
ಮೆಟ್ರೋ ಪ್ರಯಾಣಿಕರಿಗೆ ಬಿಗ್ ರಿಲೀಫ್: ಟಿಕೆಟ್ ದರ ಏರಿಕೆ ನಿರ್ಧಾರ ತಡೆಹಿಡಿದ ಬಿಎಂಆರ್‌ಸಿಎಲ್
ದರ ಏರಿಕೆ ನಿರ್ಧಾರವನ್ನು ಮರುಪರಿಶೀಲಿಸಲು ಮಂಡಳಿ ತೀರ್ಮಾನಿಸಿದ್ದು, ಏರಿಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಎಕ್ಸ್ (X) ಖಾತೆಯಲ್ಲಿ ಪ್ರಕಟಿಸಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸೋಮವಾರದಿಂದ (ಫೆಬ್ರವರಿ 9) ಜಾರಿಗೆ ಬರಬೇಕಿದ್ದ ಶೇ. 5ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಾತ್ಕಾಲಿಕವಾಗಿ ತಡೆಹಿಡಿದಿದೆ. ಶನಿವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ಅವರು ಈ ಸುದ್ದಿಯನ್ನು ಹೇಳಿದ್ದರು.
ಹೆಚ್ಚುತ್ತಿರುವ ನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ ಫೆಬ್ರವರಿ 5ರಂದು ಬಿಎಂಆರ್‌ಸಿಎಲ್ ದರ ಹೆಚ್ಚಳದ ಪ್ರಕಟಣೆ ಹೊರಡಿಸಿತ್ತು. ಆದರೆ, ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಪ್ರಯಾಣಿಕರಿಗೆ ಹೊರೆಯಾಗದಂತೆ ಸೇವೆಯನ್ನು ಮುಂದುವರಿಸುವ ನಿಟ್ಟಿನಲ್ಲಿ, ದರ ಏರಿಕೆ ನಿರ್ಧಾರವನ್ನು ಮರುಪರಿಶೀಲಿಸಲು ಮಂಡಳಿ ತೀರ್ಮಾನಿಸಿದ್ದು, ಏರಿಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಎಕ್ಸ್ (X) ಖಾತೆಯಲ್ಲಿ ಪ್ರಕಟಿಸಿದೆ.
ಕೇಂದ್ರದ ಸೂಚನೆ ಕಾರಣವೇ?
ಬಿಎಂಆರ್‌ಸಿಎಲ್ ಈ ನಿರ್ಧಾರದಿಂದ ಹಿಂದೆ ಸರಿಯಲು ಕೇಂದ್ರ ಸರ್ಕಾರದ ಮಧ್ಯಪ್ರವೇಶವೇ ಕಾರಣ ಎಂದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ಕೇಂದ್ರದ ಸೂಚನೆಯ ಮೇರೆಗೆ ದರ ಏರಿಕೆಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಬಿಎಂಆರ್‌ಸಿಎಲ್ ಅಧಿಕಾರಿಗಳು ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಇದು ಮಂಡಳಿಯ ಆಂತರಿಕ ಪರಾಮರ್ಶೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಆಕ್ರೋಶ ಮತ್ತು ಒತ್ತಾಯ
ಬೆಂಗಳೂರು ಮೆಟ್ರೋ ದರ ಈಗಾಗಲೇ ದೇಶದ ಇತರೆ ಮೆಟ್ರೋಗಳಿಗೆ ಹೋಲಿಸಿದರೆ ಅತ್ಯಂತ ದುಬಾರಿ ಎಂಬುದು ಪ್ರಯಾಣಿಕರ ಅಳಲು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು, "ಈಗಾಗಲೇ ದರಗಳು ಗಗನಕ್ಕೇರಿವೆ. ಮತ್ತೆ ದರ ಏರಿಸುವ ಬದಲು ದರ ಇಳಿಕೆ ಮಾಡಿ," ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಅವೈಜ್ಞಾನಿಕವಾಗಿ ದರ ಏರಿಸುವ ಬದಲು, ಕೂಡಲೇ 'ದರ ನಿಗದಿ ಸಮಿತಿ'ಯನ್ನು (Fare Fixation Committee) ರಚಿಸಿ, ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯಕ್ಕಂತೂ ದರ ಏರಿಕೆಯ ತೂಗುಗತ್ತಿ ಸರಿದಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

