
GBA Budget| ಬೆಂಗಳೂರು ಪೂರ್ವ ಪಾಲಿಕೆ ಬಜೆಟ್; ಪೌರಕಾರ್ಮಿಕರಿಗೆ ಎಲೆಕ್ಟ್ರಿಕ್ ವಾಹನ ಭಾಗ್ಯ
ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಶೇ 62 ಅಂದರೆ 2,400 ಕೋಟಿ ರೂ. ಮೀಸಲಿರಿಸಲಾಗಿದೆ. ಪಣತ್ತೂರು-ಎಸ್.ಕ್ರಾಸ್ ರಸ್ತೆ ಅಗಲೀಕರಣ ಮತ್ತು ಕೆ.ಆರ್.ಪುರಂನಿಂದ ಇಬ್ಬಲೂರು ಜಂಕ್ಷನ್‌ವರೆಗೆ ಸರ್ವಿಸ್ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯ 2026-27ನೇ ಸಾಲಿನ ಆಯವ್ಯಯದಲ್ಲಿ ಯಾವುದೇ ತೆರಿಗೆ ಏರಿಕೆಗೆ ಅವಕಾಶ ನೀಡದೇ ಆದಾಯ ಹೆಚ್ಚಳಕ್ಕೆ ತಂತ್ರಜ್ಞಾನ ಬಳಸಲು ಆದ್ಯತೆ ನೀಡಲಾಗಿದೆ. ಒಟ್ಟು 3,890 ಕೋಟಿ ರೂ. ಸ್ವೀಕೃತಿ ಹಾಗೂ 3,889.98 ಕೋಟಿ ರೂ. ವೆಚ್ಚದ ಬಜೆಟ್ ಅನ್ನು ಶುಕ್ರವಾರ ಮಂಡನೆ ಮಾಡಲಾಯಿತು.
ಪೌರಕಾರ್ಮಿಕರಿಗೆ ಉಚಿತ ಎಲೆಕ್ಟ್ರಿಕ್ ವಾಹನ
ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೂ ಬಜೆಟ್‌ನಲ್ಲಿ 221 ಕೋಟಿ ರೂ. ಮೀಸಲಿರಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ಉಚಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ನೀಡುವ ಯೋಜನೆ ರೂಪಿಸಲಾಗಿದೆ.
ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಮತ್ತು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಧನ ನೀಡಲು ಉದ್ದೇಶಿಸಲಾಗಿದೆ. 10 ಹೊಸ 'ನಮ್ಮ ಕ್ಲಿನಿಕ್' ಮತ್ತು 15 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ 35 ಕೋಟಿ ರೂ. ಮೀಸಲಿಡಲಾಗಿದೆ.
ಡಿಜಿಟಲ್ ಕ್ರಾಂತಿ ವಿಶೇಷ ಆದ್ಯತೆ
ಪಾಲಿಕೆಯು ಪ್ರಸಕ್ತ ವರ್ಷ 1,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿದೆ. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ(AI) ಮತ್ತು 3D ಮಾಡೆಲಿಂಗ್ ಬಳಸಿ ತೆರಿಗೆ ಜಾಲದಿಂದ ಹೊರಗುಳಿದ ಆಸ್ತಿಗಳನ್ನು ಗುರುತಿಸಲು ನಿರ್ಧರಿಸಿದೆ.
ಸುಮಾರು 4.50 ಲಕ್ಷ ಕಾಗದ ಖಾತೆಗಳನ್ನು ಡಿಜಿಟಲೀಕರಣ ಮಾಡುತ್ತಿದ್ದು, ಈಗಾಗಲೇ 1.30 ಲಕ್ಷ ಇ-ಖಾತೆಗಳನ್ನು ವಿತರಿಸಲಾಗಿದೆ. ಬಿ-ಖಾತೆಯಿಂದ ಎ-ಖಾತೆಗೆ ವರ್ಗಾವಣೆ ಮಾಡುವ ಅಭಿಯಾನದ ಮೂಲಕ 225 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು
ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಶೇ 62 ಅಂದರೆ 2,400 ಕೋಟಿ ರೂ. ಮೀಸಲಿರಿಸಲಾಗಿದೆ. ಪಣತ್ತೂರು-ಎಸ್.ಕ್ರಾಸ್ ರಸ್ತೆ ಅಗಲೀಕರಣ ಮತ್ತು ಕೆ.ಆರ್.ಪುರಂನಿಂದ ಇಬ್ಬಲೂರು ಜಂಕ್ಷನ್‌ವರೆಗೆ ಸರ್ವಿಸ್ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
100 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಗುರಿ ಇಟ್ಟುಕೊಳ್ಳಲಾಗಿದೆ. ಮೆಟ್ರೋ ವಯಾಡಕ್ಟ್ ಉದ್ದಕ್ಕೂ ಪಾದಚಾರಿ ಮಾರ್ಗ ನಿರ್ಮಾಣಕ್ಕೆ 160 ರೂ. ಕೋಟಿ ಮೀಸಲಿಡಲಾಗಿದೆ. ವರ್ತೂರಿನಿಂದ ಗುಂಜೂರಿನವರೆಗೆ ಎತ್ತರಿಸಿದ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆಯೂ ಬಜೆಟ್‌ನಲ್ಲಿ ಸೇರಿದೆ.
ಕೆರೆಗಳ ಸಂರಕ್ಷಣೆಗೆ ಅನುದಾನ
ಪ್ರವಾಹ ನಿಯಂತ್ರಣಕ್ಕಾಗಿ 'ಸ್ಪಾಂಜ್ ಸಿಟಿʼ ಮಾದರಿ ಅನುಷ್ಠಾನಗೊಳಿಸಲು 3.5 ರೂ. ಕೋಟಿ ಮೀಸಲಿಡಲಾಗಿದೆ. 45 ಕೆರೆಗಳ ಪೈಕಿ ಬಾಕಿ ಇರುವ ಕೆರೆಗಳ ಅಭಿವೃದ್ಧಿ ಮತ್ತು ವಾರ್ಷಿಕ ನಿರ್ವಹಣೆಗೆ 28 ಕೋಟಿ ರೂ. ವ್ಯಯಿಸಲು ಉದ್ದೇಶಿಸಲಾಗಿದೆ. ಕಸ ವಿಲೇವಾರಿ ಮತ್ತು ನೈರ್ಮಲ್ಯಕ್ಕಾಗಿ 300 ಕೋಟಿ ರೂ. ಮೀಸಲಿರಿಸಲಾಗಿದ್ದು, ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ಸುರಕ್ಷತಾ ಪರಿಕರಗಳಿಗೆ ವಿಶೇಷ ಅನುದಾನ ನೀಡಲಾಗಿದೆ.
ಬಜೆಟ್ ಖರ್ಚು ವೆಚ್ಚ ಎಷ್ಟು?
ಸಿಬ್ಬಂದಿ ವೆಚ್ಚ - 302 ಕೋಟಿ ರೂ.
ಆಡಳಿತ ವೆಚ್ಚ - 82 ಕೋಟಿ ರೂ.
ಕಸ ತ್ಯಾಜ್ಯ ವಿಲೇವಾರಿ - 300 ಕೋಟಿ ರೂ.
ಕಾರ್ಯಾಚರಣೆ, ನಿರ್ವಹಣೆ ವೆಚ್ಚ - 342 ಕೋಟಿ ರೂ.
ಆರೋಗ್ಯ, ಶಿಕ್ಷಣ & ಕಲ್ಯಾಣ - 267 ಕೋಟಿ ರೂ.
ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ - 2400 ಕೋಟಿ ರೂ.
ಸಾಲ ಮರುಪಾವತಿ - 193 ಕೋಟಿ ರೂ.
ಬಜೆಟ್ ಮುಖ್ಯಾಂಶಗಳು
- ಸಿಬ್ಬಂದಿ ಹಾಜರಾತಿ ಮೇಲ್ವಿಚಾರಣೆಗಾಗಿ ಎಐ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿ
- ಆಡಳಿತದಲ್ಲಿ ವೇಗ ಮತ್ತು ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಬೇಕಾದ ತಂತ್ರಾಂಶಗಳಿಗೆ 6 ಕೋಟಿ ರೂ. ಮೀಸಲು
- ಕಾನೂನು ವ್ಯವಹಾರಗಳ ನಿರ್ವಹಣೆಗೆ ಲೀಗಲ್ ಸೆಲ್ ರಚನೆ; 2026-27ರಲ್ಲಿ 4.50 ಕೋಟಿ ರೂ. ಮೀಸಲು
- ಪಾಲಿಕೆಯ ಎಲ್ಲಾ ವಿಭಾಗಗಳಲ್ಲಿ e-Office ವ್ಯವಸ್ಥೆ ಜಾರಿ
- ಒಂಟಿ ಮನೆ ನಿರ್ಮಾಣ ಮತ್ತು ವಸತಿ ಯೋಜನೆ ಅಡಿ 1 ಬಿ.ಹೆಚ್.ಕೆ ಪ್ಲಾಟ್ ಖರೀದಿಗೆ ಅರ್ಹ ವರ್ಗಗಳಿಗೆ 5 ಲಕ್ಷ ರೂ. ಸಹಾಯಧನ
- ಎಸ್.ಸಿ/ ಎಸ್.ಟಿ, ಹಿಂದುಳಿದ ವರ್ಗದವರಿಗೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ-
- ವಿಶೇಷ ಚೇತನರಿಗೆ ಹೆಚ್ಚುವರಿ ಚಕ್ರ ಅಳವಡಿಸಿರುವ ದ್ವಿಚಕ್ರ ವಾಹನಗಳು ಹಾಗೂ ಎಲೆಕ್ನಿಕ್ ವೀಲ್ಚೇರ್ ವಿತರಣೆ
- ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನಗಳ ವಿತರಣೆಯ ಮೂಲಕ ಜೀವನೋಪಾಯಕ್ಕೆ ಬೆಂಬಲ
- 6 ನಿರಾಶ್ರಿತರ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಹೊಸದಾಗಿ 2 ಕೇಂದ್ರಗಳನ್ನು ಸ್ಥಾಪನೆ ಗುರಿ

