
Bangalore Rising| ಬೆಂಗಳೂರಿನ ‘ಮೂರ್ಖ ಯೋಜನೆಗಳು’; ಸರ್ಕಾರದ ವಿಳಂಬ ಧೋರಣೆ ವಿರುದ್ಧ ನಾಗರಿಕರ ರಣಕಹಳೆ
ಅಭಿವೃದ್ಧಿಯ ನೆಪದಲ್ಲಿ ಜಾರಿಗೊಳಿಸುವ ಯೋಜನೆಗಳು ವರ್ಷಗಟ್ಟಲೇ ವಿಳಂಬವಾಗುತ್ತಿರುವುದೇ ಬೆಂಗಳೂರಿನ ಸಮಸ್ಯೆಗಳಿಗೆ ಪ್ರಮುಖ ಕಾರಣ ಎಂಬುದು ನಾಗರಿಕ ಸಂಘಟನೆಗಳ ಆರೋಪವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನೆಪದಲ್ಲಿ ಪರಿಸರ ನಾಶ ಹಾಗೂ ಅವೈಜ್ಞಾನಿಕ ನಗರ ಯೋಜನೆಗಳ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ನಾಗರಿಕರು ಸಿಡಿದೆದ್ದಿದ್ದಾರೆ. ಗ್ರೀನ್‌ಪೀಸ್ ಇಂಡಿಯಾ ಮತ್ತು ‘ಬೆಂಗಳೂರು ರೈಸಿಂಗ್’ ಅಭಿಯಾನದಡಿ ಇಂದು (ಏ.1) ನೂರಾರು ನಾಗರಿಕರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಅನರ್ಥಕಾರಿ ಯೋಜನೆಗಳನ್ನು ‘ಮೂರ್ಖ ಯೋಜನೆಗಳು’ ಎಂದು ಜರಿದಿದ್ದಾರೆ.
ಅಭಿವೃದ್ಧಿಯ ನೆಪದಲ್ಲಿ ಜಾರಿಗೊಳಿಸುವ ಯೋಜನೆಗಳು ವರ್ಷಗಟ್ಟಲೇ ವಿಳಂಬವಾಗುತ್ತಿರುವುದೇ ಬೆಂಗಳೂರಿನ ಸಮಸ್ಯೆಗಳಿಗೆ ಪ್ರಮುಖ ಕಾರಣ. ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ನಾಗರಿಕರ ಸಲಗೆ, ಅಭಿಪ್ರಾಯಗಳನ್ನು ಸ್ವೀಕರಿಸಬೇಕು. ಬಂಡವಾಳಶಾಹಿಗಳು, ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಲಾಗಿದೆ. ನಾಲ್ಕಾರು ವರ್ಷಗಳಿಂದ ಕುಂಟುತ್ತಾ ಸಾಗಿರುವ ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗಿದೆ.
ಬೆಂಗಳೂರಿನ ದೊಮ್ಮಸಂದ್ರದ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದು
ಏನಿದು ಮೂರ್ಖ ಯೋಜನೆಗಳು?
ಜನರ ಕೋಟಿ ಕೋಟಿ ತೆರಿಗೆ ಹಣ ಖರ್ಚು ಮಾಡಿದರೂ ವರ್ಷಗಟ್ಟಲೆ ಪೂರ್ಣಗೊಳ್ಳದ ಮತ್ತು ಪರಿಸರಕ್ಕೆ ಮಾರಕವಾಗುವ ಯೋಜನೆಗಳನ್ನು ನಾಗರಿಕ ಸಂಘಟನೆಗಳು ಮೂರ್ಖ ಯೋಜನೆಗಳು ಎಂದು ಜರಿದಿವೆ. ಅವುಗಳಲ್ಲಿ ಕೆಲವನ್ನು ಉಲ್ಲೇಖಿಸಿ ವಿವರಣೆ ನೀಡಿವೆ.
ದೊಮ್ಮಸಂದ್ರ ಫ್ಲೈಓವರ್: ಸುಮಾರು 325 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಯೋಜನೆಯು 2020ರಲ್ಲಿ ಆರಂಭವಾದರೂ ಈವರೆಗೂ ಕುಂಟುತ್ತಾ ಸಾಗಿದೆ. 18 ತಿಂಗಳ ಗಡುವಿನಲ್ಲಿ ಮುಗಿಯಬೇಕಿದ್ದ ಕಾಮಗಾರಿಯು 6 ವರ್ಷ ಕಳೆದರೂ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ದುಪ್ಪಟ್ಟಾಗಿದೆ.
ರಾಜರಾಜೇಶ್ವರಿ ನಗರ ಫ್ಲೈಓವರ್: ಅಂದಾಜು 71.45 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಯೋಜನೆಯಲ್ಲಿ ಕಳೆದ ನಾಲ್ಕು ವರ್ಷಗಳ ಬರೀ ಕಂಬಗಳಷ್ಟೇ ನಿಂತಿವೆ. ಕಿರಿದಾದ ರಸ್ತೆಯಲ್ಲಿ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವ ದುಸ್ಥಿತಿ ಎದುರಾಗಿದೆ. 2022 ರಲ್ಲಿ ಯೋಜನೆ ಪ್ರಾರಂಭವಾಯಿತು. ಯೋಜನೆಯಲ್ಲಿ ಈವರೆಗೆ ಪಾರದರ್ಶಕತೆ ಕಾಣದಾಗಿದೆ, ಸಾರ್ವಜನಿಕರ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲದಂತಾಗಿದೆ.
ಮೈಸೂರು ಲ್ಯಾಂಪ್ಸ್ ವರ್ಕ್ಸ್, ಮಲ್ಲೇಶ್ವರಂ: 1936ರಲ್ಲಿ ಪ್ರಾರಂಭವಾಗಿ 2003ರಲ್ಲಿ ಮುಚ್ಚಲಾದ ಮೈಸೂರು ಲ್ಯಾಂಪ್ಸ್ ಕಾರ್ಖಾನೆ 22 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಹಸಿರು ಪ್ರದೇಶವಾಗಿ ರೂಪುಗೊಂಡಿರುವ ಇದು ಬೆಂಗಳೂರು ಪ್ರಮುಖ ಶ್ವಾಸತಾಣವಾಗಿದೆ. ಆದರೆ, ಸರ್ಕಾರ ಈ ಜಾಗದಲ್ಲಿ ಕನ್ವೆನ್ಷನ್ ಸೆಂಟರ್ ನಿರ್ಮಿಸಲು ಮುಂದಾಗಿದೆ. ನಗರದಲ್ಲಿ ಹಸಿರು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಮರಗಳನ್ನು ಕಡಿದು ಕಾಂಕ್ರೀಟ್ ಕಟ್ಟಡ ನಿರ್ಮಾಣ ನಿರ್ಮಿಸಲು ಯೋಜಿಸಿರುವುದಕ್ಕೆ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿ, ಮೂರ್ಖ ಯೋಜನೆ ಎಂದು ಕರೆದಿದ್ದಾರೆ.
“ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಮತ್ತು ಜೀವ ವೈವಿಧ್ಯತೆಗೆ ಪ್ರಾಧಾನ್ಯತೆ ನೀಡಬೇಕು. ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಸಮೀಪದ ದಟ್ಟ ಪರಿಸರವು ಎಲ್ಲ ವರ್ಗದ ಜನರಿಗೆ ಉಪಯುಕ್ತವಾಗುತ್ತಿದೆ. ಇಲ್ಲಿ ಕನ್ವೆನ್ಷನ್ ಸೆಂಟರ್ ನಿರ್ಮಿಸಿದರೆ ಕೆಲವೇ ವರ್ಗಗಳಿಗೆ ಉಪಯೋಗವಾಗಲಿದೆ. ಇದರಿಂದ ದಟ್ಟಣೆ, ಮಾಲಿನ್ಯ ಮತ್ತು ನಗರ ಉಷ್ಣತೆ ಹೆಚ್ಚಲಿದೆಯೇ ಹೊರತು ಜನರಿಗೆ ಬೇಕಾದ ಹಸಿರು ಸ್ಥಳಗಳ ಕೊರತೆ ನೀಗಿಸದು” ಎಂದು ಮಲ್ಲೇಶ್ವರಂ ಸೋಶಿಯಲ್ ಸಂಘಟನೆಯ ಕೌಸ್ತುಭ್ ರಾವ್ ಅಭಿಪ್ರಾಯಪಟ್ಟಿದ್ದಾರೆ.
"ನಗರಕ್ಕೆ ಬೇಕಿರುವುದು ಉಸಿರಾಡಲು ಗಾಳಿ ಮತ್ತು ಹಸಿರು ಹೊರತು ಬೃಹತ್ ಕಾಂಕ್ರೀಟ್ ಕಟ್ಟಡಗಳಲ್ಲ. ಮೈಸೂರು ಲ್ಯಾಂಪ್ಸ್ ಪ್ರದೇಶದ ದಟ್ಟ ಅರಣ್ಯವನ್ನು ಸಾರ್ವಜನಿಕ ಉದ್ಯಾನವನವನ್ನಾಗಿ ಮಾಡಬೇಕೇ ಹೊರತು, ವಾಣಿಜ್ಯ ಬಳಕೆಗೆ ಬಳಸಬಾರದು," ಎಂದು ಆಗ್ರಹಿಸಿದ್ದಾರೆ.
"ಮೂರ್ಖ ಯೋಜನೆ ಎಂದರೆ ಕೇವಲ ಹಣದ ಪೋಲಲ್ಲ, ಜನರ ಸಮಯದ ವ್ಯರ್ಥ, ಪಾದಚಾರಿಗಳ ಹಕ್ಕಿನ ಅಪಹರಣ ಮತ್ತು ನಗರದ ಹಸಿರು, ಜಲ ಸಂಪತ್ತಿನ ನಾಶ." ಎಂದು ಗ್ರೀನ್‌ಪೀಸ್ ಇಂಡಿಯಾ ಸಂಘಟನೆಯ ಹವಾಮಾನ ಮತ್ತು ಇಂಧನ ವಿಭಾಗದ ಕ್ಯಾಂಪೇನರ್ ಅಮೃತಾ ಎಸ್.ಎನ್. ಅವರ ಆತಂಕ.
“ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು, ನಾಗರಿಕರ ಸಮಸ್ಯೆಗಳನ್ನು ಚುನಾವಣೆಗೆ ಮುನ್ನವೇ ಬಗೆಹರಿಸಬೇಕು. ಬೆಂಗಳೂರು ಜಾಗತಿಕ ಮಟ್ಟದಲ್ಲಿ ನಗೆಪಾಟಲಾಗುವುದನ್ನು ತಡೆಯಬೇಕು” ಎಂದಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಮಾನು ಮುಂದೆ ವರ್ಷಗಳಿಂದ ತಲೆ ಎತ್ತಿನಿಂತಿರುವ ಕಂಬಗಳು
ಏ.1 ರಂದೇ ಪ್ರತಿಭಟನೆ ಏಕೆ?
ಏಪ್ರಿಲ್ 1 ರಂದೇ ಪ್ರತಿಭಟನೆ ನಡೆಸುವುದರ ಹಿಂದೆ ವ್ಯಂಗ್ಯವೂ ಇದೆ. ಸಿಲಿಕಾನ್ ವ್ಯಾಲಿ ಎಂದೇ ಪ್ರಖ್ಯಾತಿ ಗಳಿಸಿರುವ ಬೆಂಗಳೂರು ನಗರವು 20ನೇ ಶತಮಾನದ ನಗರ ಯೋಜನೆಗಳ ಮೇಲೆ ಕೇಂದ್ರೀಕರಿಸಿದೆ. ಅಸಂಬದ್ಧ ನಗರ ಯೋಜನೆಗಳು ಮೂರ್ಝ ಯೋಜನೆಗಳು ಎಂದು ನಾಗರಿಕರ ಸಂಘಟನೆಗಳು ಅಣಕ ಮಾಡಿವೆ.
ಬೆಂಗಳೂರು ನಗರಾಡಳಿತ ಮತ್ತು ರಾಜ್ಯ ಸರ್ಕಾರವು ಇಮ್ಯಾಜಿನೇರಿಯಂ ಮಾದರಿ ಅಳವಡಿಸಿಕೊಂಡು ನಗರ ಯೋಜನೆ, ಬಜೆಟ್ ಮತ್ತು ನೀತಿ ರೂಪಿಸಬೇಕು. ಆ ಪ್ರಕ್ರಿಯೆಗಳಲ್ಲಿ ನಾಗರಿಕರನ್ನು ಬಳಸಿಕೊಳ್ಳಬೇಕು. ನಗರ ಯೋಜನೆ ರೂಪಿಸುವಾಗ ನಾಗರಿಕರು ಪಾಲ್ಗೊಳ್ಳಬೇಕೇ ಹೊರತು ಮೂರ್ಖ ಯೋಜನೆಗಳಿಗೆ ಬೆಲೆ ತೆರುವಂತಾಗಬಾರದು ಎಂಬುದು ಗ್ರೀನ್ಪೀಸ್ ಮತ್ತು ನಗರದ ವಿವಿಧ ನಾಗರಿಕ ಸಂಘಟನೆಗಳು ಆಗ್ರಹವಾಗಿದೆ.
ನಾಗರಿಕ ಸಂಘಟನೆಗಳ ಬೇಡಿಕೆಗಳೇನು?
- ಸರ್ಕಾರಿ ಯೋಜನೆಗಳ ವಿಳಂಬಕ್ಕೆ ಕಾರಣರಾಗುವವರನ್ನೇ ಹೊಣೆಗಾರರನ್ನಾಘಿ ಮಾಡಿ, ಶಿಕ್ಷಿಸಬೇಕು. ಕಾಮಗಾರಿಗಳ ಸ್ಥಿತಿಗತಿಯನ್ನು ಬಹಿರಂಗಪಡಿಸಬೇಕು.
- ನಗರದ ಅಭಿವೃದ್ಧಿಗೆ ಬಜೆಟ್ ರೂಪಿಸುವಾಗ ಮತ್ತು ಯೋಜನೆ ಸಿದ್ಧಪಡಿಸುವಾಗ ಸ್ಥಳೀಯ ನಿವಾಸಿಗಳ ಅಭಿಪ್ರಾಯ ಪಡೆಯಬೇಕು.
- ಫ್ಲೈಓವರ್ಗಳಿಗಿಂತ ಸುರಕ್ಷಿತ ಪಾದಚಾರಿ ಮಾರ್ಗ ಮತ್ತು ಸಾರ್ವಜನಿಕ ಸಾರಿಗೆಗೆ ಒತ್ತು ನೀಡಬೇಕು.
- ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯಲ್ಲಿ ಅಭ್ಯರ್ಥಿಗಳು ಈ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಬೇಕು.
- ಬೆಂಗಳೂರಿನ ಆಡಳಿತ ವ್ಯವಸ್ಥೆಯು 20ನೇ ಶತಮಾನದ ಹಳೆಯ ಚಿಂತನೆಯಲ್ಲೇ ಇದ್ದು ಜನರನ್ನು ‘ಮೂರ್ಖ’ರನ್ನಾಗಿ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

