ಬೆಂಗಳೂರು ಆರೆಂಜ್ ಲೈನ್ ಮೆಟ್ರೊ ಮಾರ್ಗ ಬದಲಾವಣೆ: 463 ಮರಗಳ ಮಾರಣಹೋಮಕ್ಕೆ ಸಿದ್ಧತೆ
x

ಮೆಟ್ರೊ 3ನೇ ಹಂತದ ವಿಸ್ತರಣೆಯ ಭಾಗವಾಗಿರುವ ಈ ಯೋಜನೆಯಿಂದ ನಾಗರಬಾವಿ ಪ್ರದೇಶದ ಹಸಿರು ಹೊದಿಕೆಗೆ ಭಾರಿ ಕೊಡಲಿಯೇಟು ಬೀಳಲಿದೆ. ದಟ್ಟವಾದ ಮರಗಳಿರುವ ಪ್ರದೇಶಗಳ ಮೂಲಕ ಈ ಮಾರ್ಗ ಸಾಗಲಿದ್ದು, ಸುಮಾರು 652 ಮರಗಳನ್ನು ಕಡಿಯುವ ಭೀತಿ ಎದುರಾಗಿದೆ. 

ಬೆಂಗಳೂರು 'ಆರೆಂಜ್ ಲೈನ್' ಮೆಟ್ರೊ ಮಾರ್ಗ ಬದಲಾವಣೆ: 463 ಮರಗಳ ಮಾರಣಹೋಮಕ್ಕೆ ಸಿದ್ಧತೆ

ಮೆಟ್ರೊ 3ನೇ ಹಂತದ ವಿಸ್ತರಣೆಯ ಭಾಗವಾಗಿರುವ ಈ ಯೋಜನೆಯಿಂದ ನಾಗರಬಾವಿ ಪ್ರದೇಶದ ಹಸಿರು ಹೊದಿಕೆಗೆ ಭಾರಿ ಕೊಡಲಿಯೇಟು ಬೀಳಲಿದೆ.


Click the Play button to hear this message in audio format

ಬೆಂಗಳೂರು ನಮ್ಮ ಮೆಟ್ರೊದ 'ಆರೆಂಜ್ ಲೈನ್' ಯೋಜನೆಯ ಮಾರ್ಗ ಬದಲಾವಣೆಯು ಭಾರಿ ಪರಿಸರ ಹಾನಿಗೆ ಕಾರಣವಾಗುವ ಆತಂಕವನ್ನು ಸೃಷ್ಟಿಸಿದೆ. ಹೆಬ್ಬಾಳದ ಕೆಂಪಾಪುರದಿಂದ ಜೆ.ಪಿ.ನಗರವನ್ನು ಸಂಪರ್ಕಿಸುವ ಈ ಮಾರ್ಗವನ್ನು ಇದೀಗ ನಾಗರಬಾವಿ ಪ್ರದೇಶದ ಮೂಲಕ ಹಾದುಹೋಗುವಂತೆ ಮರುವಿನ್ಯಾಸಗೊಳಿಸಲಾಗಿದೆ. ಈ ಹೊಸ ಮಾರ್ಗಕ್ಕಾಗಿ ಬರೋಬ್ಬರಿ 34 ವಿವಿಧ ಪ್ರಭೇದಗಳ 463 ಮರಗಳನ್ನು ಕಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಒಂದು ವೇಳೆ ಮೂಲ ಯೋಜನೆಯಂತೆ ಔಟರ್ ರಿಂಗ್ ರೋಡ್ (ಹೊರವರ್ತುಲ ರಸ್ತೆ) ಮಾರ್ಗದಲ್ಲೇ ಮೆಟ್ರೊ ನಿರ್ಮಾಣಗೊಂಡಿದ್ದರೆ, ಈ ಮರಗಳ ಹನನವನ್ನು ಶೇಕಡಾ 90 ಕ್ಕಿಂತ ಹೆಚ್ಚು ತಪ್ಪಿಸಬಹುದಿತ್ತು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಪಿಐಎಲ್ ವಜಾ

ಮೆಟ್ರೊ 3ನೇ ಹಂತದ ವಿಸ್ತರಣೆಯ ಭಾಗವಾಗಿರುವ ಈ ಯೋಜನೆಯಿಂದ ನಾಗರಬಾವಿ ಪ್ರದೇಶದ ಹಸಿರು ಹೊದಿಕೆಗೆ ಭಾರಿ ಕೊಡಲಿಯೇಟು ಬೀಳಲಿದೆ. ದಟ್ಟವಾದ ಮರಗಳಿರುವ ಪ್ರದೇಶಗಳ ಮೂಲಕ ಈ ಮಾರ್ಗ ಸಾಗಲಿದ್ದು, ಸುಮಾರು 652 ಮರಗಳನ್ನು ಕಡಿಯುವ ಭೀತಿ ಎದುರಾಗಿದೆ. ಇದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಇತ್ತೀಚೆಗೆ ಮೌನ ಪ್ರತಿಭಟನೆ ನಡೆಸಿ, ಮರಗಳನ್ನು ಉಳಿಸುವಂತೆ ಬಿಎಂಆರ್‌ಸಿಎಲ್‌ಗೆ ಮನವಿ ಮಾಡಿದ್ದರು. ಅಲ್ಲದೆ, ಈ ಮಾರ್ಗ ಬದಲಾವಣೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಆದರೆ, ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಮರಗಳ ಕಡಿತಕ್ಕೆ ಇದ್ದ ಕಾನೂನು ತೊಡಕು ನಿವಾರಣೆಯಾದಂತಾಗಿದೆ.

ನಗರದೆಲ್ಲೆಡೆ ಸಾವಿರಕ್ಕೂ ಹೆಚ್ಚು ಮರಗಳ ಕಡಿತಕ್ಕೆ ಪ್ರಸ್ತಾವನೆ

ಬೆಂಗಳೂರಿನಲ್ಲಿ ಮೆಟ್ರೊ ಜಾಲವು ಕಳೆದ ಒಂದು ದಶಕದಲ್ಲಿ ನಾಲ್ಕು ಪಟ್ಟು ವಿಸ್ತರಣೆಗೊಂಡಿದೆ. ಆದರೆ, ಈ ಬೃಹತ್ ಮೂಲಸೌಕರ್ಯ ಅಭಿವೃದ್ಧಿಯು ನಗರದ ಹಸಿರು ಹೊದಿಕೆಯನ್ನು ಬಲಿತೆಗೆದುಕೊಳ್ಳುತ್ತಿದೆ. ಕೇವಲ ನಾಗರಭಾವಿ ಮಾತ್ರವಲ್ಲದೆ, ನಗರದ ವಿವಿಧೆಡೆ ನಡೆಯುತ್ತಿರುವ ಮೆಟ್ರೊ ಕಾಮಗಾರಿಗಳಿಗಾಗಿ ಒಟ್ಟಾರೆ 1,000 ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಅನುಮತಿ ಕೋರಿ ಬಿಎಂಆರ್‌ಸಿಎಲ್ ಇತ್ತೀಚೆಗೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದು ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರದ ಸಾರಿಗೆ ಅಗತ್ಯಗಳನ್ನು ಪೂರೈಸುವ ಭರದಲ್ಲಿ ಬೆಂಗಳೂರಿನ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವುದು ಬಿಎಂಆರ್‌ಸಿಎಲ್ ಮತ್ತು ಸರ್ಕಾರಕ್ಕೆ ಈಗ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಯೋಜನೆ ವಿವರ ಇಲ್ಲಿದೆ

ಬೆಂಗಳೂರು ಮೆಟ್ರೊ ರೈಲು ಯೋಜನೆಯ ಮೂರನೇ ಹಂತದ ಮಹತ್ವಾಕಾಂಕ್ಷಿ ಭಾಗವಾಗಿರುವ 'ಆರೆಂಜ್ ಲೈನ್', ಸುಮಾರು 32.15 ಕಿಲೋಮೀಟರ್ ಉದ್ದವಿದೆ. ಜೆ.ಪಿ. ನಗರ 4ನೇ ಹಂತದಿಂದ ಪ್ರಾರಂಭವಾಗಿ ಪಶ್ಚಿಮ ಹೊರ ವರ್ತುಲ ರಸ್ತೆಯ ಮೂಲಕ ಹೆಬ್ಬಾಳದವರೆಗೆ ಸಾಗಲಿದ್ದು, ನಗರದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳನ್ನು ಜೋಡಿಸಲಿದೆ. ಒಟ್ಟು 22 ನಿಲ್ದಾಣಗಳನ್ನು ಒಳಗೊಂಡಿರುವ ಈ ಮಾರ್ಗವು ಐಟಿ ಕಾರಿಡಾರ್‌ಗಳು ಮತ್ತು ಪೀಣ್ಯದಂತಹ ಬೃಹತ್ ಕೈಗಾರಿಕಾ ಪ್ರದೇಶಗಳ ನಡುವೆ ಸುಗಮ ಸಂಪರ್ಕ ಕಲ್ಪಿಸುವ ಮೂಲಕ ಉದ್ಯೋಗಿಗಳ ದೈನಂದಿನ ಪ್ರಯಾಣದ ಹೊರೆಯನ್ನ ತಗ್ಗಿಸುವ ಗುರಿ ಹೊಂದಿದೆ. ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಬೆಸೆಯುವ ಈ ಯೋಜನೆಗೆ ಈಗಾಗಲೇ ಕೇಂದ್ರ ಸಂಪುಟದ ಅನುಮೋದನೆ ದೊರೆತಿದ್ದು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಆರಂಭಿಕ ಕಾಮಗಾರಿಗಳು ಭರದಿಂದ ಸಾಗುತ್ತಿವೆ.

ಈ ಮೆಟ್ರೊ ಮಾರ್ಗವು ಕೇವಲ ಸಂಚಾರ ವ್ಯವಸ್ಥೆಯ ಸುಧಾರಣೆಯಷ್ಟೇ ಅಲ್ಲದೆ, ನಗರದ ಪಶ್ಚಿಮ ಭಾಗದ ಆರ್ಥಿಕ ಪ್ರಗತಿಗೂ ಹೊಸ ವೇಗ ನೀಡಲಿದೆ. ಕೆಂಗೇರಿ, ನಾಯಂಡಹಳ್ಳಿ ಮತ್ತು ಬೆಳ್ಮೋಲದಂತಹ ಜನನಿಬಿಡ ಪ್ರದೇಶಗಳನ್ನು ಹಸಿರು ಮತ್ತು ನೇರಳೆ ಮಾರ್ಗಗಳೊಂದಿಗೆ ಈ ಆರೆಂಜ್ ಲೈನ್ ಬೆಸೆಯುವುದರಿಂದ, ಇಡೀ ಮೆಟ್ರೊ ಜಾಲವು ಒಂದು ಸುಸಜ್ಜಿತ ಗ್ರಿಡ್ ಮಾದರಿಯನ್ನು ಪಡೆದುಕೊಳ್ಳಲಿದೆ. ಮೈಸೂರು ರಸ್ತೆ, ಕನಕಪುರ ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆಗಳಲ್ಲಿನ ವಾಹನ ದಟ್ಟಣೆ ಗಣನೀಯವಾಗಿ ಇಳಿಮುಖವಾಗಲಿದೆ.

Read More
Next Story