
ಬೆಂಗಳೂರು ಕರಗ ಉತ್ಸವ
ಬೆಂಗಳೂರು ಕರಗಕ್ಕೆ ಭರದ ಸಿದ್ಧತೆ: ಮಾ. 24ರಿಂದ ವೈಭವದ ಆಚರಣೆ, ಭಕ್ತರಿಗೆ ಮಾರ್ಗಸೂಚಿ ಪ್ರಕಟ
ಮಾರ್ಚ್ 24ರಂದು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಶ್ರೀ ದ್ರೌಪದಿ ದೇವಿಯ ಕರಗ ಶಕ್ತ್ಯೋತ್ಸವ ಹಾಗೂ ಶ್ರೀ ಧರ್ಮರಾಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ.
ನಗರದ ಹೃದಯ ಭಾಗದಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಚೈತ್ರ ಮಾಸದ ಶುಕ್ಲ ಸಪ್ತಮಿಯಾದ ಮಾ. 24ರಿಂದ ಆರಂಭವಾಗಿ ಏ. 3ರವರೆಗೆ ನಡೆಯಲಿರುವ ಕರಗ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ವಿಶೇಷ ಪೂಜೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಯುಗಾದಿ ಹಬ್ಬದ ನಂತರ ಬರುವ ಚೈತ್ರ ಮಾಸದಲ್ಲಿ ನಡೆಯುವ ಈ ಕರಗ ಉತ್ಸವವು ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನವು ಪಾಂಡವರಲ್ಲಿ ಒಬ್ಬನಾದ ಧರ್ಮರಾಯನಿಗೆ ಸಮರ್ಪಿತವಾದ ದೇವಾಲಯವಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಾರ, ಈ ಬಾರಿ ಕರಗ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಮಾರ್ಚ್ 24ರಂದು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಶ್ರೀ ದ್ರೌಪದಿ ದೇವಿಯ ಕರಗ ಶಕ್ತ್ಯೋತ್ಸವ ಹಾಗೂ ಶ್ರೀ ಧರ್ಮರಾಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. ಪ್ರತಿದಿನ ವಿಶೇಷ ಪೂಜೆಗಳು ಮಾರ್ಚ್ 25ರಿಂದ ಮಾರ್ಚ್ 28ರವರೆಗೆ ನಡೆಯಲಿವೆ.
ಉತ್ಸವದ ಪ್ರಮುಖ ಕಾರ್ಯಕ್ರಮಗಳು
ಮಾರ್ಚ್ 24: ಕರಗ ಶಕ್ತ್ಯೋತ್ಸವ ಮತ್ತು ಮಹಾ ರಥೋತ್ಸವ, ಮಾ. 25-28: ಪ್ರತಿದಿನ ವಿಶೇಷ ಪೂಜೆಗಳು, ಮಾ. 29: ದೀಪಾರಾಧನೆ, ಮಾ. 30: ಹಸಿ ಕರಗ, ಮಾ. 31: ಪೌಂಗಲು ಸೇವೆ (ಪುರಾಣ ಕಥನ), ಏ. 1: ಚೈತ್ರ ಹುಣ್ಣಿಮೆ, ಏ. 2: ಪುರಾಣ ಪ್ರವಚನ ಮತ್ತು ದೇವಾಲಯದಲ್ಲಿ ಗವು ಶಾಂತಿ, ಏ. 3: ವಸಂತೋತ್ಸವ ಮತ್ತು ಕರಗ ಉತ್ಸವದ ಮುಕ್ತಾಯ. ಈ ಬಾರಿ ನಡೆಯುವ ಕರಗ ಉತ್ಸವಕ್ಕೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2025ರ ಕರಗ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ಭಕ್ತರಿಗೆ ಮಾರ್ಗಸೂಚಿ ಪ್ರಕಟ
ಬೆಂಗಳೂರಿನ ಪ್ರಸಿದ್ಧ ಧರ್ಮರಾಯಸ್ವಾಮಿ ಕರಗ ಉತ್ಸವವು ಏಪ್ರಿಲ್ 1ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ, ದೇವಾಲಯದ ಆಡಳಿತ ಮಂಡಳಿಯು ಭಕ್ತರಿಗೆ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಮತ್ತು ಮನವಿಗಳನ್ನು ಬಿಡುಗಡೆ ಮಾಡಿದೆ. ಕರಗವು ರಾಜಬೀದಿಯಲ್ಲಿ ಸಂಚರಿಸುವಾಗ ಭಕ್ತರು ಅನುಸರಿಸಬೇಕಾದ ಕ್ರಮಗಳು, ಪೂಜಾ ವಿಧಾನಗಳು ಮತ್ತು ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
ಮಲ್ಲಿಗೆ ಹೂ ಅರ್ಪಣೆಗೆ ಮನವಿ
ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯು ಹೊರಡಿಸಿರುವ ಪ್ರಕಟಣೆಯಲ್ಲಿ, ಕರಗದ ಮೇಲೆ ಮಲ್ಲಿಗೆ ಹೂವುಗಳನ್ನು ಮಾತ್ರ ಅರ್ಪಿಸಬೇಕು ಎಂದು ತಿಳಿಸಲಾಗಿದೆ. ಗಂಧದ ಪುಡಿ, ಕುಂಕುಮ, ಅರಿಶಿನ, ಬಾಳೆಹಣ್ಣು, ದವನ ಮುಂತಾದ ಯಾವುದೇ ಪೂಜಾ ಸಾಮಗ್ರಿಗಳನ್ನು ಕರಗದ ಮೇಲೆ ಹಾಕುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕರಗವು ರಾಜಬೀದಿಯಲ್ಲಿ ಸಂಚರಿಸುವಾಗ ಭಕ್ತರು ದೂರದಿಂದಲೇ ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ದೇವಸ್ಥಾನದ ಬಳಿ ಯಾವುದೇ ರೀತಿಯ ನೂಕುನುಗ್ಗಲು ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕುಲಬಾಂಧವರು ಹಾಗೂ ಭಕ್ತ ಮಹಾಶಯರು ಕರಗವು ಸಂಚರಿಸುವ ರಸ್ತೆಗಳಲ್ಲಿರುವ ತಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಮನೆಗಳ ಮೇಲೆ ವಿದ್ಯುತ್ ದೀಪಾಲಂಕಾರಗಳನ್ನು ಮಾಡಿ ಕರಗಕ್ಕೆ ಸ್ವಾಗತ ಕೋರುವ ಮೂಲಕ ಉತ್ಸವಕ್ಕೆ ಸಹಕರಿಸಬೇಕೆಂದು ದೇವಸ್ಥಾನ ಸಮಿತಿಯು ಕೋರಿದೆ. ಅಲ್ಲದೆ, ಉತ್ಸವಕ್ಕೆ ಅಡ್ಡಿಯಾಗದಂತೆ ವಿದ್ಯುತ್ ತಂತಿಗಳು ಮತ್ತು ತೋರಣಗಳನ್ನು ಎತ್ತರದಲ್ಲಿ ಕಟ್ಟಬೇಕು. ಏ. 1ರ ಬುಧವಾರ ರಾತ್ರಿ 11.50ಕ್ಕೆ ರಥಗಳು ಪೂರ್ವ ದಿಕ್ಕಿಗೆ ಸ್ವಲ್ಪ ದೂರ ಚಲಿಸಿ, ನಂತರ ನಗರಪೇಟೆ, ದೊಡ್ಡಪೇಟೆಗಳ ಮೂಲಕ ಹಾದುಹೋಗಿ, ಬೆಳಗಿನ ಜಾವ ಕೃಷ್ಣರಾಜೇಂದ್ರ ಮಾರುಕಟ್ಟೆ ಚೌಕವನ್ನು ಸುತ್ತಿ ನಂತರ ದೇವಸ್ಥಾನವನ್ನು ತಲುಪಲಿವೆ ಎಂದು ತಿಳಿಸಿದ್ದಾರೆ.

