರ್‌ಗಳಲ್ಲೂ ಒಂದೇ ರೀತಿಯ ನಿಯಮ ಇರುವುದಿಲ್ಲ. ವಾಹನದ ಪ್ರಕಾರ ಮತ್ತು ಸಮಯಕ್ಕೆ ಅನುಗುಣವಾಗಿ ನಿರ್ಬಂಧಗಳು ಬದಲಾಗಲಿವೆ.
ಯಾವ ಫ್ಲೈಓವರ್‌ನಲ್ಲಿ ಏನು ನಿರ್ಬಂಧ?
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಬೈಕ್ ಮತ್ತು ಸ್ಕೂಟರ್‌ಗಳ ಜತೆಗೆ ಆಟೋರಿಕ್ಷಾ ಹಾಗೂ ಮೂರು ಚಕ್ರದ ಗೂಡ್ಸ್ ವಾಹನಗಳಿಗೂ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಇದರ ಜೊತೆಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
ಏರ್‌ಪೋರ್ಟ್ ಎಲಿವೇಟೆಡ್ ಕಾರಿಡಾರ್: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಲಿವೇಟೆಡ್ ಕಾರಿಡಾರ್ ಫ್ಲೈಓವರ್‌ನಲ್ಲೂ ಬೈಕ್, ಸ್ಕೂಟರ್, ಆಟೋರಿಕ್ಷಾ ಮತ್ತು ಗೂಡ್ಸ್ ರಿಕ್ಷಾಗಳಿಗೆ 24 ಗಂಟೆಯೂ ನಿರ್ಬಂಧ ಇರಲಿದೆ. ಎಲ್ಲಾ ಮಾದರಿಯ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಮಾರ್ಕೆಟ್ ಫ್ಲೈಓವರ್: ಮಾರ್ಕೆಟ್ ಫ್ಲೈಓವರ್‌ನಲ್ಲಿ ಭಾರಿ ಸರಕು ವಾಹನಗಳ ಸಂಚಾರಕ್ಕೆ 24 ಗಂಟೆಯೂ ನಿರ್ಬಂಧ ವಿಧಿಸಲಾಗಿದೆ. ಗೂಡ್ಸ್ ಆಟೋ ಸೇರಿದಂತೆ ಇತರ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಮೈಸೂರು ರಸ್ತೆ ಬಿಜಿಎಸ್ ಫ್ಲೈಓವರ್: ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್‌ನಲ್ಲೂ ಭಾರಿ ಸರಕು ವಾಹನಗಳ ಸಂಚಾರಕ್ಕೆ 24 ಗಂಟೆಯ ನಿರ್ಬಂಧ ಇರಲಿದೆ. ಗೂಡ್ಸ್ ಆಟೋ ಹಾಗೂ ಇತರ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 10ರವರೆಗೆ ನಿರ್ಬಂಧ ಹೇರಲಾಗಿದೆ.
ಪೀಣ್ಯ ಫ್ಲೈಓವರ್: ಪೀಣ್ಯ ಫ್ಲೈಓವರ್‌ನಲ್ಲಿ ಆಟೋರಿಕ್ಷಾ ಮತ್ತು ಗೂಡ್ಸ್ ಆಟೋಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಾರಿ ಮತ್ತು ಮಧ್ಯಮ ಸರಕು ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 11ರವರೆಗೆ ನಿರ್ಬಂಧ ಇರಲಿದೆ. ಇನ್ನು ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಭಾರಿ ಘನ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬೈಕ್ ಸವಾರರು ಯಾವ ಮಾರ್ಗ ಬಳಸಬೇಕು?
ಏರ್‌ಪೋರ್ಟ್‌ಗೆ ತೆರಳುವ ದ್ವಿಚಕ್ರ ವಾಹನ ಸವಾರರು ಫ್ಲೈಓವರ್ ಬದಲಿಗೆ NH-44 ಸರ್ವಿಸ್ ರಸ್ತೆ ಬಳಸಬಹುದು. ಪರ್ಯಾಯವಾಗಿ ತನಿಸಂದ್ರ ಮತ್ತು ಬುದಿಗೇರೆ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿಗೆ ತೆರಳುವವರು ಹೊಸೂರು ರಸ್ತೆಯ ಸರ್ಫೇಸ್ ಲೇನ್ ಬಳಸಬಹುದು. ಹೊಸ ನಿಯಮಗಳಿಂದ ಪೀಕ್ ಅವರ್‌ನಲ್ಲಿ ಪ್ರಯಾಣದ ಸಮಯ ಹೆಚ್ಚುವರಿಯಾಗಿ 15ರಿಂದ 25 ನಿಮಿಷಗಳವರೆಗೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಪ್ರಯಾಣಕ್ಕೆ ಮುಂಚಿತವಾಗಿ ಸಮಯವನ್ನು ಪರಿಗಣಿಸುವಂತೆ ಸೂಚಿಸಲಾಗಿದೆ.
ಏರ್‌ಪೋರ್ಟ್‌ಗೆ ತೆರಳುವವರು ಗಮನಿಸಿ
ವಿಮಾನ ಹಿಡಿಯಲು ಏರ್‌ಪೋರ್ಟ್‌ಗೆ ತೆರಳುವ ಪ್ರಯಾಣಿಕರು ಎಂದಿಗಿಂತಲೂ ಸ್ವಲ್ಪ ಮುಂಚಿತವಾಗಿ ಪ್ರಯಾಣ ಆರಂಭಿಸುವುದು ಸೂಕ್ತ. ಕಾರು ಮತ್ತು ಕ್ಯಾಬ್‌ಗಳ ಸಂಚಾರಕ್ಕೆ ಈ ನಿರ್ಬಂಧಗಳು ಅನ್ವಯಿಸದ ಕಾರಣ, ಸಾಧ್ಯವಾದರೆ ನಾಲ್ಕು ಚಕ್ರದ ವಾಹನಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.
ಅಪಘಾತ ಮತ್ತು ಟ್ರಾಫಿಕ್ ಜಾಮ್ ತಡೆಗೆ ಕ್ರಮ
ಫ್ಲೈಓವರ್‌ಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳು, ವಾಹನಗಳು ಕೆಟ್ಟು ನಿಂತು ಉಂಟಾಗುವ ಟ್ರಾಫಿಕ್ ಜಾಮ್ ಹಾಗೂ ಪ್ರವೇಶ ಮತ್ತು ನಿರ್ಗಮನ ಭಾಗಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹೊಸ ಸಂಚಾರ ವ್ಯವಸ್ಥೆಯ ಪರಿಣಾಮವನ್ನು ಪೊಲೀಸರು ನಿರಂತರವಾಗಿ ಪರಿಶೀಲಿಸಲಿದ್ದು, ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ನಿಯಮಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ.
ಹೀಗಾಗಿ ಬೆಂಗಳೂರಿನಲ್ಲಿ ಫ್ಲೈಓವರ್ ಬಳಸುವ ವಾಹನ ಸವಾರರು ತಮ್ಮ ವಾಹನಕ್ಕೆ ಅನ್ವಯಿಸುವ ನಿಯಮ, ನಿರ್ಬಂಧದ ಸಮಯ ಹಾಗೂ ಪರ್ಯಾಯ ಮಾರ್ಗವನ್ನು ಮುಂಚಿತವಾಗಿ ಪರಿಶೀಲಿಸಿ ಪ್ರಯಾಣಿಸುವುದು ಉತ್ತಮ. ಪ್ರಮುಖ ಫ್ಲೈಓವರ್‌ಗಳಲ್ಲಿರುವ ಸಂಚಾರ ಸೂಚನಾ ಫಲಕಗಳನ್ನೂ ಗಮನಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

