ಅನಧಿಕೃತ ಪಿಜಿಗಳ ಮೇಲೆ ದಕ್ಷಿಣ ಜಿಬಿಎ ಅಧಿಕಾರಿಗಳ ದಾಳಿ; ನಿಯಮ ಮೀರಿದವರಿಗೆ ಶಾಕ್
x

ಅನಧಿಕೃತ ಪಿಜಿಗಳ ಮೇಲೆ ದಕ್ಷಿಣ ಜಿಬಿಎ ಅಧಿಕಾರಿಗಳ ದಾಳಿ; ನಿಯಮ ಮೀರಿದವರಿಗೆ ಶಾಕ್


Click the Play button to hear this message in audio format

ಸಿಲಿಕಾನ್ ಸಿಟಿಯಲ್ಲಿ ಎಲ್ಲೆಂದರೆಲ್ಲಿ ಕಟ್ಟಿರುವ ಮತ್ತು ಜನರ ಜೀವನಕ್ಕೆ ಬೇಕಾಗಿರುವ ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿರುವ ಪೇಯಿಂಗ್ ಗೆಸ್ಟ್ (ಪಿಜಿ)ಗಳ ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಗುರುವಾರ (ಫೆ.12ರಂದು) ಕಾರ್ಯಾಚರಣೆ ನಡೆಸಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು, ಬರೋಬ್ಬರಿ 89 ಪಿಜಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಸುರಕ್ಷತೆಯ ಜತೆಗೆ ನೈರ್ಮಲ್ಯದ ಮಾನದಂಡಗಳನ್ನು ಪಾಲಿಸದ 19 ಪಿಜಿಗಳ ಅಡುಗೆಮನೆಗಳಿಗೆ ಬೀಗ ಜಡಿದಿದ್ದಾರೆ.

ಬೆಂಗಳೂರಿನ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆದಿದೆ. ನಿಯಮ ಉಲ್ಲಂಘನೆ ಪತ್ತೆ ಹಚ್ಚಿ ಒಂದೇ ದಿನದಲ್ಲಿ ಒಟ್ಟು 61,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಜೀವದ ಜೊತೆ ಚೆಲ್ಲಾಟವಾಡುವ ಪಿಜಿ ಮಾಲೀಕರಿಗೆ ಕೊನೇ ಎಚ್ಚರಿಕೆ ಕೊಟ್ಟಿದ್ದಾರೆ.

ಜಯನಗರ ಮತ್ತು ಬೊಮ್ಮನಹಳ್ಳಿಯಲ್ಲಿ ತೀವ್ರ ಶೋಧ

ನಗರದ ಪ್ರಮುಖ ವಸತಿ ಮತ್ತು ಐಟಿ ಹಬ್‌ಗಳನ್ನು ಗುರಿಯಾಗಿಸಿಕೊಂಡು ಈ ತಪಾಸಣೆ ನಡೆದಿದೆ. ಮಾಹಿತಿ ಪ್ರಕಾರ, ಜಯನಗರ ವಿಧಾನಸಭಾ ಕ್ಷೇತ್ರವೊಂದರಲ್ಲೇ 12 ಪಿಜಿಗಳನ್ನು ತಪಾಸಣೆಗೆ ಮಾಡಲಾಗಿದೆ. ಈ ಪೈಕಿ ಕಲುಷಿತ ನೀರು ಪೂರೈಕೆ ಮತ್ತು ಕಳಪೆ ನಿರ್ವಹಣೆ ಕಂಡುಬಂದ 3 ಪಿಜಿಗಳ ಅಡುಗೆ ಕೋಣೆಗಳನ್ನು ಬಂದ್ ಮಾಡಿಸಿ 8,000 ರೂ. ದಂಡ ವಿಧಿಸಲಾಗಿದೆ.

ಅತಿ ಹೆಚ್ಚು ಪಿಜಿಗಳಿರುವ ಬೊಮ್ಮನಹಳ್ಳಿ ವಲಯದಲ್ಲಿಯೂ ಅಧಿಕಾರಿಗಳು ಹೆಚ್ಚಿನ ನಿಗಾ ಇಟ್ಟಿದ್ದಾರೆ. ಇಲ್ಲಿ ಒಂದೇ ದಿನ 32 ಪಿಜಿಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಇಲ್ಲಿಂದಲೇ ಅತಿ ಹೆಚ್ಚು ದಂಡ ಸಂಗ್ರಹಿಸಲಾಗಿದೆ.

ಲೋಪಗಳೇನು?

ಪಿಜಿಗಳಲ್ಲಿ ಕೇವಲ ಬೆಡ್ ಹಾಕಿ ಬಾಡಿಗೆ ವಸೂಲಿ ಮಾಡುವುದೇ ಮಾಮೂಲಿಯಾಗಿದೆ ಎಂಬ ದೂರುಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಈ ಬಾರಿ ನಿರ್ದಿಷ್ಟ ಮಾನದಂಡಗಳನ್ನು ಇಟ್ಟುಕೊಂಡು ದಾಳಿ ನಡೆಸಿದ್ದಾರೆ. ಕಲುಷಿತ ನೀರಿನಿಂದ ಕಾಲರಾ ಸೇರಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹಿನ್ನೆಲೆಯಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಲಾಗಿದೆ. ಅಡುಗೆ ತಯಾರಿಸುವ ಪಿಜಿಗಳು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಆಹಾರ ಸುರಕ್ಷತಾ ಇಲಾಖೆಯ ಪ್ರಮಾಣಪತ್ರ ಹೊಂದಿದಿಯೇ ಎಂದು ಪರಿಶೀಲನೆ ನಡೆಸಲಾಗಿದೆ. ಬೆಂಕಿ ಅವಘಡ ಸಂಭವಿಸಿದರೆ ತಡೆಯಲು ಅಗ್ನಿಶಾಮಕ ಉಪಕರಣಗಳ ಅಳವಡಿಕೆ ಮಾಡಲಾಗಿದೆಯೇ ಎಂದು ಪರಿಶೀಲನೆ ನಡೆಸಲಾಗಿದೆ. ಅಡುಗೆಮನೆ ಮತ್ತು ಶೌಚಾಲಯಗಳ ನಿರ್ವಹಣೆಯನ್ನೂ ಗಮನಿಸಲಾಗಿದೆ. ಈ ಮಾನದಂಡಗಳಲ್ಲಿ ವಿಫಲವಾದ ಪಿಜಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗಿದೆ.

ಗ್ರೇಟರ್ ಬೆಂಗಳೂರು ಆಥಾರಿಟಿ ಎಚ್ಚರಿಕೆ

ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳು ಅನಧಿಕೃತವಾಗಿ ಮತ್ತು ನೋಂದಣಿಯಾಗದೆ ನಡೆಯುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಆಥಾರಿಟಿ (GBA) ಫೆಬ್ರವರಿ ತಿಂಗಳ ಆರಂಭದಿಂದಲೇ ‘ಕ್ಲೀನ್ ಸ್ವೀಪ್’ ಕಾರ್ಯಾಚರಣೆಗೆ ನಡೆಸಲು ಆರಂಭಿಸಿದೆ. ಫೆಬ್ರವರಿ ಮೊದಲ ವಾರದಲ್ಲಿ ಈಗಾಗಲೇ ನಗರಾದ್ಯಂತ 8 ಪಿಜಿಗಳನ್ನು ಸೀಲ್ (ಮುಟ್ಟುಗೋಲು) ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದ 570ಕ್ಕೂ ಹೆಚ್ಚು ಪಿಜಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

"ನಗರಕ್ಕೆ ಬರುವ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಪಿಜಿಗಳೇ ಆಸರೆ. ಆದರೆ, ಲಾಭದಾಸೆಗೆ ಸುರಕ್ಷತೆ ಕಡೆಗಣಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಈ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳಲಿದೆ," ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Read More
Next Story