Bengaluru Garbage:  ಬೆಂಗಳೂರಿನಲ್ಲಿ ಮತ್ತೆ ಕಸದ ಬಿಕ್ಕಟ್ಟು: ಪೌರಕಾರ್ಮಿಕರ ಮುಷ್ಕರ, ಗುತ್ತಿಗೆದಾರರ ವಿರುದ್ಧ ಎಸ್ಮಾ ಅಸ್ತ್ರ?
x

Bengaluru Garbage: ಬೆಂಗಳೂರಿನಲ್ಲಿ ಮತ್ತೆ ಕಸದ ಬಿಕ್ಕಟ್ಟು: ಪೌರಕಾರ್ಮಿಕರ ಮುಷ್ಕರ, ಗುತ್ತಿಗೆದಾರರ ವಿರುದ್ಧ ಎಸ್ಮಾ ಅಸ್ತ್ರ?

ಈ ಮುಷ್ಕರವನ್ನು ಕಾನೂನುಬಾಹಿರ ಎಂದಿರುವ ಬಿಬಿಎಂಪಿ, ಸೇವೆ ಸ್ಥಗಿತಗೊಳಿಸಿದ ಗುತ್ತಿಗೆದಾರರ ವಿರುದ್ಧ ʼಎಸ್‌ಮಾʼ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದು, ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವ ಭೀತಿ ಎದುರಾಗಿದೆ.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಕಸದ ಬಿಕ್ಕಟ್ಟು ತಲೆದೋರುವ ಆತಂಕ ಶುರುವಾಗಿದೆ. ಸೋಮವಾರ ನಗರದ ಬರೋಬ್ಬರಿ 76 ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಸೇವೆಗಳನ್ನು ಸಾಂಕೇತಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಇದು ಇಡೀ ನಗರಕ್ಕೆ ವಿಸ್ತರಿಸುವ ಭೀತಿ ಎದುರಾಗಿದೆ!

ಕಸ ಸಂಗ್ರಹಿಸುವ ಆಟೋ ಚಾಲಕರು, ಗುತ್ತಿಗೆದಾರರು ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವಿನ ಹಗ್ಗಜಗ್ಗಾಟ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಮನೆ-ಮನೆಗಳಿಂದ ಕಸ ಸಂಗ್ರಹಿಸುವಾಗ ಕಡ್ಡಾಯವಾಗಿ ಮೂರು ವಿಭಾಗಗಳಲ್ಲಿ ಕಸವನ್ನು ವಿಂಗಡಿಸಿ (ಹಸಿ, ಒಣ ಹಾಗೂ ಅಪಾಯಕಾರಿ/ನೈರ್ಮಲ್ಯ ತ್ಯಾಜ್ಯ) ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಸಾರ್ವಜನಿಕರು ಇದನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ. ಮನೆಯವರು ಮಿಶ್ರಿತ ಕಸವನ್ನೇ ನೀಡುತ್ತಿರುವುದರಿಂದ, ಅದನ್ನು ವಿಂಗಡಿಸುವ ಸಂಪೂರ್ಣ ಹೊರೆ ಹಾಗೂ ಒತ್ತಡ ಈಗ ಸ್ವಚ್ಛತಾ ಕಾರ್ಮಿಕರು ಮತ್ತು ಆಟೋ ಚಾಲಕರ ಮೇಲೆಯೇ ಬೀಳುತ್ತಿದೆ. ಇದರಿಂದಾಗಿ ಕಸ ಸಂಗ್ರಹಿಸಲು ಪೌರಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಚಾಲಕರು ಪ್ರತಿದಿನ ಕನಿಷ್ಠ 5 ಗಂಟೆಗಳ ಕಾಲ ಈ ಮಿಶ್ರಿತ ಕಸವನ್ನು ಕೈಯಿಂದಲೇ ವಿಂಗಡಿಸಲು ಶ್ರಮಿಸಬೇಕಾಗಿದೆ. ಈ ವೇಳೆ ಗಾಜು, ಬ್ಲೇಡ್‌ನಂತಹ ಚೂಪಾದ ಮತ್ತು ಅಪಾಯಕಾರಿ ವಸ್ತುಗಳು ತಾಗಿ ಕಾರ್ಮಿಕರು ಗಾಯಗೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ಗಂಭೀರವಾದ ಚರ್ಮದ ಸೋಂಕು ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತ್ಯಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಬಾಲಸುಬ್ರಹ್ಮಣ್ಯ ಆತಂಕ ವ್ಯಕ್ತಪಡಿಸಿದರು.

ಎಸ್ಮಾ ಪ್ರಯೋಗ

ಕಾರ್ಮಿಕರು ಮತ್ತು ಗುತ್ತಿಗೆದಾರರ ಈ ಮುಷ್ಕರವನ್ನು ಘನತ್ಯಾಜ್ಯ ನಿರ್ವಹಣಾ ಘಟಕದ ಮುಖ್ಯಸ್ಥ ಕರೀಗೌಡ ಅವರು 'ಕಾನೂನುಬಾಹಿರ' ಎಂದು ಕರೆದಿದ್ದಾರೆ. "ಹಾಲಿ ಒಪ್ಪಂದದ ನಿಯಮಗಳ ಪ್ರಕಾರ, ಗುತ್ತಿಗೆದಾರರು ಸಾರ್ವಜನಿಕರಿಂದ ವಿಂಗಡಿಸಲಾದ ಕಸವನ್ನು ಮಾತ್ರ ಸಂಗ್ರಹಿಸಬೇಕು ಮತ್ತು ಮಿಶ್ರ ಕಸವನ್ನು ತಿರಸ್ಕರಿಸಬೇಕು. ಪ್ರಸ್ತುತ ನಗರದಲ್ಲಿ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್‌ಮಾ) ಜಾರಿಯಲ್ಲಿದ್ದು, ಯಾವುದೇ ಕಾರಣಕ್ಕೂ ಕಸ ವಿಲೇವಾರಿ ಸೇವೆಯನ್ನು ನಿಲ್ಲಿಸುವಂತಿಲ್ಲ" ಎಂದು ಅವರು ಎಚ್ಚರಿಸಿದ್ದಾರೆ.

ಗುತ್ತಿಗೆದಾರರ ವಿರುದ್ಧ ಎಫ್‌ಐಆರ್

ಸೇವೆ ಸ್ಥಗಿತಗೊಳಿಸಿ, ಸಾರ್ವಜನಿಕ ಆರೋಗ್ಯಕ್ಕೆ ತೊಂದರೆ ಉಂಟುಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪದ್ಮನಾಭನಗರ ವಾರ್ಡ್‌ನಲ್ಲಿ (ವಾರ್ಡ್ 182) ಬೆಳಗಿನ ಜಾವ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಸ ವಿಲೇವಾರಿ ಮಾಡದಿದ್ದಕ್ಕೆ ಬಿಬಿಎಂಪಿ ಅಧಿಕಾರಿ ಮನುಜಾ ಆರ್. ಅವರ ದೂರಿನ ಮೇರೆಗೆ 'ಶ್ರೀ ಲಕ್ಷ್ಮೀ ರಂಗನಾಥ ಎಂಟರ್‌ಪ್ರೈಸಸ್'‌ನ ಬಿ.ಎಸ್. ಕಿರಣ್ ಕುಮಾರ್ ವಿರುದ್ಧ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ʼಕರ್ನಾಟಕ ಎಸ್‌ಮಾ ಕಾಯ್ದೆ-2013ʼರ ಅಡಿಯಲ್ಲಿ, ಕಸ ವಿಲೇವಾರಿ ಮಾಡದೆ ವಾರ್ಡ್‌ಗಳಲ್ಲಿ ದುರ್ವಾಸನೆ, ಪರಿಸರ ಹಾನಿ ಹಾಗೂ ಸಾರ್ವಜನಿಕರ ದೈನಂದಿನ ಬದುಕಿಗೆ ಅಡಚಣೆ ಉಂಟುಮಾಡಿದ ಆರೋಪದ ಮೇಲೆ ಪಿ. ವಿಕ್ರಮ್ ದೇವರಡ್ಡಿ (ಶ್ರೀ ವರ್ಷಿಣಿ ಎಂಟರ್‌ಪ್ರೈಸಸ್), ಆಂಜನೇಯ (ಅನ್ನಮ್ಮದೇವಿ ಪ್ರಸನ್ನ ಎಂಟರ್‌ಪ್ರೈಸಸ್) ಮತ್ತು ಬಿ.ಎಸ್. ಕಿರಣ್ ಕುಮಾರ್ ವಿರುದ್ಧ ರಾಜಾಜಿನಗರ ಮತ್ತು ಗಿರಿನಗರ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಕಸದ ರಾಶಿ ರಸ್ತೆಬದಿಯಲ್ಲೇ ಉಳಿಯುತ್ತಿರುವುದರಿಂದ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ. ನಾಗರಿಕರು ತಮ್ಮ ಮನೆಗಳಲ್ಲೇ ಕಸ ವಿಂಗಡಣೆ ಮಾಡದ ಹೊರತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದು ಅಸಾಧ್ಯ. ಬಿಬಿಎಂಪಿ, ಗುತ್ತಿಗೆದಾರರು ಹಾಗೂ ಸಾರ್ವಜನಿಕರ ನಡುವಿನ ಈ ಸಮನ್ವಯದ ಕೊರತೆ ಶೀಘ್ರವೇ ಬಗೆಹರಿಯದಿದ್ದರೆ, ಮುಂದಿನ ದಿನಗಳಲ್ಲಿ ಇಡೀ ಬೆಂಗಳೂರು ಮತ್ತೊಮ್ಮೆ ಬೃಹತ್ ಕಸದ ಸಮಸ್ಯೆಯನ್ನು ಎದುರಿಸುವುದು ನಿಶ್ಚಿತವಾಗಿದೆ.

Read More
Next Story