ಬೆಂಗಳೂರಲ್ಲಿ ಬ್ಯಾನರ್ ಬೇಟೆ: ಎಂ.ಜಿ. ರೋಡ್, ಶಾಂತಿನಗರದಲ್ಲಿ ರಾಜಕೀಯ ಫ್ಲೆಕ್ಸ್‌ಗಳ ತೆರವು
x

ಜಿಬಿಎ ಅಧಿಕಾರಿಗಳು ರಾಜಕಾರಣಿಗಳ ಫ್ಲೆಕ್ಸ್ ಹಾಗೂ ಹೋರ್ಡಿಂಗ್​ಗಳನ್ನು ತೆಗೆದು ಹಾಕಿದರು.

ಬೆಂಗಳೂರಲ್ಲಿ 'ಬ್ಯಾನರ್' ಬೇಟೆ: ಎಂ.ಜಿ. ರೋಡ್, ಶಾಂತಿನಗರದಲ್ಲಿ ರಾಜಕೀಯ ಫ್ಲೆಕ್ಸ್‌ಗಳ ತೆರವು

ಜನ್ಮದಿನದ ಶುಭಾಶಯಗಳು, ಕಾರ್ಯಕ್ರಮಗಳ ಪ್ರಚಾರ ಮತ್ತು ರಾಜಕೀಯ ನಾಯಕರ ಸ್ವಾಗತಕ್ಕಾಗಿ ಹಾಕಲಾಗಿದ್ದ ಬೃಹತ್ ಬ್ಯಾನರ್‌ಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆದಿದೆ.


Click the Play button to hear this message in audio format

ಸಿಲಿಕಾನ್ ಸಿಟಿಯ ಅಂದ ಕೆಡಿಸುತ್ತಿದ್ದ ಮತ್ತು ಸಂಚಾರಕ್ಕೆ ಅಡ್ಡಿಯಾಗಿದ್ದ ಅಕ್ರಮ ರಾಜಕೀಯ ಬ್ಯಾನರ್‌ಗಳ ವಿರುದ್ಧ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ಸಮರ ಸಾರಿದೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಎಂ.ಜಿ. ರಸ್ತೆ ಮತ್ತು ಸೇಂಟ್ ಮಾರ್ಕ್ಸ್ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಅನಧಿಕೃತ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಪಾಲಿಕೆ ಸಿಬ್ಬಂದಿ ಸೋಮವಾರ ತೆರವುಗೊಳಿಸಿದ್ದಾರೆ.

ರಾಜಕೀಯ ನಾಯಕರ ಫ್ಲೆಕ್ಸ್‌ಗಳೇ ಹೆಚ್ಚು!

ಜನ್ಮದಿನದ ಶುಭಾಶಯಗಳು, ಕಾರ್ಯಕ್ರಮಗಳ ಪ್ರಚಾರ ಮತ್ತು ರಾಜಕೀಯ ನಾಯಕರ ಸ್ವಾಗತಕ್ಕಾಗಿ ಹಾಕಲಾಗಿದ್ದ ಬೃಹತ್ ಬ್ಯಾನರ್‌ಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆದಿದೆ. ಕಿತ್ತಳೆ ಬಣ್ಣದ ಜಾಕೆಟ್ ಧರಿಸಿದ ಕಾರ್ಮಿಕರು ರಾಜಕಾರಣಿಗಳ ಚಿತ್ರವಿದ್ದ ದೊಡ್ಡ ದೊಡ್ಡ ಹೋರ್ಡಿಂಗ್‌ಗಳನ್ನು ತೆರವುಗೊಳಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ದೃಶ್ಯ ಮಾಲಿನ್ಯ ತಡೆಗಟ್ಟಲು ಮತ್ತು ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

500ಕ್ಕೂ ಹೆಚ್ಚು ಬ್ಯಾನರ್ ತೆರವು

'ಡೆಕ್ಕನ್ ಹೆರಾಲ್ಡ್' ವರದಿ ಪ್ರಕಾರ, ಜನವರಿ 2026ರ ಅಂತ್ಯದಲ್ಲಿ ನಗರದಾದ್ಯಂತ ನಡೆಸಿದ ಇಂತಹದೇ ಕಾರ್ಯಾಚರಣೆಯಲ್ಲಿ ಬರೋಬ್ಬರಿ 524 ಅಕ್ರಮ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿತ್ತು. ಆದರೂ, ನಗರದಲ್ಲಿ ಫ್ಲೆಕ್ಸ್ ಹಾವಳಿ ಕಡಿಮೆಯಾಗಿಲ್ಲ ಎಂಬುದು ವಿಪರ್ಯಾಸ.

ಸಾರ್ವಜನಿಕರ ಆಕ್ರೋಶ

ಪಾಲಿಕೆಯ ಈ ಕ್ರಮವನ್ನು ಸ್ವಾಗತಿಸಿರುವ ನಾಗರಿಕರು, ಕೇವಲ ತೆರವುಗೊಳಿಸಿದರೆ ಸಾಲದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. "ಅಕ್ರಮ ಬ್ಯಾನರ್ ಹಾಕುವವರಿಗೆ ಭಾರಿ ದಂಡ ವಿಧಿಸಬೇಕು. ದಿನನಿತ್ಯ ಗಸ್ತು ತಿರುಗಿ ಇವುಗಳನ್ನು ತಡೆಯಬೇಕು, ಕರ್ನಾಟಕದಲ್ಲಿ 2018ರಲ್ಲೇ ಅನಧಿಕೃತ ಬ್ಯಾನರ್‌ಗಳ ಮೇಲೆ ನಿಷೇಧವಿದ್ದರೂ, ಜಾರಿಯಲ್ಲಿ ಹಿನ್ನಡೆಯಾಗುತ್ತಿದೆ," ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.

ಪ್ಲಾಸ್ಟಿಕ್ ಮತ್ತು ಫ್ಲೆಕ್ಸ್ ವಸ್ತುಗಳು ಮಣ್ಣಿನಲ್ಲಿ ಕರಗದಿರುವುದರಿಂದ (Non-biodegradable), ಇವು ಪರಿಸರದ ಮೇಲೂ ಗಂಭೀರ ಪರಿಣಾಮ ಬೀರುತ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

Read More
Next Story