Our Metro gift for New Years Eve: Traffic till 3 am; M.G. Road station closed!
x

ಸಾಂದರ್ಭಿಕ ಚಿತ್ರ

ದರ ನಿಗದಿ ಸಮಿತಿ ವರದಿ ಬಹಿರಂಗ; ಮೆಟ್ರೋ ದರ ಪರಿಷ್ಕರಣೆಗೆ ರಾಜ್ಯದ್ದೇ ಒತ್ತಡ, ಇಲ್ಲಿವೆ ಹಲವು ಸಂಗತಿಗಳು

ಕರ್ನಾಟಕ ಸರ್ಕಾರದ ಖಜಾನೆ ಖಾಲಿ ಆಗಿರುವ ಕಾರಣ ಪ್ರಸಕ್ತ ಹಾಗೂ ಹಿಂದಿನ ಹಣಕಾಸು ವರ್ಷಗಳಲ್ಲಿ ಮೆಟ್ರೋಗೆ ಶಾಡೋ ಕ್ಯಾಷ್ ಬೆಂಬಲ ನಿಲ್ಲಿಸಿದೆ ಎಂಬ ಆರೋಪ ಕೇಳಿ ಬಂದಿದೆ.


ಕೇಂದ್ರ ಸರ್ಕಾರವು ʼದರ ನಿಗದಿ ಸಮಿತಿʼ (ಎಫ್ಎಫ್‌ಸಿ) ಮಾಡಿದರೂ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರವೇ ಒತ್ತಡ ಹಾಕಿದೆ ಎಂಬುದು ಫೇರ್‌ ಫಿಕ್ಸೇಷನ್‌ ಕಮಿಟಿ ವರದಿಯಲ್ಲಿ ಬಹಿರಂಗವಾಗಿದೆ.

ಕರ್ನಾಟಕ ಸರ್ಕಾರದ ಹಣಕಾಸು ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ ಪರಿಗಣಿಸಿಯೇ ದರ ಪರಿಷ್ಕರಿಸಲಾಗಿದೆ ಎಂದು ವರದಿ ಹೇಳಿದೆ. ದರ ನಿಗದಿ ಸಮಿತಿ ವರದಿ ಬಹಿರಂಗ ಸಂಬಂಧ ಹೈಕೋರ್ಟ್‌ನಲ್ಲಿ ಸುಮಾರು ಏಳು ತಿಂಗಳ ಕಾಲ ಕಾನೂನು ಸಮರ ನಡೆಸಿದ ಪರಿಣಾಮ ಕೊನೆಗೂ ಬೆಂಗಳೂರು ಮೆಟ್ರೋ ರೈಲು ನಿಗಮವು ಎಫ್ಎಫ್‌ಸಿ ವರದಿ ಬಿಡುಗಡೆ ಮಾಡಿದೆ.

ಎಫ್ಎಫ್‌ಸಿ ವರದಿ ಪ್ರಕಾರ, ಬಿಎಂಆರ್‌ಸಿಎಲ್‌ ಮೇಲೆ ರಾಜ್ಯ ಸರ್ಕಾರವೇ ಒತ್ತಡ ಹಾಕಿ ದರ ನಿಗದಿ ಸಮಿತಿ ರಚನೆಗೆ ಕೋರಿತ್ತು. ರಾಜ್ಯ ಸರ್ಕಾರದ ಮನವಿ ಪರಿಗಣಿಸಿಯೇ ಕೇಂದ್ರ ಸರ್ಕಾರ 2024 ಸೆ.7 ರಂದು ಎಫ್ಎಫ್‌ಸಿ ರಚಿಸಿತು. ಸಮಿತಿಗೆ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ಥಾರಣಿ ಅವರನ್ನು ಅಧ್ಯಕ್ಷರನ್ನಾಗಿ, ಸದಸ್ಯರಾಗಿ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್ ಹಾಗೂ ಕರ್ನಾಟಕದ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಾಯಕ ಮುಖ್ಯಕಾರ್ಯದರ್ಶಿ(ಎಸಿಎಸ್) ಡಾ.ಇ.ವಿ.ರಮಣರೆಡ್ಡಿ ಅವರನ್ನು ನೇಮಕ ಮಾಡಲಾಗಿತ್ತು.

2017ರಿಂದ ʼನಮ್ಮ ಮೆಟ್ರೋʼ ದರ ಏರಿಕೆಯಾಗಿರಲಿಲ್ಲ. ಬೆಲೆ ಏರಿಕೆ ಮಾಡುವಂತೆ ರಾಜ್ಯ ಸರ್ಕಾರ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಿ, 2024 ಅ.28 ರಂದು ಮಾಧ್ಯಮಗಳಿಗೆ ಪ್ರಕಟಣೆ ನೀಡಲಾಗಿತ್ತು.

ಸುಮಾರು 1126 ಜನರು ತಮ್ಮ ಸಲಹೆ, ಅಭಿಪ್ರಾಯ ನೀಡಿದ್ದರು. 843 ಪ್ರತಿಕ್ರಿಯೆಗಳು ಇ-ಮೇಲ್ ಮೂಲಕ ಮತ್ತು 283 ಪ್ರತಿಕ್ರಿಯೆಗಳು ವಾಟ್ಸ್​​ಆ್ಯಪ್​ ಮೂಲಕ ಬಂದಿವೆ. ಈ ಪೈಕಿ ಶೇ 27 ರಷ್ಟು ಜನರು ದರ ಏರಿಕೆಗೆ ಒಪ್ಪಿದರೆ, ಶೇ 51 ರಷ್ಟು ಜನರು ದರ ಏರಿಕೆಗೆ ಅಪಸ್ವರ ವ್ಯಕ್ತಪಡಿಸಿದ್ದರು ಎಂದು ವರದಿ ಹೇಳಿದೆ.

ಡಿಎಂಆರ್‌ಸಿ, ಸಿಂಗಾಪುರ ಎಸ್ಎಂಆರ್‌ಟಿ ಹಾಗೂ ಎಂಆರ್‌ಟಿ ಹಾಂಗ್‌ಕಾಂಗ್‌ಗೆ ಸಮಿತಿಯು ಭೇಟಿ ನೀಡಿತ್ತು. ಅಲ್ಲಿನ ದರ ಪರಿಷ್ಕರಣೆ, ವಾರ್ಷಿಕ ಯಾಂತ್ರೀಕೃತ ದರ ಪರಿಷ್ಕರಣೆ, ಇತರೆ ಆದಾಯಗಳ ಬಗ್ಗೆ ಪರಿಶೀಲಿಸಿ, ಕರ್ನಾಟಕ ಸರ್ಕಾರದ ಹಣಕಾಸು ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ ಪರಿಗಣಿಸಿ ದರ ಹೆಚ್ಚಿಸಲಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ.

ಆರ್ಥಿಕ ಪರಿಸ್ಥಿತಿ ಹದಗೆಡಲಿದೆ

ಸಮಿತಿಯು ವಾರ್ಷಿಕ ಸ್ವಯಂ ಚಾಲಿತ ದರ ಪರಿಷ್ಕರಣೆ ಸೂತ್ರದ ಆಧಾರದ ಮೇಲೆ ವರ್ಷದಿಂದ ವರ್ಷಕ್ಕೆ ದರವನ್ನು ಶೇ 5 ರಷ್ಟು ಪರಿಷ್ಕರಿಸುವುದರಿಂದ 2025-26 ರಿಂದ 2029-30 ರವರೆಗಿನ ವರ್ಷವಾರು ಸಾಲ ಮರುಪಾವತಿ ಸಾಧ್ಯವಾಗಲಿದೆ. ಕ್ರಮವಾಗಿ 911 ಕೋಟಿ, 1338 ಕೋಟಿ, 1440 ಕೋಟಿ ಮತ್ತು 1457 ಕೋಟಿ ರೂ. ಬಾಕಿ ಪಾವತಿಸಬೇಕು.

ವಾರ್ಷಿಕ ದರ ಪರಿಷ್ಕರಣೆ ಹೆಚ್ಚಿಸದಿದ್ದರೆ ನಗದು ಲಭ್ಯತೆ ಹದಗೆಡಲಿದೆ. ಆಸ್ತಿ ನವೀಕರಣ ಮತ್ತು ಬದಲಿಯನ್ನು ಪೂರೈಸಲು ನಕಾರಾತ್ಮಕ ನಗದು ಲಭ್ಯತೆ ಕಡಿಮೆಯಾಗಲಿದೆ. ಆದ್ದರಿಂದ, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳ ವಿವಿಧ ಅಂಶಗಳ ಬದಲಾವಣೆಗಳ ಆಧಾರದ ಮೇಲೆ ದರ ಪರಿಷ್ಕರಿಸಲು ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರ ಅಗತ್ಯ ಎಂದು ಸಮಿತಿ ಹೇಳಿದೆ.

ಎಫ್ಎಫ್‌ಸಿಯಲ್ಲಿ ರಾಜ್ಯ ಸರ್ಕಾರ ಹೇಳಿದ್ದೇನು?

ಯಾವುದೇ ಕಂಪನಿ ಅಥವಾ ಸರ್ಕಾರಿ ಸ್ವಾಮ್ಯದ ಕಂಪನಿ ನಡೆಸುವಾಗ ಖರ್ಚು ವೆಚ್ಚ ಲೆಕ್ಕ ಮಾಡುವುದು ಮುಖ್ಯ.ಅದೇ ರೀತಿಯಲ್ಲಿ ಮೆಟ್ರೋ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಯೋಜನೆಗೆ ಬಾಹ್ಯ ಸಂಸ್ಥೆಗಳಿಂದ ಮಾಡಿರುವ ಸಾಲ ಹಿಂತಿರುಗಿಸಲು ದರ ಪರಿಷ್ಕರಣೆ ಅಗತ್ಯವಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿತ್ತು ಎಂದು ಹೇಳಲಾಗಿದೆ.

“ಯಾವುದೇ ಸರ್ಕಾರವು ಸಾರ್ವಜನಿಕ ಸಾರಿಗೆ ಉತ್ತೇಜಿಸಲು ರಿಯಾಯಿತಿ, ಸಬ್ಸಿಡಿ ಅಥವಾ ಗ್ಯಾರೆಂಟಿ ಯೋಜನೆಯಂತೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಬೇಕು. ಆದರೆ, ಕರ್ನಾಟಕ ಸರ್ಕಾರ ತನ್ನ ಖಜಾನೆ ದಿವಾಳಿ ಆಗಿರುವುದನ್ನು ಮುಚ್ಚಿ ಹಾಕಿಕೊಳ್ಳಲು ಮೆಟ್ರೋ ಪ್ರಯಾಣ ದರ ಏರಿಕೆಗೆ ಮುಂದಾಗಿದೆ” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಮೆಟ್ರೋ ಸಂಸ್ಥೆಗೆ ಎರಡು ರೀತಿಯ ಆದಾಯ

ಮೆಟ್ರೋ ಸಂಸ್ಥೆಗೆ ಎರಡು ರೀತಿಯಲ್ಲಿ ಆದಾಯ ಬರಲಿದೆ. ಟಿಕೆಟ್ ಹಣದಿಂದ ಬರುವ ಆದಾಯ ಹಾಗೂ ಜಾಹೀರಾತು, ವಾಣಿಜ್ಯ ಮಳಿಗೆ, ಬಾಡಿಗೆ ಸೇರಿದಂತೆ ಇತರೆ ಮೂಲಗಳಿಂದ ಆದಾಯ ಬರುತ್ತಿದೆ.

ಇತ್ತೀಚೆಗೆ ಕಡಿಮೆ ಸಂಖ್ಯೆಯ ಪ್ರಯಾಣಿಕರು ಬರುತ್ತಿದ್ದು, ಹಲವು ಮಾರ್ಗಗಳು ಕಾಮಗಾರಿ ಹಂತದಲ್ಲಿರುವುದರಿಂದ ವಿದೇಶಿ ಬ್ಯಾಂಕ್‌ಗಳಿಂದ ಪಡೆದಿರುವ ಸಾಲ ಹಾಗೂ ಬಡ್ಡಿ ತೀರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಬಿಎಂಆರ್‌ಸಿಎಲ್‌ಗೆ ಎಲ್ಲಾ ಹಿಂದಿನ ಸರ್ಕಾರಗಳು ನೀಡಿದಂತೆ ಶಾಡೊ ಕ್ಯಾಷ್ ಸಪೋರ್ಟ್ ನೀಡಬೇಕು. ಆದರೆ, ಕರ್ನಾಟಕ ಸರ್ಕಾರದ ಖಜಾನೆ ಖಾಲಿ ಆಗಿರುವ ಕಾರಣ ರಾಜ್ಯ ಸರ್ಕಾರವು ಪ್ರಸಕ್ತ ಹಾಗೂ ಹಿಂದಿನ ಹಣಕಾಸು ವರ್ಷಗಳಲ್ಲಿ ಮೆಟ್ರೋಗೆ ಶಾಡೋ ಕ್ಯಾಷ್ ಬೆಂಬಲ ನಿಲ್ಲಿಸಿದೆ ಎಂದು ಆರೋಪಿಸಲಾಗಿದೆ.

ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಬಗ್ಗೆ ಅಧಿಕಾರಿಗಳೇ ಎಫ್ಎಫ್ಸಿ ಕಮಿಟಿ ಸಭೆಯಲ್ಲಿ ಉಲ್ಲೇಖಿಸಿರುವುದು ಕೂಡ ವರದಿಯಲ್ಲಿದೆ. ಇದನ್ನು ನೋಡಿದಾಗ ರಾಜ್ಯ ಸರ್ಕಾರ 200 ಕೋಟಿ ರೂ.ಗಳನ್ನು ಬಿಎಂಆರ್ಸಿಎಲ್ಗೆ ನೀಡುವ ಪರಿಸ್ಥಿತಿಯಲ್ಲಿ ಇಲ್ಲ ಎಂಬುದು ಅರ್ಥವಾಗುತ್ತದೆ ಎಂದು ದೂರಲಾಗಿದೆ.

“ಪ್ರತಿ ವರ್ಷ ಆಟೊಮ್ಯಾಟಿಕ್ ಫೇರ್ ಫಿಕ್ಸೇಷನ್ ಗೂ ರಾಜ್ಯ ಸರ್ಕಾರದ ಅಧಿಕಾರಿಗಳೇ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಗ್ಯಾರೆಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ರಾಜ್ಯದ ಜನತೆಗೆ ಮಹಾಮೋಸ ಮಾಡುತ್ತಿದೆ. ತಿಂಗಳಿಗೆ 2000 ರೂ. ಕೊಡುತ್ತೇವೆ ಎನ್ನುವ ಮೂಲಕ ಬೆಂಗಳೂರಿಗರಿಂದ 4000 ರೂ. ವಸೂಲಿ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ದೂರಿದ್ದಾರೆ.

“ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಹೊಣೆಗಾರಿಕೆ ಹೊರಿಸುವುದು ಖಂಡನೀಯ. ಕೇಂದ್ರ ಸರ್ಕಾರ ಎಫ್ಎಫ್ಸಿ ಸಮಿತಿಯನ್ನು ನೇಮಕ ಮಾಡಿರುವುದು ಬಿಟ್ಟರೆ ದರ ಏರಿಕೆಯಲ್ಲಿ ಯಾವುದೇ ಪಾತ್ರವಿಲ್ಲ. ಕೇವಲ ಎಫ್ಎಫ್ಸಿ ಮಾಡುವುದು ಮಾತ್ರ ಕೇಂದ್ರದ ಜವಾಬ್ದಾರಿ. ರಾಜ್ಯ ಸರ್ಕಾರ ಬಿಎಂಆರ್ಸಿಎಲ್ ಮೇಲೆ ಒತ್ತಡ ಹಾಕಿ ತಮ್ಮ ಆರ್ಥಿಕ ದುರ್ಬಲತೆಯನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.

ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಮೆಟ್ರೋ ಪ್ರಯಾಣ ದರದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ನಮ್ಮಲ್ಲಿ ಕನಿಷ್ಠ 10 ರೂ, ಗರಿಷ್ಠ 90 ರೂ ಇದ್ದರೆ, ಬೇರೆ ರಾಜ್ಯಗಳಲ್ಲಿ ಗರಿಷ್ಠ 60, 80ರೂ. ಇದೆ.

ನೆರವು ನೀಡದ ರಾಜ್ಯ ಸರ್ಕಾರ

2017 – 2018 ರಲ್ಲಿ ರಾಜ್ಯ ಸರ್ಕಾರ ನಮ್ಮ ಮೆಟ್ರೋಗೆ 202 ಕೋಟಿ ಶಾಡೋ ಕ್ಯಾಷ್ ಸಪೋರ್ಟ್ ನೀಡಿತ್ತು. ಅದೇ ರೀತಿ 2018 – 2019 ರಲ್ಲಿ 116 ಕೋಟಿ ರೂ, 2019 - 2020 ರಲ್ಲಿ (ಕೋವಿಡ್ ಅವಧಿ) 50 ಕೋಟಿ ರೂ, 2020- 2021 ರಲ್ಲಿ (ಕೋವಿಡ್ ಅವಧಿ) 50 ಕೋಟಿ ರೂ. 2021 - 2022 ರಲ್ಲಿ 200 ಕೋಟಿ ರೂ., 2022 - 2023 ರಲ್ಲಿ 233 ಕೋಟಿ ರೂ. ನೀಡಲಾಗಿತ್ತು. ಆದರೆ, 2023-24 ರಲ್ಲಿ 15 ಕೋಟಿ ರೂ.ಗಳಷ್ಟೇ ನೀಡಿದೆ. 2024-25 ರಲ್ಲಿ ಯಾವುದೇ ನೆರವು ನೀಡಿಲ್ಲ ಎಂದು ಪ್ರತಿಪಕ್ಷಗಳು ದೂರಿವೆ.

ಎಫ್‌ಎಫ್‌ಸಿಯ ಇತರೆ ಶಿಫಾರಸುಗಳೇನು?

ಮೆಟ್ರೋ ನಿಲ್ದಾಣಗಳಿಂದ ಕೊನೆಯ ಹಾಗೂ ಒಳಗಿನ ಬಡಾವಣೆಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಫೀಡರ್ ಬಸ್ ಸೇವೆ ಒದಗಿಸಬೇಕು ಎಂದು ಎಫ್ಎಫ್​ಸಿ ಸಮಿತಿ ಬಲವಾಗಿ ಪ್ರತಿಪಾದಿಸಿತ್ತು. ಅದರಂತೆ ಇದೀಗ ಹಲವು ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್​​ಗಳ ಮೂಲಕ ಫೀಡರ್ ಸೇವೆ ಒದಗಿಸಿದೆ.

ಮೆಟ್ರೋ ಸಾರಿಗೆ ಹೆಚ್ಚು ಬಂಡವಾಳ ಬಯಸುತ್ತದೆ. ಆದಾಗ್ಯೂ, ಸಾರ್ವಜನಿಕರಿಗೆ ಅಗ್ಗದ ದರದ ಖಾತರಿ ನೀಡಬೇಕು. ಹಾಂಕಾಂಗ್​​ನಲ್ಲಿ ಪ್ರಯಾಣೇತರ ಆದಾಯಕ್ಕೆ ನೀಡಿದಂತೆ ಬಿಎಂಆರ್ಸಿಎಲ್ ಹೆಚ್ಚು ಒತ್ತು ನೀಡಬೇಕು.

ಬಹುಮಾದರಿಯ ಸಾರಿಗೆಗೆ ಅನುಕೂಲವಾಗುವಂತಹ ನಿಲ್ದಾಣಗಳು, ಇಂಟರ್​ಚೇಂಜ್​ ವ್ಯವಸ್ಥೆಯನ್ನು ಯೋಜಿಸಿ, ವಿನ್ಯಾಸ ಮಾಡಿ ಕಾರ್ಯರೂಪಕ್ಕೆ ತರಬೇಕು.

ಮೆಟ್ರೋ ಸುರಂಗಗಳನ್ನು ಜಾಹೀರಾತು ಪ್ರದರ್ಶನಕ್ಕೆ ಅನುಕೂಲವಾಗುವ ಸಾಧ್ಯತೆಗಳನ್ನು ಪರಿಷ್ಕರಿಸಬೇಕು.

ರೆಸ್ಕೋ ((Renewable Energy Service Company)) ಮಾದರಿಯ ಸೌರಶಕ್ತಿ ಉತ್ಪಾದನೆಗೆ ಪ್ರಯತ್ನಿಸಬೇಕು, ಇಲ್ಲವೇ ಕಡಿಮೆ ದರದಲ್ಲಿ ಲಭ್ಯವಾಗುವ ಕಡೆಗಳಿಂದ ನವೀಕರಿಸಬಹುದಾದ ಇಂಧನವನ್ನು ಪವರ್ ಪರ್ಚೇಸ್ ಅಗ್ರಿಮೆಂಟ್ ಮೂಲಕ ಖರೀದಿಸಬೇಕು.

ಶಿಕ್ಷಣ ಸಂಸ್ಥೆಗಳಿಗೆ ಮಾಸಿಕ ಆಧಾರದ ಮೇಲೆ ಗುಂಪು ಟಿಕೆಟ್ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು.

ದರ ನಿಗದಿ ಸಮಿತಿ ರಚಿಸಿ ಏಳೂವರೆ ವರ್ಷವಾಗಿದೆ. ಇನ್ನುಮುಂದೆ ಪ್ರತಿ ಮೂರು ವರ್ಷಕ್ಕೊಮ್ಮೆ ಹೊಸ ಸಮಿತಿ ರಚಿಸಬೇಕು ಎಂದು ಶಿಫಾರಸು ಮಾಡಿದೆ.

ಬಿಎಂಆರ್​​ಸಿಎಲ್​ ಮಂಡಳಿಯು ಎಫ್ಎಫ್​ಸಿ ಶಿಫಾರಸು ಮಾಡಿದ ದರಗಳನ್ನು ಜಾರಿಗೆ ತಂದ ದಿನಾಂಕದಿಂದ ಒಂದು ವರ್ಷದ ಬಳಿಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಜಾರಿಗೆ ಬರಲಿದೆ.

ವಾರ್ಷಿಕ ಶೇಕಡಾವಾರು ಹೆಚ್ಚಳವು ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರದಂತೆ ಇರಬೇಕು. ಇಲ್ಲವೇ ವಾರ್ಷಿಕ ಶೇ 5 ರಷ್ಟು ಇರಬೇಕು.

ಕಾರ್ಡ್ ಬಳಕೆದಾರರಿಗೆ ವರ್ಷದಿಂದ ವರ್ಷಕ್ಕೆ ಪರಿಷ್ಕೃತ ದರಗಳಲ್ಲಿ ಪೀಕ್ ಅವರ್ ರಹಿತ ಪ್ರಯಾಣಕ್ಕೆ ರಿಯಾಯಿತಿ ಮತ್ತು ರಜೆ ದಿನಗಳಲ್ಲಿ ವಿನಾಯಿತಿ ನೀಡಬೇಕು.

Read More
Next Story