Good news for metro passengers: 3 new trains to run from August, waiting time reduced by 30%!
x

ಹಸಿರು ಮಾರ್ಗ ಮೆಟ್ರೋ

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಗ್ರೀನ್‌ಲೈನ್‌ನಲ್ಲಿ ಹೆಚ್ಚುವರಿ 3 ರೈಲುಗಳ ಸಂಚಾರ

ಪ್ರಸ್ತುತ ಆಸಿಲೇಶನ್ ಪರೀಕ್ಷೆಗಳು ಹಾಗೂ ಸಿಗ್ನಲಿಂಗ್ ಇಂಟಿಗ್ರೇಷನ್ ಪರೀಕ್ಷೆಗಳು ಯಶಸ್ವಿಯಾಗಿದ್ದು, ರೈಲ್ವೆ ಮಂಡಳಿಯಿಂದ ಅನುಮೋದನೆ ಸಿಕ್ಕಿದ್ದು, ಅಂತಿಮ ಪರಿಶೀಲನೆಯಷ್ಟೇ ಬಾಕಿ ಇದೆ.


Click the Play button to hear this message in audio format

ಉದ್ಯಾನ ನಗರಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಬೇಸತ್ತು ಮೆಟ್ರೋ ಆಶ್ರಯಿಸಿರುವ ಲಕ್ಷಾಂತರ ಪ್ರಯಾಣಿಕರಿಗೆ ಕೊನೆಗೂ ನಿಟ್ಟುಸಿರು ಬಿಡುವ ಕಾಲ ಹತ್ತಿರ ಬಂದಿದೆ. ನಿತ್ಯ 10 ಲಕ್ಷಕ್ಕೂ ಅಧಿಕ ಮಂದಿ ಸಂಚರಿಸುವ 'ನಮ್ಮ ಮೆಟ್ರೋ' ಜಾಲದ ಅತ್ಯಂತ ಕಠಿಣ ಸಮಸ್ಯೆಯಾದ 'ದಟ್ಟಣೆ'ಯನ್ನು ನಿಯಂತ್ರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಭರ್ಜರಿ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ.

ಆಗಸ್ಟ್ ತಿಂಗಳಿನಿಂದ ಮಾದಾವರ - ಸಿಲ್ಕ್ ಇನ್‌ಸ್ಟಿಟ್ಯೂಟ್ ಒಳಗೊಂಡ 33 ಕಿ.ಮೀ ಉದ್ದದ ಹಸಿರು ಮಾರ್ಗದಲ್ಲಿ 3 ಹೊಸ ಅತ್ಯಾಧುನಿಕ ರೈಲುಗಳು ಅಧಿಕೃತವಾಗಿ ಸಂಚಾರ ಆರಂಭಿಸಲಿವೆ. ಆದರೆ, ಬಿಎಂಆರ್‌ಸಿಎಲ್‌ ಮಾಡಿಕೊಂಡಿರುವ ಈ ಯೋಜನೆಯು ಕೇವಲ ಗ್ರೀನ್ ಲೈನ್‌ಗೆ ಮಾತ್ರವಲ್ಲ, ಅತಿ ಹೆಚ್ಚು ಜನದಟ್ಟಣೆ ಇರುವ ಪರ್ಪಲ್ ಲೈನ್‌ಗೂ ಬಂಪರ್ ಲಾಭ ತಂದುಕೊಡಲಿದೆ.

ಏನಿದು ಬಿಎಂಆರ್‌ಸಿಎಲ್‌ ವರ್ಗಾವಣೆ ತಂತ್ರ?

ಬೆಂಗಳೂರು ಮೆಟ್ರೋ ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ಮತ್ತು ಪಶ್ಚಿಮ ಬಂಗಾಳದ ಟಿತಾಗಢ್ ರೈಲ್ ಸಿಸ್ಟಮ್ಸ್ ಸಹಭಾಗಿತ್ವದಲ್ಲಿ ಒಟ್ಟು 21 ಹೊಸ ಆರು-ಬೋಗಿಗಳ ರೈಲುಗಳಿಗೆ ಆರ್ಡರ್ ನೀಡಿತ್ತು. ಬಿಎಂಆರ್‌ಸಿಎಲ್‌ ನಿಯಮಾವಳಿ ಪ್ರಕಾರ ಈ ಎಲ್ಲ 21 ಹೊಸ ರೈಲುಗಳನ್ನು ಕೇವಲ ಗ್ರೀನ್ ಲೈನ್‌ಗೆ ಮಾತ್ರ ನಿಯೋಜಿಸಲಾಗುತ್ತಿದೆ. ಹೊಸ ರೈಲುಗಳ ನಿರ್ವಹಣಾ ಸೌಲಭ್ಯ ಹಾಗೂ ಬಿಡಿಭಾಗಗಳ ಮೂಲಸೌಕರ್ಯಗಳನ್ನು ಹಸಿರು ಮಾರ್ಗದ 'ಪೀಣ್ಯ ಡಿಪೋ'ದಲ್ಲಿ ಮಾತ್ರ ಕ್ರೋಢೀಕರಿಸಲಾಗಿದೆ. ಎರಡು ಬೇರೆ ಬೇರೆ ಡಿಪೋಗಳಲ್ಲಿ ನಿರ್ವಹಣೆ ಮಾಡುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿದೆ.

ತಾಂತ್ರಿಕ ಪರೀಕ್ಷೆಗಳು

ಈ ಹೊಸ ರೈಲುಗಳು ಜನವರಿ 2025ರಲ್ಲೇ ಬೆಂಗಳೂರಿಗೆ ಬಂದಿಳಿದಿದ್ದರೂ, ಇಷ್ಟು ದಿನಗಳ ಕಾಲ ಹಳಿಗೆ ಇಳಿದಿರಲಿಲ್ಲ. ಇದಕ್ಕೆ ಕಾರಣ ಮೆಟ್ರೋ ಸುರಕ್ಷತೆಯ ಕಠಿಣ ನಿಯಮಗಳು. ಈ ರೈಲುಗಳು ವಾಣಿಜ್ಯ ಬಳಕೆಗೆ ಮುನ್ನ ಒಟ್ಟು 37 ಸುರಕ್ಷತಾ ಅನುಮತಿಗಳನ್ನು ಪೂರ್ಣಗೊಳಿಸಬೇಕಿತ್ತು. ಹಗಲಿನಲ್ಲಿ ಮೆಟ್ರೋ ಸಂಚಾರವಿರುವುದರಿಂದ, ಕೇವಲ ರಾತ್ರಿ 11.30 ರಿಂದ ಬೆಳಗಿನ ಜಾವ 3.30ರ ಅವಧಿಯಲ್ಲಿ ಮಾತ್ರ ಪ್ರಾಯೋಗಿಕ ಓಟವನ್ನು ನಡೆಸಬೇಕಾಗಿ ಬಂದಿದ್ದರಿಂದ ಪರೀಕ್ಷೆಗಳು ತಡವಾಗಿದ್ದವು. ಪ್ರಸ್ತುತ ಆಸಿಲೇಶನ್ ಪರೀಕ್ಷೆಗಳು ಹಾಗೂ ಸಿಗ್ನಲಿಂಗ್ ಇಂಟಿಗ್ರೇಷನ್ ಪರೀಕ್ಷೆಗಳು ಯಶಸ್ವಿಯಾಗಿದ್ದು, ರೈಲ್ವೆ ಮಂಡಳಿಯಿಂದ ಅನುಮೋದನೆ ಸಿಕ್ಕಿದ್ದು, ಅಂತಿಮ ಪರಿಶೀಲನೆಯಷ್ಟೇ ಬಾಕಿ ಇದೆ.

ಕಾಯುವ ಸಮಯ ಶೇ. 30 ರಷ್ಟು ಕಡಿತ

ಹೊಸ ರೈಲುಗಳು ಹಳಿ ಇಳಿಯುವುದರಿಂದ ಗ್ರೀನ್ ಲೈನ್‌ನಲ್ಲಿ ರೈಲುಗಳ ಒಟ್ಟು ಸಂಖ್ಯೆ 24 ರಿಂದ 27ಕ್ಕೆ ಏರಿಕೆಯಾಗಲಿದೆ. ಇದು ಕಾಯುವ ಸಮಯವನ್ನು ಗಣನೀಯವಾಗಿ ತಗ್ಗಿಸಲಿದೆ. ಸಂಚಾರ ದಟ್ಟಣೆ ಸಮಯದಲ್ಲಿ ಪ್ರತಿ 5 ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತಿತ್ತು. ಆದರೆ ಈಗ ಪ್ರತಿ 3.30 ನಿಮಿಷಕ್ಕೆ ಒಂದು ರೈಲು ಓಡಲಿದೆ. ಇದರಿಂದ ಶೇ. 30 ರಷ್ಟು ಸಮಯ ಉಳಿತಾಯವಾಗಲಿದೆ. ಸಾಮಾನ್ಯ ಅವಧಿಯಲ್ಲಿ ಪ್ರತಿ 8 ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತಿತ್ತು. ಆದರೆ ಈಗ ಪ್ರತಿ 6 ರಿಂದ 7 ನಿಮಿಷಕ್ಕೆ ಒಂದು ರೈಲು ಸಂಚರಿಸುವುದರಿಂದ ಶೇ. 15-20 ರಷ್ಟು ಸಮಯ ಉಳಿತಾಯವಾಗಲಿದೆ.

ಆಗಸ್ಟ್‌ನಲ್ಲಿ ಆರಂಭಿಕವಾಗಿ 3 ರೈಲುಗಳು ಟ್ರ್ಯಾಕ್‌ಗೆ ಇಳಿಯಲಿದ್ದು, ಉಳಿದ 18 ರೈಲುಗಳು ಪಶ್ಚಿಮ ಬಂಗಾಳದ ಟಿತಾಗಢ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿವೆ. ಬಿಎಂಆರ್‌ಸಿಎಲ್‌ ಯೋಜನೆಯ ಪ್ರಕಾರ ಡಿಸೆಂಬರ್ ವೇಳೆಗೆ ಇನ್ನೂ 8 ರಿಂದ 10 ರೈಲುಗಳು ಹಾಗೂ ಮುಂದಿನ ವರ್ಷದ ಮಾರ್ಚ್ ವೇಳೆಗೆ ಇಡೀ 21 ರೈಲುಗಳ ಪೂರ್ಣ ಬ್ಯಾಚ್ ಬೆಂಗಳೂರು ಮೆಟ್ರೋ ಸೇರಲಿದೆ.

Read More
Next Story