
ಪೊಲೀಸ್ ವಸತಿಗೃಹ
ಪೊಲೀಸ್ ಇಲಾಖೆಯ ಆಸ್ತಿ ಲೂಟಿಗೆ ಸಂಚು: ಬೆಸ್ಕಾಂ, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್!
ವಿದ್ಯುತ್ ಬಿಲ್ ಮಾತ್ರವಲ್ಲದೇ ಇಡೀ ಆಸ್ತಿಯನ್ನೇ ನಕಲಿ ದಾಖಲೆಗಳ ಮೂಲಕ ಲಪಟಾಯಿಸಲು ಸಂಚು ರೂಪಿಸಿರುವುದು ಪತ್ತೆಯಾಗಿದೆ. ಬಿಬಿಎಂಪಿ ಅಧಿಕಾರಿಗಳ ಸಹಾಯದಿಂದ ಅಕ್ರಮವಾಗಿ 'ಇ-ಖಾತಾ' ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಲ್ಲೇಶ್ವರಂನಲ್ಲಿರುವ ಈ ಜಾಗಕ್ಕೆ 100 ವರ್ಷದಪ ಇತಿಹಾಸವಿದೆ. 1913ರ ಮಾಪನ ನಕ್ಷೆಯಲ್ಲಿಯೇ ಈ ಪ್ರದೇಶವನ್ನು 'ಪೊಲೀಸ್ ವಸತಿಗೃಹ' ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಹಳೆಯ ಮಲ್ಲೇಶ್ವರಂ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಸತಿಗೃಹಗಳು ಇಲ್ಲಿವೆ. ಪ್ರಸ್ತುತ ಇಲ್ಲಿ ನಾಲ್ವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಕುಟುಂಬಗಳು ವಾಸಿಸುತ್ತಿವೆ. ಇಂತಹ ಸುರಕ್ಷಿತ ವಲಯದಲ್ಲಿರುವ ಸರ್ಕಾರಿ ಆಸ್ತಿಗೇ ಕನ್ನ ಹಾಕಲು ಭೂಮಾಫಿಯಾ ಯತ್ನಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ವಿದ್ಯುತ್ ಬಿಲ್‌ನಿಂದ ಬಯಲಾದ ವಂಚನೆ
ಈ ಭಾರೀ ಹಗರಣ ಬಯಲಿಗೆ ಬಂದಿದ್ದು ಒಂದು ವಿದ್ಯುತ್ ಬಿಲ್‌ನಿಂದ. ಇಲ್ಲಿನ ವಸತಿಗೃಹದಲ್ಲಿ ವಾಸವಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ಅವರ ಮನೆಗೆ ಬಂದ ಬೆಸ್ಕಾಂ ಬಿಲ್ಲಿನಲ್ಲಿ ಅಚ್ಚರಿಯ ಬದಲಾವಣೆಯಾಗಿತ್ತು. ಬಿಲ್ಲಿನಲ್ಲಿ ಇಲಾಖೆಯ ಹೆಸರಿನ ಬದಲು ಮಹಾಲಕ್ಷ್ಮೀ ಎಂಬ ಖಾಸಗಿ ಮಹಿಳೆಯ ಹೆಸರು ನಮೂದಾಗಿತ್ತು. ಇದರಿಂದ ಅನುಮಾನಗೊಂಡ ಇನ್ಸ್‌ಪೆಕ್ಟರ್ ಕುಮಾರ್ ಅವರು ಬೆಸ್ಕಾಂ ಕಚೇರಿಗೆ ತೆರಳಿ ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳ ಶಾಮೀಲಿನಿಂದ ಆಸ್ತಿಯ ದಾಖಲೆಗಳನ್ನು ಅಕ್ರಮವಾಗಿ ಈ ಮಹಿಳೆಯ ಹೆಸರಿಗೆ ವರ್ಗಾಯಿಸಲಾಗಿತ್ತು.
ಇ-ಖಾತಾ ಸೃಷ್ಟಿ, ಮಾರಾಟಕ್ಕೆ ಒಪ್ಪಂದ
ತನಿಖೆಯ ವೇಳೆ ಕೇವಲ ವಿದ್ಯುತ್ ಬಿಲ್ ಮಾತ್ರವಲ್ಲದೆ, ಇಡೀ ಆಸ್ತಿಯನ್ನೇ ನಕಲಿ ದಾಖಲೆಗಳ ಮೂಲಕ ಲಪಟಾಯಿಸಲು ಸಿದ್ಧತೆ ನಡೆದಿರುವುದು ಪತ್ತೆಯಾಗಿದೆ. ಬಿಬಿಎಂಪಿ ಅಧಿಕಾರಿಗಳ ಸಹಾಯದಿಂದ ಅಕ್ರಮವಾಗಿ 'ಇ-ಖಾತಾ' ಮಾಡಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೆ, ಈ ಆಸ್ತಿಯನ್ನು ಕೃಷ್ಣಮೂರ್ತಿ ಎಂಬ ವ್ಯಕ್ತಿಗೆ ಮಾರಾಟ ಮಾಡಲು 'ಅಗ್ರಿಮೆಂಟ್ ಆಫ್ ಸೇಲ್' (ಮಾರಾಟ ಒಪ್ಪಂದ ಪತ್ರ) ಕೂಡ ಮಾಡಿಕೊಳ್ಳಲಾಗಿತ್ತು ಎಂಬ ಅಂಶ ತನಿಖೆಯಲ್ಲಿ ದೃಢಪಟ್ಟಿದೆ.
ಅಧಿಕಾರಿಗಳಿಗೇ ಬೆದರಿಕೆ!
ಪೊಲೀಸ್ ಅಧಿಕಾರಿಗಳು ವಾಸವಿದ್ದರೂ ಲೆಕ್ಕಿಸದ ಭೂಗಳ್ಳರು, ಜಾಗ ಖಾಲಿ ಮಾಡುವಂತೆ ಮಹಿಳೆಯ ಕಡೆಯವರಿಂದ ಬೆದರಿಕೆ ಹಾಕಿಸಿದ್ದಾರೆ ಎನ್ನಲಾಗಿದೆ. ಸದ್ಯ ಇನ್ಸ್‌ಪೆಕ್ಟರ್ ಕುಮಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸಲು ಸಹಕರಿಸಿದ ಭ್ರಷ್ಟ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಬಂಧನವಾಗುವ ಸಾಧ್ಯತೆಯಿದೆ.

