
ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾವಳಿಗೆ ಬ್ರೇಕ್: ಪ್ರತಿ ಫ್ಲೆಕ್ಸ್‌ಗೆ 1 ಲಕ್ಷ ರೂ. ದಂಡ ವಿಧಿಸಲು ಸರ್ಕಾರದ ನಿರ್ಧಾರ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಜೆಟ್ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ಡಿಸಿಎಂ ಈ ಘೋಷಣೆ ಮಾಡಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಫ್ಲೆಕ್ಸ್ ಹಾಗೂ ಬ್ಯಾನರ್ ಹಾವಳಿಯನ್ನು ಶಾಶ್ವತವಾಗಿ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ಯಾವುದೇ ಭಾಗದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಿದರೆ, ಪ್ರತಿ ಫ್ಲೆಕ್ಸ್‌ಗೆ ಬರೋಬ್ಬರಿ 1 ಲಕ್ಷ ರೂಪಾಯಿಗಳ ದುಬಾರಿ ದಂಡ ವಿಧಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಉಸ್ತುವಾರಿ ಸಚಿವ ಡಿ. ಕೆ. ಶಿವಕುಮಾರ್ ಅವರು ಈ ಕುರಿತು ಅಧಿಕಾರಿಗಳಿಗೆ ಎಚ್ಚರಿಕೆ ಹಾಗೂ ಸೂಚನೆ ನೀಡಿದ್ದಾರೆ.
ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚೊಚ್ಚಲ ಬಜೆಟ್ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ಮಹತ್ವದ ಸಭೆಯ ಬಳಿಕ ಡಿ. ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಬೆಂಗಳೂರು ನಗರದ ಸೌಂದರ್ಯವನ್ನು ಹಾಳುಮಾಡುತ್ತಿರುವ ಫ್ಲೆಕ್ಸ್ ಸಂಸ್ಕೃತಿಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕಾನೂನು ಉಲ್ಲಂಘಿಸಿ ಬ್ಯಾನರ್ ಕಟ್ಟುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಫ್ಲೆಕ್ಸ್‌ನಲ್ಲಿರುವ ವ್ಯಕ್ತಿಯ ಹೆಸರಿಗೇ ದಂಡ
ಹೊಸ ನಿಯಮದ ಪ್ರಕಾರ, ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಅದನ್ನು ಜಾರಿಗೊಳಿಸುವ ವಿಧಾನದಲ್ಲೂ ಸರ್ಕಾರ ಕಠಿಣ ನಿಲುವು ತಾಳಿದೆ. ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗುವ ಫ್ಲೆಕ್ಸ್‌ನಲ್ಲಿ ಪ್ರಮುಖವಾಗಿ ಯಾವ ವ್ಯಕ್ತಿಯ ಹೆಸರು ಹಾಗೂ ಭಾವಚಿತ್ರ ಇರುತ್ತದೆಯೋ, ನೇರವಾಗಿ ಅದೇ ವ್ಯಕ್ತಿಯ ಹೆಸರಿಗೆ 1 ಲಕ್ಷ ರೂಪಾಯಿ ದಂಡದ ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ. ಇದರಿಂದಾಗಿ ತಮ್ಮ ನಾಯಕರನ್ನು ಮೆಚ್ಚಿಸಲು ಅಥವಾ ಪ್ರಚಾರಕ್ಕಾಗಿ ಎಲ್ಲೆಂದರಲ್ಲಿ ಬ್ಯಾನರ್ ಕಟ್ಟುವ ಬೆಂಬಲಿಗರು ಹಾಗೂ ರಾಜಕೀಯ ಮುಖಂಡರಿಗೆ ಈ ನಿಯಮವು ನೇರ ಬಿಸಿ ಮುಟ್ಟಿಸಲಿದೆ.
ನಗರದ ಸೌಂದರ್ಯ ರಕ್ಷಣೆಗೆ ಆದ್ಯತೆ
ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶಗಳ ನಡುವೆಯೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾವಳಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಹಬ್ಬಹರಿದಿನಗಳು, ರಾಜಕೀಯ ನಾಯಕರ ಜನ್ಮದಿನ ಹಾಗೂ ಶುಭಾಶಯ ಕೋರುವ ನೆಪದಲ್ಲಿ ರಾಜಾರೋಷವಾಗಿ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿತ್ತು. ಇದೀಗ 1 ಲಕ್ಷ ರೂಪಾಯಿಗಳ ಭಾರಿ ಮೊತ್ತದ ದಂಡ ಪ್ರಯೋಗಕ್ಕೆ ಮುಂದಾಗಿರುವ ಸರ್ಕಾರದ ಈ ದಿಟ್ಟ ನಡೆಯು, ಸಿಲಿಕಾನ್ ಸಿಟಿಯ ಸೌಂದರ್ಯವನ್ನು ಕಾಪಾಡುವಲ್ಲಿ ಹಾಗೂ ಅನಗತ್ಯ ಪ್ಲಾಸ್ಟಿಕ್ ತ್ಯಾಜ್ಯವನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.

