ವಿಡಿಯೋ ಚಿತ್ರೀಕರಣಕ್ಕೆ ಹೆತ್ತ ತಂದೆಯನ್ನೇ ಚೀಲದಲ್ಲಿ ಕಟ್ಟಿ ಕೊರಿಯರ್‌ ಮಾಡಲು ಮುಂದಾದ ಕುಟುಂಬ!
x
ರೀಲ್ಸ್‌ ಗಾಗಿ ಹುಚ್ಚಾಟ ಮೆರೆದ ಕುಟುಂಬದ ಸದಸ್ಯರು, ತಮ್ಮ ತಂದೆಯನ್ನೆ ಪಾರ್ಸಲ್‌ ಮಾಡಲು ಮುಂದಾಗಿದ್ದರು.

ವಿಡಿಯೋ ಚಿತ್ರೀಕರಣಕ್ಕೆ ಹೆತ್ತ ತಂದೆಯನ್ನೇ ಚೀಲದಲ್ಲಿ ಕಟ್ಟಿ ಕೊರಿಯರ್‌ ಮಾಡಲು ಮುಂದಾದ ಕುಟುಂಬ!

'ಪ್ರ್ಯಾಂಕ್' ವಿಡಿಯೋಗಾಗಿ ತಂದೆಯ ಜೀವವನ್ನೇ ಪಣಕ್ಕಿಟ್ಟು ಹುಚ್ಚಾಟ ಮೆರೆದ ಕುಟುಂಬದ ಸದಸ್ಯರು. ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಪಾರಾಗಿದ್ದಾರೆ.


Click the Play button to hear this message in audio format

ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಿಕ ಪ್ರಸಿದ್ಧಿ ಪಡೆಯಲು ಇಂದಿನ ಯುವಜನತೆ ಎಂತಹ ಕೃತ್ಯಕ್ಕೂ ಇಳಿಯುತ್ತಾರೆ ಎಂಬುದಕ್ಕೆ ಸಿಲಿಕಾನ್ ಸಿಟಿಯ ವೈಯಾಲಿಕಾವಲ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ ಒಂದು 'ಪ್ರ್ಯಾಂಕ್‌' ವಿಡಿಯೋಗಾಗಿ ಸ್ವತಃ ಮಕ್ಕಳೇ ತಮ್ಮ ವಯಸ್ಸಾದ ತಂದೆಯನ್ನು ಗೋಣಿಚೀಲದಲ್ಲಿ ಕಟ್ಟಿ, ಕೊರಿಯರ್ ಮೂಲಕ ಕಳುಹಿಸಲು ಮುಂದಾದ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.

ಮಂಗಳವಾರ ಸಂಜೆ ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ಇರುವ ಕೊರಿಯರ್ ಕಚೇರಿಗೆ ಐವರು ಯುವಕರ ಗುಂಪೊಂದು ಆಗಮಿಸಿತ್ತು. ತಮ್ಮ ಬಳಿಯಿದ್ದ ದೊಡ್ಡ ಗೋಣಿಚೀಲವೊಂದನ್ನು ತೋರಿಸಿ, "ಇದನ್ನು ತುರ್ತಾಗಿ ಬೇರೆ ರಾಜ್ಯಕ್ಕೆ ಪಾರ್ಸೆಲ್ ಮಾಡಬೇಕು, ಎಷ್ಟು ಹಣವಾದರೂ ನೀಡುತ್ತೇವೆ" ಎಂದು ಸಿಬ್ಬಂದಿ ಬಳಿ ಹಠ ಹಿಡಿದರು.

ಆದರೆ, ಚೌಕಾಸಿ ನಡೆಯುತ್ತಿದ್ದಾಗ ಚೀಲದೊಳಗೆ ಏನೋ ಅಲುಗಾಡುತ್ತಿರುವುದನ್ನು ಗಮನಿಸಿದ ಸಿಬ್ಬಂದಿಗೆ ಅನುಮಾನ ಮೂಡಿದೆ. ಗುಂಪಿನ ತೀವ್ರ ವಿರೋಧದ ನಡುವೆಯೂ ಸಿಬ್ಬಂದಿ ಚೀಲವನ್ನು ಬಿಚ್ಚಿದಾಗ, ಅದರೊಳಗೆ ಉಸಿರಾಡಲು ಪರದಾಡುತ್ತಿದ್ದ ವೃದ್ಧರೊಬ್ಬರು ಪತ್ತೆಯಾಗಿದ್ದಾರೆ. ಇದನ್ನು ಕಂಡು ದಿಗಿಲುಗೊಂಡ ಸಿಬ್ಬಂದಿ ಕೂಡಲೇ ವೃದ್ಧನಿಗೆ ನೀರು ನೀಡಿ ಉಪಚರಿಸಿದ್ದಾರೆ.

ಪೊಲೀಸರ ಎಂಟ್ರಿ, ಬಯಲಾದ ಅಸಲಿ ಕಥೆ

ಚೀಲದೊಳಗೆ ಮನುಷ್ಯನಿದ್ದರೂ ಪಾರ್ಸೆಲ್ ಮಾಡಲೇಬೇಕು ಎಂದು ಗುಂಪು ವಾಗ್ವಾದಕ್ಕಿಳಿದಾಗ, ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಲು ಮುಂದಾಗಿದ್ದಾರೆ. ಪೊಲೀಸ್ ಎಂಬ ಹೆಸರು ಕೇಳುತ್ತಿದ್ದಂತೆ ಗಾಬರಿಗೊಂಡ ಗುಂಪು ವೃದ್ಧನನ್ನು ಅಲ್ಲೇ ಬಿಟ್ಟು ಪರಾರಿಯಾಗಿದೆ. ತಕ್ಷಣ ಸ್ಥಳಕ್ಕೆ ಬಂದ ವೈಯಾಲಿಕಾವಲ್ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಪೊಲೀಸರಿಗೂ ಆಘಾತ ಕಾದಿತ್ತು.

ಪ್ರ್ಯಾಂಕ್ ಹೆಸರಿನಲ್ಲಿ ಅಮಾನವೀಯ ಕೃತ್ಯ

ಬಂಧಿತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಚೀಲದಲ್ಲಿದ್ದ ವೃದ್ಧ ಆ ಯುವಕರ ಹೆತ್ತ ತಂದೆಯೇ ಆಗಿದ್ದರು! ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಬಸ್ ಹಾಗೂ ರೈಲುಗಳಲ್ಲಿ ಸೀಟು ಸಿಗುತ್ತಿಲ್ಲ ಎಂಬ ಸಮಸ್ಯೆಯನ್ನು 'ವಿಭಿನ್ನವಾಗಿ' ಸಾರಲು ಈ ಕುಟುಂಬ ಇಂತಹ ಅಪಾಯಕಾರಿ ಹಾದಿ ತುಳಿದಿತ್ತು. "ಸೀಟು ಸಿಗದಿದ್ದರೆ ಕೊರಿಯರ್ ಮೂಲಕ ಹೋಗಬೇಕಾಗುತ್ತದೆ" ಎಂಬ ಸಂದೇಶ ನೀಡುವ ವಿಡಿಯೋ ಚಿತ್ರೀಕರಣಕ್ಕಾಗಿ ತಂದೆಯ ಜೀವವನ್ನೇ ಪಣಕ್ಕಿಟ್ಟಿದ್ದರು. ಈ ಹುಚ್ಚಾಟದಲ್ಲಿ ಯುವತಿಯರು ಮತ್ತು ಮಹಿಳೆಯರೂ ಸೇರಿ ಇಡೀ ಕುಟುಂಬವೇ ಭಾಗಿಯಾಗಿರುವುದು ವಿಷಾದನೀಯ.

ಕ್ಷಮೆಯಾಚಿಸಿದ ಕುಟುಂಬ

ಘಟನೆಯ ಗಂಭೀರತೆ ಅರಿತ ಬಳಿಕ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು, "ನಮ್ಮಿಂದ ಅಚಾತುರ್ಯವಾಗಿದೆ, ಇದು ಇಷ್ಟು ದೊಡ್ಡ ಕಾನೂನುಬಾಹಿರ ಕೃತ್ಯ ಎಂದು ನಮಗೆ ತಿಳಿದಿರಲಿಲ್ಲ" ಎಂದು ಕಣ್ಣೀರಿಟ್ಟು ಪೊಲೀಸರ ಹಾಗೂ ಸಾರ್ವಜನಿಕರ ಕ್ಷಮೆ ಕೇಳಿದ್ದಾರೆ.

ಕುಟುಂಬದಿಂದ ಲಿಖಿತ ಕ್ಷಮಾಪಣಾ ಪತ್ರ ಬರೆಸಿಕೊಂಡಿರುವ ವೈಯಾಲಿಕಾವಲ್ ಪೊಲೀಸರು, ಇನ್ನೊಮ್ಮೆ ಇಂತಹ ಕೃತ್ಯ ಎಸಗಿದರೆ ಕಠಿಣ ಕಾನೂನು ಕ್ರಮ ಜರುಗಿಸಿ ಜೈಲಿಗೆ ಕಳುಹಿಸುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

Read More
Next Story