ದಸರಾ ಮಾದರಿಯಲ್ಲಿ ಬೆಂಗಳೂರು ಕರಗ ವೈಭವ: ಏಪ್ರಿಲ್ 1ರ ಮಧ್ಯರಾತ್ರಿ ಕರಗ ಮಹೋತ್ಸವ
x
ಬೆಂಗಳೂರು ಕರಗ ಉತ್ಸವ(ಸಂಗ್ರಹ ಚಿತ್ರ)

ದಸರಾ ಮಾದರಿಯಲ್ಲಿ ಬೆಂಗಳೂರು ಕರಗ ವೈಭವ: ಏಪ್ರಿಲ್ 1ರ ಮಧ್ಯರಾತ್ರಿ ಕರಗ ಮಹೋತ್ಸವ

ಸರ್ವಧರ್ಮ ಸಮನ್ವಯದ ಸಂಕೇತವಾದ ಈ ಐತಿಹಾಸಿಕ ಉತ್ಸವದ ಯಶಸ್ವಿಗಾಗಿ ನೂತನ ಸಮಿತಿ ರಚನೆಯಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.


Click the Play button to hear this message in audio format

ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಏಪ್ರಿಲ್ 1ರ ಮಧ್ಯರಾತ್ರಿ ಕರಗ ಉತ್ಸವ ಅದ್ದೂರಿಯಾಗಿ ನಡೆಯಲಿದೆ. ವಿಶೇಷವೆಂದರೆ ಈ ಬಾರಿ ಮೈಸೂರು ದಸರಾ ಮಾದರಿಯಲ್ಲಿ ಅತ್ಯಂತ ವೈಭವದಿಂದ ಶಾಸ್ತ್ರೋಕ್ತವಾಗಿ ಜರುಗಲಿದೆ. ಬೆಂಗಳೂರು ಕರಗವು ಕೇವಲ ಒಂದು ಉತ್ಸವವಲ್ಲ, ಇದು ನಗರದ ಅಸ್ಮಿತೆ. 'ವಹ್ನಿಕುಲ ಕ್ಷತ್ರಿಯ' (ತಿಗಳ) ಸಮುದಾಯದವರು ಶತಮಾನಗಳಿಂದ ನಡೆಸಿಕೊಂಡು ಬರುತ್ತಿರುವ ಈ ಆಚರಣೆಯು ದ್ರೌಪದಿಯನ್ನು 'ಶಕ್ತಿ' ದೇವತೆಯಾಗಿ ಆರಾಧಿಸುವ ವಿಶಿಷ್ಟ ಸಂಪ್ರದಾಯವಾಗಿದೆ.

ಮಾರ್ಚ್ 24ರಂದು ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಅಧಿಕೃತವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ 11 ದಿನಗಳ ಸುದೀರ್ಘ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಈ ಬಾರಿ ಉತ್ಸವವನ್ನು ಕೇವಲ ಧಾರ್ಮಿಕ ಆಚರಣೆಯಾಗಿ ಸೀಮಿತಗೊಳಿಸದೆ, ಸಾಂಸ್ಕೃತಿಕ ಮೆರುಗನ್ನು ನೀಡಲು ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದು, ಮೈಸೂರು ದಸರಾ ಮಾದರಿಯಲ್ಲಿಯೇ ಬೆಂಗಳೂರಿನ ಪ್ರಮುಖ ವೃತ್ತಗಳಾದ ಹಡ್ಸನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಕಣ್ಣು ಸೆಳೆಯುವಂತಹ ವಿದ್ಯುತ್ ದೀಪಾಲಂಕಾರ ಮಾಡಲು ಸರ್ಕಾರ ಮುಂದಾಗಿದೆ. ಉತ್ಸವದ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸರಿಗೆ ಸೂಕ್ತ ಸ್ಥಳಾವಕಾಶ ಮತ್ತು ಭದ್ರತೆ ಒದಗಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತಲ ಮೈದಾನಗಳಲ್ಲಿ ಕರ್ನಾಟಕದ ಜನಪದ ಕಲೆಗಳಾದ ವೀರಗಾಸೆ, ಡೊಳ್ಳು ಕುಣಿತ ಮತ್ತು ಭಕ್ತಿ ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಲು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸ್ಥಳ ನಿಗದಿಪಡಿಸಲಾಗಿದೆ. ಲಕ್ಷಾಂತರ ಜನರು ಸೇರುವುದರಿಂದ ಜಿಬಿಎ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಸಿಸಿಟಿವಿ ಮತ್ತು ಡ್ರೋನ್ ಮೂಲಕ ಭದ್ರತೆಯ ಮೇಲ್ವಿಚಾರಣೆ ಮಾಡಲಿವೆ.

ಹೊಸ ಸಮಿತಿ ರಚನೆ

ಉತ್ಸವದ ಯಶಸ್ವಿ ನಿರ್ವಹಣೆಗಾಗಿ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯನ್ನು ನೇಮಿಸಲಾಗಿದೆ. ಸಮಿತಿ ಅಧ್ಯಕ್ಷರಾಗಿ ಚಲಕೆರೆ ನಾರಾಯಣಸ್ವಾಮಿ, ಸದಸ್ಯರಾಗಿ ವಸಂತ, ವಿಜಯಾ, ಎಂ. ವೆಂಕಟೇಶ್, ಅಮಿತ್, ಕಿರಣ್ ಮತ್ತು ಆರ್. ಸಂತೋಷ್ ಅವರುಗಳನ್ನು ನೇಮಿಸಲಾಗಿದೆ.

ದೇವಾಲಯದ ಒಳಗಿನ ಧಾರ್ಮಿಕ ವಿಧಿವಿಧಾನಗಳನ್ನು ಮುಜರಾಯಿ ಇಲಾಖೆ ನೋಡಿಕೊಳ್ಳಲಿದ್ದು, ದೇವಸ್ಥಾನದ ಹೊರಗಿನ ಸಿದ್ಧತೆ, ದೀಪಾಲಂಕಾರ ಮತ್ತು ಟೆಂಡರ್ ಪ್ರಕ್ರಿಯೆಗಳನ್ನು ಜಿಬಿಎ ವತಿಯಿಂದ ನಿರ್ವಹಿಸಲಾಗುತ್ತದೆ. ಜಿಬಿಎ ಆಯುಕ್ತ ಚೋಳನ್ ಅವರು ಸಂಪೂರ್ಣ ಉಸ್ತುವಾರಿ ವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಇತರ ಗಣ್ಯರು ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

6ನೇ ಬಾರಿಗೆ ಜ್ಞಾನೇಂದ್ರ ಸ್ವಾಮಿ ಅವರ ಕರಗ ಸೇವೆ

ಈ ಬಾರಿಯ ವಿಶೇಷವೆಂದರೆ, ಹಿರಿಯ ಅರ್ಚಕ ಎ. ಜ್ಞಾನೇಂದ್ರ ಸ್ವಾಮಿ ಅವರು ಸತತ 16ನೇ ಬಾರಿಗೆ ಕರಗ ಹೊರಲಿದ್ದಾರೆ. ಕಳೆದ 15 ವರ್ಷಗಳಿಂದ ಯಶಸ್ವಿಯಾಗಿ ಕರಗ ಹೊತ್ತಿದ್ದ ಅವರ ಅನುಭವ ಮತ್ತು ಭಕ್ತಿಯನ್ನು ಪರಿಗಣಿಸಿ ಸಮಾಜದ ಸಮಿತಿಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಕರಗ ಹೊರುವ ಅರ್ಚಕರು ಉತ್ಸವದ ಕೆಲವು ದಿನಗಳ ಮೊದಲೇ ದೇವಸ್ಥಾನದಲ್ಲಿ ನೆಲೆಸುತ್ತಾರೆ. ಕುಟುಂಬದಿಂದ ದೂರವಿದ್ದು, ಕೇವಲ ಸಾತ್ವಿಕ ಆಹಾರ ಸೇವಿಸಿ, ಮಾನಸಿಕ ಮತ್ತು ದೈಹಿಕವಾಗಿ ಸಿದ್ಧರಾಗುತ್ತಾರೆ.

ಸುಮಾರು 25 ರಿಂದ 30 ಕೆ.ಜಿ ತೂಗುವ, ಹೂವುಗಳಿಂದ ಅಲಂಕೃತಗೊಂಡ 'ಕರಗ'ವನ್ನು ತಲೆಯ ಮೇಲೆ ಹೊತ್ತು, ಕೈ ಮುಟ್ಟದೆಯೇ ಸಮತೋಲನ ಕಾಯ್ದುಕೊಂಡು ಕಿಲೋಮೀಟರ್‌ಗಟ್ಟಲೆ ನೃತ್ಯ ಮಾಡಲಿದ್ದಾರೆ.

11 ದಿನಗಳ ಪ್ರಮುಖ ವಿಧಿವಿಧಾನಗಳು

ಮಾ. 24ರ ಧ್ವಜಾರೋಹಣದಿಂದ ಏಪ್ರಿಲ್ 1ರ ಶಾಸ್ತ್ರೋಕ್ತವಾಗಿ ಕರಗ ಮಹೋತ್ಸವ ನಡೆಯಲಿದೆ. ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಮುಖ್ಯ ಕರಗಕ್ಕಿಂತ ಮೊದಲು ಹೂವಿನ ಕರಗದ ಮೂಲಕ ಮೆರವಣಿಗೆಗಳು ನಡೆಯಲಿವೆ. ದೇವಸ್ಥಾನದ ಸುತ್ತಮುತ್ತ ಸಾವಿರಾರು ಹಣತೆಗಳನ್ನು ಬೆಳಗಲಿದ್ದು, ಕೆಂಪಾಂಬುಧಿ ಕೆರೆಯಲ್ಲಿಹಸಿ ಕರಗ ನಡೆಯಲಿದೆ.

ಏಪ್ರಿಲ್ 1ರ ಮಧ್ಯರಾತ್ರಿ ದ್ರೌಪದಿ ದೇವಿಯ ರೂಪದಲ್ಲಿ ಕರಗ ಹೊರಬರಲಿದ್ದು, ಸೂರ್ಯೋದಯದವರೆಗೂ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಮೆರವಣಿಗೆಯ ಹಾದಿಯಲ್ಲಿ ಮಸ್ತಾನ್ ಸಾಹೇಬ್ ದರ್ಗಾಕ್ಕೆ ಕರಗ ಭೇಟಿ ನೀಡಲಿದೆ. ಇದು ಶತಮಾನಗಳಿಂದ ನಡೆದು ಬಂದಿರುವ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಪ್ರದಾಯ.

ಸಂಚಾರ ಬದಲಾವಣೆ

ಕರಗ ಹಿನ್ನಲೆಯಲ್ಲಿ ಏಪ್ರಿಲ್ 1ರಂದು ಕೆ.ಆರ್. ಮಾರುಕಟ್ಟೆ, ನಗರಪೇಟೆ ಮತ್ತು ಕಬ್ಬನ್ ಪೇಟೆ ಭಾಗಗಳಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ ಏರಲಿದೆ. ಭಕ್ತರ ಅನುಕೂಲಕ್ಕಾಗಿ ಆ ದಿನ ರಾತ್ರಿ ಬಿಎಂಟಿಸಿ ವಿಶೇಷ ಬಸ್‌ಗಳನ್ನು ಓಡಿಸಲಿದೆ.


Read More
Next Story