
ಬೆಂಗಳೂರಿನಲ್ಲಿ ರಸ್ತೆಗಿಳಿಸಿದ 2 ಸಾವಿರ ಸಖಿ ಆಟೊಗಳು
ಸಖಿ ಆಟೋ ಬುಕ್ ಮಾಡಲು ವಾಟ್ಸಫ್ ಸಂಖ್ಯೆ 6361933364 ಹಾಗೂ ride.sakhiwomen.in ಸಾಮಾಜಿಕ ಜಾಲತಾಣಕ್ಕೆ ಹೋಗಿ ಬುಕ್ ಮಾಡಬಹುದು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರಿಂದ, ಮಹಿಳೆಯರಿಗಾಗಿಯೇ ʼಸಖಿʼ ಆಟೊ ರೈಡಿಂಗ್ ಫ್ಲಾಟ್‌ಫಾರಂಗೆ ಶನಿವಾರ ಚಾಲನೆ ದೊರೆತಿದೆ. ಬೆಂಗಳೂರಿನಲ್ಲಿ ಪ್ರೇಮಿಗಳ ದಿನದಂದೇ (ಫೆ.14) ವಿಶೇಷ ಸಖಿ ಆಟೋ ಸೇವೆ ಆರಂಭವಾಗಿದ್ದು, ಮಹಿಳೆಯರಿಗೆ ಸುರಕ್ಷತೆ ಆಟೊ ಪ್ರಯಾಣ ಸೇವೆ ಒದಗಿಸುವ ಗುರಿ ಹೊಂದಿದೆ. ಈ ಫ್ಲಾಟ್‌ಫಾರಂನಲ್ಲಿ ಮಹಿಳೆಯರೇ ಆಟೊ ಬುಕ್ಕಿಂಗ್ ಮಾಡಬೇಕು. ಮಹಿಳೆಯರೇ ಆಟೊ ಚಾಲನೆ ಮಾಡಲಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6 ರಿಂದ ರಾತ್ರಿವರೆಗೂ ಆಟೊ ಸೇವೆ ಇರಲಿದೆ. ಮುಂಬರುವ ದಿನಗಳಲ್ಲಿ ದಿನದ 24 ಗಂಟೆಗಳ ಕಾಲ ಆಟೋ ಸೇವೆ ನೀಡುವ ಗುರಿ ಹೊಂದಲಾಗಿದೆ.
ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು, ರಾತ್ರಿ ಪಾಳಿಯ ಐಟಿ ಉದ್ಯೋಗಿಗಳಿಗೆ ಸಖಿ ಆಟೊ ಸುರಕ್ಷಿತ ಪ್ರಯಾಣದ ಖಾತ್ರಿ ಒದಗಿಸಲಿದೆ.
2 ಸಾವಿರ ಮಹಿಳೆಯರಿಗೆ ಆಸರೆ
ಬೆಂಗಳೂರಿನಲ್ಲಿ ಸುಮಾರು 2,000ಕ್ಕೂ ಹೆಚ್ಚು ಮಹಿಳಾ ಆಟೋ ಚಾಲಕಿಯರು ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಆರ್ಥಿಕ ನಿರ್ವಹಣೆ, ಮಕ್ಕಳ ಭವಿಷ್ಯ ಮತ್ತು ಸ್ವತಂತ್ರ ಬದುಕಿನ ಹಂಬಲದೊಂದಿಗೆ ಈ ಮಹಿಳೆಯರು ಸ್ಟೇರಿಂಗ್ ಹಿಡಿದಿದ್ದಾರೆ.
ಪುರುಷರಿಗಷ್ಟೇ ಸೀಮಿತವಾಗಿದ್ದ ಆಟೊ ಚಾಲನೆ ಮಹಿಳೆಯರ ಪಾಲಿಗೆ ವರದಾನವಾಗಿದೆ. ತಂತ್ರಜ್ಞಾನದ ಬೆಳವಣಿಗೆ ಮತ್ತು ಇ-ಆಟೋಗಳ ಪರಿಚಯವು ಮಹಿಳೆಯರು ಈ ವೃತ್ತಿ ಆರಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಪೆಟ್ರೋಲ್ ಅಥವಾ ಗ್ಯಾಸ್ ವೆಚ್ಚವಿಲ್ಲದೇ ದಿನದ ದುಡಿಮೆಯಲ್ಲಿ ಹೆಚ್ಚಿನ ಲಾಭ ಕೈ ಸೇರುವ ಹಿನ್ನೆಲೆಯಲ್ಲಿ ಮಹಿಳೆಯರು ಆಟೋ ಚಾಲನೆ ಮನಸ್ಸು ಮಾಡಿದ್ದಾರೆ. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಮಹಿಳೆಯರಿಗೆ ಉಚಿತ ತರಬೇತಿ ಹಾಗೂ ಸಬ್ಸಿಡಿ ದರದಲ್ಲಿ ವಾಹನ ಖರೀದಿಸಲು ಸಾಲ ಸೌಲಭ್ಯ ನೀಡುತ್ತಿರುವುದು ಕೂಡ ಉತ್ತೇಜನಕಾರಿಯಾಗಿದೆ.
ಆಟೊ ಬುಕ್ಕಿಂಗ್ ಹೇಗೆ?
ಓಲಾ, ಊಬರ್, ರಾಪಿಡೋ ಮಾದರಿಯಲ್ಲೇ ಸಖಿ ಆಟೊ ಬುಕ್ಕಿಂಗ್ ಮಾಡಬಹುದಾಗಿದೆ. ಸಖಿ ಆಟೋ ಬುಕ್ ಮಾಡಲು ವಾಟ್ಸಫ್ ಸಂಖ್ಯೆ 6361933364 ಹಾಗೂ ride.sakhiwomen.in ಸಾಮಾಜಿಕ ಜಾಲತಾಣಕ್ಕೆ ಹೋಗಿ ಬುಕ್ ಮಾಡಬಹುದು. ಸದ್ಯಕ್ಕೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರದಲ್ಲೇ ಬಳಕೆಗೆ ಮುಕ್ತವಾಗಲಿದೆ ಎಂದು ಸಖಿ ಆಟೊ ರೈಡಿಂಗ್ ಫ್ಲಾಟ್‌ಫಾರಂ ತಿಳಿಸಿದೆ.
ಸಖಿ ಆಟೋದಲ್ಲಿ ಪ್ರಯಾಣ ದರ ಎಷ್ಟು?
ಸಾಮಾನ್ಯ ಆಟೋಗಳಂತೆ ಈ ಆಟೋಗಳಲ್ಲೂ ಮೊದಲ ಎರಡು ಕಿ.ಮೀ.ಗೆ 50 ರೂ. ಇದ್ದರೆ, ಅನಂತರ ಪ್ರತಿ ಕಿ.ಮೀ.ಗೆ 20 ರೂ. ಹೆಚ್ಚುವರಿ ದರ ಇರಲಿದೆ. ಮಳೆಗಾಲದಲ್ಲಿ ಹಾಗೂ ಪೀಕ್ ಅವರ್‌ನಲ್ಲಿ ಆಟೋ ಪ್ರಯಾಣ ದರ ಏರಿಕೆಯಾಗಲಿದೆ. ಪ್ರಸ್ತುತ, ಸಖಿ ಆಟೋ ಪ್ರಯಾಣ ದರವು ಬೆಳಿಗ್ಗೆ 6 ರಿಂದ ರಾತ್ರಿ 12ರವರೆಗೂ ಇರಲಿದೆ.
ಈ ಆಟೋ ಸೇವೆ ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಾಗಿದೆ. ಮಹಿಳಾ ಚಾಲಕಿಯರಿಗೆ ಸಂಪೂರ್ಣ ತರಬೇತಿ ನೀಡಲಾಗಿರುತ್ತದೆ. ರೈಡ್ ಟ್ರ್ಯಾಕಿಂಗ್ ಮತ್ತು ತುರ್ತು ಸಹಾಯ ವ್ಯವಸ್ಥೆ ಇರಲಿದೆ.

