
ಕಸ ನಿರ್ವಹಣೆ ಟೆಂಡರ್‌ನಲ್ಲಿ ಬೃಹತ್ ಹಗರಣ: ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ
ಸಮಗ್ರ ಘನತ್ಯಾಜ್ಯ ನಿರ್ವಹಣೆ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಪ್ರತಿ ಟನ್‌ಗೆ 2,998 ರೂ. ಇದ್ದ ದರವನ್ನು ಕಾರಣಗಳಿಲ್ಲದೆ 5 ಸಾವಿರ ರೂ.ಗೆ ಪರಿಷ್ಕರಿಸಲಾಗಿದೆ ಎಂದು ದೂರಲಾಗಿದೆ.
ರಾಜಧಾನಿ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದರೆ, ನಗರದ ಪಾಲಿಗೆ ಕಸ ನಿರ್ವಹಣೆ ಎಂಬುದು ದಶಕಗಳಿಂದಲೂ ಬಗೆಹರಿಯದ ಒಗಟಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಬಿಎ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮೂಲಕ ರೂಪಿಸಲಾದ ಸಮಗ್ರ ಘನತ್ಯಾಜ್ಯ ನಿರ್ವಹಣೆ ಯೋಜನೆಯು ಇದೀಗ ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಲುಕಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ಆಡಳಿತ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆಯನ್ನು ಬಟಾಬಯಲು ಮಾಡಿದೆ.
ಯಾವುದೇ ಒಂದು ಸರ್ಕಾರಿ ಟೆಂಡರ್ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು ಎಂಬುದು ನಿಯಮ ಇದೆ. ಆದರೆ, ಐಎಸ್‌ಡಬ್ಲ್ಯೂಎಂ ಯೋಜನೆಯಲ್ಲಿ ನಡೆದಿರುವ ಬೆಳವಣಿಗೆಗಳು ಸಂಶಯಾಸ್ಪದವಾಗಿವೆ. ಮೊದಲ ಹಂತದ ಟೆಂಡರ್‌ನಲ್ಲಿ ಯಾರು ಭಾಗವಹಿಸಲಿಲ್ಲವೋ, ಎರಡನೇ ಹಂತದಲ್ಲಿ ಭಾಗವಹಿಸಿದ ಎಲ್ಲರೂ ತಾಂತ್ರಿಕವಾಗಿ ಅನರ್ಹರೆಂದು ಘೋಷಿಸಲ್ಪಟ್ಟರು. ಆಶ್ಚರ್ಯಕರ ಸಂಗತಿಯೆಂದರೆ, ಅದೇ ಅನರ್ಹ ಬಿಡ್‌ದಾರರು ಮೂರನೇ ಹಂತದ ಟೆಂಡರ್‌ನಲ್ಲಿ ತಾಂತ್ರಿಕವಾಗಿ ಅರ್ಹರಾಗಿ ಹೊರಹೊಮ್ಮಿದರು. ಇದು ಮೌಲ್ಯಮಾಪನ ಸಮಿತಿಯ ನೈತಿಕತೆಯನ್ನು ಪ್ರಶ್ನಿಸುವಂತಿದೆ. ಟೆಂಡರ್ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಹೈದರಾಬಾದ್ ಮೂಲದ 'ರಾಮ್ಕಿ ಗ್ರೂಪ್'ಗೆ ಈ ಯೋಜನೆಯನ್ನು ನೀಡುವ ಬಗ್ಗೆ ಒಂದು ಅನಧಿಕೃತ ತಿಳುವಳಿಕೆ ಇತ್ತು ಎಂಬ ಗಂಭೀರ ಆರೋಪವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕ ಅಕ್ರಮಗಳು ಹಾಗೂ ಅಂದಾಜು ವೆಚ್ಚದ ಹೆಚ್ಚಳ
ಯೋಜನೆಯ ದರ ನಿಗದಿಯಲ್ಲಿ ನಡೆದಿರುವ ಏರಿಳಿತಗಳು ಕೇವಲ ಹಣದುಬ್ಬರದ ಕಾರಣಕ್ಕೆ ಆಗಿರಲಾರವು ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಆರ್‌ಐಟಿಇಎಸ್ ಸಂಸ್ಥೆ ತಯಾರಿಸಿದ್ದ ಡಿಪಿಆರ್ ಪ್ರಕಾರ ಪ್ರತಿ ಟನ್‌ಗೆ 2,998 ರೂ. ಇದ್ದ ದರವನ್ನು, ಯಾವುದೇ ಸಮರ್ಪಕ ಕಾರಣಗಳಿಲ್ಲದೆ ಪರಿಷ್ಕರಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಪ್ಯಾಕೇಜ್‌ಗಳಿಗೆ ಅಂದಾಜು ವೆಚ್ಚಕ್ಕಿಂತ ಶೇ.83 ಮತ್ತು ಶೇ.53 ಹೆಚ್ಚು ದರವನ್ನು ನಿಗದಿಪಡಿಸಲಾಗಿದೆ. ಮೊದಲಿದ್ದ ಡಿಪಿಆರ್ ಸರಿಯಿಲ್ಲ ಎಂದು ಕಂಡುಬಂದಿದ್ದರೆ, ನಿಯಮಬದ್ಧವಾಗಿ ಹೊಸದಾಗಿ ಕನ್ಸಲ್ಟೆಂಟ್ ನೇಮಿಸಬೇಕಿತ್ತು. ಆದರೆ, ಮಧ್ಯದಲ್ಲೇ ಬೇರೊಬ್ಬ ಕನ್ಸಲ್ಟೆಂಟ್‌ಗೆ ಅವಕಾಶ ನೀಡಿ, ದರವನ್ನು ಏರಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ರಾಮ್ಕಿ ಗ್ರೂಪ್‌ಗೆ ಈ ಯೋಜನೆಯನ್ನು ನೀಡುವ ಹಿಂದೆ ಇರುವುದು ಕೇವಲ ಆರ್ಥಿಕ ಲಾಭವೋ ಅಥವಾ ಬೇರೆ ಯಾವುದಾದರೂ ಕಾರಣವೋ ಎಂಬುದು ತನಿಖೆಯಾಗಬೇಕಿದೆ. ಮವಲ್ಲಿಪುರ ಲ್ಯಾಂಡ್‌ಫಿಲ್ ವಿವಾದದಂತಹ ಘಟನೆಗಳಲ್ಲಿ ರಾಮ್ಕಿ ಗ್ರೂಪ್‌ನ ಪಾತ್ರದ ಬಗ್ಗೆ ಈಗಾಗಲೇ ಅನೇಕ ದೂರುಗಳಿವೆ. ಪರಿಸರ ನಿಯಮಗಳ ಉಲ್ಲಂಘನೆ ಮತ್ತು ತ್ಯಾಜ್ಯ ಸಂಸ್ಕರಣೆಯ ಅಸಮರ್ಪಕ ನಿರ್ವಹಣೆಗಾಗಿ ಈ ಹಿಂದೆ ಟೀಕೆಗೆ ಗುರಿಯಾಗಿದ್ದ ಸಂಸ್ಥೆಗೆ ಮತ್ತೆ ಮಣೆ ಹಾಕುತ್ತಿರುವುದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಭೂ ಸ್ವಾಧೀನದಲ್ಲಿ ಅವ್ಯವಹಾರ
ಟೆರಾ ಫಾಸ್ಮಾ ಬಯೋಟೆಕ್ನಾಲಜೀಸ್ ಕಂಪನಿಯ ಜಮೀನು ಖರೀದಿ ಪ್ರಕ್ರಿಯೆಯು ಹಗರಣದ ಮತ್ತೊಂದು ಮಗ್ಗುಲು ಆಗಿದೆ. ಹಣಕಾಸು ಇಲಾಖೆ ಎಕರೆಗೆ 1.50 ಕೋಟಿ ರೂ. ಪರಿಹಾರ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರೂ, ಸಂಪುಟದ ಮೂಲಕ ನೇರ ಖರೀದಿ ಪ್ರಕ್ರಿಯೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ, ನಂತರದಲ್ಲಿ ಅದನ್ನು 1.57 ಕೋಟಿ ರೂ.ಗೆ ಏರಿಸಲಾಗಿದೆ. ಪರಿಹಾರ ಮೊತ್ತದಲ್ಲಿ ಈ ರೀತಿಯ ಮಿತಿಮೀರಿದ ಏರಿಕೆ ರಾಜ್ಯದ ಖಜಾನೆಗೆ ನೇರ ನಷ್ಟವನ್ನುಂಟು ಮಾಡಿದೆ. ಯೋಜನಾ ಸ್ಥಳದಲ್ಲಿ ನಾಲ್ಕರಿಂದ ಐದು ಲಕ್ಷ ಮೆಟ್ರಿಕ್ ಟನ್ ಹಳೆಯ ತ್ಯಾಜ್ಯವಿದೆ. ಇದನ್ನು ವೈಜ್ಞಾನಿಕವಾಗಿ ಬಯೋ-ಮೈನಿಂಗ್ ಮಾಡದೆ ಗುತ್ತಿಗೆದಾರರಿಗೆ ಜಾಗ ಒಪ್ಪಿಸುವುದು ಅಕ್ಷಮ್ಯ. ಇದು ಭವಿಷ್ಯದಲ್ಲಿ ಗುತ್ತಿಗೆದಾರರಿಗೆ ಹೆಚ್ಚುವರಿ ಬಿಲ್ ಪಡೆಯಲು ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ. ಇದು ಸರ್ಕಾರದ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಲಾಗಿದೆ.
ಆಡಳಿತಾತ್ಮಕ ನಿಯಮಗಳ ಉಲ್ಲಂಘನೆ
ಟೆಂಡರ್ ಷರತ್ತುಗಳನ್ನು ಸಡಿಲಗೊಳಿಸುವುದು ಹಣಕಾಸು ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿಷಯ. ಆದರೆ ಬಿಎಸ್‌ಡಬ್ಲ್ಯೂಎಂಎಲ್ ಸ್ವಯಂಪ್ರೇರಿತವಾಗಿ ಈ ನಿರ್ಧಾರ ಕೈಗೊಂಡಿರುವುದು ಅಧಿಕಾರ ದುರುಪಯೋಗಕ್ಕೆ ಸಾಕ್ಷಿ. ಅಲ್ಲದೆ, ಕೇವಲ ಏಳು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಯನ್ನು ಒತ್ತಾಯಿಸಿರುವುದು, ಆಳವಾದ ಪರಿಶೀಲನೆ ಮಾಡದಂತೆ ತಡೆಯುವ ದುರುದ್ದೇಶವಿದೆಯೇ ಎಂಬ ಶಂಕೆ ಮೂಡಿಸುತ್ತದೆ. ಪ್ರಕರಣದಲ್ಲಿ ನಡೆದಿರುವ ಅಕ್ರಮಗಳು ಕೇವಲ ಒಂದು ಇಲಾಖೆಗೆ ಸೀಮಿತವಾಗಿಲ್ಲ. ಇದು ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ನಡೆದಿರುವ ಅಕ್ರಮಗಳ ಸರಮಾಲೆ ಎಂದು ವಿರೋಧ ಪಕ್ಷದ ನಾಯಕರು ಬಲವಾಗಿ ಪ್ರತಿಪಾದಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಯೋಜನೆಗಳು ಪಾರದರ್ಶಕವಾಗಿರಬೇಕು ಎಂಬುದು ಸಂವಿಧಾನಬದ್ಧ ಹಕ್ಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನಿಖೆಗೆ ಒತ್ತಾಯ
ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಅಥವಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಟೆಂಡರ್ ಪ್ರಕ್ರಿಯೆಗೆ ತಡೆ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಬಿಜೆಪಿ ನಿಯೋಗವು ಆಗ್ರಹಿಸಿದೆ. ಅಲ್ಲದೇ, ಈ ಎಲ್ಲಾ ಅವ್ಯವಹಾರಗಳನ್ನು ಗಮನಿಸಿದರೆ, ಇಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಹೀಗಾಗಿ, ಬಿಎಸ್‌ಡಬ್ಲ್ಯೂಎಂಎಲ್ ಮತ್ತು ಸಂಬಂಧಿತ ಅಧಿಕಾರಿಗಳಿಂದ ನಡೆಯುತ್ತಿರುವ ಇಡೀ ಟೆಂಡರ್ ಪ್ರಕ್ರಿಯೆಯ ಬಗ್ಗೆ ನಿಷ್ಪಕ್ಷಪಾತ ಮತ್ತು ಕಾಲಮಿತಿಯ ತನಿಖೆ ನಡೆಸಬೇಕು. ಟೆಂಡರ್ ಷರತ್ತುಗಳನ್ನು ಸಡಿಲಗೊಳಿಸಿರುವ ಹಾಗೂ ಅನರ್ಹ ಬಿಡ್‌ದಾರರಿಗೆ ಅವಕಾಶ ನೀಡಿರುವ ಕಾನೂನುಬದ್ಧತೆಯನ್ನು ಪರಿಶೀಲಿಸಬೇಕು. ಡಿಪಿಆರ್ ಪರಿಷ್ಕರಣೆ ಮತ್ತು ಟಿಪ್ಪಿಂಗ್ ಫೀ ಲೆಕ್ಕಾಚಾರದಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆಗೊಳಪಡಿಸಬೇಕು. ಸಂಪೂರ್ಣ ತನಿಖೆಯಾಗುವವರೆಗೂ ಅಂತಿಮ ಅನುಮೋದನೆ ಅಥವಾ ಗುತ್ತಿಗೆ ನೀಡಿಕೆಯನ್ನು ತಡೆಹಿಡಿಯಬೇಕು ಒತ್ತಾಯಿಸಲಾಗಿದೆ.

